• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಭಾರೀ ವಿರೋಧ ಹಿನ್ನಲೆ: ಬಂಡೀಪುರದ ನುಗು ವನ್ಯಜೀವಿ ವಲಯದಲ್ಲಿ ಸಫಾರಿಗೆ  ಬ್ರೇಕ್

ಭಾರೀ ವಿರೋಧ ಹಿನ್ನಲೆ: ಬಂಡೀಪುರದ ನುಗು ವನ್ಯಜೀವಿ ವಲಯದಲ್ಲಿ ಸಫಾರಿಗೆ  ಬ್ರೇಕ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನವೆಂಬರ್ 30 ರಿಂದ  ಬೆಳಿಗ್ಗೆ ಮತ್ತು ಸಂಜೆ ತಲಾ ಎರಡು ಬ್ಯಾಚ್ ಗಳಂತೆ ಸಫಾರಿ ಆರಂಭಿಸಲು ಅರಣ್ಯಾಧಿಕಾರಿಗಳು  ಎಲ್ಲಾ ಸಿದ್ದತೆ ನಡೆಸಿದ್ದರು

  • Share this:

ಚಾಮರಾಜನಗರ (ಅ. 27): ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನುಗು ವನ್ಯಜೀವಿ ವಲಯದಲ್ಲಿ ನವೆಂಬರ್ 30 ರಿಂದ ಆರಂಭವಾಗಿಬೇಕಿದ್ದ  ಸಫಾರಿಗೆ  ಬ್ರೇಕ್ ಬಿದ್ದಿದೆ.  ಈಗಾಗಲೇ ಬಂಡೀಪುರದ ಮೇಲುಕಾಮನಹಳ್ಳಿ ಬಳಿ ಸಫಾರಿ ಕೌಂಟರ್ ಕಾರ್ಯನಿರ್ವಹಿಸುತ್ತಿದೆ. ರಾಜ್ಯದಲ್ಲಿ ನಾಗರಹೊಳೆ ಹೊರತುಪಡಿಸಿದರೆ  ಅತಿ  ಹೆಚ್ಚು ಹುಲಿಗಳ ತಾಣವಾಗಿರುವ ಬಂಡೀಪುರಕ್ಕೆ ದೇಶವಿದೇಶಗಳಿಂದ ಹಾಗೂ ರಾಜ್ಯದ ನಾನಾ ಮೂಲೆಗಳಿಂದ ನಿತ್ಯ ನೂರಾರು ಪ್ರವಾಸಿಗರು ಬರುವುದು ಸಾಮಾನ್ಯವಾಗಿದೆ. ಹಾಗಾಗಿ ಪರಿಸರ ಪ್ರವಾಸೋದ್ಯಮ ಚಟುವಟಿಕೆಗಳನ್ನು ವಿಸ್ತರಿಸುವ ಅಂಗವಾಗಿ ನುಗು ವನ್ಯಜೀವಿ ವಲಯದಲ್ಲೂ  ಸಫಾರಿ ಆರಂಭಿಸಲು ಬಹಳ ಹಿಂದೆಯೇ ಅರಣ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದಕ್ಕಾಗಿ 11 ಕಿಲೋ ಮೀಟರ್ ಸಫಾರಿ ಝೋನ್ ಸಹ  ಗುರುತಿಸಲಾಗಿತ್ತು.


ಅರಣ್ಯ ಇಲಾಖೆಯಿಂದ ಇದರ  ಮ್ಯಾನೇಜ್ಮೆಂಟ್ ಪ್ಲಾನ್ ಗೆ ಅನುಮೋದನೆ ಸಹ ಸಿಕ್ಕಿತ್ತು. ಈ ಹಿನ್ನಲೆಯಲ್ಲಿ  ನವೆಂಬರ್ 30 ರಿಂದ  ಬೆಳಿಗ್ಗೆ ಮತ್ತು ಸಂಜೆ ತಲಾ ಎರಡು ಬ್ಯಾಚ್ ಗಳಂತೆ ಸಫಾರಿ ಆರಂಭಿಸಲು ಅರಣ್ಯಾಧಿಕಾರಿಗಳು  ಎಲ್ಲಾ ಸಿದ್ದತೆ ನಡೆಸಿದ್ದರು. ಈ ತಿಂಗಳ ಅಂತ್ಯದಲ್ಲಿ ನಿವೃತ್ತಿಯಾಗುತ್ತಿರುವ ಅರಣ್ಯ ಸಂರಕ್ಷಣಾಧಿಕಾರಿ ಹಾಗು ಹುಲಿ ಯೋಜನೆ ಕ್ಷೇತ್ರ ನಿರ್ದೇಶಕ ಬಾಲಚಂದ್ರ ತಮ್ಮ ಅಧಿಕಾರಾವಧಿ ಮುಗಿಯುವುದರೊಳಗೆ ನುಗು ವನ್ಯಜೀವಿ ವಲಯದಲ್ಲಿ  ಸಫಾರಿ ಆರಂಭಿಸಲು ಉತ್ಸುಕರಾಗಿದ್ದರು


ಆದರೆ, ನುಗು ವನ್ಯಜೀವಿ ವಲಯ ಅತಿ ಸೂಕ್ಷ್ಮ ಅರಣ್ಯ ಪ್ರದೇಶದ(ಎಕೋ ಸೆನ್ಸಿಟಿವ್ ಜೋನ್) ವ್ಯಾಪ್ತಿಗೆ ಬರುವುದರಿಂದ ಇಲ್ಲಿ ಪ್ರವಾಸೋದ್ಯಮ ಚಟುವಟಿಕೆ ಮಾಡುವಂತಿಲ್ಲ, ಇದಕ್ಕೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್.ಟಿ.ಸಿ.ಎ)  ಅನುಮತಿ ಬೇಕು. ಮ್ಯಾನೇಜ್ಮೆಂಟ್ ಪ್ಲಾನ್ ಗೆ ಅನುಮೋದನೆ ಸಿಕ್ಕರೆ ಸಾಲದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿರುವುದರಿಂದ ಸದ್ಯಕ್ಕೆ ನುಗು ವನ್ಯಜೀವಿ ವಲಯದಲ್ಲಿ ಸಫಾರಿ ಆರಂಭಿಸದೇ ಇರಲು ಬಂಡೀಪುರ ಅರಣ್ಯಾಧಿಕಾರಿಗಳು  ನಿರ್ಧರಿಸಿದ್ದಾರೆ.


ಈ ಬಗ್ಗೆ ನ್ಯೂಸ್ 18 ಜೊತೆ ಮಾತನಾಡಿದ ಬಂಡೀಪುರ ಅರಣ್ಯಸಂರಕ್ಷಣಾಧಿಕಾರಿ ಬಾಲಚಂದ್ರ, ಹಾಲಿ ಮೇಲುಕಾಮನಹಳ್ಳಿ ಬಳಿ ಇರುವ ಸಫಾರಿ ಗೆ ಸಾಕಷ್ಟು ಒತ್ತಡ ಇದೆ. ನಿತ್ಯ ಇಲ್ಲಿಗೆ ನೂರಾರು  ಪ್ರವಾಸಿಗರು ಬರುತ್ತಾರೆ. ಇಲ್ಲಿನ ಒತ್ತಡ ಕಡಿಮೆ ಮಾಡಲು ನುಗು ವನ್ಯಜೀವಿ ವಲಯದಲ್ಲೂ  ಪರಿಸರ ಪ್ರವಾಸೋದ್ಯಮ ಚಟುವಟಿಕೆ ಆರಂಭಿಸಲು ಯೋಜಿಸಲಾಗಿತ್ತು. ಆದರೆ ಇದಕ್ಕೆ  ಮ್ಯಾನೇಜ್ ಮೆಂಟ್ ಪ್ಲಾನ್ ಗೆ ಸಿಕ್ಕಿರುವ  ಅನುಮೋದನೆಯೊಂದೇ ಸಾಕಾ ಅಥವಾ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದಿಂದಲು ಅನುಮತಿ ಪಡೆಯಬೇಕಾ ಎಂಬ ಸ್ಪಷ್ಟೀಕರಣ ಅಗತ್ಯ ಇರುವುದರಿಂದ ಈ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದರು.


ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಾಲ್ಕು ಪ್ರವಾಸೋಧ್ಯಮ ವಲಯ ಗುರುತಿಸಲಾಗಿದ್ದು ಅಲ್ಲಿ ನಾಲ್ಕೂ ಕಡೆ ಸಫಾರಿ ನಡೆಯುತ್ತಿದೆ. ಆದರೆ ಬಂಡೀಪುರ ಹುಲಿಸಂರಕ್ಷಿತ ಪ್ರದೇಶದ ನುಗು ವನ್ಯಜೀವಿ  ವಲಯದಲ್ಲಿ ಪರಿಸರ ಪ್ರವಾಸೋದ್ಯಮ ಚಟುವಟಿಕೆ ನಿಲ್ಲಿಸುವುದರಿಂದ ಪ್ರವಾಸಿಗರಿಗೆ ನಷ್ಟವೇ ಹೊರತು ಅರಣ್ಯ ಇಲಾಖೆಗೆ ಇದರಿಂದ ಯಾವುದೆ ರೀತಿ ನಷ್ಟವಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ


 ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ:


ನುಗು ವನ್ಯಜೀವಿ ವಲಯದಲ್ಲಿ ಸಫಾರಿ ಆರಂಭಿಸುವ ವಿಚಾರ  ಸಾಮಾಜಿಕ ಜಾಲತಾಣಗಳಲ್ಲಿ  ಚರ್ಚೆಗೆ ಗ್ರಾಸವಾಗಿದ್ದು  ಸಫಾರಿ ಆರಂಭಕ್ಕೆ ತೀವ್ರ ವಿರೋಧವೂ ವ್ಯಕ್ತವಾಗಿದೆ. 2012 ರಲ್ಲಿ ಬಂಡೀಪುರದಲ್ಲಿ ಆಗಿನ ಶಾಸಕ ಹೆಚ್.ಎಸ್. ಮಹದೇವಪ್ರಸಾದ್, ಚಿಕ್ಕಮಾದು, ಶ್ರೀನಿವಾಸಪ್ರಸಾದ್, ಹಾಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ, ಸಂದೇಶ್ ನಾಗರಾಜ್  ಹಾಗು ಸ್ಥಳೀಯರು ಸಭೆ ನಡೆಸಿ ಈಗಿರುವ ಪ್ರವಾಸೋದ್ಯಮ ವಿಸ್ತರಿಸಬಾರದು ಎಂದು ನಿರ್ಣಯಿಸಿದ್ದರು. ರೈತರು ಮನೆ, ಕೊಟ್ಟಿಗೆ ಕಟ್ಟಲು ಅನುಮತಿ ನೀಡಲು ತೊಂದರೆ ಕೊಡುವ ಅರಣ್ಯ ಇಲಾಖೆ ಪ್ರವಾಸೋಧ್ಯಮವನ್ನು ಸೀಮಿತಗೊಳಿಸಬೇಕು ಎಂದು ಸೂಚಿಸಿದ್ದರು ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆದಿದೆ.

top videos


    ಅಲ್ಲದೆ ನುಗು ಭಾಗದಲ್ಲಿ ಮಾಜಿ ಸಚಿವರೊಬ್ಬರ ಮಗನಿಗೆ ಸೇರಿದ ಜಮೀನು ಇದ್ದು  ಅವರ ಪ್ರಭಾವದಿಂದ ಸಫಾರಿ ಆರಂಭಿಸಲಾಗುತ್ತಿದೆ ಎಂಬ ಅನುಮಾನವವಿದೆ. ನುಗು ಪ್ರದೇಶ ಆನೆಗಳ ಸಂಘರ್ಷ ಇರುವ ಜಾಗವಾಗಿದ್ದು ಇಲ್ಲಿ ಪ್ರವಾಸೋಧ್ಯ ಚಟುವಟಿಕೆ ಆರಂಭಗೊಂಡರೆ ಆನೆ ಮಾನವ ಸಂಘರ್ಷ ಮತ್ತಷ್ಟು ಹೆಚ್ಚಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ  ಸುಪ್ರೀಂ ಕೋರ್ಟ್ ಸಹ ಕೆಲ ವರ್ಷದ ಹಿಂದೆ ಅರಣ್ಯ ಪ್ರವಾಸೋದ್ಯಮದ ಮೇಲೆ ಮಿತಿ  ಹೇರಿದೆ. ಈಗಿರುವ ಎ ವಲಯದಲ್ಲಿ ಸೀಮಿತ ಪ್ರವಾಸೋದ್ಯಮ ಚಟುವಟಿಕೆ ನಡೆಸುವುದಾಗಿ ಅರಣ್ಯ ಇಲಾಖೆ ಸಲ್ಲಿಸಿರುವ ಅಫಿಡವಿಡ್ ನಲ್ಲಿ ಸಲ್ಲಿಸಲಾಗಿತ್ತು. ಹಾಗಾಗಿ ಈಗ ನುಗು ವನ್ಯಜೀವಿ ವಲಯದಲ್ಲು ಪ್ರವಾಸೋದ್ಯಮ ಚಟುವಟಿಕೆ ಆರಂಭಿಸಿದರೆ ಅದು ಸುಪ್ರೀಂಕೋರ್ಟ್ ನ ಸೂಚನೆ ಉಲ್ಲಂಘನೆ ಆಗಲಿದೆ ಎಂಬ ಚರ್ಚೆಗಳು ನಡೆದಿವೆ.
    ಈ ಎಲ್ಲಾ  ಹಿನ್ನಲೆಯಲ್ಲಿ ನುಗುವನ್ಯಜೀವಿ ವಲಯದಲ್ಲಿ ಪರಿಸರ ಪ್ರವಾಸೋದ್ಯಮ ಚಟುವಟಿಕೆ ಆರಂಭಿಸುವ ಯೋಜನೆಯನ್ನು ಬಂಡೀಪುರ ಅರಣ್ಯಾಧಿಕಾರಿಗಳು ಸದ್ಯಕ್ಕೆ ಕೈಬಿಟ್ಟಿದ್ದಾರೆ.

    First published: