ಸಿಎಎ ವಿರೋಧಿ ಹೋರಾಟದಲ್ಲಿ ಪ್ರಚೋದನಾಕಾರಿ ಭಾಷಣ ; ಮಾಜಿ ಶಾಸಕ ವಾರೀಷ್ ಪಠಾಣ್ ಗೆ ನೋಟೀಸ್

ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಕಲಬುರ್ಗಿ ಪೊಲೀಸರು ಇದೀಗ ವಾರೀಷ್ ಪಠಾಣ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಿದ್ದಾರೆ.

ವಾರೀಷ್ ಪಠಾಣ್

ವಾರೀಷ್ ಪಠಾಣ್

  • Share this:
ಕಲಬುರ್ಗಿ(ಫೆ. 24) : ಪೌರತ್ವ ಸಮಾವೇಶದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪ ಹೊತ್ತಿರುವ ಮಾಜಿ ಶಾಸಕ ಹಾಗೂ ಎಐಎಂಐಎಂ ಮುಖಂಡ ವಾರೀಷ್ ಪಠಾಣ್ ಗೆ ಕಲಬುರ್ಗಿ ಪೊಲೀಸರು ಇಂದು ನೋಟೀಸ್ ಜಾರಿ ಮಾಡಿದ್ದಾರೆ.

ನೋಟೀಸ್ ತಲುಪಿಸಲು ಗ್ರಾಮೀಣ ಪೊಲೀಸ್ ಠಾಣೆ ಇನ್ಸಪೆಕ್ಟರ್ ಮುಂಬೈಗೆ ಕಳುಹಿಸಿ ಕೊಡಲಾಗಿದೆ. ಫೆಬ್ರವರಿ 15 ರಂದು ಪೀರ್ ಬಂಗಾಲಿ ಮೈದಾನದಲ್ಲಿ ನಡೆದಿದ್ದ ಪೌರತ್ವ ವಿರೋಧಿ ಸಮಾವೇಶದಲ್ಲಿ ಮಾಜಿ ಶಾಸಕ, ಎಐಎಂಐಎಂ ಮುಖಂಡ ವಾರೀಷ್ ಪಠಾಣ್ "ಕೇವಲ ಮಹಿಳೆಯರು ಹೋರಾಟಕ್ಕಿಳಿದರೆ ನಿಮಗೆ ಬೆವರು ಇಳಿಯುತ್ತಿದೆ. ಇನ್ನು ನಾವೇನಾದರೂ ಹೋರಾಟಕ್ಕಿಳಿದರೆ ನಿಮ್ಮಗತಿಯೇನು. ನಾವು 15 ಕೋಟಿ ಇದ್ದೇವೆ.

ಆದರೆ, 100 ಕೋಟಿ ಜನರ ಮೇಲೆ ಪ್ರಾಬಲ್ಯ ಮೆರೆಯಲು ಸಾಧ್ಯ. ಅದನ್ನು ಅವರು ನೆನಪಿನಲ್ಲಿಟ್ಟುಕೊಳ್ಳಬೇಕೆಂದು" ಪಠಾಣ್ ತಮ್ಮ ಭಾಷಣದಲ್ಲಿ ಮತ್ತೊಂದು ಕೋಮಿನ ಜನರನ್ನು ಕೆಣಕಿದ್ದರು. ಪ್ರಚೋದನಾಕಾರಿ ಭಾಷಣ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪಠಾಣ್ ಭಾಷಣದ ವೀಡಿಯೋ ಆಲಿಸಿರುವ ಕಲಬುರ್ಗಿ ಪೊಲೀಸರು ನ್ಯಾಯವಾದಿ ಶ್ವೇತಾ ಸಿಂಗ್ ನೀಡಿದ ದೂರಿನ ಅನ್ವಯ ಕಾರ್ಯಕ್ರಮದ ಆಯೋಜಕರನ್ನೂ ವಿಚಾರಣೆಗೆ ಗುರಿಪಡಿಸಿದ್ದಾರೆ.

ನ್ಯಾಯವಾದಿ ಶ್ವೇತಾ ಸಿಂಗ್ ನೀಡಿರುವ ದೂರನ್ನು ಆಧರಿಸಿ ಕಲಬುರ್ಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 117, 153 ಮತ್ತು 153(A) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇದನ್ನೂ ಓದಿ :  ಪ್ರಚೋದನಾಕಾರಿ ಭಾಷಣ - ಎಐಎಂಐಎಂ ಮುಖಂಡ ವಾರೀಷ್ ಪಠಾಣ್​ ವಿರುದ್ಧ ಪ್ರಕರಣ ದಾಖಲು

ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಕಲಬುರ್ಗಿ ಪೊಲೀಸರು ಇದೀಗ ವಾರೀಷ್ ಪಠಾಣ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಿದ್ದಾರೆ. ನೋಟೀಸ್ ನೀಡಲು ಪೊಲೀಸ್ ಅಧಿಕಾರಿ ಮುಂಬೈಗೆ ತೆರಳಿದ್ದು, ಈ ತಿಂಗಳ ಅಂತ್ಯದೊಳಗಾಗಿ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ನೋಟೀಸ್ ನಲ್ಲಿ ಸೂಚಿಸಲಾಗಿದೆ.

ಕಾರ್ಯಕ್ರಮ ಆಯೋಜಕರೂ ಸೇರಿದಂತೆ ಇತರರನ್ನೂ ವಿಚಾರಣೆಗೆ ಗುರಿಪಡಿಸಿದ್ದು, ಸಮಗ್ರ ತನಿಖೆ ನಡೆಸುತ್ತಿರುವುದಾಗಿ ಕಲಬುರ್ಗಿ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ್ ಮಾಹಿತಿ ನೀಡಿದ್ದಾರೆ.
First published: