Election Results - ಮಾಧ್ಯಮಗಳಲ್ಲಿ ಚರ್ಚೆಗಳಿಂದ ಹಿಂದೆ ಸರಿದ ಕಾಂಗ್ರೆಸ್ ಪ್ರತಿನಿಧಿಗಳು

ಕೊರೋನಾ ಎರಡನೇ ಅಲೆ ಆರ್ಭಟ ಹೆಚ್ಚಿರುವುದರಿಂದ ಕಾಂಗ್ರೆಸ್ಸಿಗರು ಚುನಾವಣಾ ಸಂಭ್ರಮಾಚರಣೆಯಲ್ಲಾಗಲೀ, ಟಿವಿ ವಾಹಿನಿ ಚರ್ಚೆಗಳಲ್ಲಾಗಲೀ ಪಾಲ್ಗೊಳ್ಳಬಾರದು ಎಂದು ಎಐಸಿಸಿ ಸೂಚನೆ ನೀಡಿದೆ.

ರಾಹುಲ್​ ಗಾಂಧಿ

ರಾಹುಲ್​ ಗಾಂಧಿ

 • Share this:
  ಬೆಂಗಳೂರು(ಮೇ 02): ಇಂದು ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ಕರ್ನಾಟಕ ಸೇರಿ ವಿವಿಧ ರಾಜ್ಯಗಳ ಉಪಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದೆ. ದೇಶಾದ್ಯಂತ ಬಹುತೇಕ ಸುದ್ದಿ ಮಾಧ್ಯಮಗಳಲ್ಲಿ ಫಲಿತಾಂಶ ವಿಶ್ಲೇಷಣೆಗಳು ನಡೆದಿವೆ. ಇಂಥ ಚರ್ಚೆಗಳಲ್ಲಿ ಸರ್ವ ಪಕ್ಷಗಳಿಂದ ಪ್ರತಿನಿಧಿಗಳು ಪಾಲ್ಗೊಳ್ಳುವುದು ಸಹಜ. ಆದರೆ, ಇಂದು ಕಾಂಗ್ರೆಸ್ ಪಕ್ಷದಿಂದ ಯಾರೂ ಚರ್ಚೆಯಲ್ಲಿ ಭಾಗವಹಿಸಿಲ್ಲ ಎಂಬುದು ಗಮನಾರ್ಹ. ಅದಕ್ಕೆ ಕಾರಣ, ಎಐಸಿಸಿ ಹೊರಡಿಸಿರುವ ಸೂಚನೆ.

  ಇವತ್ತು ದೇಶದ ಜನರು ಕೊರೋನಾ ಎರಡನೇ ಅಲೆಯಿಂದ ಜರ್ಝರಿತರಾಗಿದ್ದಾರೆ. ಇಂಥ ಸಂಕಷ್ಟದ ಸಂದರ್ಭದಲ್ಲಿ ಕಾಂಗ್ರೆಸ್​ನ ಯಾರೂ ಕೂಡ ಯಾವುದೇ ರೀತಿಯ ಸಂಭ್ರಮಾಚರಣೆ ಮಾಡುವಂತಿಲ್ಲ. ಚುನಾವಣೆ ಫಲಿತಾಂಶ ಸಂಬಂಧ ಟಿವಿ ಡಿಬೇಟ್​ಗಳಲ್ಲೂ ಪಾಲ್ಗೊಳ್ಳಬಾರದು ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಎಲ್ಲಾ ಪ್ರದೇಶ ಕಾಂಗ್ರೆಸ್ ಕಮಿಟಿಗಳಿಗೆ ಸೂಚನೆ ನೀಡಿದೆ. ಹೀಗಾಗಿ, ಸುದ್ದಿ ವಾಹಿನಿಗಳ ಚರ್ಚೆಗಳಿಂದ ಕಾಂಗ್ರೆಸ್ ಪ್ರತಿನಿಧಿಗಳು ಹಿಂದಕ್ಕೆ ಸರಿದಿದ್ದಾರೆ.

  ನ್ಯೂಸ್18 ಕನ್ನಡ ವಾಹಿನಿಯ ಆರಂಭಿಕ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಮಹಿಳಾ ಘಟಕದ ನಾಯಕಿ ಕವಿತಾ ರೆಡ್ಡಿ ಅವರು ಸ್ವಲ್ಪ ಹೊತ್ತಿನ ಬಳಿಕ ನಿರ್ಗಮಿಸಿದರು.

  ಇದನ್ನೂ ಓದಿ: Corona Mask: ನೀವು ಈ ಮಾಸ್ಕ್ ಬಳಸಿದ್ರೆ ಪ್ರಕೃತಿ ನಿಮಗೆ ಥ್ಯಾಂಕ್ಸ್ ಹೇಳುತ್ತೆ, ಬಿಸಾಕಿದ್ರೆ ಮನೆಯಲ್ಲಿ ಹಸಿರು ನಳನಳಿಸುತ್ತೆ !

  ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಕೊರೋನಾ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸ್ವತಃ ರಾಹುಲ್ ಗಾಂಧಿಯವರೇ ಇತ್ತೀಚೆಗೆ ಕರೆಕೊಟ್ಟಿದ್ದರು. ಅದರಂತೆ, ಕರ್ನಾಟಕದಲ್ಲೂ ಬಹುತೇಕ ಯುವ ನಾಯಕರು ಮತ್ತು ಕಾರ್ಯಕರ್ತರು ಕೊರೋನಾ ವಾರಿಯರ್​ಗಳಾಗಿ ಕೆಲಸ ಮಾಡುತ್ತಿದ್ಧಾರೆ. ವಾರ್ ರೂಮ್​ಗಳನ್ನ ಮಾಡಿ ಕೋವಿಡ್ ಸೋಂಕಿತರಿಗೆ ಬೆಡ್ ಕೊಡಿಸುವುದು, ಔಷಧ ಇತ್ಯಾದಿ ಉಪಚಾರ ಮಾಡುವ ಕಾರ್ಯವನ್ನ ಕಾಂಗ್ರೆಸ್ಸಿಗರು ನಿರ್ವಹಿಸುತ್ತಿದ್ದಾರೆ.
  Published by:Vijayasarthy SN
  First published: