ಶಿವಮೊಗ್ಗ(ಮಾ.22): ರಾಜ್ಯದಲ್ಲಿ ಚುನಾವಣಾ (Karnataka Elections) ಕಾವು ರಂಗೇರುತ್ತಿದೆ. ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ತಮ್ಮ ಪಕ್ಷದ ಹುರಿಯಾಳುಗಳನ್ನು ಕಣಕ್ಕೆ ಇಳಿಸಲು ಸಜ್ಜಾಗುತ್ತಿವೆ. ಅದರ ನಡುವೆ ಶಕ್ತಿ ಪ್ರದರ್ಶನ ರಾಜಕೀಯ ಚುರುಕುಗೊಂಡಿದೆ. ಬಿಜೆಪಿ (BJP) ಭದ್ರಕೋಟೆಯಾಗಿರುವ ಶಿವಮೊಗ್ಗದಲ್ಲಿ (Shivamogga) ಈಗ ಭಿನ್ನಮತದ ಬಿಸಿ ತಲುಪಲಿದೆ. ಸಾಗರ ಬಿಜೆಪಿಯಲ್ಲಿ (Sagar BJP) ಹಾಲಿ ಶಾಸಕರ ವಿರುದ್ಧ ಅದೇ ಪಕ್ಷದ ನಾಯಕರುಗಳು ಸಮರ ಸಾರಿದ್ದಾರೆ. ಇದು ಬಿಎಸ್ ವೈ ಅಂಗಳಕ್ಕೆ ಲಗ್ಗೆ ಇಟ್ಟಿದ್ದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹಾಲಿ ಶಾಸಕ ಹರತಾಳು ಹಾಲಪ್ಪಗೆ (Haratalu Halappa) ಎದುರಾದ ಸಮಸ್ಯೆ ಏನು ಅಂತೀರಾ? ಇಲ್ಲಿದೆ ವಿವರ.
ಸಾಗರ ರಾಜಕೀಯ ರಾಜ್ಯದಲ್ಲಿ ವಿಭಿನ್ನವಾದ ರಾಜಕೀಯ. ಈ ಸಾಗರದಲ್ಲಿ ಈಜಿ ಗೆಲ್ಲುವುದು ಅಷ್ಟು ಸುಲಭವಲ್ಲ. ಈಗ ಕ್ಷೇತ್ರ ಕಾಂಗ್ರೆಸ್ ಮತ್ತೆ ವಶಪಡಿಸಿಕೊಳ್ಳಲು ತಯಾರಿ ನಡೆಸಿದೆ. ಅಲ್ಲದೇ ಅದಕ್ಕಾಗಿ ಎಲ್ಲಾ ರೀತಿಯ ಪ್ಲ್ಯಾನ್ ಕೂಡ ಮಾಡುತ್ತಿದೆ. ಹೀಗಿರುವಾಗಲೇ ಬಿಜೆಪಿಯಲ್ಲಿ ಸ್ವಪಕ್ಷದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಪಕ್ಷಕ್ಕೆ ಬಂಡಾಯದ ಭೀತಿ ಎದುರಾಗಿದೆ. ಶಾಸಕ ಹರತಾಳು ಹಾಲಪ್ಪಗೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ನೀಡದಂತೆ ಅಲ್ಲಿಯ ಲಿಂಗಾಯತ ಹಾಗೂ ಬ್ರಾಹ್ಮಣ ನಾಯಕರು ಪಟ್ಟುಹಿಡಿದಿದ್ದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ.
ಇದನ್ನೂ ಓದಿ: Siddaramaiah: ಮಾಜಿ ಸಿಎಂಗೆ ಶುರುವಾಯ್ತು ಹೊಸ ತಲೆನೋವು; ಇತ್ತ ಕೋಲಾರದಲ್ಲಿ ಫ್ಯಾಮಿಲಿ ಅಸ್ತ್ರ ಪ್ರಯೋಗ
ಇದರ ಜೊತೆ ಕೆಲ ಸಂಘ ಪರಿವಾರದ ಮುಖಂಡರು ಧ್ವನಿಗೂಡಿಸಿದ್ದು, 2 ದಿನಗಳ ಹಿಂದೆ ಯಡಿಯೂರಪ್ಪರನ್ನು ಭೇಟಿ ಮಾಡಿ ಹಾಲಪ್ಪರಿಗೆ ಟಿಕೆಟ್ ನೀಡದಂತೆ ಒತ್ತಡ ಹೇರಿದ್ದಾರೆ. ಹರತಾಳು ಹಾಲಪ್ಪ ಸಾಗರದಲ್ಲಿ ಶಾಸಕರಾದ ಬಳಿಕ ಗೂಂಡಾಗಿರಿ ಹೆಚ್ಚಾಗಿದೆ. ಬಿಜೆಪಿ ಮುಖಂಡರ ಮೇಲೆಯೇ ಹಲ್ಲೆ ನಡೆಸಲಾಗುತ್ತಿದೆ. ಜೊತೆಗೆ ಸಂಘ ಪರಿವಾರದ ಮುಖಂಡರಿಗೆ ಧಮಕಿ ಹಾಕಲಾಗುತ್ತಿದೆ ಎಂದು ಆರೋಪ ಮಾಡುತ್ತಿದ್ದಾರೆ. ಈ ಸಮರ ಈಗ ಈಡಿಗ - ಲಿಂಗಾಯತ ಹಾಗೂ ಬ್ರಾಹ್ಮಣ ಎಂಬ ಜಾತಿ ಸಮರಕ್ಕೆ ಅನುವು ಮಾಡಿಕೊಟ್ಟಿದೆ.
ಇನ್ನು ಹಾಲಪ್ಪಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡದಂತೆ ಒತ್ತಡ ಹೇರಿರುವ ಈ ನಿಯೋಗ, ಹರತಾಳು ಹಾಲಪ್ಪಗೆ ಟಿಕೆಟ್ ನೀಡಿದರೆ ಚುನಾವಣೆಯಿಂದ ದೂರ ಉಳಿಯುವುದಾಗಿ ಎಚ್ಚರಿಕೆ ನೀಡಿದೆ. ಇದಲ್ಲದೇ, ಹಾಲಪ್ಪ ವಿರುದ್ಧ ಬಿಜೆಪಿ ಹೈಕಮಾಂಡ್ ಗೆ ದೂರು ನೀಡಲು ಮುಖಂಡರು ತೀರ್ಮಾನ ಮಾಡಿದ್ದಾರೆ. ಇನ್ನೊಂದು ವಾರದೊಳಗೆ ಹೈಕಮಾಂಡ್ ಗೆ ಪತ್ರ ಬರೆಯಲು ಸಹ ತಯಾರಿ ಮಾಡಿದ್ದಾರೆ. ಇನ್ನು ಹಾಲಪ್ಪ ಹೊರತುಪಡಿಸಿ ಯಾರಿಗಾದರೂ ಪಕ್ಷದ ಟಿಕೆಟ್ ನೀಡಿದರೂ ಗೆಲ್ಲಿಸಿಕೊಂಡು ಬರುತ್ತೇವೆ. ಹಾಲಪ್ಪರಿಗೆ ಟಿಕೆಟ್ ನೀಡಿದಲ್ಲಿ ಅನಿವಾರ್ಯವಾಗಿ ಸೋಲಿಸಬೇಕಾಗುತ್ತದೆ ಎಂದು ಸಂದೇಶ ರವಾನೆ ಮಾಡಿದ್ದಾರೆ.
ಇದನ್ನೂ ಓದಿ: MLA’s Salary: ನಮ್ಮ ಶಾಸಕರ ಸಂಬಳವೆಷ್ಟು? ಸಚಿವರ ವೇತನದ ಬಗ್ಗೆ ನಿಮಗೆಷ್ಟು ಗೊತ್ತು?
ಈಗಾಗಲೇ ಎಂಡಿಎಫ್ ಕಾಲೇಜು ಗಲಾಟೆಯಲ್ಲಿ ಬ್ರಾಹ್ಮಣ ಮತ್ತು ಲಿಂಗಾಯತ ಸಮುದಾಯದ ವಿರೋಧ ಕಟ್ಟಿಕೊಂಡಿದ್ದ ಹಾಲಪ್ಪ. ಇದೀಗ ಬಿಜೆಪಿ ಪಕ್ಷದ ಮುಖಂಡರಿಂದಲೂ ಹಾಲಪ್ಪ ದೂರವಾಗಿದ್ದಾರೆ. ಇದರ ಮಧ್ಯೆ ಅತೃಪ್ತರು ಒಂದುಹೆಜ್ಜೆ ಮುಂದೆ ಹೋಗಿ ಹರತಾಳು ಹಾಲಪ್ಪ ವಿರುದ್ಧ ಬಹಿರಂಗ ಸಭೆಯನ್ನೇ ಮಾಡಿ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
ಒಟ್ಟಿನಲ್ಲಿ ಸಾಗರ ಈ ಬೆಳವಣಿಗೆಯಿಂದ ರಾಜ್ಯ ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಸಾಗರ ಬಿಜೆಪಿಯ ನೊಂದ ಕಾರ್ಯಕರ್ತರಿಂದ ಸಭೆ ಈಗ ಎಲ್ಲೆಡೆ ಚರ್ಚೆಗೆ ಒಳಗಾಗಿದೆ. ಇದನ್ನು ಬಿಜೆಪಿ ನಾಯರು ಹೇಗೆ ನಿಭಾಯಿಸುತ್ತಾರೆ ಎಂದು ಕಾದು ನೋಡಬೇಕಿದೆ.
-ವಿನಯ್ ಪುರದಾಳು, ನ್ಯೂಸ್ 18 ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ