• Home
  • »
  • News
  • »
  • state
  • »
  • ನಂಜನಗೂಡು ವೈದ್ಯಾಧಿಕಾರಿ ಆತ್ಮಹತ್ಯೆ ಬೆನ್ನಲ್ಲೇ ತಮ್ಮ ವಾಸ್ತವ ಸ್ಥಿತಿ ಬಿಚ್ಚಿಟ್ಟ ತುಮಕೂರು ವೈದ್ಯ

ನಂಜನಗೂಡು ವೈದ್ಯಾಧಿಕಾರಿ ಆತ್ಮಹತ್ಯೆ ಬೆನ್ನಲ್ಲೇ ತಮ್ಮ ವಾಸ್ತವ ಸ್ಥಿತಿ ಬಿಚ್ಚಿಟ್ಟ ತುಮಕೂರು ವೈದ್ಯ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೈಸೂರಿನ ಡಾ. ನಾಗೇಂದ್ರ ಅವರ ಆತ್ಮಹತ್ಯೆ ಇಡೀ ವೈದ್ಯಲೋಕದ ಸಹನೆಯನ್ನು ಕೆಣಕಿದೆ. ತುಮಕೂರು ವೈದ್ಯಾಧಿಕಾರಿಯೊಬ್ಬರು ತಮ್ಮ‌ ಸ್ಥಿತಿಯನ್ನ ಬಿಚ್ಚಿಟ್ಟಿದ್ದಾರೆ. ಇನ್ನು ಮುಂದಾದರೂ ಸರ್ಕಾರ ವೈದ್ಯರ ಸಮಸ್ಯೆಗಳನ್ನ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಳ್ಳಬೇಕಿದೆ.

  • Share this:

ತುಮಕೂರು (ಆ. 24): ಮೈಸೂರು ಜಿಲ್ಲೆಯ ನಂಜನಗೂಡಿನ ತಾಲೂಕು ವೈದ್ಯಾಧಿಕಾರಿ ಡಾ. ನಾಗೇಂದ್ರ ಆತ್ಮಹತ್ಯೆ ಪ್ರಕರಣ ಇಡೀ ಮೈಸೂರನ್ನು ತಲ್ಲಣಗೊಳಿಸಿದೆ. ಹೀಗಾಗಿ, ಮೈಸೂರು ವೈದ್ಯರು ಡಾ. ನಾಗೇಂದ್ರ ಅವರ ಸಾವಿಗೆ ನ್ಯಾಯ ಸಿಗಬೇಕು ಅಂತ ಪ್ರತಿಭಟನೆಗೆ ಕುಳಿತಿದ್ದರು‌.‌ ಈ ಘಟನೆ ಬೆನ್ನಲ್ಲೇ ರಾಜ್ಯಾದ್ಯಂತ ತಾಲೂಕು ವೈದ್ಯಾಧಿಕಾರಿಗಳು ತಮಗಾಗುವ ತೊಂದರೆ, ನೋವು, ಒತ್ತಡ, ಟಾಸ್ಕ್, ಹಾಗೂ ಟಾರ್ಗೆಟ್ ಕುರಿತು ನ್ಯೂಸ್18ಕನ್ನಡದ ಜೊತೆ ಮಾತನಾಡಿದ್ದಾರೆ.


ತುಮಕೂರು ಜಿಲ್ಲೆಯಲ್ಲೂ ಕೂಡ ತಾಲೂಕು ವೈದ್ಯಾಧಿಕಾರಿಯೊಬ್ಬರು ತಮ್ಮ‌ ಸ್ಥಿತಿಯನ್ನ ಬಿಚ್ಚಿಟ್ಟಿದ್ದಾರೆ. ಹೌದು, ಮೈಸೂರಿನ ಡಾ. ನಾಗೇಂದ್ರ ಅವರ ಆತ್ಮಹತ್ಯೆ ಇಡೀ ವೈದ್ಯಲೋಕದ ಸಹನೆಯನ್ನು ಕೆಣಕಿದೆ. ಹೀಗಾಗಿ ಮುಂದೆ ಇನ್ಯಾವತ್ತೂ ಬೇರೆ ವೈದ್ಯರು ಇಂತಹ ನಿರ್ಧಾರಕ್ಕೆ ಬರಬಾರದು ಅಂತ ಸಾವಿಗೆ ಕಾರಣರಾಗಿದ್ದಾರೆ ಎನ್ನಲಾದ ಐಎಎಸ್ ಅಧಿಕಾರಿ ಮೈಸೂರು ಜಿಲ್ಲೆಯ ಸಿಇಓ ಅವರನ್ನು ಕೂಡಲೇ ಅಮಾನತು ಮಾಡಬೇಕೆಂದು ಅವರ ಆಗ್ರಹವಾಗಿತ್ತು.‌ ಆದರೆ, ಸರ್ಕಾರ ಆ ವಿಚಾರದಲ್ಲಿ ಮೃದುಧೋರಣೆ ತೋರುತ್ತಿರುವುದು ವೈದ್ಯರ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.


ಈ ಬೆನ್ನಲ್ಲೇ ತುಮಕೂರಿನಲ್ಲೂ ಅಂತಹದ್ದೇ ಮತ್ತೊಂದು ಪ್ರಕರಣ ನಡೆಯುವ ಸಾಧ್ಯತೆ ಇದೆ. ಈ ಬಗ್ಗೆ ನ್ಯೂಸ್ 18 ಕನ್ನಡದ ಜೊತೆ ಮಾತನಾಡಿರುವ ತಾಲೂಕು ವೈದ್ಯಾಧಿಕಾರಿಯೊಬ್ಬರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಸಾರ್ ನಮ್ಮ ನೋವನ್ನು ಕೇಳೋರೇ ಇಲ್ಲ. ಮಾರ್ಚ್ ತಿಂಗಳಿಂದ ಇಲ್ಲಿಯವರೆಗೂ ಸತತವಾಗಿ ರಜೆಯಿಲ್ಲದೆ ಕೆಲಸ ಮಾಡುತ್ತಿದ್ದೇವೆ. ಹಗಲು- ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸೋದರ ಜೊತೆಗೆ ಸೋಂಕಿತರೊಂದಿಗೆ ಸಾಕಷ್ಟು ಸಂಪರ್ಕದಲ್ಲಿದ್ದುಕೊಂಡೇ ಕೆಲಸ ಮಾಡುತ್ತೇವೆ. ಕೆಲವೊಂದು ಬಾರಿ ಜ್ವರದಂತಹ ಕಾಯಿಲೆಯ ನಡುವೆ ಕರ್ತವ್ಯ ನಿರ್ವಹಿಸುತ್ತೇವೆ ಅಂತ ಹೇಳುತ್ತಾರೆ.


ಇದನ್ನೂ ಓದಿ: ರಾಹುಲ್ ಗಾಂಧಿಯೇ ಕಾಂಗ್ರೆಸ್ ಅಧ್ಯಕ್ಷರಾಗಬೇಕು; ಸಿದ್ದರಾಮಯ್ಯ, ಈಶ್ವರ ಖಂಡ್ರೆ ಬೆಂಬಲ


ಬೇರೆ ಇಲಾಖೆ ಅಥವಾ ಲೇಬರ್ ಆ್ಯಕ್ಟ್ ಪ್ರಕಾರ ಕನಿಷ್ಠ ರಜೆಯೂ ನಮಗೆ ಸಿಗಬೇಕು ಎಂಬುದು ಆವರ ಆಗ್ರಹವಾಗಿದೆ. ಇನ್ನು, ಪ್ರತಿ ತಾಲೂಕಿಗೆ ಒಂದೊಂದು ಆ್ಯಂಟಿಜನ್ ಕಿಟ್ ಕೊಟ್ಟು ದಿನಕ್ಕೆ‌ 250-300 ಟೆಸ್ಟ್ ರಿಸಲ್ಟ್ ತೆಗೆಯಿರಿ ಎಂದು ಟಾರ್ಗೆಟ್ ಕೊಡುತ್ತಾರೆ.  ಆ್ಯಂಟಿಜನ್ ಕಿಟ್​ನಲ್ಲಿ ಒಂದು ಪ್ರಕರಣದ ರಿಸಲ್ಟ್ ಬರಬೇಕು ಅಂದರೆ 20 ನಿಮಿಷ ಬೇಕು. ಹೀಗಿರುವಾಗ ಹೇಗೆ ತಾನೇ 300 ರಿಸಲ್ಟ್ ಕೊಡಲಿ ಅಂತ ತಮ್ಮ ನೋವನ್ನ ಹಂಚಿಕೊಂಡಿದ್ದಾರೆ. ಎಷ್ಟೋ ಬಾರಿ ಸೋಂಕಿತರನ್ನು ಆಸ್ಪತ್ರೆಗೆ ಕರೆತರುವ ವೇಳೆ ಹಲ್ಲೆಗಳೂ ಆಗಿವೆ. ಸಾಲದ್ದಕ್ಕೆ ಅವರ  ಮೇಲಧಿಕಾರಿಗಳಿಂದ ಸಾಕಷ್ಟು ನಿಂದನೆಯ ಮಾತುಗಳನ್ನೂ ಕೇಳೋ ಪರಿಸ್ಥಿತಿ ಬಂದಿದೆಯಂತೆ.


ಒಟ್ಟಾರೆ ಕೋವಿಡ್ ತುರ್ತು ಪರಿಸ್ಥಿಯಲ್ಲಿ ಜೀವ ಪಣಕ್ಕಿಟ್ಟು ನಮಗಾಗಿ ದುಡಿಯೋ ವೈದ್ಯವರ್ಗಕ್ಕೆ ತುಸು ಮಾನಸಿಕ ನೆಮ್ಮದಿ ಬೇಕಾಗಿದೆ. ಇನ್ನು ಮುಂದಾದರೂ ಸರ್ಕಾರ ವೈದ್ಯರ ಸಮಸ್ಯೆಗಳನ್ನ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಳ್ಳಬೇಕಿದೆ. ಇಲ್ಲವಾದರೆ ಇನ್ನಷ್ಟು ತಾಲೂಕು ವೈದ್ಯಾಧಿಕಾರಿಗಳು ಆತುರದ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಅನುಮಾನವೇ ಇಲ್ಲ.

Published by:Sushma Chakre
First published: