ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ರಾಜ್ಯದ 'ಐಕ್ಯ ಹೋರಾಟ ಸಮಿತಿ' ಬೆಂಬಲ

ಐಕ್ಯ ಹೋರಾಟ ಸಮಿತಿಯ ರೈತ, ದಲಿತ, ಕಾರ್ಮಿಕ ಸಂಘಟನೆಗಳ ಮುಖಂಡರು ದೆಹಲಿಯಲ್ಲೇ ಮೂರು ದಿನ ಇದ್ದು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.

ಕರ್ನಾಟಕದ ಐಕ್ಯ ಹೋರಾಟ ಸಮಿತಿ

ಕರ್ನಾಟಕದ ಐಕ್ಯ ಹೋರಾಟ ಸಮಿತಿ

  • Share this:
ನವದೆಹಲಿ (ಡಿಸೆಂಬರ್​. 25): ಕೇಂದ್ರ ಸರ್ಕಾರ ಇತ್ತೀಚೆಗೆ ತಂದಿರುವ ರೈತರ ಪಾಲಿಗೆ ಮರಣ ಶಾಸನವಾಗಿ ಪರಿಣಮಿಸಲಿರುವ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ಕರ್ನಾಟಕದ 'ಐಕ್ಯ ಹೋರಾಟ ಸಮಿತಿ' ಬೆಂಬಲ ಸೂಚಿಸಿದೆ. ರೈತ, ದಲಿತ, ಕಾರ್ಮಿಕ ಹಾಗೂ ಪ್ರಗತಿಪರ ಹೋರಾಟಗಳ ಒಕ್ಕೂಟವಾಗಿರುವ 'ಐಕ್ಯ ಹೋರಾಟ ಸಮಿತಿ'ಯ ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಮಹಾತ್ಮಾ ಗಾಂಧೀಜಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸುತ್ತಿದ್ದು ಈಗ ದೆಹಲಿಗೂ ಬಂದು ಅನ್ನದಾತರ ಹೋರಾಟಕ್ಕೆ ಬೆಂಬಲ ಸೂಚಿಸಿದೆ. ಐಕ್ಯ ಹೋರಾಟ ಸಮಿತಿಯ ರೈತ, ದಲಿತ, ಕಾರ್ಮಿಕ ಸಂಘಟನೆಗಳ ಮುಖಂಡರು ದೆಹಲಿಯಲ್ಲೇ ಮೂರು ದಿನ ಇದ್ದು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಶಹನಾಜ್‌ಪುರ, ಟಿಕ್ಕರಿ, ಸಿಂಘು ಗಡಿ ಪ್ರದೇಶಗಳಿಗೆ ಭೇಟಿ ನೀಡಿ ಹೋರಾಟಕ್ಕೆ ಬಲ ತುಂಬಲಿದ್ದಾರೆ.

ಐಕ್ಯ ಹೋರಾಟ ಸಮಿತಿಯ ಸದಸ್ಯರು ಪ್ರತಿಭಟನೆ ನಡೆಯುತ್ತಿರುವ ದೆಹಲಿ ಗಡಿಗಳಿಗೆ ತೆರಳುವ ಮುನ್ನ ದೆಹಲಿ ಕರ್ನಾಟಕ ಸಂಘದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಟಿ ನಡೆಸಿದರು. ರಾಜ್ಯ ಕೃಷಿ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ಅವರು ಮಾತನಾಡಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾಗಳು ರೈತ ದ್ರೋಹಿ ಸರ್ಕಾರಗಳಾಗಿವೆ. ಉಳ್ಳವರ ಪರ ಕಾನೂನುಗಳನ್ನು ತರುವ ಪ್ರಯತ್ನ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡ ಬಡಗಲಾಪುರ ನಾಗೇಂದ್ರ ಅವರು ಮಾತನಾಡಿ, ದೆಹಲಿಯಲ್ಲಿ ನಡೆಯುತ್ತಿರುವ ಚಳವಳಿ ಕೇವಲ ಪಂಜಾಬ್ ಗೆ ಮಾತ್ರ ಸೀಮಿತ ಅಲ್ಲ, ಇದು ಭಾರತದ ಚಳವಳಿ. ಕೇಂದ್ರ ಸರ್ಕಾರ ಉದ್ಯಮಿಗಳ ಹಿತ ಕಾಯಲು ಇಂಥ ಹೊಸ ಕಾನೂನುಗಳನ್ನು ತಂದಿದೆ. ಬೇಕಿದ್ದರೆ ಕೇಂದ್ರ ಸರ್ಕಾರ ಈ ಬಗ್ಗೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಬಹಿರಂಗ ಚರ್ಚೆ ಏರ್ಪಡಿಸಲಿ. ಖುದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ಚರ್ಚೆಗೆ ಬರಲಿ. ನಾವು ಕೇವಲ ಎರಡು ವರ್ಷ ಚಳವಳಿಯಲ್ಲಿ ತೊಡಗಿಸಿಕೊಂಡ ಹತ್ತು ಮಂದಿ ಹೋರಾಟಗಾರರನ್ನು ಕಳುಹಿಸಿಕೊಡಲಿದ್ದೇವೆ ಎಂದು ಸವಾಲು ಹಾಕಿದರು.

ಸಾಮಾಜಿಕ ಕಾರ್ಯಕರ್ತ ಎಸ್.ಆರ್.‌ ಹಿರೇಮಠ್ ಅವರು ಮಾತನಾಡಿ, ಕೇಂದ್ರ ಸರ್ಕಾರ ನಮ್ಮನ್ನು ಮತ್ತೊಮ್ಮೆ ಗುಲಾಮಗಿರಿಗೆ ತಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಹೋರಾಟ ನಡೆಸಬೇಕಾಗಿದೆ. ಅದಕ್ಕಾಗಿ ರೈತರ ಹೋರಾಟಕ್ಕೆ ಸಾಮಾಜಿಕ ಕಾರ್ಯಕರ್ತರು ಕೈ ಜೋಡಿಸಬೇಕಿದೆ ಎಂದು ಹೇಳಿದರು.

ಇದನ್ನೂ ಓದಿ : ಸದಾನಂದಗೌಡರು ದೈವಿ ಪುರುಷರು- ನನ್ನ ಮೇಲೆ ಪ್ರೀತಿ ಜಾಸ್ತಿ: ಯತ್ನಾಳ ತಿರುಗೇಟು

ಮಾಜಿ ಶಾಸಕ ಬಿ.ಆರ್. ಪಾಟೀಲ್ ಅವರು ಮಾತನಾಡಿ ಕೇಂದ್ರ ಸರ್ಕಾರ ಜನರನ್ನು ರೊಚ್ಚಿಗೆ ಎಬ್ಬಿಸುವ ಕೆಲಸ ಮಾಡುತ್ತಿದೆ.‌ ಸರ್ವಾಧಿಕಾರ ಚಲಾಯಿಸುವ ಪ್ರಯತ್ನ ಮಾಡಲಾಗುತ್ತಿದೆ. ಸರ್ಕಾರ ಸಮಾಜವಾದದ ನೀತಿಗಳ ವಿರುದ್ಧ ನಡೆದುಕೊಳ್ಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗೋ ಹತ್ಯೆ ಮಸೂಧೆ ನಿಷೇಧಕ್ಕೆ ಖಂಡನೆ :

ಇದೇ ವೇಳೆ ರಾಜ್ಯದಲ್ಲಿ ಇತ್ತೀಚೆಗೆ ತರಲಾದ ಗೋ ಹತ್ಯೆ ಮಸೂಧೆ ನಿಷೇಧ ಕಾಯ್ದೆಯನ್ನು ಐಕ್ಯ ಹೋರಾಟ ಸಮಿತಿ ಸದಸ್ಯರು ವಿರೋಧಿಸಿದರು. ರೈತ ಮುಖಂಡ ಬಡಗಲಾಪುರ ನಾಗೇಂದ್ರ ಮಾತನಾಡಿ ಎಂದೂ ಹಸುಗಳನ್ನು ಸಾಕದವರು ಗೋ ರಕ್ಷಣೆಯ ಬಗ್ಗೆ ಮಾತನಾಡುತ್ತಿದ್ದಾರೆ. ಈಗ ಗೋ ನಿರ್ವಹಣೆ ಸವಾಲಿನ ಕೆಲಸವಾಗಿದೆ. ಹಾಗಾಗಿ ಅನುಪಯುಕ್ತ ಗೋವುಗಳನ್ನು ತೆಗೆದುಕೊಂಡು ಹೋಗಿ ಗೋ ಹತ್ಯೆ ಮಸೂಧೆ ನಿಷೇಧ ಕಾಯ್ದೆಯನ್ನು ತಂದ ಬಿಜೆಪಿ ಶಾಸಕರು, ಸಂಸದರು ನಾಯಕರು ಮನೆಗೆ ಬಿಡುತ್ತವೆ.

ಬಿಜೆಪಿ ನಾಯಕರು ಹಣ ಕೊಟ್ಟು ಅನುಪಯುಕ್ತ ಹಸುಗಳನ್ನು ತೆಗೆದುಕೊಂಡು ಸಾಕಲಿ. ಸಂಕ್ರಾಂತಿ ಬಳಿಕ ಈ ಬಗ್ಗೆ ಹೋರಾಟ ರೂಪಿಸುತ್ತೇವೆ ಎಂದು ಹೇಳಿದರು. ದಲಿತ ಹೋರಾಟಗಾರ ಗುರುಪ್ರಸಾದ್ ಕೆರೆಗೋಡು, ಕಾರ್ಮಿಕ ಮುಖಂಡ ಕಾಳಪ್ಪ ಮತ್ತಿತರರು ಉಪಸ್ಥಿತರಿದ್ದರು.
Published by:G Hareeshkumar
First published: