ಹಾವೇರಿ: ಕಳೆದ ನಾಲ್ಕು ದಿನಗಳ ಹಿಂದೆ ಎಂಎಲ್ಸಿ ಆರ್ ಶಂಕರ್ (MLC R Shankar) ಅವರ ಮನೆ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು (Commercial Tax Department) ದಾಳಿ ಮಾಡಿದ ಬೆನ್ನಲ್ಲೆ ರಾಣೇಬೆನ್ನೂರು (Ranebennur) ರಾಜಕೀಯ ರಂಗು ಪಡಿದಿದೆ. ಸ್ವಪಕ್ಷ ಬಿಜೆಪಿಯಲ್ಲಿಯೇ (BJP) ನನಗೆ ಖೆಡ್ಡಾ ತೋಡುತ್ತಿದ್ದಾರೆಂದು ತಿಳಿದು, ತಾಲೂಕಿನ ಜನರಿಗೆ ಭರ್ಜರಿ ಬಾಡೂಟ ಹಾಕಿಸಿದ್ದಾರೆ. ಈ ಮೂಲಕ 2023ರ ಎಲೆಕ್ಷನ್ಗೆ ಬಿಜೆಪಿಗೆ ಸೆಡ್ಡು ಹೊಡೆದು ಬಂಡಾಯ (Rebel) ಬಾವುಟ ಹಾರಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ರಾಣೇಬೆನ್ನೂರು ಕ್ಷೇತ್ರದಲ್ಲಿ ಬಲ ಪ್ರದರ್ಶನ
ಮೊನ್ನೆ ಮೊನ್ನೆ ರಾಜ್ಯಾದ್ಯಂತ ಸುದ್ದಿಯಾಗಿದ್ದ ಎಂಎಲ್ಸಿ ಆರ್ ಶಂಕರ್ ಅವರು ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಕಳೆದ ಐದು ದಿನಗಳ ಹಿಂದೆ ಬಿಜೆಪಿ ಎಂಎಲ್ಸಿ ಶಂಕರ್ ಮನೆ ಮೇಲೆ ವಾಣಿಜ್ಯ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಮತದಾರರಿಗೆ ಆಮಿಷವೊಡ್ಡುವಂತಹ ವಸ್ತುಗಳು ಪತ್ತೆಯಾದ ಕಾರಣ ಅಧಿಕಾರಿಗಳು ಪ್ರಕರಣ ದಾಖಲು ಮಾಡಿದ್ದರು. ಇದರಿಂದ ಸಿಡಿದೆದ್ದಿರುವ ಶಂಕರ್ ಹೊಸ ರಾಜಕೀಯ ಬೆಳವಣಿಗೆಗೆ ನಾಂದಿ ಹಾಡಿದ್ದಾರೆ.
ತಮ್ಮ ಹಿಂದೆಯೂ ಜನರಿದ್ದಾರೆ ಎಂದು ತೋರಿಸುವ ಸಲುವಾಗಿ ಬೃಹತ್ ಹುಟ್ಟುಹಬ್ಬದ ಸಮಾರಂಭ ಆಯೋಜನೆ ಮಾಡಿ ಬಲ ಪ್ರದರ್ಶನ ಮಾಡಿದ್ದಾರೆ. ಆದರೆ 58ನೇ ವರ್ಷದ ಹುಟ್ಟುಹಬ್ಬ ನೆಪಮಾತ್ರಕ್ಕೆ ಆಗಿದ್ದರೂ ರಾಣೇಬೆನ್ನೂರಿನ ಉರ್ದು ಮೈದಾನದಲ್ಲಿ ಆಯೋಜನೆಯಾಗಿದ್ದ ಕಾರ್ಯಕ್ರಮಕ್ಕೆ ತಾಲೂಕಿನಾದ್ಯಂತ ಸಾವಿರಾರು ಜನರು ಆಗಮಿಸಿದ್ದರು. ಇದರೊಂದಿಗೆ ಶಂಕರ್ ಅವರು ಸಹ ಸಖತ್ ಖುಷಿಯಾಗಿದ್ದಾರೆ.
25 ಸಾವಿರ ಮಂದಿಗೆ ಬಾಡೂಟ ಆಯೋಜನೆ
ಕಾರ್ಯಕ್ರಮದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಮಂದಿ ಹಾಜರಾಗಿ ಬಾಡೂಟ ಸವಿದಿದ್ದಾರೆ. 261 ಕುರಿ, 5 ಟನ್ ಚಿಕನ್ ಹಾಗೂ ಐದು ಸಾವಿರ ಮೊಟ್ಟೆ ಬಳಸಿ ಭರ್ಜರಿ ಬಾಡೂಟವನ್ನು ಏರ್ಪಡಿಸಿದ್ದರು. ಅಲ್ಲದೆ, ಊಟದ ಬಳಿಕ ಮನರಂಜನಾ ಕಾರ್ಯಕ್ರಮವನ್ನು ಕೂಡಾ ಏರ್ಪಡಿಸಿ ಬಂದವರಿಗೆ ರಸದೌತಣ ಉಣಬಡಿಸಲಾಗಿದೆ.
ಇನ್ನು, ಊಟ ವಿತರಣೆ ಸಂದರ್ಭದಲ್ಲಿ ಗೊಂದಲ ಉಂಟಾಗಿ ಜನರು ಕೈಗೆ ಸಿಕ್ಕ ಮಾಂಸದೂಟ, ಮೊಟ್ಟೆಯನ್ನ ಮನೆಗೆ ಪಾರ್ಸಲ್ ತೆಗೆದುಕೊಂಡು ಹೋದ ದೃಶ್ಯಗಳು ಕಂಡು ಬಂತು. ಜನ ಮರಳೊ ಜಾತ್ರೆ ಮರಳೊ ಎಂಬಂತೆ ಜನರು ಊಟಕ್ಕೆ ಮುಗಿಬಿದ್ದಿದ್ದರು. ಕಾರ್ಯಕ್ರಮದ ಬಳಿಕ ಜನರು ತಿಂದು ಬೀಸಾಡಿದ್ದ ತಟ್ಟೆಗಳು ಕಸದ ರಾಶಿಯನ್ನೇ ಸೃಷ್ಟಿಸಿದ್ದವು.
ಮತ್ತೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಾರಾ?
ಆರ್.ಶಂಕರ್ ಬಿಜೆಪಿಯಿಂದ 2023ರ ವಿಧಾನಸಭಾ ಚುನಾವಣೆಗೆ ಟಿಕೆಟ್ಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಆದರೆ ಇದಕ್ಕೆ ಹೈಕಮಾಂಡ್ ವಿರೋಧ ವ್ಯಕ್ತಪಡಿಸಿದೆಯಂತೆ. ಇದರ ನಡುವೆಯೇ ಐಟಿ ದಾಳಿ ನಡೆದಿರುವುದು ಶಂಕರ್ ಅವರು ಸಿಡಿದೆಳಲು ಕಾರಣ ಎನ್ನಲಾಗಿದೆ.
ಇದನ್ನೂ ಓದಿ: Bengaluru: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಕ್ಕೆ ಮನೆಯ ಕಾಂಪೌಂಡ್ ಧ್ವಂಸ; ಮಗನ ಪರ ನಿಂತ ತಾಯಿ ಮೇಲೂ ಹಲ್ಲೆ
ಈ ಹಿಂದೆ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಪಡೆದಿದ್ದ ಶಂಕರ್ ಅವರು ಸದ್ಯ ಮತ್ತೆ ಪಕ್ಷೇತರ ಅಭ್ಯರ್ಥಿಯಾಗಿಯೇ ಸ್ವರ್ಧೆ ಮಾಡುವ ಹಿಂಗಿತವನ್ನು ಆಪ್ತ ಬಳಗದಲ್ಲಿ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದರ ನಡುವೆಯೇ ಬರ್ತ್ಡೇ ನೆಪದಲ್ಲಿ ಮತದಾರರಿಗೆ ಬಾಡೂಟ ಹಾಕುವ ಮೂಲಕ ಶಂಕರ್ ತಮ್ಮ ಬಲ ಪ್ರದರ್ಶನ ಮಾಡಿದ್ದಾರೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ