ಗಾಂಧಿ ಕುಟುಂಬಕ್ಕೆ ಮತ್ತೆ ಎಸ್​ಪಿಜಿ ಭದ್ರತೆ ನೀಡಿ, ಇಲ್ಲದಿದ್ದರೆ ಬೀದಿಗಿಳಿದು ಹೋರಾಟ; ಸಿದ್ದರಾಮಯ್ಯ ಎಚ್ಚರಿಕೆ

ಪ್ರಧಾನಿಗೆ ಮಾತ್ರ ಎಸ್​ಪಿಜಿ ಭದ್ರತೆ ಇರುವುದನ್ನೂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಉಳಿದವರಿಗೆ ಎಸ್‌ಪಿಜಿ ಭದ್ರತೆಯನ್ನು ತೆಗೆದು ಪ್ರಧಾನಿ ತಮಗೆ ಮಾತ್ರ ಇಟ್ಟುಕೊಂಡಿದ್ದಾರೆ. ಇದು ಡಿಕ್ಟೇಟರ್ ಶಿಪ್. ಸೇಡಿನ ರಾಜಕಾರಣ ಎಂದು ಗುಡುಗಿದರು.  

Rajesh Duggumane | news18-kannada
Updated:November 8, 2019, 8:27 PM IST
ಗಾಂಧಿ ಕುಟುಂಬಕ್ಕೆ ಮತ್ತೆ ಎಸ್​ಪಿಜಿ ಭದ್ರತೆ ನೀಡಿ, ಇಲ್ಲದಿದ್ದರೆ ಬೀದಿಗಿಳಿದು ಹೋರಾಟ; ಸಿದ್ದರಾಮಯ್ಯ ಎಚ್ಚರಿಕೆ
ಮಾಜಿ ಸಿಎಂ ಸಿದ್ದರಾಮಯ್ಯ
  • Share this:
ಮೈಸೂರು (ನ.8): ಗಾಂಧಿ ಕುಟುಂಬಕ್ಕೆ ನೀಡಿದ್ದ ಎಸ್​ಪಿಜಿ ಭದ್ರತೆಯನ್ನು ವಾಪಸ್​ ಪಡೆದ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ. ಗಾಂಧಿ ಕುಟುಂಬಕ್ಕೆ ಮತ್ತೆ ಎಸ್‌ಪಿಜಿ ಭದ್ರತೆ ನೀಡಿ, ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇಂದು ಸಂಜೆ ಮೈಸೂರಿನಲ್ಲಿ ತುರ್ತು ಸುದ್ದಿಗೋಷ್ಠಿಯಲ್ಲಿ ಕರೆದು ಸಿದ್ದರಾಮಯ್ಯ ಕೇಂದ್ರದ ವಿರುದ್ಧ ಹರಿಹಾಯ್ದರು. “ಎಸ್‌ಪಿಜಿ ಭದ್ರತೆಯನ್ನು ಮತ್ತೆ ಗಾಂಧಿ ಕುಟುಂಬಕ್ಕೆ ನೀಡಬೇಕು. ಇಲ್ಲವಾದಲ್ಲಿ ಅನಿವಾರ್ಯವಾಗಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ಇದು ದ್ವೇಷದ ರಾಜಕಾರಣ,” ಎಂದು ಸಿದ್ದರಾಮಯ್ಯ ಹೇಳಿದರು.

“ಯಾರಿಗೆ ಪ್ರಾಣ ಭಯ ಇದೆಯೋ ಅಂಥವರಿಗೆ ಎಸ್​ಪಿಜಿ ಭದ್ರತೆ ನೀಡಲಾಗುತ್ತದೆ. ಗಾಂಧಿ ಕುಟುಂಬದಲ್ಲಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹತ್ಯೆಯಾಗಿತ್ತು. ಹೀಗಾಗಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಸೇರಿದಂತೆ ಹಲವರಿಗೆ ಎಸ್​ಪಿಜಿ ಭದ್ರತೆ ನೀಡಲಾಗಿತ್ತು. ಆದರೆ, ಈಗ ಈ ಭದ್ರತೆಯನ್ನು ಏಕಾಏಕಿ ಕೇಂದ್ರ ರದ್ದು ಮಾಡಿದೆ. ದ್ವೇಷದ ರಾಜಕಾರಣದಿಂದ ಅವರಿಗೆ ನೀಡಿದ್ದ ಭದ್ರತೆ ತೆಗೆಯಲಾಗಿದೆ,” ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: ಗಾಂಧಿ ಕುಟುಂಬ ಸೇರಿ ಮಾಜಿ ಪ್ರಧಾನಿಗಳಿಗೆ ನೀಡಲಾಗಿರುವ ಎಸ್​ಪಿಜಿ ಭದ್ರತೆ ವಾಪಸ್ ಪಡೆಯಲು ನಿರ್ಧಾರ?

ಪ್ರಧಾನಿಗೆ ಮಾತ್ರ ಎಸ್​ಪಿಜಿ ಭದ್ರತೆ ಇರುವುದನ್ನೂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. “ಎಸ್‌ಪಿಜಿ ಭದ್ರತೆಯನ್ನು ತೆಗೆದು ಪ್ರಧಾನಿ ತಮಗೆ ಮಾತ್ರ ಈ ಭದ್ರತೆ ಇಟ್ಟುಕೊಂಡಿದ್ದಾರೆ. ಇದು ಡಿಕ್ಟೇಟರ್ ಶಿಪ್. ಇದು ಸೇಡಿನ ರಾಜಕಾರಣ,” ಎಂದು ಅವರು ಗುಡುಗಿದರು.

1991ರಲ್ಲಿ ರಾಜೀವ್ ಗಾಂಧಿ ಅವರ ಹತ್ಯೆ ಬಳಿಕ ಮಾಜಿ ಪ್ರಧಾನಿಗಳು ಸೇರಿದಂತೆ ಗಾಂಧಿ ಕುಟುಂಬಕ್ಕೆ ಎಸ್​ಪಿಜಿ ಭದ್ರತೆ ಒದಗಿಸಲಾಗಿತ್ತು. ಎಲ್ಲಾ ಮಾಜಿ ಪ್ರಧಾನಿಗಳ ಭದ್ರತೆಯನ್ನು ಕಾಲ ಕಾಲಕ್ಕೆ ಪರಿಶೀಲಿಸಲಾಗುತ್ತದೆ ಮತ್ತು ಅಗತ್ಯವಿದ್ದಾಗ ಅದನ್ನು ಇಳಿಕೆ ಮಾಡಲಾಗುತ್ತದೆ. ಇತ್ತೀಚೆಗೆ ಮಾಜಿ ಪ್ರಧಾನಿ ಡಾ.ಮನಮೋಹನ್ ಅವರಿಗೆ ನೀಡಲಾಗಿದ್ದ ಎಸ್​ಪಿಜಿ ಭದ್ರತೆಯನ್ನು ಹಿಂಪಡೆಯಲಾಗಿತ್ತು.

(ವರದಿ: ಪುಟ್ಟಪ್ಪ)
First published:November 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading