ಶತ ಶತಮಾನಗಳು ಕಳೆದರೂ ತಣ್ಣಗಾಗದ ಅಗಸ್ತ್ಯಮುನಿ ಶಾಪ

ಅಗಸ್ತ್ಯಮುನಿಯ ಶಾಪವಿಮೋಚನೆಗಾಗಿ ಮಾಡುತ್ತಿರುವ ಹೋಮ

ಅಗಸ್ತ್ಯಮುನಿಯ ಶಾಪವಿಮೋಚನೆಗಾಗಿ ಮಾಡುತ್ತಿರುವ ಹೋಮ

ಅಗಸ್ತ್ಯಮುನಿ ಕೊಡವರು ಮತ್ತು ಅಮ್ಮಕೊಡವರಿಗೆ ನೀಡಿದ ಶಾಪ ಏನು ಅಂತ ಕೇಳಿದರೆ  ಆಶ್ಚರ್ಯ ಪಡ್ತೀರಾ

  • Share this:

ಕೊಡಗು (ಜ. 16) : ಜಿಲ್ಲೆ ಮೂರು ವರ್ಷಗಳಿಂದ ಇನ್ನಿಲ್ಲದ ಪ್ರಾಕೃತಿಕ ವಿಕೋಪದಿಂದ ನಲುಗಿ ಹೋಗಿದೆ. ಇದರ ಜೊತೆಗೆ ಋಷಿ ಅಗಸ್ತ್ಯ ಮುನಿಯ ಶಾಪವೂ ಕೊಡವರನ್ನು ಇನ್ನೂ ಬಿಡದೆ ಕಾಡುತ್ತಿದೆಯಂತೆ. ಈ ಶಾಪ ವಿಮೋಚನೆಗಾಗಿಯೇ ಕೊಡವರು ಇಂದಿಗೂ ಯಜ್ಞ, ಯಾಗಗಳನ್ನು ಮಾಡುತ್ತಲೇ ಇದ್ದಾರೆ. ಭಾಗಮಂಡಲದ ಭಗಂಡೇಶ್ವರ ದೇವಾಲಯದ ಮುಂಭಾಗದಲ್ಲೇ ಅಮ್ಮಕೊಡವರು ಮತ್ತು ಕೊಡವರು ಚಂಡಿಕಾ ಹೋಮ ನಡೆಸುತ್ತಿದ್ದಾರೆ. ಹೌದು, ಇದು ಲೋಕಕಲ್ಯಾಣಕ್ಕಾಗಿ ಅಮ್ಮಕೊಡವರು ಮತ್ತು ಕೊಡವರು ಸೇರಿದಂತೆ ಅಖಿಲ ಕೊಡವ ಸಮಾಜದಿಂದ ಅಗಸ್ತ್ಯಮುನಿಯ ಶಾಪವಿಮೋಚನೆಗಾಗಿ ಮಾಡುತ್ತಿರುವ ಹೋಮ, ಹವನವಿದು. ಹಾಗಾದರೆ ಅಗಸ್ತ್ಯಮುನಿ ಕೊಡವರು ಮತ್ತು ಅಮ್ಮಕೊಡವರಿಗೆ ನೀಡಿದ ಶಾಪ ಏನು ಅಂತ ಕೇಳಿದರೆ  ಆಶ್ಚರ್ಯ ಪಡ್ತೀರಾ. ಅಮ್ಮಕೊಡವರ ಸಂಖ್ಯೆ ಗಣನೀಯವಾಗಿ ಕ್ಷೀಣವಾಗಲಿ, ಬಿತ್ತಿದ ಬೆಳೆ ಬೆಳೆಯದಂತಾಗಲಿ, ಅರಸುತನ ನಾಶವಾಗಿ ಬಡತನ ಪ್ರಾಪ್ತವಾಗಲಿ, ವೀರತನ ಹೋಗಿ ನಿರ್ವೀಯರಾಗಲಿ ಎಂದು ಶಾಪನೀಡಿದ್ದರಂತೆ.


ಕಾವೇರಿ ಮಾತೆಗೆ ಕೊಟ್ಟಿದ್ದ ಭಾಷೆನ್ನು ಅಗಸ್ತ್ಯಮುನಿ ತಪ್ಪಿದ್ದರಂತೆ. ಹೀಗೆ ಮಾತಿಗೆ ತಪ್ಪುತ್ತಲೇ ಕಾವೇರಿ ಮಾತೆ ಕಮಂಡಲಿನಿಂದ ಜಿಗಿದು ನೀರಾಗಿ ಹರಿದು ಹೋದಳಂತೆ. ಈ ವೇಳೆ ಕಾವೇರಿಮಾತೆಯ ಪರವಾಗಿ ಕೊಡವರು ಮತ್ತು ಅಮ್ಮ ಕೊಡವರು ಮಾತನಾಡಿದ್ದೇ ತಪ್ಪಾಗಿಹೋಯಿತಂತೆ. ಇದರಿಂದ ಸಿಟ್ಟಿಗೆದ್ದಿದ್ದ ಅಗಸ್ತ್ಯಮುನಿ ಹೀಗೆ ಶಾಪ ಕೊಟ್ಟಿದ್ದರಂತೆ.




ಅಷ್ಟೇ ಅಲ್ಲ ನಿಮ್ಮ ನಿಮ್ಮ ನಡುವೆ ಒಗ್ಗಟ್ಟಿಲ್ಲದಂತಾಗಿ ಬಡಿದಾಡಿಕೊಳ್ಳುವಂತಾಗಲಿ ಭೂಮಿ ತಟ್ಟಿ ಅಗಸ್ತ್ಯಮುನಿ ಶಾಪ ಹಾಕಿದ್ದರಂತೆ. ಹೀಗಾಗಿ ಕೊಡಗು ಇಂದಿಗೂ ನಲುಗಿಹೋಗುತ್ತಿದೆ ಎನ್ನುತ್ತಾರೆ ಮುಖಂಡ ದೇವಯ್ಯ. ಈ ಶಾಪ ವಿಮೋಚನೆಗಾಗಿಯೇ ಅಖಿಲ ಕೊಡವರ ಸಮಾಜವು ಕಳೆದ ಒಂಭತ್ತು ವರ್ಷಗಳಿಂದ ಭಾಗಮಂಡಲ ಕ್ಷೇತ್ರದಲ್ಲಿ ಹೋಮ, ಯಜ್ಞಗಳನ್ನು ಮಾಡುತ್ತಲೇ ಇದೆ ಎನ್ನುತ್ತಾರೆ. ಅಗಸ್ತ್ಯಮುನಿ ನೀಡಿದ ಶಾಪಕ್ಕೆ ಪ್ರತಿಯಾಗಿ ಕಾವೇರಿ ಮಾತೆಯೂ ಪ್ರತಿಯಾಗಿ ವರ ನೀಡಿದ್ದಳಂತೆ. ಭೂಮಿ ಇರುವವರೆಗೆ ನನ್ನ ನನೆಯಿರಿ. ಬಿತ್ತಿದ ಬೆಳೆಯನ್ನು ಕಿತ್ತು ನಡಿ. ಶತ್ರು ರಾಷ್ಟ್ರದವರು ಬಂದರೆಂದು ಹೆದರಿ ಓಡಿಹೋಗದಿರಿ ಎಂದು ವರ ನೀಡಿದಳಂತೆ. ವಿಪರ್ಯಾಸವೆಂದರೆ ವರ ನೀಡಿದ್ದ ಕಾವೇರಿ ಮಾತೆಯೇ ಕಳೆದ ಮೂರು ವರ್ಷಗಳಿಂದ ಮುನಿದಿರುವಂತೆ ಕಾಣುತ್ತಿದೆ. ಹೀಗಾಗಿ ಕೊಡಗಿನಲ್ಲಿ ಕಳೆದ ಮೂರು ವರ್ಷದಿಂದಲೂ ಕೊಡಗಿನಲ್ಲಿ ಎಂದೂ ಕಂಡು ಕೇಳರಿಯದ ಪ್ರವಾಹ, ಭೂಕುಸಿತಗಳು ನಡೆಯುತ್ತಲೇ ಇವೆ.


ಎರಡು ವರ್ಷಗಳ ಹಿಂದೆ ಅಷ್ಟಮಂಗಲ ಪ್ರಶ್ನೆ ಕೇಳಿದಾಗ, ಅಗಸ್ತ್ಯಮುನಿಯ ಶಾಪ ಕೇವಲ 50 ರಷ್ಟು ವಿಮೋಚನೆಯಾಗಿದೆ. ಇನ್ನೂ ನಾಲ್ಕು ವರ್ಷಗಳ ಕಾಲ ಈ ಹೋಮ, ಯಾಗ ನಡೆಯಲೇಬೇಕು ಎನ್ನೋದು ತಂತ್ರಿಗಳ ಮಾತು. ಸದ್ಯ ಈಗ ಕೊಡವರು ಮತ್ತು ಅಮ್ಮಕೊಡವರು ಜೊತೆಯಾಗಿ ಹೋಮ, ಯಾಗಗಳನ್ನು ನಡೆಸುತ್ತಿದ್ದು, ಎಲ್ಲವನ್ನೂ ಅಗ್ನಿಗೆ ಅರ್ಪಿಸುವ ಮೂಲಕ ಲೋಕಕಲ್ಯಾಣಕ್ಕಾಗಿ ಪ್ರಯತ್ನಿಸುತ್ತಿದ್ದಾರೆ ತಂತ್ರಿಗಳಾದ ಸುಬ್ರಹ್ಮಣ್ಯಬಳುಕುರಾಯ.  ಏನೇ ಇರಲಿ, ಅಗಸ್ತ್ಯಮುನಿಯ ಶಾಪ ತಣ್ಣಗಾಗುವ ಮುನ್ನವೇ ಕಾವೇರಿಯೂ ಮುನಿದಿರುವಂತೆ ಗೋಚರಿಸುತ್ತಿದೆ. ಆದರೆ ಇನ್ನೂ ನಾಲ್ಕು ವರ್ಷಗಳ ಕಾಲ ಅಗಸ್ತ್ಯಮುನಿಯ ಕೋಪದ ಕೊಡಗನ್ನು ಯಾವ ಹಂತಕ್ಕೆ ತಂದು ನಿಲ್ಲಿಸಿಬಿಡುತ್ತದೆಯೋ ಕಾದು ನೋಡಬೇಕಾಗಿದೆ.


ವರದಿ: ರವಿ ಎಸ್ ಹಳ್ಳಿ

First published: