news18-kannada Updated:September 4, 2020, 9:32 AM IST
ರಾಗಿಣಿ ದ್ವಿವೇದಿ
ಬೆಂಗಳೂರು (ಸೆಪ್ಟೆಂಬರ್ 4): ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ವಿಚಾರ ಹೊತ್ತುರಿಯುತ್ತಿದೆ. ಸಾಕಷ್ಟು ನಟ-ನಟಿಯರ ಹೆಸರು ಕೇಳಿ ಬರುತ್ತಿದ್ದು, ಎಲ್ಲರಿಗೂ ಸಿಸಿಬಿ ಪೊಲೀಸರು ನೋಟಿಸ್ ನೀಡುತ್ತಿದ್ದಾರೆ. ಇನ್ನು, ಡ್ರಗ್ಸ್ ಜಾಲದ ನಂಟು ಹೊಂದುರು ಆರೋಪ ಇರುವ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ನಟಿ ರಾಗಿಣಿ ದ್ವಿವೇಣಿಗೆ ನೋಟಿಸ್ ನೀಡಿದ್ದರು. ಆದರೆ, ರಾಗಿಣಿ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸ್ ಇಲಾಖೆಯ ನಾರ್ಕೋಟಿಸ್ ವಿಭಾಗದ ಅಧಿಕಾರಿಗಳು ಇಂದು ಮುಂಜಾನೆಯೇ ಅವರ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಎರಡು ಗಂಟೆಗೂ ಅಧಿಕ ಕಾಲ ಶೋಧ ಕಾರ್ಯ ನಡೆಸಿದ್ದಾರೆ. ನಟಿ ರಾಗಿಣಿ ಅನನ್ಯ ಅಪಾರ್ಟ್ಮೆಂಟ್ನಲ್ಲಿ ಎರಡು ಫ್ಲ್ಯಾಟ್ ಹೊಂದಿದ್ದಾರೆ. ವಾಸಕ್ಕೆ ಒಂದು ಫ್ಲ್ಯಾಟ್ ಇದ್ದರೆ, ಅದಕ್ಕೆ ತಾಗಿಕೊಂಡು ಮತ್ತೊಂದು ಫ್ಲ್ಯಾಟ್ ಇದೆ. ಎರಡು ಫ್ಲ್ಯಾಟ್ನಲ್ಲೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇನ್ಸ್ಪೆಕ್ಟರ್ ಅಂಜುಮಾಲ ಸೇರಿದಂತೆ ಇಬ್ಬರು ಮಹಿಳಾ ಇನ್ಸ್ಪೆಕ್ಟರ್ಗಳು ರಾಗಿಣಿ ವಾಸದ ಕೊಠಡಿಯಲ್ಲಿ ಪರಿಶೀಲನೆ ಮಾಡಿದ್ದಾರೆ. ಈಗಾಗಲೇ ಎರಡು ಬ್ಯಾಗ್ಗಳಲ್ಲಿ ಕೆಲ ದಾಖಲೆಗಳನ್ನು ಅಧಿಕಾರಿಗಳು ಪಡೆದುಕೊಂಡಿದ್ದಾರೆ.
ಇನ್ನು, ರಾಗಿಣಿ ಇಂದಿರಾನಗರದ ಮನೆ ಮೇಲೂ ಸಿಸಿಬಿ ದಾಳಿ ನಡೆಸಿದೆ. ಅಲ್ಲಿಯೂ ಪರಿಶೀಲನೆ ಮುಂದುವರಿಯುತ್ತಿದೆ. ರಾಗಿಣಿ ಎರಡೂ ಮನೆಯಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ.ಒಂದುವೇಳೆ ಹಿರಿಯ ಅಧಿಕಾರಿಗಳು ಕಾರ್ಯಾಚರಣೆಯ ಸ್ಥಳಕ್ಕೆ ಬಂದರೆ ಫ್ಲ್ಯಾಟ್ನಲ್ಲಿಯೇ ರಾಗಿಣಿಯ ವಿಚಾರಣೆ ಮಾಡಲಾಗುತ್ತದೆ. ಒಂದು ವೇಳೆ ಅಧಿಕಾರಿಗಳು ಬರದೇ ಇದ್ದರೆ 10 ಗಂಟೆ ಬಳಿಕ ಸಿಸಿಬಿ ಕಚೇರಿಗೆ ವಿಚಾರಣೆಗೆ ನಟಿ ರಾಗಿಣಿ ತೆರಳಲಿದ್ದಾರೆ ಎನ್ನುವ ಮಾಹಿತಿ ಹೊರ ಬಿದ್ದಿದೆ.
ಡ್ರಗ್ ಜಾಲದಲ್ಲಿ ಬಂಧಿತನಾಗಿರುವ ರವಿಶಂಕರ್ ಮೂಲತಃ ಆರ್ಟಿಓ ಅಧಿಕಾರಿ. ಈತನ ತಂದೆ ಕೆಲಸದಲ್ಲಿರುವಾಗಲೇ ಮೃತಪಟ್ಟ ಕಾರಣ ಈತನಿಗೆ ಆ ಕೆಲಸ ಸಿಕ್ಕಿತ್ತು. ಈತನ ತಿಂಗಳ ಸಂಬಳ 30 ರಿಂದ 35 ಸಾವಿರ ರೂಪಾಯಿ. ಆದರೆ, ಈತ ಪೊಲೀಸ್ ವಿಚಾರಣೆಯ ವೇಳೆ, "ನಾನು ರಾಗಿಣಿ ಜೊತೆ ಲಿವ್ ಇನ್ ಸಂಬಂಧದಲ್ಲಿದ್ದೇನೆ. ಆಕೆಗೆ ಒಂದು ದಿನಕ್ಕೆ 1 ಲಕ್ಷ ಖರ್ಚು ಮಾಡುತ್ತಿದ್ದೇನೆ" ಎಂದು ತಿಳಿಸಿದ್ದ.
ಈತ ನೀಡಿದ ಮಾಹಿತಿಗೇ ಇದೀಗ ಪೊಲೀಸರು ದಂಗಾಗಿದ್ದಾರೆ. ರವಿಶಂಕರ್ ಗೆ ಬರುವ ಸಂಬಳದಲ್ಲಿ ಇಷ್ಟು ಖರ್ಚನ್ನು ಹೇಗೆ ನಿಭಾಯಿಸುತ್ತಿದ್ದ? ಇದೆಲ್ಲಾ ಹೇಗೆ ಸಾಧ್ಯವಾಯಿತು? ಎಂಬ ಪ್ರಶ್ನೆಯೇ ಪೊಲೀಸರಿಗೆ ದೊಡ್ಡದಾಗಿ ಕಾಡತೊಡಗಿದೆ. ಹೀಗಾಗಿ ಈ ಎಲ್ಲಾ ಅಂಶಗಳನ್ನು ಇಟ್ಟುಕೊಂಡು ಸಿಸಿಬಿ ಅಧಿಕಾರಿಗಳು ನಟಿ ರಾಗಿಣಿಯನ್ನು ವಿಚಾರಣೆಗೆ ಕರೆದಿದ್ದಾರೆ ಎನ್ನಲಾಗುತ್ತಿದೆ.
Published by:
Rajesh Duggumane
First published:
September 4, 2020, 9:23 AM IST