ಬಿಜೆಪಿ ತಂತ್ರಕ್ಕೆ ಕಾಂಗ್ರೆಸ್​ ಪ್ರತಿತಂತ್ರ; ಗೋವಾ, ಮೇಘಾಲಯ, ಬಿಹಾರ, ಮಣಿಪುರದಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡನೆ


Updated:May 17, 2018, 6:05 PM IST
ಬಿಜೆಪಿ ತಂತ್ರಕ್ಕೆ ಕಾಂಗ್ರೆಸ್​ ಪ್ರತಿತಂತ್ರ; ಗೋವಾ, ಮೇಘಾಲಯ, ಬಿಹಾರ, ಮಣಿಪುರದಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡನೆ

Updated: May 17, 2018, 6:05 PM IST
-ಸೀಮಾ ಆರ್​, ನ್ಯೂಸ್ 18 ಕನ್ನಡ

ಬೆಂಗಳೂರು (ಮೇ.17): ಕರ್ನಾಟಕ ವಿಧಾನಸಭೆಯಲ್ಲಿ ಅತಂತ್ರ ಫಲಿತಾಂಶ ಪ್ರಕಟವಾಗಿದ್ದರೂ ಬಿಜೆಪಿಗೆ ಸರ್ಕಾರ ರಚನೆ ಮಾಡಲು ಅವಕಾಶ ನೀಡಿ ರಾಜ್ಯಪಾಲರು ಅನುಮತಿಸಿದ್ದಾರೆ. ಸುಪ್ರೀಂಕೋರ್ಟ್​ ಸಹ ರಾಜ್ಯಪಾಲರ ಆದೇಶ ಅಂತಿಮವಾಗಿದ್ದು ಇದಕ್ಕೆ ಅಡ್ಡಿಪಡಿಸಲು ಸಾಧ್ಯವಿಲ್ಲ ಎಂದು ಪ್ರಮಾಣವಚನದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಇದರಿಂದಾಗಿ ಯಡಿಯೂರಪ್ಪ 23ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

ಕರ್ನಾಟಕದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದ ನೆರೆಯ ಗೋವಾ ಕಾಂಗ್ರೆಸಿಗರು ಈಗ ರಾಜ್ಯಪಾಲರ ಬಳಿ ತೆರಳಿದ್ದಾರೆ. ಕರ್ನಾಟಕದಲ್ಲಿ ಏಕೈಕ ದೊಡ್ಡ ಪಕ್ಷವಾದ ಬಿಜೆಪಿಗೆ ಅಧಿಕಾರ ಚುಕ್ಕಾಣಿ ಹಿಡಿಯಲು ಅವಕಾಶ ಕೊಟ್ಟರೆ ನಮಗೂ ಈ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದಿದೆ. ತೃತೀಯ ರಂಗದ ಕಲ್ಪನೆ ಬಹುತೇಕ ನೆನೆಗುದಿಗೆ ಬಿದ್ದಿದೆ ಎಂಬ ಹಂತದಲ್ಲಿ ಕರ್ನಾಟಕದ ರಾಜಕೀಯ ಬೆಳವಣಿಗೆ, ತೃತೀಯ ರಂಗಕ್ಕೆ ಮರುಹುಟ್ಟು ನೀಡಿದೆ.

ಗೋವಾದಲ್ಲಿ ಆಕ್ರೋಶ: 2017ರಲ್ಲಿ ಮಾರ್ಚ್​ನಲ್ಲಿ  ಗೋವಾದ 40 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​ 17 ಸ್ಥಾನ ಪಡೆದು ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಬಿಜೆಪಿ 13, ಇತರೆ ಪಕ್ಷ 10 ಸ್ಥಾನಗಳಿಸಿತು. ಈ ವೇಳೆ ರಾಜ್ಯಪಾಲರು ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ ಕಾಂಗ್ರೆಸ್​ಗೆ ಸರ್ಕಾರ ಮಾಡಲು ಅವಕಾಶ ನೀಡದೆ ಮೈತ್ರಿಗೆ ಗೋವಾ ರಾಜ್ಯಪಾಲ ಮೃದಲಾ ಸಿನ್ಹಾ ಹಸಿರು ನಿಶಾನೆ ತೋರಿದ್ದರು.

ಕರ್ನಾಟಕದಲ್ಲಿ ದೊಡ್ಡ ಪಕ್ಷಕ್ಕೆ ಬಹುಮತ ನೀಡುವುದಾದರೆ ಗೋವಾದಲ್ಲಿ ನಮಗೂ ಕೂಡ ಈ ಅವಕಾಶವನ್ನು ಕಲ್ಪಿಸಬೇಕು ಎಂದು ಗೋವಾ ಕಾಂಗ್ರೆಸ್ ಉಸ್ತುವಾರಿ ಚೆಲ್ಲಕುಮಾರ್​ ತಿಳಿಸಿದ್ದಾರೆ. ಅಲ್ಲದೇ ಈ ಸಂಬಂಧ ಗೋವಾ ರಾಜ್ಯಪಾಲರನ್ನು ಹಕ್ಕು ಮಂಡನೆ ಮಾಡಲು ಮುಂದಾಗಿದೆ.  ಭೇಟಿಯಾಗಿದ್ದಾರೆ. ಕೇವಲ ಗೋವಾದಲ್ಲಿ ಮಾತ್ರವಲ್ಲ ಮಣಿಪುರ, ಬಿಹಾರ, ಮೇಘಾಲಯದಲ್ಲಿಯೂ ಕೂಡ ಇದೇ ತಂತ್ರಕ್ಕೆ ಕಾಂಗ್ರೆಸ್​ ಸರ್ಕಾರಗಳು ಮುಂದಾಗಿದೆ.

ಬಿಹಾರದಲ್ಲಿಯೂ ಆಕ್ರೋಶ: ಬಿಹಾರ ರಾಜ್ಯಪಾಲರನ್ನು ಭೇಟಿ ಮಾಡಲು ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್​ ಮುಂದಾಗಿದ್ದಾರೆ. ಬಿಹಾರದಲ್ಲಿ ಆರ್​ಜೆಡಿ ಬಿಹಾರದ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತ. ಇದರಿಂದ ತೇಜಸ್ವಿ ಯಾದವ್​ ಬಹುಮತ ಸಾಬೀತು ಪಡಿಸುವುದಾಗಿ ಹಲವು ಬಾರಿ ರಾಜ್ಯಪಾಲರನ್ನು ಕೇಳಿ ಕೊಂಡಿದ್ದರು. ಆದರೂ ಬಿಹಾರ ರಾಜ್ಯಪಾಲ ಸತ್ಯಪಾಲ್​ ಮಾಲೀಕ್​ ಅವಕಾಶ ನೀಡಿರಲಿಲ್ಲ. ಅಲ್ಲದೇ ಜೆಡಿಯು-ಆರ್​ಜೆಡಿ- ಕಾಂಗ್ರೆಸ್​ ಮಹಾಘಟಿ ಬಂಧನವನ್ನು ಮುರಿದು ಜೆಡಿಯು ಜೊತೆಗೂಡಿ ಬಿಜೆಪಿ ಅಧಿಕಾರ ಸ್ಥಾಪಿಸಿತ್ತು.

ಮೇಘಾಲಯದಲ್ಲಿ ಆಕ್ರೋಶ: ಮೇಘಾಲಯದಲ್ಲಿ ಬಹುಮತ ಪಡೆದ ಪಕ್ಷಕ್ಕೆ ಬಿಟ್ಟು ನ್ಯಾಷನಲ್​ ಪೀಪಲ್ಸ್​ ಪಾರ್ಟಿಯೊಂದಿಗೆ ಬಿಜೆಪಿ ಜೆಡಿಯು ಇತರೆ ಪಕ್ಷಗಳು ಕೈ ಜೋಡಿಸಿ ಸರ್ಕಾರ ರಚಿಸಲು ಅನುಮತಿ ನೀಡಲಾಗಿತ್ತು. 2018ರಲ್ಲಿ ನಡೆದ ಚುನಾವಣೆಯಲ್ಲಿ ಮೇಘಾಲಯದಲ್ಲಿ ಕಾಂಗ್ರೆಸ್​ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಕರ್ನಾಟಕ ಚುನಾವಣಾ ಅವಲೋಕಿಸಿ ಈಗ ರಾಜ್ಯಪಾಲರ ಮುಂದೆ ಹೋಗಲು ಮೇಘಾಲಯ ಕಾಂಗ್ರೆಸ್​ ಶಾಸಕರ ನಿರ್ಧಾರಮಾಡಿದೆ
Loading...

ಮಣಿಪುರದಲ್ಲೂ ಕಾಂಗ್ರೆಸ್​ ಅಟ್ಯಾಕ್​:

ಮಣಿಪುರದಲ್ಲೂ ಕಾಂಗ್ರೆಸ್​ ರಾಜ್ಯಪಾಲರನ್ನು ಭೇಟಿ ಮಾಡಲು ನಿರ್ಧರಿಸಿದ್ದು, ಬಿಜೆಪಿ ಮೈತ್ರಿ ಸರ್ಕಾರವನ್ನು ವಿಸರ್ಜಿಸಿ ಬಹುಮತ ಸಾಬೀತಿಗೆ ಕಾಂಗ್ರೆಸ್​ಗೆ ಅವಕಾಶ ನೀಡುವಂತೆ ಮನವಿ ಸಲ್ಲಿಸಲಿದೆ. 2017ರಲ್ಲಿ ನಡೆದ ಮಣಿಪುರ ಚುನಾವಣೆಯಲ್ಲಿ 60 ಕ್ಷೇತ್ರಗಳಲ್ಲಿ 28 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್​ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ ಸರ್ಕಾರ ರಚಿಸಿತ್ತು.

ರಾಷ್ಟ್ರವ್ಯಾಪಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿರುವ ರಾಜ್ಯಗಳಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್​ ಸಿದ್ಧತೆ  ನಡೆಸಿದ್ದು, ಬಿಜೆಪಿಗೆ ಒಂದು ನ್ಯಾಯ, ಬಿಜೆಪಿಯೇತರ ಪಕ್ಷಗಳಿಗೆ ಒಂದು ನ್ಯಾಯ ಎಂಬ ಕೂಗು ಕೇಳಿ ಬಂದಿದೆ. ಇದರ ಬೆನ್ನಲ್ಲೇ ಬಿಹಾರದಲ್ಲಿ ಪತ್ರಿಕಾಗೋಷ್ಠಿ ಮಾಡಿದ ತೇಜಸ್ವಿ ಯಾದವ್​, ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ, ಬಿಜೆಪಿಯೇತರ ಎಲ್ಲಾ ಪಕ್ಷಗಳೂ ಕರ್ನಾಟಕಕ್ಕೆ ತೆರಳಿ ಪ್ರತಿಭಟಿಸಬೇಕು. ಆ ಮೂಲಕ ಕರ್ನಾಟಕದಲ್ಲಿ ಜೆಡಿಎಸ್​ - ಕಾಂಗ್ರೆಸ್​ ಮೈತ್ರಿಗೆ ಬೆಂಬಲ ಸೂಚಿಸಬೇಕು ಎಂಬ ಕರೆ ನೀಡಿದರು.

ಒಟ್ಟಿನಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಯ ಕಾವು ದೇಶವ್ಯಾಪಿ ಮುಟ್ಟಿದ್ದು, ತೃತೀಯ ರಂಗ ಮತ್ತೆ ಜೀವ ಪಡೆದುಕೊಂಡಿದೆ. ಮುಂದಿನ ಬೆಳವಣಿಗೆಗಳು ತೀವ್ರ ಕುತೂಹಲ ಕೆರಳಿಸಿದ್ದು, ಇದರ ಪರಿಣಾಮ 2019ರ ಲೋಕಸಭಾ ಚುನಾವಣೆಯ ಮೇಲೂ ಬೀಳುವ ಸಾಧ್ಯತೆ ನಿಚ್ಚಳವಾಗಿದೆ. ತೇಜಸ್ವಿ ಯಾದವ್​ ನೀಡಿದ ಕರೆಗೆ ಓಗೊಟ್ಟು ಎಲ್ಲಾ ಬಿಜೆಪಿಯೇತರ ಪಕ್ಷಗಳೂ ಕರ್ನಾಟಕಕ್ಕೆ ಆಗಮಿಸಿದಲ್ಲಿ ರಾಜ್ಯಪಾಲರ ಮೇಲೆ ಒತ್ತಡ ಬೀಳುವ ಸಾಧ್ಯತೆಯಿದೆ.
First published:May 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...