Siddaramaiah: ಹಲವರ ನಿದ್ದೆಗೆಡಿಸಿರುವ 'ಸಿದ್ದು ಸಿಎಂ' ವಿಚಾರ; ಡಿಕೆಶಿ ಬಳಿಕ ತಟಸ್ಥ ಬಣದಿಂದ ದೆಹಲಿ ಯಾತ್ರೆ

ಹೈಕಮಾಂಡ್ ನಾಯಕರ ಭೇಟಿಗೆಂದೇ ದೆಹಲಿಗೆ ಬಂದಿರುವ ಬಿ.ಕೆ. ಹರಿಪ್ರಸಾದ್ ಮತ್ತು ಕೆ.ಎಚ್. ಮುನಿಯಪ್ಪ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಮತ್ತು ಎಐಸಿಸಿಯ ಸಂಘಟನಾ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಭೇಟಿಗೆ ಸಮಯಾವಕಾಶ ಕೇಳಿದ್ದಾರೆ.

ಸಿದ್ದರಾಮಯ್ಯ- ಡಿಕೆ ಶಿವಕುಮಾರ್

ಸಿದ್ದರಾಮಯ್ಯ- ಡಿಕೆ ಶಿವಕುಮಾರ್

  • Share this:
ನವದೆಹಲಿ(‌ಜೂ. 28): 'ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ' ಎಂಬ ವಿಚಾರ ಚರ್ಚೆಯ ಮುನ್ನಲೆಗೆ ಬಂದಿರುವುದು ರಾಜ್ಯ ಕಾಂಗ್ರೆಸಿನಲ್ಲಿ ಹಲವರ ನಿದ್ದೆಗೆಡಿಸಿದೆ. ಇದೇ ಹಿನ್ನಲೆಯಲ್ಲಿ ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ದೆಹಲಿಗೆ ಧಾವಿಸಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಅವರಿಗೆ ದೂರು ನೀಡಿದ್ದಾಯಿತು. ಈಗ 'ತಟಸ್ಥ' ಬಣ ಎಂದು ಹೇಳಿಕೊಳ್ಳುವವರ ಸರದಿ.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬೆಂಬಲಿಗರು 'ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ' ಎಂದು ಒಬ್ಬರಾದ ಮೇಲೆ ಒಬ್ಬರು ಹೇಳುತ್ತಿದ್ದಂತೆ ದಿಢೀರನೇ ಸಕ್ರೀಯರಾದ 'ತಟಸ್ಥ' ಬಣದ ನಾಯಕರಾದ ಮಾಜಿ ಕೆಪಿಸಿಸಿ‌ ಅಧ್ಯಕ್ಷ ಡಾ. ಜಿ. ಪರಮೇಶ್ವರ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮತ್ತು ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಶನಿವಾರ ಬೆಂಗಳೂರಿನಲ್ಲಿ ಸಭೆ ಸೇರಿ ಸಮಾಲೋಚನೆ ನಡೆಸಿದ್ದರು. ಈ ಭೇಟಿಯ ಬಳಿಕ ಅತ್ತ ಭಾನುವಾರ ಡಾ. ಜಿ. ಪರಮೇಶ್ವರ ಇನ್ನೊಬ್ಬ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಜೊತೆಗೆ ಚರ್ಚೆ ನಡೆಸಿದ್ದರೆ, ಬಿ.ಕೆ. ಹರಿಪ್ರಸಾದ್ ಮತ್ತು ಕೆ.ಎಚ್. ಮುನಿಯಪ್ಪ ದೆಹಲಿ ವಿಮಾನ ಹತ್ತಿದ್ದಾರೆ.

ಇದನ್ನೂ ಓದಿ:ಕೊಟ್ಟ ಮಾತು ಮರೆತ ಸರ್ಕಾರ: ಕೊರೊನಾಗೆ ಬಲಿಯಾದ ಸಾರಿಗೆ ನೌಕರರಲ್ಲಿ ಕೇವಲ 7 ಮಂದಿಗೆ ಮಾತ್ರ ಪರಿಹಾರ!

ಹೈಕಮಾಂಡ್ ನಾಯಕರ ಭೇಟಿಗೆಂದೇ ದೆಹಲಿಗೆ ಬಂದಿರುವ ಬಿ.ಕೆ. ಹರಿಪ್ರಸಾದ್ ಮತ್ತು ಕೆ.ಎಚ್. ಮುನಿಯಪ್ಪ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಮತ್ತು ಎಐಸಿಸಿಯ ಸಂಘಟನಾ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಭೇಟಿಗೆ ಸಮಯಾವಕಾಶ ಕೇಳಿದ್ದಾರೆ. ಭೇಟಿ ವೇಳೆ ಅವರುಗಳು ಸಿದ್ದರಾಮಯ್ಯ ವಿರುದ್ಧ ಮಾತ್ರವೇ ದೂರು ನೀಡಲಿದ್ದಾರಾ? ಅಥವಾ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಎರಡೂ ಬಣಗಳಿಗೆ ಕಿವಿ ಹಿಂಡಿ ಎಂದು ಹೇಳುತ್ತಾರಾ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಬೆಂಗಳೂರಿನ ಜಯನಗರದ ಶಾಸಕಿ ಸೌಮ್ಯ ರೆಡ್ಡಿ ಮೊದಲಿಗೆ 'ಡಿ.ಕೆ. ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಆಗಬೇಕು' ಎಂಬ ವಿಚಾರ ಪ್ರಸ್ತಾಪಿಸಿದರು. ನಂತರ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಅವರು 'ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ' ಎಂದು ಹೇಳಿದರು. ಇದಾದ ಬಳಿಕ ಹಲವರು 'ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ' ಎಂದು ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ತಟಸ್ಥ ಬಣದವರು ಎರಡೂ ಬಣಗಳ ಮೇಲೆಯೂ ದೂರು ನೀಡಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:Astrology: ಕನ್ಯಾ ರಾಶಿಯವರಿಗೆ ಅನಿರೀಕ್ಷಿತ ವರ್ಗಾವಣೆ: ಇಲ್ಲಿದೆ ದ್ವಾದಶ ರಾಶಿ ಭವಿಷ್ಯ

ಹರಿಪ್ರಸಾದ್-ಮುನಿಯಪ್ಪ ಅವರ ದೆಹಲಿ ಭೆಟಿಯ ಹಿಂದೆ ಜಿ. ಪರಮೇಶ್ವರ ಅವರ ಕೈವಾಡ ಇರಬಹುದು. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬಣಗಳ ಕಚ್ಚಾಟದಲ್ಲಿ ತಾವು ಮತ್ತೆ ಮುನ್ನಲೆಗೆ ಬರಬಹುದು ಎಂಬ ಲೆಕ್ಕಾಚಾರದಲ್ಲಿ ಪರಮೇಶ್ವರ ಅವರು 'ತಟಸ್ಥ' ಬಣದ ಹೆಸರಿನಲ್ಲಿ ದಾಳ ಉರುಳಿಸುತ್ತಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ‌. ಸ್ವತಃ ಡಾ.‌ ಜಿ. ಪರಮೇಶ್ವರ ಕೂಡ ಹೈಕಮಾಂಡ್ ನಾಯಕರ ಭೇಟಿಗೆ ಸಮಯಾವಕಾಶ ಕೇಳಿದ್ದಾರೆ. ದೆಹಲಿ ನಾಯಕರಿಂದ ಹಸಿರು ನಿಶಾನೆ ಸಿಗುತ್ತಿದ್ದಂತೆ ಅವರು ರಾಷ್ಟ್ರ ರಾಜಧಾನಿಗೆ ಪ್ರಯಾಣ ಬೆಳಸಲಿದ್ದಾರೆ ಎನ್ನಲಾಗಿದೆ.
Published by:Latha CG
First published: