Air Pollution: ಮೂತ್ರಪಿಂಡಕ್ಕೂ ಮಾರಕವಾಗುತ್ತಿದೆ ವಾಯು ಮಾಲಿನ್ಯ

Bengaluru Air Pollution: ವಾಯುಮಾಲಿನ್ಯವು ಶ್ವಾಸಕೋಶದ ಮೇಲಿನ ಹಾಗೂ ಕೆಳಗಿನ ಭಾಗಕ್ಕೆ ತೀವ್ರ ಹಾನಿಯೆಸಗುವ ಅಂಶವಾಗಿದ್ದರೂ, ಇದರ ಜೊತೆಗೆ ಹೃದಯ, ಮೂತ್ರಪಿಂಡದಂತಹ ಉಳಿದ ಅಂಗಗಳಿಗೂ ಪರಿಣಾಮ ಬೀರಬಹುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  (ವರದಿ: ಕಪಿಲ್ ಕಾಜಲ್)

  ಬೆಂಗಳೂರು (ಆ. 19): ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯವು ಕಳವಳಕ್ಕೆ ಕಾರಣವಾಗಿದ್ದು, ಹೊಸ ಅಧ್ಯಯನಗಳಿಂದ ತಿಳಿದುಬರುತ್ತಿರುವ ಆಘಾತಕಾರಿ ವಿಷಯವೇನೆಂದರೆ ಮೂತ್ರಪಿಂಡಕ್ಕೂ ವಾಯುಮಾಲಿನ್ಯ ಮಾರಕವಾಗುತ್ತಿದೆ ಎಂಬುದು. ಮಿಚಿಗನ್ ವಿಶ್ವವಿದ್ಯಾಲಯದ ಅಧ್ಯಯನ ಪ್ರಕಾರ ವಾಯುಮಾಲಿನ್ಯವು ದೀರ್ಘಕಾಲದ ಮೂತ್ರಪಿಂಡದ ಖಾಯಿಲೆಗೂ (ಸಿಕೆಡಿ) ಕಾರಣವಾಗುತ್ತವೆ. ಇದು ಮೂತ್ರಪಿಂಡ ಹಾನಿಗೊಳಗಾದಾಗ ಅಥವಾ ಸರಿಯಾಗಿ ರಕ್ತವನ್ನು ಸಂಸ್ಕರಣೆ ಮಾಡಲು ಅಸಾಧ್ಯವಾದ ಸಂದರ್ಭದಲ್ಲಿ ಸಂಭವಿಸುತ್ತದೆ.

  ಆಧ್ಯಯನದ ಪ್ರಮುಖ ಲೇಖಕ ಜೆನ್ನಿಫರ್ ಬ್ರಾಗ್ ಗ್ರೆಶಮ್ ಅವರು ‘ಮೂತ್ರಪಿಂಡದ ಮೂಲಕ ಹೆಚ್ಚಿನ ಪ್ರಮಾಣದ ರಕ್ತ ಹರಿಯುವುದರಿಂದ, ರಕ್ತಪರಿಚಲನಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ಯಾವುದೂ ಮೂತ್ರಪಿಂಡದ ಮೇಲೂ ಪರಿಣಾಮ ಬೀರುತ್ತವೆ ಎಂದು ವಿವರಿಸುತ್ತಾರೆ. ಗಾಳಿಯಲ್ಲಿ ಕಣಗಳ ಹರಡುವಿಕೆಯು ಸಿಕೆಡಿ (ಮೂತ್ರಪಿಂಡದ ದೀರ್ಘಕಾಲದ ಕಾಯಿಲೆ)ಗೆ ಕಾರಣವಾಗುವುದರಿಂದ ಹೆಚ್ಚು ಕಲುಷಿತ ವಾತಾವರಣದಲ್ಲಿ ವಾಸಿಸುವ ಜನರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು’ ಎನ್ನುತ್ತಾರೆ.

  ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಶನ್ ಅಧ್ಯಯನ ಪ್ರಕಾರ ವಾಯುಮಾಲಿನ್ಯವು ಶ್ವಾಸಕೋಶದ ಮೇಲಿನ ಹಾಗೂ ಕೆಳಗಿನ ಭಾಗಕ್ಕೆ ತೀವ್ರ ಹಾನಿಯೆಸಗುವ ಅಂಶವಾಗಿದ್ದರೂ, ಇದರ ಜೊತೆಗೆ ಹೃದಯ, ಮೂತ್ರಪಿಂಡದಂತಹ ಉಳಿದ ಅಂಗಗಳಿಗೂ ಪರಿಣಾಮ ಬೀರಬಹುದು ಎಂಬುದನ್ನು ಬಹಿರಂಗಪಡಿಸಿದೆ.

  ಕಲ್ಲಿದ್ದಲು ಗಣಿಗಾರಿಕೆ ಪ್ರದೇಶದಲ್ಲಿ ಪುರುಷರಲ್ಲಿ ಶೇ. 19 ಹಾಗೂ ಮಹಿಳೆಯರಲ್ಲಿ ಶೇ. 13 ಸಿಕೆಡಿ (ಮೂತ್ರಪಿಂಡದ ದೀರ್ಘಕಾಲದ ಖಾಯಿಲೆ) ಅಪಾಯವಿದೆ ಎಂಬುದನ್ನು ಸಂಶೋಧನೆಗಳು ಋಜುವಾತುಪಡಿಸಿದೆ. ಸಾಮಾನ್ಯ ವಾಯುಮಾಲಿನ್ಯಕಾರಕಗಳಾದ ಪಿಎಂ ಕಣಗಳು, ನೈಟ್ರಸ್ ಆಕ್ಸೈಡ್, ಸಲ್ಫರ್ ಆಕ್ಸೈಡ್, ಸೀಸ್, ಓಝೋನ್, ಕಾರ್ಬನ್ ಮೋನಾಕ್ಸೈಡ್‍ಗಳು ಮೂತ್ರಪಿಂಡದ ಖಾಯಿಲೆಗೆ (ಸಿಕೆಡಿ) ನಾನಾ ರೀತಿಯಲ್ಲಿ ಕಾರಣವಾಗಬಹುದು. ಪರಿಸರ ಮತ್ತು ಔದ್ಯೋಗಿಕವಾಗಿಯೂ ಯುರೇನಿಯಂ ಮತ್ತು ಅರ್ಸಾನಿಕ್‍ಗಳೂ ಕೂಡಾ ಮೂತ್ರಪಿಂಡದ ಕಾಯಿಲೆ ಬೆಳವಣಿಗೆಗೆ ನೆರವಾಗುತ್ತವೆ. ಈ ಬಗ್ಗೆ https://datawrapper.dwcdn.net/5RFQP/1/ ಇಲ್ಲಿದೆ ಮಾಹಿತಿ.

  ಅಮೇರಿಕಾದಲ್ಲಿನ ವಿಮೆ ಪಡೆಯುವಿಕೆ ಹಾಗೂ ವಾಯುಗುಣಮಟ್ಟದ ಮೇಲೆ ನಡೆಸಿದ ಅಧ್ಯಯನದ ಮೂಲಕ ವಾಯುಮಾಲಿನ್ಯಕಾರಕ ಕಣಗಳು ಹಾಗೂ ಕಿಡ್ನಿ ಕಾಯಿಲೆಗಳಿಂದ ಬಳಲುತ್ತಿರುವವರ ನಡುವೆ ಇರುವ ಸಂಬಂಧವನ್ನು ಸಾಬೀತುಪಡಿಸಿದೆ. ಅಮೇರಿಕಾದ ಈ ಅಧ್ಯಯನದ ಸಹಕೃತಿಕಾರರಾಗಿರುವ ಮೂತ್ರಪಿಂಡಶಾಸ್ತ್ರಜ್ಞ ರಾಜೀವ್ ಸರನ್ ಅವರು ತಮ್ಮ ಪತ್ರಿಕಾ ಪ್ರಕಟಣೆಯೊಂದರಲ್ಲಿ ‘ಹೆಚ್ಚು ಕಲುಷಿತ ವಾತಾವರಣದ ಪ್ರದೇಶದ ಜನರು ಮಾಸ್ಕ್​ಗಳನ್ನು ಬಳಸಬೇಕು ಮತ್ತು ಹೊರಾಂಗಣದಲ್ಲಿ ಸಮಯ ಕಳೆಯುವುದನ್ನು ಕಡಿಮೆ ಮಾಡಬೇಕು’ ಎಂದಿದ್ದಾರೆ.

  ವಾಯುಮಾಲಿನ್ಯದ ಗಂಭೀರತೆಯನ್ನು ಅನೇಕ ಜನರು ಅರಿತಿಲ್ಲ. ಯಾಕೆಂದರೆ ವಾಯುಮಾಲಿನ್ಯವು ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ಅದರರ್ಥ ವಾಯುಮಾಲಿನ್ಯವು ನಿಮ್ಮ ಆರೋಗ್ಯಕ್ಕೆ ಕಡಿಮೆ ಪ್ರಾಮುಖ್ಯತೆ ಇರುವ ವಿಷಯವೇನಲ್ಲ’ ಎಂದವರು ಅಭಿಪ್ರಾಯಪಡುತ್ತಾರೆ. ನಾಗರಿಕ ಹಕ್ಕುಗಳ ಕಾರ್ಯಕರ್ತ ಸಂದೀಪ್ ಅನಿರುದ್ಧನ್ ಅವರ ಪ್ರಕಾರ ‘ಮೂತ್ರಪಿಂಡಗಳು ರಕ್ತವನ್ನು ಸಂಸ್ಕರಿಸುವುದರಿಂದ ವಿದೇಶಿ ಕಣಗಳು (ಫಾರಿನ್ ಫರ್ಟಿಕ್ಯುಲ್ಸ್) ಮೂತ್ರಪಿಂಡದ ಸಾಮಾನ್ಯ ಕಾರ್ಯಚಟುವಟಿಕೆಗೂ ಅಡ್ಡಿಪಡಿಸುತ್ತದೆ’.

  ವಾಯುಮಾಲಿನ್ಯವನ್ನು ನಿಯಂತ್ರಿಸುವ ಉಪಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸುವ ಅವರು ರಸ್ತೆಗಳಲ್ಲಿ ವಾಹನಗಳನ್ನು ಕಡಿಮೆ ಮಾಡುವುದು, ಸಾಮೂಹಿಕ ಸಾರ್ವಜನಿಕ ಸಾರಿಗೆಯನ್ನು ಬಳಸುವುದನ್ನು ಉತ್ತೇಜಿಸುವುದು, ಸೈಕ್ಲಿಂಗ್, ನಡಿಗೆಯನ್ನು ಜನಪ್ರಿಯಗೊಳಿಸುವ ಮೂಲಕ ಪರಿಣಾಮಕಾರಿಯಾಗಿ ಮಾಲಿನ್ಯವನ್ನು ನಿಯಂತ್ರಿಸಬಹುದು ಎನ್ನುತ್ತಾರೆ ಸಂದೀಪ್.

  ಪರಿಸರ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಹಾಗೂ ಹೊಗೆಯುಗುಳುವ, ನಿಯಮಗಳನ್ನು ಉಲ್ಲಂಘಿಸುವ ಕೈಗಾರಿಕೆಗಳಿಗೆ ಶಿಕ್ಷೆ ವಿಧಿಸುವ ಮೂಲಕ ವಾಯುಮಾಲಿನ್ಯವನ್ನು ತಡೆಗಟ್ಟುವುದು ಸಾಧ್ಯ ಎನ್ನುತ್ತಾರವರು.

  (ಲೇಖಕರು ಬೆಂಗಳೂರು ಮೂಲದ ಹವ್ಯಾಸಿ ಬರಹಗಾರರು ಹಾಗೂ ಭಾರತೀಯ ವರದಿಗಾರರ ಸಂಪರ್ಕ ಜಾಲವಾಗಿರುವ 101Reporters.com ನ ಸದಸ್ಯರು)
  Published by:Sushma Chakre
  First published: