news18-kannada Updated:July 22, 2020, 7:35 PM IST
ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರು
ಕಾರವಾರ (ಜು. 22): ಕೃಷಿ ಎಂದರೆ ನಿರಾಸಕ್ತಿ ತೋರುತ್ತಿದ್ದ ಕಾರವಾರ ಸೇರಿ ಉತ್ತರ ಕನ್ನಡದ ಜನತೆ ಲಾಕ್ಡೌನ್ ನಂತರ ಬೇಸಾಯದತ್ತ ಮುಖ ಮಾಡಿದ್ದಾರೆ. ಕೃಷಿ ಎಂದರೆ ಮೂಗು ಮುರಿಯುವ ಜನರಿಗೆ ಲಾಕ್ಡೌನ್ ಕೃಷಿ ಪಾಠ ಕಲಿಸಿದೆ. ಕೇವಲ ಕಾಲೇಜು ಹೋಗಿ ಬಂದು ದುಬಾರಿ ಜೀವನ ನಡೆಸುವ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರ ಕ್ಷೇತ್ರದಲ್ಲಿದ್ದವರೂ ಗದ್ದೆಗಿಳಿದು ನಾಟಿ ಕಾರ್ಯ ಮಾಡತೊಡಗಿದ್ದಾರೆ.
ತಾಲೂಕಿನ 1,600 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಪ್ರತಿ ವರ್ಷ ಈ ಪ್ರಮಾಣ ತಲುಪುವುದು ಅಸಾಧ್ಯವಾಗುತ್ತಿತ್ತು. ಕಳೆದ ವರ್ಷ ಗರಿಷ್ಠ 1,200 ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆ ಮಾಡಿದ್ದೇ ಸಾಧನೆಯಾಗಿತ್ತು. ಆದರೆ, ಈ ಬಾರಿ ಗುರಿಗಿಂತಲೂ ಶೇ.10ರಷ್ಟು ಹೆಚ್ಚುವರಿ ಕೃಷಿ ಭೂಮಿಯಲ್ಲಿ ಬಿತ್ತನೆ ನಡೆಸುವ ಸಾಧ್ಯತೆ ಇದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು. ಇದು ಕೇವಲ ಕಾರವಾರ ಒಂದರ ತಾಲೂಕಿನ ಅಂಕಿ ಅಂಶ, ಹೀಗೆ ಜಿಲ್ಲೆಯ 11 ತಾಲೂಕಿನಲ್ಲೂ ಕೂಡ ಈ ಬಾರಿಯ ಕೃಷಿಯಲ್ಲಿ ತೊಡಗಿಕೊಂಡವರ ಸಂಖ್ಯೆ ಮತ್ತು ಬಿತ್ತನೆ ಪ್ರಮಾಣ ಹೆಚ್ಚಾಗಿದೆ.
ಇದನ್ನೂ ಓದಿ: Coronavirus Updates: ಕರ್ನಾಟಕದಲ್ಲಿ ಕೋವಿಡ್-19 ಆರ್ಭಟ: ಇಂದು 4764 ಕೇಸ್ ಪತ್ತೆ, 75 ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಮಳೆಗಾಲದ ಆರಂಭದಿಂದಲೂ ತಾಲೂಕಿನ ಹಲವೆಡೆ ಯುವಕರು, ಬೇರೆ ಬೇರೆ ಉದ್ಯೋಗದಲ್ಲಿದ್ದವರು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಕಾಲೇಜುಗಳ ವಿದ್ಯಾರ್ಥಿಗಳು ಖುಷಿ-ಖುಷಿಯಿಂದಲೇ ಗದ್ದೆ ನಾಟಿ ಕಾರ್ಯಕ್ಕೆ ಇಳಿದ ದೃಶ್ಯಗಳು ಕಾರವಾರ ಸೇರಿ ವಿವಿಧ ತಾಲೂಕಿನ ಗ್ರಾಮೀಣ ಭಾಗದಲ್ಲಿ ಕಂಡುಬರುತ್ತಿದೆ.
ಉದ್ಯಮಿಗಳಲ್ಲಿ ಕೃಷಿ ಆಸಕ್ತಿ:
ಕೃಷಿ ಕುಟುಂಬದವನಾದರೂ ಹುಟ್ಟಿನಿಂದ ಕೃಷಿ ಚಟುವಟಿಕೆ ಗಂಧ- ಗಾಳಿ ಗೊತ್ತಿರಲಿಲ್ಲ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ನಾನು ಕೆಲ ತಿಂಗಳ ಹಿಂದಷ್ಟೇ ಬಾಳ್ನಿಯಲ್ಲಿ ಗದ್ದೆ ಖರೀದಿಸಿದ್ದೆ. ಇಲ್ಲಿ ಕ್ವಾರಿ ಮಾಡುವ ಉದ್ದೇಶ ಇತ್ತಾದರೂ ಕೊರೋನಾ ಹಾವಳಿ ಉಂಟಾದ್ದರಿಂದ ಮನಸ್ಸು ಬದಲಿಸಿ ಕೃಷಿ ಚಟುವಟಿಕೆಯನ್ನೇ ನಡೆಸಲು ನಿರ್ಧರಿಸಿದೆ. 8 ಎಕರೆಯಷ್ಟು ಜಾಗದಲ್ಲಿ ಭತ್ತದ ನಾಟಿ ಮಾಡಿದ್ದೇವೆ. ಕೃಷಿ ಚಟುವಟಿಕೆಯಲ್ಲೇ ಹೆಚ್ಚು ನೆಮ್ಮದಿ ಸಿಗಬಹುದು ಎಂಬುದು ಈಗ ಅರ್ಥವಾಗಿದೆ ಎಂಬ ಮಾತು ಈಗ ವಿವಿಧ ಕ್ಷೇತ್ರದ ಉದ್ಯಮಿಗಳದ್ದಾಗಿದೆ.
ಇದನ್ನೂ ಓದಿ: Gold Price: ಇದೇ ಮೊದಲ ಬಾರಿಗೆ 50 ಸಾವಿರದ ಗಡಿ ದಾಟಿದ ಚಿನ್ನದ ಬೆಲೆ; 61 ಸಾವಿರಕ್ಕೇರಿದ ಬೆಳ್ಳಿ ದರವಿದ್ಯಾರ್ಥಿಗಳಲ್ಲೂ ಆಸಕ್ತಿ:
ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಕೃಷಿಯತ್ತ ಆಸಕ್ತಿ ಹೊಂದುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ಕಾಲೇಜುಗಳ ಬಾಗಿಲು ಮುಚ್ಚಿದ್ದು ಮನೆಯಲ್ಲೇ ಇದ್ದು ಬೇಸರ ಕಳೆಯುವುದು ಕಷ್ಟವಾಗುತ್ತಿದೆ. ಮಳೆಗಾಲದ ಆರಂಭದಲ್ಲಿ ಗದ್ದೆಯ ನಾಟಿ ಕಾರ್ಯ ಆರಂಭಗೊಂಡಾಗ ತಾಲೂಕಿನ ಹಲವೆಡೆಗಳಲ್ಲಿ ವಿದ್ಯಾರ್ಥಿಗಳೂ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ದೂರದ ಬೆಂಗಳೂರು, ಪುಣೆ, ಮುಂಬೈನಿಂದ ಮರಳಿ ಮನೆ ಸೇರಿಕೊಂಡಿದ್ದ ಉದ್ಯೋಗಿಗಳು ಗದ್ದೆ ಕೆಲಸ ಮಾಡಿದ್ದರು. ಕೃಷಿಯತ್ತ ಒಲವು ಹೆಚ್ಚುತ್ತಿದ್ದು ಪರಿಣಾಮವಾಗಿ ಜಿಲ್ಲೆಯಲ್ಲಿ ಈ ಬಾರಿ ಪ್ರತಿ ವರ್ಷಕ್ಕಿಂತ ಹೆಚ್ಚಿನ ಪ್ರಮಾಣದ ಕೃಷಿಭೂಮಿಯಲ್ಲಿ ನಾಟಿ ಕಾರ್ಯ ನಡೆದಿರುವ ಸಾಧ್ಯತೆ ಇದೆ.
ಅಧಿಕಾರಿಗಳು ಏನಂತಾರೆ?:
ಕಾರವಾರ ತಾಲೂಕಿನಲ್ಲಿ 1,600 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬಿತ್ತನೆಯ ಗುರಿ ನಿಗದಿಪಡಿಸಿಕೊಂಡಿದ್ದು, ಈ ಬಾರಿ ಶೇ. 10ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಯುವಜನರು ಕೃಷಿಯತ್ತ ಹೆಚ್ಚು ಒಲವು ತೋರ್ಪಡಿಸಿರುವುದು ಆಶಾದಾಯಕ ಬೆಳವಣಿಗೆ.
ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ನನಗೆ ಕೃಷಿ ಮಾಡುವ ಬಯಕೆ ಉಂಟಾಯಿತು. ಬಾಳ್ನಿಯಲ್ಲಿ ಖರೀದಿಸಿದ್ದ ಗದ್ದೆಯಲ್ಲಿ ನಾಟಿ ಕಾರ್ಯ ಮಾಡಿದ್ದೇವೆ. ಲಾಭ ತರುವ ಉದ್ಯಮಕ್ಕಿಂತಲೂ ಕೃಷಿಯಲ್ಲೇ ಹೆಚ್ಚು ನೆಮ್ಮದಿ ಸಿಗುವಂತೆ ಭಾಸವಾಗುತ್ತಿದೆ.
Published by:
Sushma Chakre
First published:
July 22, 2020, 7:35 PM IST