news18-kannada Updated:July 7, 2020, 6:01 PM IST
M Vasudeva Maiya
ಬೆಂಗಳೂರು (ಜುಲೈ 07); ವಾಸುದೇವ ಮಯ್ಯ ಆತ್ಮಹತ್ಯೆ ಪ್ರಕರಣವನ್ನು ಅಸ್ವಾಭಾವಿಕ ಸಾವು ಎಂದು ಪೊಲೀಸರು ದಾಖಲಿಸಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ. ತನಿಖೆಯಿಂದ ಸತ್ಯಾಂಶ ಹೊರ ಬರಬೇಕಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ 1400 ಕೋಟಿ ಹಗರಣ ಪ್ರಕರಣದ ಪ್ರಮುಖ ಆರೋಪಿ, ಬ್ಯಾಂಕ್ನ ಮಾಜಿ ಸಿಇಒ ಹಾಗೂ ಹಾಲಿ ಸೂಪರ್ ವೈಸರ್ ವಾಸುದೇವ್ ಮಯ್ಯ ಸೋಮವಾರ ರಾತ್ರಿ ತಮ್ಮ ಕಾರಿನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು. ಆದರೆ, ಈ ಸಾವಿನ ಸುತ್ತ ಇದೀಗ ಸಾಕಷ್ಟು ಅನುಮಾನಗಳು ಮೂಡಿವೆ.
ಈ ಹಿನ್ನೆಲೆಯಲ್ಲಿ ಇಂದು ವಿಧಾನಸೌಧದಲ್ಲಿ ಹೇಳಿಕೆ ನೀಡಿರುವ ಬಸವರಾಜ ಬೊಮ್ಮಾಯಿ, "ಕೋರ್ಟ್ ಆದೇಶದಂತೆ ಗುರು ರಾಘವೇಂದ್ರ ಬ್ಯಾಂಕ್ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ. ಈ ಕುರಿತು ಸಿಐಡಿ ಅಧಿಕಾರಿಗಳು ಈಗಾಗಲೇ ಚುರುಕಿನ ತನಿಖೆ ನಡೆಸಿದ್ದಾರೆ. ಇನ್ನೂ ವಾಸುದೇವ ಮಯ್ಯ ಆತ್ಮಹತ್ಯೆ ಪ್ರಕರಣವನ್ನು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು, ತನಿಖೆಯಿಂದ ಸತ್ಯಾಂಶವ ಹೊರ ಬರಬೇಕಿದೆ" ಎಂದು ಅವರು ತಿಳಿಸಿದ್ದಾರೆ.
ಸಾವಿನ ಸುತ್ತ ಅನುಮಾನ:
ವಾಸುದೇವ ಮಯ್ಯ ಆತ್ಮಹತ್ಯೆಯ ಸುತ್ತ ಅನುಮಾನಗಳು ಹುತ್ತ ಕಟ್ಟಿಕೊಂಡಿವೆ. ಅವರು ಮೃತಪಟ್ಟ ಕಾರಿನಲ್ಲಿ ಡೆತ್ ನೋಟ್ ಸೇರಿ ಸುಮಾರು 12 ಪುಟಗಳ ದಾಖಲೆ ಪತ್ತೆ ಆಗಿದೆ. ಆ ದಾಖಲೆಗಳಲ್ಲಿ ರಾಘವೇಂದ್ರ ಕೋ ಅಪರೇಟಿವ್ ಬ್ಯಾಂಕ್ ನ ಅವ್ಯವಹಾರದ ಬಗ್ಗೆ ಮಾಹಿತಿ ಅಡಗಿದೆ ಎನ್ನಲಾಗಿದೆ. ವಾಸುದೇವ ಮಯ್ಯನ ಜೊತೆ ಬ್ಯಾಂಕ್ ವ್ಯವಹಾರ ಹಾಗೂ ಕೋಟ್ಯಾಂತರ ಹಣ ವಹಿವಾಟು ನಡೆಸಿದ್ದ ವ್ಯಕ್ತಿಗಳ ಹೆಸರನ್ನೂ ಡೆತ್ನೋಟ್ನಲ್ಲಿ ಬರೆದಿರುವ ಶಂಕೆ ಇದೆ.
ಪೊಲೀಸರಿಗೆ ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ ವಾಸುದೇವ ಅವರು ನೆನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ತಮ್ಮ ಆಲ್ಟೋ ಕಾರ್ನಲ್ಲಿ ಪೂರ್ಣ ಪ್ರಜ್ಞಾ ಲೇಔಟ್ಗೆ ಬಂದಿದ್ದರು. ಅದೇ ರಸ್ತೆಯಲ್ಲಿ ಒಂದು ಗಂಟೆಯ ಕಾಲ ವಾಕ್ ಮಾಡಿದ್ದರಂತೆ. ನಂತರ ಅವರು ಕಾರಿನಲ್ಲಿ ಬ್ಲಾಕ್ ಅಂಡ್ ವೈಟ್ ಮದ್ಯ ಸೇವನೆ ಮಾಡಿದ್ದರು. ಬಾಟಲಿಯನ್ನು ಕಾರಿನಲ್ಲೇ ಬಿಸಾಡಿದ್ದರು.
ಇದನ್ನೂ ಓದಿ : M Vasudeva Maiya Suicide: 1400 ಕೋಟಿ ರೂಪಾಯಿ ಅವ್ಯವಹಾರ, ವಾಸುದೇವ ಮಯ್ಯ ಸಾವಿನ ಸುತ್ತ ಅನುಮಾನ
ನಂತರ ನೀರಿನಲ್ಲಿ 40ಕ್ಕೂ ಹೆಚ್ಚು ANXIT ಮಾತ್ರೆ ಬೆರೆಸಿ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಮಾನಸಿಕ ಖಿನ್ನತೆಗೆ ಒಳಗಾದವರು ANXIT ಮಾತ್ರೆಗಳನ್ನು ಸೇವನೆ ಮಾಡುತ್ತಾರೆ. ವಾಕ್ ಮಾಡಿದ ನಂತರ ವಾಸುದೇವ ಅವರು ಕಾರಿನಲ್ಲೇ ಕುಳಿತಿದ್ದರು. ಎಷ್ಟೇ ಹೊತ್ತಾದರೂ ಅವರು ಕಾರಿನಿಂದ ಕೆಳಗೆ ಇಳಿದಿರಲಿಲ್ಲ. ಹೀಗಾಗಿ ಅನುಮಾನಗೊಂಡ ಸ್ಥಳೀಯರು ಕಾರಿನ ಬಳಿ ತೆರಳಿದಾಗ ವಿಚಾರ ಬೆಳಕಿಗೆ ಬಂದಿದೆ.
Published by:
MAshok Kumar
First published:
July 7, 2020, 6:01 PM IST