15 ದಿನಗಳ ಬಳಿಕ ಸಾರಿಗೆ ನೌಕರರ ಮುಷ್ಕರ ಅಂತ್ಯ: ಹೈಕೋರ್ಟ್ ಸೂಚನೆ ಬೆನ್ನಲ್ಲೇ ಕೋಡಿಹಳ್ಳಿ ಚಂದ್ರಶೇಖರ್ ಘೋಷಣೆ

ಕೋವಿಡ್ ಕಾರಣದಿಂದ ಕರ್ತವ್ಯಕ್ಕೆ ಹಾಜರಾಗಿ, ಜನರಿಗೆ ತೊಂದರೆ ನೀಡಬೇಡಿ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಹೀಗಾಗಿ ನ್ಯಾಯಾಲಯದ ಆದೇಶದಂತೆ ನೌಕರರು ಕರ್ತವ್ಯಕ್ಕೆ ಹಾಜರಾಗುತ್ತಾರೆ.

ಬಿಎಂಟಿಸಿ ಬಸ್

ಬಿಎಂಟಿಸಿ ಬಸ್

 • Share this:
  ಬೆಂಗಳೂರು:  ಕಳೆದ 15 ದಿನಗಳಿಂದ ರಾಜ್ಯಾದ್ಯಂತ ಸಾರಿಗೆ ನೌಕರರು ಕೈಗೊಂಡಿದ್ದ ಮುಷ್ಕರವನ್ನು ಕೈ ಬಿಟ್ಟಿದ್ದಾರೆ. ಹೈಕೋರ್ಟ್​​ ಆದೇಶಕ್ಕೆ ತಲೆಬಾಗಿ ಮುಷ್ಕರ ಹಿಂಪಡೆಯುತ್ತಿರುವುದಾಗಿ ಹೋರಾಟದ ನೇತೃತ್ವ ವಹಿಸಿದ್ದ ಕೋಡಿಹಳ್ಳಿ ಚಂದ್ರಶೇಖರ್​ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು. ಕರ್ನಾಟಕದ ಉಚ್ಛ ನ್ಯಾಯಾಲಯ ಮಧ್ಯಪ್ರವೇಶ ಮಾಡಿದೆ. ಸೇವೆಗೆ ಹಾಜರಾಗುವಂತೆ ಸಾರಿಗೆ ನೌಕರರಿಗೆ ಹೈಕೋರ್ಟ್​ ನ್ಯಾಯಮೂರ್ತಿಗಳು ಸೂಚಿಸಿದ್ದಾರೆ. ನ್ಯಾಯಮೂರ್ತಿಗಳ ಸೂಚನೆಯನ್ನು ಗೌರವಿಸಿ ಸಾರಿಗೆ ನೌಕರರು ಮುಷ್ಕರವನ್ನು ಕೈಬಿಡುತ್ತಿದ್ದಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್​ ತಿಳಿಸಿದರು.

  ಕೋವಿಡ್ ಕಾರಣದಿಂದ ಕರ್ತವ್ಯಕ್ಕೆ ಹಾಜರಾಗಿ, ಜನರಿಗೆ ತೊಂದರೆ ನೀಡಬೇಡಿ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಹೀಗಾಗಿ ನ್ಯಾಯಾಲಯದ ಆದೇಶದಂತೆ ನೌಕರರು ಕರ್ತವ್ಯಕ್ಕೆ ಹಾಜರಾಗುತ್ತಾರೆ. ಸದ್ಯ ತಾತ್ಕಾಲಿಕವಾಗಿ ಮುಷ್ಕರವನ್ನು ಮುಂದೂಡುತ್ತೇವೆ ಎಂದು ತಿಳಿಸಿದರು. ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕೋಡಿಹಳ್ಳಿ ಪ್ರತಿಭಟನೆ-ಹೋರಾಟ ಮಾಡುವುದು ನಮ್ಮ ಹಕ್ಕು. ರಾಜ್ಯ ಸರ್ಕಾರ ಅದನ್ನು ಕಿತ್ತುಕೊಳ್ಳಲು ಯತ್ನಿಸಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.

  ಈಗಿನಿಂದಲೇ ಬಸ್​​ಗಳ ಸಂಚಾರ ಆರಂಭವಾಗಲಿದೆ. ಎರಡನೇ‌ ಪಾಳಿಯಲ್ಲಿರುವವರು ಕೆಲಸಕ್ಕೆ ಹಾಜರಾಗಲಿದ್ದಾರೆ. ನಾಳೆಯಿಂದ ಎಲ್ಲರೂ ಕೆಲಸಕ್ಕೆ ಹಾಜರಾಗಲಿದ್ದಾರೆ ಎಂದು ಕೋಡಿಹಳ್ಳಿ ತಿಳಿಸಿದರು. ಸಾರಿಗೆ ನೌಕರರು ಮುಷ್ಕರ ಹಿಂಪಡೆಯುತ್ತಿದ್ದಂತೆ ಬೆಂಗಳೂರಿನ ಮೆಜೆಸ್ಟಿಕ್​ ಬಸ್​ ನಿಲ್ದಾಣದಲ್ಲಿ ಬಸ್​ಗಳ ಸಂಚಾರ ಹೆಚ್ಚಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬಸ್​ಗಳು ರಸ್ತೆಗಿಳಿದಿವೆ. ನಾಳೆ ಬೆಳಗ್ಗೆಯಿಂದ 4 ನಿಗಮಗಳ ಬಸ್​ ಸಂಚಾರ ಯಥಾಸ್ಥಿತಿಯಲ್ಲಿರಲಿದೆ.

  6ನೇ ವೇತನ ಆಯೋಗ ಅನುಷ್ಠಾನ ಸೇರಿದಂತೆ ಹಲವು ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ಕೈಗೊಂಡಿದ್ದರು. ಸರ್ಕಾರದ ಹಲವು ಸುತ್ತಿನ ಸಂಧಾನ ಸೂತ್ರ ಫಲಿಸಿರಲಿಲ್ಲ. ಈಗ ಹೈಕೋರ್ಟ್​ ಸೂಚನೆ ಹಿನ್ನೆಲೆಯಲ್ಲಿ ಮುಷ್ಕರ ಅಂತ್ಯಗೊಂಡಿದೆ. ಮುಷ್ಕರ ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾಗಿ ಎಂದು ಸಾರಿಗೆ ಇಲಾಖೆ ನೌಕರರಿಗೆ ನೋಟಿಸ್​ ಜಾರಿ ಮಾಡಿತ್ತು. ನೋಟಿಸ್​ ಬಳಿಕವೂ ಕರ್ತವ್ಯಕ್ಕೆ ಹಾಜರಾಗದ ಹಲವು ನೌಕರರನ್ನು ಸಾರಿಗೆ ಇಲಾಖೆ ಅಮಾನತು ಮಾಡಿದೆ.
  Published by:Kavya V
  First published: