ಡಿಕೆಶಿ ಬಂಧನ ಹಿನ್ನೆಲೆ: ಮಲ್ಲಿಕಾರ್ಜುನ ಖರ್ಗೆಯನ್ನು ದೆಹಲಿಗೆ ಕರೆಸಿಕೊಂಡ ಕೈ ಹೈಕಮಾಂಡ್

ಕಾಂಗ್ರೆಸ್ ನಾಯಕರನ್ನು ಉದ್ದೇಶಪೂರ್ವಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಆರೋಪವಿಟ್ಟುಕೊಂಡು ರಾಷ್ಟ್ರಮಟ್ಟದಲ್ಲಿ ಪ್ರತಿಭಟನೆಗಳನ್ನ ನಡೆಸಲು ಕಾಂಗ್ರೆಸ್ ಚಿಂತಿಸಿದೆ. ಇದೇ ವಿಚಾರವಾಗಿ ಹೈಕಮಾಂಡ್ ಜೊತೆ ಖರ್ಗೆ ಚರ್ಚೆ ನಡೆಸಲಿದ್ದಾರೆ.

news18-kannada
Updated:September 4, 2019, 11:17 AM IST
ಡಿಕೆಶಿ ಬಂಧನ ಹಿನ್ನೆಲೆ: ಮಲ್ಲಿಕಾರ್ಜುನ ಖರ್ಗೆಯನ್ನು ದೆಹಲಿಗೆ ಕರೆಸಿಕೊಂಡ ಕೈ ಹೈಕಮಾಂಡ್
ಮಲ್ಲಿಕಾರ್ಜುನ ಖರ್ಗೆ
  • Share this:
ಬೆಂಗಳೂರು(ಸೆ. 04): ಅಕ್ರಮ ಹಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಗಾಳಕ್ಕೆ ಸಿಕ್ಕು ಡಿಕೆ ಶಿವಕುಮಾರ್ ನಿನ್ನೆ ಬಂಧಿತರಾಗಿದ್ದಾರೆ. ಇವತ್ತು ರಾಜ್ಯದ ಹಲವೆಡೆ ಕಾಂಗ್ರೆಸ್ ಕಾರ್ಯಕರ್ತರು ಡಿಕೆಶಿ ಬಂಧನ ಖಂಡಿಸಿ ತೀವ್ರ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಇದರ ಮಧ್ಯೆ ಕಾಂಗ್ರೆಸ್ ಹೈಕಮಾಂಡ್ ಮಲ್ಲಿಕಾರ್ಜುನ ಖರ್ಗೆ ಅವರನ್ನು ದೆಹಲಿಗೆ ಕರೆಸಿಕೊಂಡಿದೆ. ಈ ಬೆಳವಣಿಗೆ ರಾಜಕೀಯವಾಗಿ ತುಸು ಕುತೂಹಲ ಮೂಡಿಸಿದೆ.

ಡಿಕೆ ಶಿವಕುಮಾರ್ ಬಂಧನದ ನಂತರ ರಾಜ್ಯ ರಾಜಕಾರಣದಲ್ಲಾಗುತ್ತಿರುವ ಬೆಳವಣಿಗೆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರು ಹೈಕಮಾಂಡ್​ಗೆ ಮಾಹಿತಿ ನೀಡುವ ಸಾಧ್ಯತೆ ಇದೆ. ಹಾಗೆಯೇ, ಕೇಂದ್ರ ಸರ್ಕಾರದಿಂದ ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿರುವ ಸಾಧ್ಯತೆ ಬಗ್ಗೆಯೂ ಈ ವೇಳೆ ಚರ್ಚೆಯಾಗಬಹುದು. ಇದೇ ವಿಚಾರವನ್ನು ಮುಂದಿಟ್ಟುಕೊಂಡು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೋರಾಟ ಮತ್ತು ಜನಾಭಿಪ್ರಾಯ ರೂಪಿಸುವ ರಣತಂತ್ರದ ಬಗ್ಗೆ ಹೈಕಮಾಂಡ್ ಜೊತೆ ಮಲ್ಲಿಕಾರ್ಜುನ ಖರ್ಗೆ ಚರ್ಚೆ ಮಾಡುವ ನಿರೀಕ್ಷೆ ಇದೆ.

ಇದನ್ನೂ ಓದಿ: ಕಾಂಗ್ರೆಸ್​ ಟ್ರಬಲ್​ ಶೂಟರ್​ ಅರೆಸ್ಟ್​: ಮಾಜಿ ಸಚಿವ ಡಿಕೆ ಶಿವಕುಮಾರ್ ಬಂಧಿಸಿದ ಇ.ಡಿ. ಅಧಿಕಾರಿಗಳು

ಇನ್ನು, ರಾಷ್ಟ್ರಮಟ್ಟದ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಗೃಹ ಮಂತ್ರಿ ಪಿ. ಚಿದಂಬರಮ್ ಅವರನ್ನೂ ಬಂಧಿಸಲಾಗಿದೆ. ಐಎನ್​ಎಕ್ಸ್ ಮೀಡಿಯಾ ಅವ್ಯವಹಾರ ಪ್ರಕರಣದಲ್ಲಿ ಚಿದಂಬರಂ ಅವರು ಕೆಲವಾರು ದಿನಗಳಿಂದ ಸಿಬಿಐ ಕಸ್ಟಡಿಯಲ್ಲಿದ್ದಾರೆ. ಜಾರಿ ನಿರ್ದೇಶನಾಲಯದವರೂ ಕೂಡ ಚಿದಂಬರಂ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಚಿದಂಬರಂ ಅವರು ನಿರೀಕ್ಷಣಾ ಜಾಮೀನಿಗಾಗಿ ಸುಪ್ರೀಂ ಕೋರ್ಟ್​ನಲ್ಲಿ ತಮ್ಮ ನಿರಂತರ ಪ್ರಯತ್ನ ಮುಂದುವರಿಸಿದ್ದಾರೆ.

ಚಿದಂಬರಮ್ ಅವರನ್ನು ರಾಜಕೀಯ ಉದ್ದೇಶದಿಂದ ಬಂಧಿಸಲಾಗಿದೆ ಎಂಬುದು ಕಾಂಗ್ರೆಸ್ ಪಕ್ಷದ ಆರೋಪವಾಗಿದೆ. ಪ್ರಕರಣದಲ್ಲಿ ಎಳ್ಳಷ್ಟೂ ಹುರುಳಿಲ್ಲದಿದ್ದರೂ ಬೇಕಂತಲೇ ಪ್ರಕರಣವನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ ಎಂಬುದು ಚಿದಂಬರಮ್ ಬೆಂಬಲಿಗರ ವಾದವಾಗಿದೆ. ಡಿಕೆ ಶಿವಕುಮಾರ್ ವಿಚಾರದಲ್ಲೂ ಇದೇ ರಾಜಕೀಯ ಉದ್ದೇಶ ಅಡಗಿದೆ ಎಂಬುದು ಕಾಂಗ್ರೆಸ್ ಅನಿಸಿಕೆ.

ಇದನ್ನೂ ಓದಿ: ಇಡಿ ವಿಚಾರಣೆ ವೇಳೆ ಯಡವಟ್ಟು ಮಾಡಿಕೊಂಡರಾ ಡಿಕೆ ಶಿವಕುಮಾರ್? ಬಂಧನಕ್ಕೆ ಮೂಲವಾಗಿದ್ದು ಏನು?

2017ರ ಗುಜರಾತ್ ರಾಜ್ಯಸಭೆ ಚುನಾವಣೆಯ ವೇಳೆ ಅಲ್ಲಿ ಶಾಸಕರಿಗೆ ರಕ್ಷಣೆ ಕೊಟ್ಟ ಕಾರ್ಯಕ್ಕೆ ಬಿಜೆಪಿಯವರು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕಾಗಿ ಎದೆಗೊಟ್ಟು ನಿಂತಿದ್ದಕ್ಕೆ ತನ್ನನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಡಿಕೆ ಶಿವಕುಮಾರ್ ಅವರು ಸಾಕಷ್ಟು ಬಾರಿ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಇಡಿ ವಿಚಾರಣೆಯ ವೇಳೆಯೂ ಇವೇ ಮಾತುಗಳನ್ನ ಡಿಕೆಶಿ ಹೇಳುತ್ತಿದ್ದರು.(ವರದಿ: ಶ್ರೀನಿವಾಸ ಹಳಕಟ್ಟಿ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:September 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ