ಶಾಸಕರ ಅಸಮಾಧಾನ, ಸಿ.ಡಿ ಸದ್ದಿನಿಂದ ಸರ್ಕಾರಕ್ಕೆ ಡ್ಯಾಮೇಜ್; ನಾಳೆ ಮಹತ್ವದ ಬಿಜೆಪಿ ಕೋರ್ ಕಮಿಟಿ ಸಭೆ

ಶಾಸಕರ ಅಸಮಾಧಾನ, ಸಿ.ಡಿ. ವಿಚಾರದಿಂದ ಆಗಿರುವ ಡ್ಯಾಮೇಜ್ ಸರಿ ಮಾಡಲು ನಾಳೆ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಸಂಜೆ ಬಿಜೆಪಿ ಕೋರ್ ಕಮಿಟಿ ಸಭೆ ಕರೆಯಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂಡ ಈ ಸಭೆಯಲ್ಲಿ ಭಾಗಿಯಾಗಲಿದ್ದು, ಮಹತ್ವದ ಮಾತುಕತೆ ನಡೆಸಲಿದ್ದಾರೆ.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

  • Share this:
ಬೆಂಗಳೂರು (ಜ. 15): ಯಡಿಯೂರಪ್ಪನವರ ವಿಡಿಯೋ ಇರುವ ಸಿ.ಡಿಯನ್ನು ಮುಂದಿಟ್ಟುಕೊಂಡು ಬ್ಲಾಕ್​ಮೇಲ್ ಮಾಡಿ ಕೆಲವರು ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎಂದು ಬಿಜೆಪಿಯ ಅಸಮಾಧಾನಿತರು ಆರೋಪಿಸಿದ್ದು ಭಾರೀ ಚರ್ಚೆಗೊಳಗಾಗಿದೆ. ಸಂಪುಟ ವಿಸ್ತರಣೆಯ ನಂತರ ಮೂಲ ಬಿಜೆಪಿಗರಲ್ಲಿ ಅಸಮಾಧಾನ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಸಂಪುಟದ ಸಚಿವರ ಆಯ್ಕೆಯಲ್ಲಿ ನನ್ನದೇನೂ ಪಾತ್ರವಿಲ್ಲ ಎಂದು ಹೈಕಮಾಂಡ್ ನಾಯಕರತ್ತ ಬೆರಳು ಮಾಡಿದ್ದಾರೆ. ಬಿಜೆಪಿ ನಾಯಕರ ಅಸಮಾಧಾನ ಇನ್ನೂ ಶಮನವಾಗದ ಹಿನ್ನೆಲೆಯಲ್ಲಿ ನಾಳೆ ಮಹತ್ವದ ಬಿಜೆಪಿ ಕೋರ್ ಕಮಿಟಿ ಸಭೆ ಕರೆಯಲಾಗಿದೆ.

ಕರ್ನಾಟಕದ ಸಚಿವ ಸಂಪುಟದ ಕೆಲವು ಸಚಿವರ ಆಯ್ಕೆಯಿಂದ ಬಿಜೆಪಿ ನಾಯಕರು ಅಸಮಾಧಾನಕ್ಕೊಳಗಾಗಿದ್ದಾರೆ. ಇದರ ಜೊತೆಗೆ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪನವರ ಸಿಡಿ ವಿಚಾರವೂ ರಾಜಕೀಯ ವಲಯದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಈ ಕುರಿತು ಎಲ್ಲೂ ಮಾತನಾಡಬಾರದು ಎಂದು ಈಗಾಗಲೇ ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚನೆ ನೀಡಿದೆ. ಈ ಎಲ್ಲದರಿಂದ ಬಿಜೆಪಿಗೆ ಆಗಿರುವ ಡ್ಯಾಮೇಜ್ ಸರಿಮಾಡುವ ಸಲುವಾಗಿ ನಾಳೆ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಸಂಜೆ 7.30ಕ್ಕೆ ಮಹತ್ವದ ಬಿಜೆಪಿ ಕೋರ್ ಕಮಿಟಿ ಸಭೆ ಕರೆಯಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂಡ ಈ ಸಭೆಯಲ್ಲಿ ಭಾಗಿಯಾಗಲಿದ್ದು, ರಾಜ್ಯ ಬಿಜೆಪಿ ಬೆಳವಣಿಗೆಗಳ ಬಗ್ಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ.

ಉಪ‌ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ, ನಾಯಕತ್ವ ಬದಲಾವಣೆ, ಸಂಪುಟ ವಿಸ್ತರಣೆಯಿಂದ ಪಕ್ಷದಲ್ಲಿ ಉಂಟಾಗಿರುವ ಅಸಮಾಧಾನ, ಸಿಡಿ ಕುರಿತು ಶಾಸಕರ ಹೇಳಿಕೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಸಿಡಿ ಕುರಿತು ಶಾಸಕರ ಹೇಳಿಕೆಗಳಿಂದ ಬಿಜೆಪಿ ಪಕ್ಷಕ್ಕೆ ಡ್ಯಾಮೇಜ್ ಆಗಿರುವ ಹಿನ್ನೆಲೆಯಲ್ಲಿ ಡ್ಯಾಮೇಜ್ ನಿಯಂತ್ರಿಸಲು ಬಿಜೆಪಿ ನಾಯಕರಿಗೆ ಎಚ್ಚರದಿಂದಿರುವಂತೆ ಸೂಚನೆ ನೀಡಲು ಅಮಿತ್ ಶಾ ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ: ಕಣ್ಣಿನಿಂದ ನೋಡಲಾಗದ ಸಿಡಿ ಇದೆ, ಅದು ಈಗ ಡಿಕೆ ಶಿವಕುಮಾರ್ ಬಳಿ ಇದೆ; ಯತ್ನಾಳರಿಂದ ಮತ್ತೊಂದು ಸ್ಫೋಟಕ ಹೇಳಿಕೆ

ಈಗಾಗಲೇ ಹಲವು ಬಿಜೆಪಿ ಶಾಸಕರು ಬಹಿರಂಗವಾಗಿಯೇ ನೂತನ ಸಚಿವರ ಆಯ್ಕೆಯ ವಿಷಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಎಂ.ಪಿ. ರೇಣುಕಾಚಾರ್ಯ, ರಾಮದಾಸ್, ಮುನಿರತ್ನ, ಎಂಎಲ್​ಸಿ ಹೆಚ್. ವಿಶ್ವನಾಥ್ ಸೇರಿದಂತೆ ಹಲವರು ಬಹಿರಂಗ ಹೇಳಿಕೆ ನೀಡಿದ್ದಾರೆ. ಎಂಪಿ ರೇಣುಕಾಚಾರ್ಯ ದೆಹಲಿಗೆ ತೆರಳಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರೊಂದಿಗೆ ಈ ಬಗ್ಗೆ ಚರ್ಚೆಯನ್ನೂ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ನಡೆಯಲಿರುವ ರಾಜ್ಯ ಕೋರ್ ಕಮಿಟಿ ಸಭೆ ಅತ್ಯಂತ ಮಹತ್ವ ಪಡೆದಿದೆ.

ಹೈಕಮಾಂಡ್ ವಿರುದ್ಧ ಸಿಡಿದೆದ್ದರಾ ಸಿಎಂ?:

ಇನ್ನೊಂದೆಡೆ, ಬಿಜೆಪಿ ಹೈಕಮಾಂಡ್ ವಿರುದ್ಧ ಮತ್ತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಿಡಿದೆದ್ದಿರುವ ಅನುಮಾನ ವ್ಯಕ್ತವಾಗಿದೆ. ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟ ವಿಚಾರವಾಗಿ ಯಡಿಯೂರಪ್ಪ ಎಲ್ಲದಕ್ಕೂ ಹೈಕಮಾಂಡ್ ಮೇಲೆ ಬೆರಳು ಮಾಡಿ ತೋರಿಸುತ್ತಿದ್ದಾರೆ. ಸಚಿವ ಸಂಪುಟ ವಿಸ್ತರಣೆಯಿಂದ ಉಂಟಾಗಿರುವ ಅಸಮಾಧಾನಕ್ಕೂ ಸಿಎಂ ಯಡಿಯೂರಪ್ಪ ಹೈಕಮಾಂಡನ್ನೇ ಹೊಣೆ ಮಾಡಿದ್ದಾರೆ.

ಇತ್ತ ಪಂಚಮಸಾಲಿ ಸಮುದಾಯವನ್ನು 2 ಎಗೆ ಸೇರಿಸುವ ಬಗ್ಗೆಯೂ ಯಡಿಯೂರಪ್ಪ ಹೈಕಮಾಂಡ್​ನತ್ತ ಬೆರಳು ತೋರಿಸುತ್ತಿದ್ದಾರೆ. ಎಲ್ಲದಕ್ಕೂ ಹೈಕಮಾಂಡ್ ಕಾರಣ ಎಂದು ಬಿಂಬಿಸಲು ಸಿಎಂ ಪ್ಲಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ. ನಿನ್ನೆ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸಿಎಂ ಯಡಿಯೂರಪ್ಪ, ಸಚಿವ ಸಂಪುಟದ ವಿಸ್ತರಣೆಯಿಂದ ಯಾರಿಗೆಲ್ಲ ಅಸಮಾಧಾನವಾಗಿದೆಯೋ ಅವರು ದೆಹಲಿಗೆ ಹೋಗಿ ನಾಯಕರಿಗೆ ದೂರು ನೀಡಲಿ. ಅದಕ್ಕೆ ನನ್ನದೇನೂ ಅಭ್ಯಂತರವಿಲ್ಲ. ಆದರೆ, ವಿನಾಕಾರಣ ಬಹಿರಂಗವಾಗಿ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ತರಬೇಡಿ ಎಂದಿದ್ದರು.

ಹಾಗೇ, ನಿನ್ನೆ ಸಂಜೆ ಪಂಚಮಸಾಲಿ ಸಮುದಾಯವನ್ನು 2ಎ ಗೆ ಸೇರಿಸುವ ಬಗ್ಗೆಯೂ ಹೈಕಮಾಂಡ್​ನತ್ತ ಬೆರಳು ತೋರಿಸಿದ್ದಾರೆ. ಪಂಚಮಸಾಲಿ ಸಾಲಿ ಸಮುದಾಯವನ್ನು 2ಎಗೆ ಸೇರಿಸುವ ಬಗ್ಗೆ ಸಂಪುಟದಲ್ಲಿ ನಿರ್ಧಾರ ಆಗಿತ್ತು. ಆದರೆ ಹೈಕಮಾಂಡ್ ನಮ್ಮ ಜೊತೆ ಚರ್ಚೆ ಮಾಡಿದ ನಂತರ ನಿರ್ಧಾರ ಮಾಡಿ ಎಂದು ಹೇಳಿದೆ ಎನ್ನುವ ಮೂಲಕ ಪರೋಕ್ಷವಾಗಿ ಹೈಕಮಾಂಡ್​ನಿಂದಲೇ ಈ ಪ್ರಸ್ತಾಪ ಸ್ಟಾಪ್ ಆಯಿತು ಎಂದು ಸಿಎಂ ಯಡಿಯೂರಪ್ಪ ಬಿಂಬಿಸಿದ್ದಾರೆ.

ಈ ಮೂಲಕ ಹೈಕಮಾಂಡ್ ವಿರುದ್ಧ ಶಾಸಕರನ್ನು ಎತ್ತಿಕಟ್ಟುವ ತಂತ್ರ ರೂಪಿಸುತ್ತಿದ್ದಾರಾ ಯಡಿಯೂರಪ್ಪ? ಎಂಬ ಚರ್ಚೆಗಳು ನಡೆಯುತ್ತಿವೆ. ಇದರಿಂದ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಹೈಕಮಾಂಡ್ ನಡುವಿನ ಕದನ ಮತ್ತೆ ಶುರುವಾಗಿದೆ ಎನ್ನಲಾಗುತ್ತಿದೆ.
Published by:Sushma Chakre
First published: