ಬೆಂಗಳೂರು: ಚಂದನವನದ ನಟಿ ಸಂಜನಾ ಗಲ್ರಾನಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಕಳೆದ ವರ್ಷ ಡ್ರಗ್ಸ್ ಕೇಸ್, ಜೈಲು, ಕೋರ್ಟ್ ಅಂತ ಅಲೆದಾಡಿದ್ದ ಗಂಡ-ಹೆಂಡತಿ ಸಿನಿಮಾ ಖ್ಯಾತಿಯ ನಟಿ ವಿರುದ್ಧ ಈಗ ಮತ್ತೊಂದು ಪ್ರಕರಣ ದಾಖಲಾಗಿದೆ. 2019ರ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಸಂಜನಾ ವಿರುದ್ಧ ಎಫ್ಐಆರ್ ದಾಖಲಾಗಿದೆ. 2 ವರ್ಷಗಳ ಹಿಂದೆ ಮಾಡೆಲ್ ವಂದನಾ ಜೈನ್ ಎಂಬುವರೊಂದಿಗೆ ಸಂಜನಾ ಗಲಾಟೆ ದೊಡ್ಡ ಸುದ್ದಿಯಾಗಿತ್ತು. ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯ ಕ್ಲಬ್ವೊಂದರಲ್ಲಿ ಪರಸ್ಪರ ಅವಾಚ್ಯ ಶಬ್ಧಗಳಿಂದ ಬೈದಾಡಿಕೊಂಡು, ಹೊಡೆದಾಡಿಕೊಂಡಿದ್ದರ ಬಗ್ಗೆ ಸುದ್ದಿಯಾಗಿತ್ತು. ಸಂಜನಾ ಹಾಗೂ ವಂದನಾ ಜೈನ್ ಇಬ್ಬರೂ ಒಬ್ಬರ ಮೇಲೊಬ್ಬರು ದೂರು ದಾಖಲಿಸಿದ್ದರು.
ನಟಿ ಹಾಗೂ ಮಾಡೆಲ್ ಬೀದಿ ಜಗಳ ಠಾಣೆ ಮೆಟ್ಟಿಲೇರಿತ್ತು. ಮಾಧ್ಯಮಗಳ ಎದುರು ಬಂದಿದ್ದ ಇಬ್ಬರೂ ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡಿದ್ದರು. ಸಂಜನಾ ವಿರುದ್ಧ ಆಗ ದೂರು ನೀಡಿದ್ದ ವಂದನಾ ಜೈನ್ ಕೋರ್ಟ್ನಿಂದ ಪಿಸಿಆರ್ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಈಗ ಸಂಜನಾ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ತಾನು ಸ್ನೇಹಿತನೊಂದಿಗೆ ಮಾತನಾಡುತ್ತಿದ್ದಾಗ ಸಂಜನಾ ತನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಗಲಾಟೆ ಮಾಡಿ, ಮದ್ಯ ಬಾಟಲಿಯಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ತನ್ನ ಕಣ್ಣಿಗೆ ಗಾಯಗಳಾಗಿವೆ. ಸಂಜನಾ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ವಂದನಾ ಜೈನ್ ಪೊಲೀಸರಿಗೆ ದೂರು ನೀಡಿದ್ದರು.
ಕೋರ್ಟ್ ಆದೇಶದಂತೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದರಿಂದ ಸಂಜನಾಗೆ ಮತ್ತೆ ಬಂಧನ ಭೀತಿ ಶುರುವಾಗಿದೆ. ಮಾಡೆಲ್ ಆಗಿರುವ ವಂದನಾ ಜೈನ್ ಹಿಂದಿ ಸಿನಿಮಾಗಳ ನಿರ್ಮಾಪಕಿಯೂ ಆಗಿದ್ದಾರೆ. ಕ್ರಿಕೆಟಿಗರೊಬ್ಬರ ಪ್ರಕರಣದಲ್ಲೂ ವಂದನಾ ಜೈನ್ ಹೆಸರು ಕೇಳಿ ಬಂದಿತ್ತು. ಇನ್ನು ನಟಿ ಸಂಜನಾ ಗಲ್ರಾನಿ ಕಳೆದ ವರ್ಷ ಡ್ರಗ್ಸ್ ಪ್ರಕರಣದಲ್ಲಿ ಬಂಧಕ್ಕೊಳಗಾಗಿ ತಿಂಗಳಾನುಗಟ್ಟಲೇ ಜೈಲಿನಲ್ಲಿ ಇದ್ದರು. ನಂತರ ಅನಾರೋಗ್ಯ ಕಾರಣದ ಹಿನ್ನೆಲೆಯಲ್ಲಿ ಜಾಮೀನು ಪಡೆದು ಹೊರ ಬಂದಿದ್ದಾರೆ.
ನಟಿ ಸಂಜನಾ ಬಂಧನದ ವೇಳೆ ಅವರ ಮದುವೆ ವಿಚಾರ, ಆದಾಯದ ವಿಚಾರ ಸಾಕಷ್ಟು ವಿವಾದಕ್ಕೆ ಗುರಿಯಾಗಿತ್ತು. ಇದೇ ಪ್ರಕರಣ ಸಂಬಂಧ ಚಂದನವನದ ಮತ್ತೊಬ್ಬ ನಟಿ ರಾಗಿಣಿ ಸಹ ಬಂಧನಕ್ಕೊಳಗಾಗಿದ್ದರು. ಇವರೂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
Published by:Kavya V
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ