KR Pete ByPoll Result: ಕುಮಾರಸ್ವಾಮಿ ಪುತ್ರ ವ್ಯಾಮೋಹಕ್ಕೆ ಕುಸಿದ ಜೆಡಿಎಸ್​ ಕೋಟೆ; ಮಂಡ್ಯದಲ್ಲೂ ನೆಲೆ ಕಳೆದುಕೊಳ್ಳುವ ಭೀತಿ?

ವಿಧಾನಸಭಾ ಉಪಚುನಾವಣೆಯಲ್ಲಿ 15 ಕ್ಷೇತ್ರಗಳ ಪೈಕಿ ಬಿಜೆಪಿ 12 ಸ್ಥಾನ ಗೆಲ್ಲುವುದು ಬಹುತೇಕ ಖಚಿತ. ಜೆಡಿಎಸ್​ ಪಾಳಯದಲ್ಲಿದ್ದ ನಾರಾಯಣಗೌಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಅನರ್ಹಗೊಂಡಿದ್ದರು. ನಂತರ ಬಿಜೆಪಿ ಸೇರ್ಪಡೆಯಾಗಿ ಕೆಆರ್​ ಪೇಟೆ ಕ್ಷೇತ್ರದಿಂದ ಕಣಕ್ಕೆ ಇಳಿದು, ಜೆಡಿಎಸ್​ ಎದುರಾಳಿ ದೇವರಾಜ್ ಬಿಎಲ್​ ಅವರನ್ನು 9,728 ಅಂತರದಿಂದ ಸೋಲಿಸಿದ್ದಾರೆ. 

Rajesh Duggumane | news18-kannada
Updated:December 9, 2019, 1:38 PM IST
KR Pete ByPoll Result: ಕುಮಾರಸ್ವಾಮಿ ಪುತ್ರ ವ್ಯಾಮೋಹಕ್ಕೆ ಕುಸಿದ ಜೆಡಿಎಸ್​ ಕೋಟೆ; ಮಂಡ್ಯದಲ್ಲೂ ನೆಲೆ ಕಳೆದುಕೊಳ್ಳುವ ಭೀತಿ?
ಹೆಚ್​.ಡಿ. ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ.
  • Share this:
ಬೆಂಗಳೂರು (ಡಿ.9): ‘ಮಂಡ್ಯ ಭಾಗದಲ್ಲಿ ಜೆಡಿಎಸ್​ ಸೋಲಿಸುವ ತಾಕತ್ತು ಯಾರಿಗಿದೆ?’ ದೊಡ್ಡ ಗೌಡರ ಕುಟುಂಬದವರು ಹೀಗೊಂದು ಸವಾಲು ಹಾಕಿದರೆ ಅದನ್ನು ಸ್ವೀಕರಿಸಲು ತಾಕತ್ತು ಕಳೆದು ಎರಡು ದಶಕದಲ್ಲಿ ಯಾರೆಂದರೆ ಯಾರೊಬ್ಬರಿಗೂ ಇರಲಿಲ್ಲ. ಒಂದು ವೇಳೆ ಹಾಗೆ ಮುಂದೆ ಬಂದರೂ ಅವರಿಗೆ ಸೋಲು ಕಟ್ಟಿಟ್ಟಬುತ್ತಿ ಎನ್ನುವ ಸ್ಥಿತಿ ಇತ್ತು.

ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಇಂದು ಹೊರಬಿದ್ದ ಉಪ ಚುನಾವಣೆ ಫಲಿತಾಂಶದಲ್ಲಿ ಕೆ.ಆರ್.​ ಪೇಟೆ ಕ್ಷೇತ್ರದಲ್ಲಿ ಬಿಜೆಪಿ ಇದೇ ಮೊದಲ ಬಾರಿಗೆ ಖಾತೆ ತೆರೆಯುವ ಮೂಲಕ ಹೊಸದೊಂದು ಇತಿಹಾಸ ಬರೆದಿದೆ. ಆದರೆ, ಜೆಡಿಎಸ್​ ನಾಯಕರಿಗೋ ತನ್ನ ಕೋಟೆಯಲ್ಲೇ ನೆಲೆ ಕಳೆದುಕೊಳ್ಳುವ ಭೀತಿ.

ವಿಧಾನಸಭಾ ಉಪಚುನಾವಣೆಯಲ್ಲಿ ಅನರ್ಹ ಶಾಸಕರಿಂದ ತೆರವಾಗಿದ್ದ 15 ಕ್ಷೇತ್ರಗಳ ಪೈಕಿ ಬಿಜೆಪಿ 12 ಸ್ಥಾನ ಗೆಲ್ಲುವ ಮೂಲಕ ತನ್ನ ಸರ್ಕಾರವನ್ನು ಉಳಿಸಿಕೊಂಡಿದೆ. ಈ ನಡುವೆ ಸಾಕಷ್ಟು ಕುತೂಹಲ ಮೂಡಿಸಿದ್ದ ಕ್ಷೇತ್ರದ ಮಂಡ್ಯದ ಕೆ.ಆರ್​.ಪೇಟೆ. ಚುನಾವಣಾ ಪ್ರಚಾರದ ವೇಳೆಯಂತೂ ಈ ಕ್ಷೇತ್ರ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವಿನ ರಣಾಂಗಣವಾಗಿಯೇ ಬದಲಾಗಿತ್ತು. ಇದಕ್ಕೆ ಕಾರಣ ಅನರ್ಹ ಶಾಸಕ ನಾರಾಯಣ ಗೌಡ.

ಕಳೆದ ಎರಡು ದಶಕಗಳಿಂದ ಜೆಡಿಎಸ್​ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಪ್ರಭಾವಿ ನಾಯಕ ನಾರಾಯಣಗೌಡ ಮೈತ್ರಿ ಸರ್ಕಾರದ ವಿರುದ್ಧ ಬಂಡೆದ್ದು ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡಿದ್ದರು. ನಂತರದ ನಾಟಕೀಯ ಬೆಳವಣಿಗೆಯಲ್ಲಿ ಬಿಜೆಪಿ ಸೇರ್ಪಡೆಯಾಗಿ ಕೆ.ಆರ್.​ ಪೇಟೆ ಕ್ಷೇತ್ರದಿಂದಲೇ ಕಣಕ್ಕಿಳಿದಿದ್ದರು.

ಇಂದು ಚುನಾವಣಾ ಫಲಿತಾಂಶ ಹೊರಬಿದ್ದದ್ದು, ನೂತನ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಜೆಡಿಎಸ್​ ಎದುರಾಳಿ ಬಿ.ಎಲ್. ದೇವರಾಜ್  ಅವರನ್ನು 9,728 ಅಂತರದಿಂದ ಸೋಲಿಸಿದ್ದಾರೆ. ಆ ಮೂಲಕ ಜೆಡಿಎಸ್​ ಕೋಟೆಯಲ್ಲಿ ಮೊದಲ ಬಾರಿಗೆ ಕಮಲ ಬಾವುಟವನ್ನು ಹಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೆಡಿಎಸ್ ನಾಯಕರ ಪಾಲಿಗಂತು ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ.

ಲೋಕಸಭಾ ಚುನಾವಣೆಯಿಂದ ಬದಲಾಯ್ತು ಮಂಡ್ಯದ ಚಿತ್ರಣ?:

ಲೋಕಸಭಾ ಚುನಾವಣೆ ಮತ್ತು ಮಂಡ್ಯದ ಅಭ್ಯರ್ಥಿಯ ಆಯ್ಕೆ ಇಂದಿನ ಜೆಡಿಎಸ್​ ಪಕ್ಷದ ದುಸ್ಥಿತಿಗೆ ಕಾರಣ ಎಂದರೆ ತಪ್ಪಾಗಲಾರದು. ಏಕೆಂದರೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ 27 ವರ್ಷದ ನಟ ನಿಖಿಲ್ ಕುಮಾರಸ್ವಾಮಿ ಮಂಡ್ಯದ ಜೆಡಿಎಸ್​ ಅಭ್ಯರ್ಥಿಯಾಗ್ತಾರೆ ಎಂದು ಯಾರೆಂದರೆ ಯಾರೂ ಊಹಿಸಿರಲಿಲ್ಲ. ಸ್ವತಃ ಜೆಡಿಎಸ್​ ಸ್ಥಳೀಯ ನಾಯಕರಿಗೆ ಈ ನಿರ್ಧಾರ ಆಘಾತ ನೀಡಿದ್ದು ಸುಳ್ಳಲ್ಲ.ಆದರೆ, ಅಂದಿನ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಕೊನೆಗೂ ಮಂಡ್ಯದ ಎಲ್ಲಾ ನಾಯಕರು ಮತ್ತು ಕಾರ್ತಕರ್ತರನ್ನು ಒಗ್ಗೂಡಿಸಿ ತಮ್ಮ ನಿರ್ಧಾರಕ್ಕೆ ಒಪ್ಪಿಗೆ ಪಡೆದಿದ್ದರು. ಕಾಂಗ್ರೆಸ್​ ಮೈತ್ರಿ ಪಕ್ಷವಾದ್ದರಿಂದ ಅವರ ಬೆಂಬಲ ನಮಗೇ ಸಿಗಲಿದೆ. ಇಲ್ಲಿ, ಬಿಜೆಪಿ ಅಭ್ಯರ್ಥಿ ಗೆಲ್ಲುವುದು ಕನಸಿನ ಮಾತು. ಹೀಗಾಗಿ, ನಿಖಿಲ್​ ಗೆದ್ದು ಸಂಸತ್ ಪ್ರವೇಶಿಸುತ್ತಾರೆ ಎಂಬುದು ಹೆಚ್​ಡಿಕೆ ಕನಸಾಗಿತ್ತು.

ಆದರೆ, ಕುಮಾರಸ್ವಾಮಿ ಕಂಡ ಕನಸಿಗೆ ನೀರೆರಚಿದ್ದು ಮಾತ್ರ ಮಾಜಿ ಸಚಿವ ದಿವಂಗತ ಅಂಬರೀಷ್ ಅವರ ಪತ್ನಿ ನಟಿ ಸುಮಲತಾ ಅಂಬರೀಶ್​ ಅವರ ದಿಢೀರ್​ ಲೋಕಸಭಾ ಎಂಟ್ರಿ. ‘ಕಾಂಗ್ರೆಸ್​​ನಿಂದ ಮಂಡ್ಯದಲ್ಲಿ ನಾನು ಸ್ಪರ್ಧೆ ಮಾಡ್ತೇನೆ’ ಎಂದು​ ಸುಮಲತಾ ಘೋಷಣೆ ಮಾಡಿದ್ದರು. ಆದರೆ, ಮೈತ್ರಿ ಒಪ್ಪಂದದ ಪ್ರಕಾರ ಮಂಡ್ಯ ಟಿಕೆಟ್​ ಸಿಗಬೇಕಾದದ್ದು ಜೆಡಿಎಸ್​ಗೆ. ಹೀಗಾಗಿ ಆಪ್ತ ವರ್ಗದಲ್ಲಿದ್ದ ಸಿದ್ದರಾಮಯ್ಯ ಕೂಡ ಸುಮಲತಾಗೆ ಟಿಕೆಟ್​ ಕೊಡಿಸುವಲ್ಲಿ ವಿಫಲರಾದರು. ಆದರೆ, ಇತ್ತ ಕಡೆ ಪಟ್ಟು ಬಿಡದ ಕುಮಾರಸ್ವಾಮಿ ಮಗನನ್ನು ಕಣಕ್ಕೆ ಇಳಿಸಿದರು.

ಸುಮಲತಾ ಕೂಡ ತಮ್ಮ ನಿರ್ಧಾರ ಹಿಂಪಡೆಯಲಿಲ್ಲ. ಕಾಂಗ್ರೆಸ್​ನವರು ಟಿಕೆಟ್​ ಕೊಡದಿದ್ದರೇನಂತೆ, ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಘೋಷಿಸಿದರು. ಯಶ್​-ದರ್ಶನ್​ ಸುಮಲತಾ ಬೆಂಬಲಕ್ಕೆ ನಿಂತರು. ಅಲ್ಲಿಗೆ ಮಂಡ್ಯದಲ್ಲಿದ್ದ ಜೆಡಿಎಸ್ ಕೋಟೆಗೆ ಮೊದಲ ಉಳಿಪೆಟ್ಟು ಬಿದ್ದಂತಾಗಿತ್ತು. ನಿರೀಕ್ಷೆಯಂತೆಯೇ ಸುಮಲತಾ ಜೆಡಿಎಸ್ ಅಭ್ಯರ್ಥಿ ನಿಖಿಲ್ ವಿರುದ್ಧ 1.3 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದರು.

ಜೆಡಿಎಸ್​ ಭದ್ರಕೋಟೆ ಅಧಃಪಥನ:

ಮಂಡ್ಯ ಭಾಗದಲ್ಲಿ ಈವರೆಗೆ ಬಿಜೆಪಿಯಿಂದ ಸ್ಪರ್ಧೆ ಮಾಡಿ ಈವರೆಗೆ ಒಬ್ಬನೇ ಒಬ್ಬ ಅಭ್ಯರ್ಥಿ ಗೆದ್ದ ಉದಾಹರಣೆ ಇಲ್ಲ. ಅಷ್ಟೇ ಏಕೆ ಕೆಲವೊಮ್ಮೆ ಠೇವಣಿ ಉಳಿಸಿಕೊಳ್ಳಲೂ ಬಿಜೆಪಿ ಹೋರಾಟ ನಡೆಸಿದ ಉದಾಹರಣೆ ಇದೆ. ಹೀಗಿರುವಾಗ, ಪ್ರಸ್ತುತ ಉಪ ಚುನಾವಣೆಯಲ್ಲಿ ಬಿಜೆಪಿ ಈ ಭಾಗದಲ್ಲಿ ಗೆಲುವು ಸಾಧಿಸಿರುವುದು ಸಹಜವಾಗಿಯೇ ದೊಡ್ಡ ಗೌಡರ ಕುಟುಂಬದ ಆತಂಕಕ್ಕೆ ಕಾರಣವಾಗಿದೆ.

ಈಗಾಗಲೇ ಮಂಡ್ಯ ಸಂಸದ ಸ್ಥಾನವನ್ನೂ ಕಳೆದುಕೊಂಡಿರುವ ಜೆಡಿಎಸ್​ ಪಾಲಿಗೆ ಇದೀಗ ಕೆ.ಆರ್​. ಪೇಟೆ ವಿಧಾನಸಭಾ ಕ್ಷೇತ್ರವನ್ನೂ ಕಳೆದುಕೊಂಡಿರುವುದು ಗಾಯದ ಮೇಲೆ ಬರೆ ಎಲೆದಂತಾಗಿದೆ.

ಮತ್ತಷ್ಟು ಬದಲಾಗಲಿದೆ ಚಿತ್ರಣ:

ಕೆಲ ಜೆಡಿಎಸ್​ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿಯವರು ಉಪಚುನಾವಣೆಗೂ ಮೊದಲು ಹೇಳಿದ್ದರು. ಈಗ ಅನರ್ಹರಾಗಿಯೂ ಗೆಲುವು ಸಾಧಿಸಿರುವುದು ಜೆಡಿಎಸ್​ನ ಇನ್ನೂ ಕೆಲ ಅಸಮಾಧಾನಿತ ಶಾಸಕರಿಗೆ ಬಲ ತುಂಬಿದಂತಾಗಿದೆ. ಒಂದೊಮ್ಮೆ ಜೆಡಿಎಸ್​​ನ ಉಳಿದ ರೆಬೆಲ್​ಗಳೂ ಬಿಜೆಪಿ ಸೇರಿದರೆ ತೆನೆ ಹೊತ್ತ ಮಹಿಳೆ ಸೋತು ಸೊರಗುವುದು ಖಚಿತ.

ಪುತ್ರ ವ್ಯಾಮೋಹಕ್ಕೆ ಕುಸಿದ ಜೆಡಿಎಸ್​ ಕೋಟೆ?:

ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ 25 ಕ್ಷೇತ್ರಗಳ ಪೈಕಿ ಮೈತ್ರಿ ಟೀಂ ಗೆದ್ದಿದ್ದು ಬೆಂಗಳೂರು ಗ್ರಾಮಾಂತರ ಮಾತ್ರ. ಒಂದೊಮ್ಮೆ ಮಂಡ್ಯದಿಂದ ಸುಮಲತಾ ಸ್ಪರ್ಧೆಗೆ ಅವಕಾಶ ನೀಡಿದ್ದರೆ ಮತ್ತಷ್ಟು ಸ್ಥಾನಗಳನ್ನು ಕಾಂಗ್ರೆಸ್​ ಗೆಲ್ಲಬಹುದಿತ್ತು ಎನ್ನುವ ಮಾತಿದೆ. ಸುಮಲತಾಗೆ ಬಿಜೆಪಿ ಒಲವು ಇರುವುದು ಕೂಡ ಕೆ.ಆರ್.​ ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಪ್ರಮುಖ ಕಾರಣ ಎನ್ನಲಾಗುತ್ತಿದೆ . ಹೀಗಾಗಿ ಪುತ್ರ ವ್ಯಾಮೋಹಕ್ಕೆ ಸಿಲುಕುವ ಮೂಲಕ ಕುಮಾರಸ್ವಾಮಿ ತಮ್ಮ ಪಕ್ಷದ ಅಧಃಪಥನಕ್ಕೆ ಕಾರಣವಾದರೆ..? ಎಂಬುದೀಗ ರಾಜ್ಯ ರಾಜಕೀಯ ವಲಯದಲ್ಲಿ ಮಿಲಿಯನ್ ಡಾಲರ್​ ಪ್ರಶ್ನೆಯಾಗಿ ಬದಲಾಗಿದೆ.
First published: December 9, 2019, 1:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading