• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Kodagu: ಅಪಘಾತವಾಗಿ ಶವಗಾರ ಸೇರಿದ್ದ ಯುವಕ ಅಂತರ್ ರಾಜ್ಯ ವಿವಿ ಮಟ್ಟದ ಹಾಕಿಯಲ್ಲಿ ಸಾಧನೆ 

Kodagu: ಅಪಘಾತವಾಗಿ ಶವಗಾರ ಸೇರಿದ್ದ ಯುವಕ ಅಂತರ್ ರಾಜ್ಯ ವಿವಿ ಮಟ್ಟದ ಹಾಕಿಯಲ್ಲಿ ಸಾಧನೆ 

ವಿನಯ್

ವಿನಯ್

ಹೀಗೆ ಶವಾಗಾರದಲ್ಲಿ ಒಂದು ಗಂಟೆ, ಆಸ್ಪತ್ರೆಯಲ್ಲಿ ತಿಂಗಳುಗಟ್ಟಲೆ ಇದ್ದ ಆ ಯುವಕ ಇಂದು ದಕ್ಷಿಣ ಭಾರತದ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಹಾಕಿ ಸ್ಪರ್ಧೆಯಲ್ಲಿ ಸೆಣಸಿ ತನ್ನ ತಂಡವನ್ನು ಗೆಲ್ಲುವಂತೆ ಮಾಡಿದ್ದಾನೆ. ಇದು ಅಚ್ಚರಿ ಎನಿಸಿದರೂ ಸತ್ಯ.

  • Share this:

ಕೊಡಗು: ಕಾರ್ ಮತ್ತು ಲಾರಿ ನಡುವೆ ನಡೆದಿದ್ದ ಭೀಕರ ಅಪಘಾತದಲ್ಲಿ (Accident) ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು ಎಂದು ಪೊಲೀಸರು ದೇಹಗಳನ್ನು ಶವಗಾರಕ್ಕೆ (Mortuary) ಸಾಗಿಸಿದ್ದರು. ವಿಷಯ ತಿಳಿದು ಕೆಲಸದ ಸ್ಥಳದಿಂದಲೇ ಓಡೋಡಿ ಬಂದ ತಂದೆ ನಾಲ್ವರಲ್ಲಿ ನನ್ನ ಮಗನ ದೇಹ ಯಾವುದು ಎಂದು ಶವಗಾರದಲ್ಲಿ ಹುಡುಕಾಡಿದ್ದರು. ಇನ್ನೇನು ಮರಣೋತ್ತರ ಪರೀಕ್ಷೆ ಮಾಡಬೇಕೆಂದು ಸಿದ್ಧತೆ ನಡೆಸಿದ್ದ ಪೊಲೀಸ್ ಇನ್ ಸ್ಪೆಕ್ಟರ್ ಗೆ (Police Inspector) ಯುವಕನೊಬ್ಬನ ದೇಹದಲ್ಲಿ ಬೆರಳು ಅಲ್ಲಾಡಿದ್ದು ಕಂಡಿತ್ತು. ತಕ್ಷಣವೇ ಯುವಕನನ್ನು ಮೈಸೂರು ಆಸ್ಪತ್ರೆಗೆ (Mysuru Hospital) ಚಿಕಿತ್ಸೆಗಾಗಿ ರವಾನೆ ಮಾಡಲಾಗಿತ್ತು. ಅಲ್ಲಿಯೂ ದೇಹವನ್ನು ಪರಿಶೀಲಿಸಿದ್ದ ವೈದ್ಯರು, ದೇಹದಲ್ಲಿ ಒಂದು ಪರ್ಸೆಂಟ್ ಕೂಡ ರಕ್ತ ಉಳಿದಿಲ್ಲ. ದೇಹವೂ ಬಹುತೇಕ ತಣ್ಣಗಾಗಿದೆ ನಾವೇನು ಮಾಡಲು ಸಾಧ್ಯವಿಲ್ಲ ಎಂದು ಕೈಚೆಲ್ಲಿದ್ದರು. ಆದರೆ ತಜ್ಞ ವೈದ್ಯರೊಬ್ಬರು ನಾನು ಶಸ್ತ್ರಚಿಕಿತ್ಸೆ (Surgery) ಆರಂಭಿಸುತ್ತೇನೆ ನೋಡೋಣ ಎಂದು 16 ವೈದ್ಯರ ತಂಡದೊಂದಿದೆ ಸತತ 10 ಗಂಟೆಗಳ ಕಾಲ ಆಪರೇಷನ್ ಮಾಡಿದ್ದರು.


ಮುಖ ತಲೆ ಭಾಗಕ್ಕೆ ಬರೋಬ್ಬರಿ 68 ಹೊಲಿಗೆ ಹಾಕಿದ್ದರು. ಮುರಿದು ಪುಡಿ ಪುಡಿಯಾಗಿದ್ದ ಎರಡು ತೊಡೆಗಳಿಗೂ, ಎಡಗೈ ತೋಳಿಗೂ ರಾಡ್ ಅಳವಡಿಸಿ ನಂತರ ಐಸಿಯು ವಿಭಾಗಕ್ಕೆ ಆ ದೇಹವನ್ನು ಸ್ಥಳಾಂತರ ಮಾಡಿದ್ದರು.


ಇದು ಅಚ್ಚರಿ ಎನಿಸಿದರೂ ಸತ್ಯ


ಹೀಗೆ ಶವಾಗಾರದಲ್ಲಿ ಒಂದು ಗಂಟೆ, ಆಸ್ಪತ್ರೆಯಲ್ಲಿ ತಿಂಗಳುಗಟ್ಟಲೆ ಇದ್ದ ಆ ಯುವಕ ಇಂದು ದಕ್ಷಿಣ ಭಾರತದ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಹಾಕಿ ಸ್ಪರ್ಧೆಯಲ್ಲಿ ಸೆಣಸಿ ತನ್ನ ತಂಡವನ್ನು ಗೆಲ್ಲುವಂತೆ ಮಾಡಿದ್ದಾನೆ. ಇದು ಅಚ್ಚರಿ ಎನಿಸಿದರೂ ಸತ್ಯ.


ಇದನ್ನೂ ಓದಿ:  Kodagu: ವಿವಾದದ ಸ್ವರೂಪ ಪಡೆದ ಬುರ್ಖಾ, ಹಿಜಾಬ್ ಧರಿಸಿ ಮಾಡಿದ ಯುವಕರ ಡ್ಯಾನ್ಸ್


ಹೌದು ಮಡಿಕೇರಿಯ ನಿವಾಸಿಗಳಾದ ವಾಸು ಮತ್ತು ನಿಳಿನಿ ದಂಪತಿ ಪುತ್ರ ವಿನಯ್ ಈ ಅಚ್ಚರಿಯ ಮೂರ್ತಿ. 7 ನೇ ತರಗತಿಯಲ್ಲಿ ಇರುವಾಗಲೇ ಸ್ಕೇಟಿಂಗ್ ಹಾಕಿಯಲ್ಲಿ ರಾಷ್ಟ್ರಮಟ್ಟದಲ್ಲಿ ಗೋಲ್ಡ್ ಮೆಡಲ್ ಮಾಡಿದ್ದ ವಿನಯ್. ಮುಂದೆ ಶಾಲಾ ಮಟ್ಟದಲ್ಲಿಯೇ ಹಲವು ರಾಷ್ಟ್ರೀಯ ಮಟ್ಟದ ಪಂದ್ಯಾಟಗಳಲ್ಲಿ ಆಡಿದ್ದರು.


2016ರಲ್ಲಿ ನಡೆದಿತ್ತು ಅಪಘಾತ


ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾಲೇಜಿನಲ್ಲಿ ಎರಡನೇ ವರ್ಷದ ಪದವಿ ಓದುತ್ತಿರುವಾಗ ಅಂತರ್ ರಾಜ್ಯ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಮೈಸೂರಿನಲ್ಲಿ ನಡೆಯುತ್ತಿದ್ದ ಪಂದ್ಯಾಟದಲ್ಲಿ ಭಾಗವಹಿಸಿದ್ದ ಯುವಕ ವಿನಯ್ ಮತ್ತು ತಂಡ 2016 ನೇ ವರ್ಷದ ಮ್ಯಾಚಿನಲ್ಲಿ ಸೋತಿದ್ದರು. ಹೀಗೆ ಸೋತು ಮೈಸೂರಿನಿಂದ ಕೊಡಗಿಗೆ ಕಾರಿನಲ್ಲಿ ವಾಪಸ್ ಆಗುವ ವೇಳೆ ಇವರಿದ್ದ ಕಾರ್ ಮತ್ತು ಎದುರಿನಿಂದ ಬಂದ ಲಾರಿ ನಡುವೆ ಕುಶಾಲನಗರ ಸಮೀಪದ ಕೊಪ್ಪ ಬಳಿ ಭೀಕರ ಅಪಘಾತವಾಗಿತ್ತು.


ಈ ಅಪಘಾತದಲ್ಲಿ ಹಾಕಿಪಟು ವಿನಯ್ ತರಬೇತಿಯಲ್ಲಿಯೇ ಪಳಗಿ ಅಂತರರಾಜ್ಯ ವಿಶ್ವವಿದ್ಯಾನಿಲಯ ಮಟ್ಟದ ಹಾಕಿ ಪಂದ್ಯಾಟದಲ್ಲಿ ವಿನಯ್ ಅವರೊಂದಿಗೆ ಭಾಗವಹಿಸಿದ್ದ ಸಂಕೇತ್ ಮತ್ತು ಪೂವಣ್ಣ ಸ್ಥಳದಲ್ಲಿಯೇ ಅಸುನೀಗಿದ್ದರು.


ಮತ್ತೆ ಮೈದಾನಕ್ಕೆ ಬಂದ ವಿನಯ್


ಸತ್ತೇ ಹೋಗಿದ್ದಾರೆ ಎನ್ನುವಷ್ಟರ ಮಟ್ಟಿಗೆ ಗಾಯಗೊಂಡಿದ್ದ ವಿನಯ್ ಅವರ ದೇಹದಲ್ಲಿ ಇಂದಿಗೂ ಎರಡು ಕಾಲಿನ ತೊಡೆಗಳಲ್ಲಿ ರಾಡುಗಳಿವೆ. ಎಡಗೈ ತೋಳಿನಲ್ಲಿ ರಾಡಿದೆ. ಇದ್ಯಾವುದಕ್ಕೂ ಕೇರ್ ಮಾಡದ ವಿನಯ್ ಸ್ಪೋರ್ಟ್ಸ್ ಫಿಜಿಯೋ ಶ್ರವಣ್ ಎಂಬುವವರ ಮಾರ್ಗದರ್ಶನಲ್ಲಿ ತರಬೇತಿ ಪಡೆದು ಮತ್ತೆ ಚಿಲುಮೆಯಾಗಿ ಚಿಮ್ಮಿ ಬಂದಿದ್ದಾರೆ.


ಯಾವ ಅಂತರ್ ರಾಜ್ಯ ವಿಶ್ವವಿದ್ಯಾನಿಲಯಗಳ ಮಟ್ಟದ ಹಾಕಿ ಪಂದ್ಯಾಟದಲ್ಲಿ ಸೋತಿದ್ದರೋ ಅದೇ ಹಂತದ ಹಾಕಿ ಪಂದ್ಯಾಟದಲ್ಲಿ ದೇಹದಲ್ಲಿ ಮೂರು ರಾಡುಗಳನ್ನಿಟ್ಟುಕೊಂಡಿದ್ದರೂ ಮತ್ತೆ ಹಾಕಿ ಆಡಿ ವಿಜೇತರಾಗಿ ಬಂದಿರುವುದು ದೊಡ್ಡ ಸಾಧನೆ. ಇದೆಲ್ಲವೂ ಕೇವಲ ಎರಡೇ ವರ್ಷದಲ್ಲಿ ಆಗಿದೆ ಎನ್ನುವುದು ಅಚ್ಚರಿಯ ವಿಷಯ.


ಇದನ್ನೂ ಓದಿ:  Kodagu: ಸೋರುತಿಹುದು ಕೊಡಗಿನ ನಾಲ್ಕುನಾಡು ಅರಮನೆಯ ಮಾಳಿಗೆ


ಆರ್ಥಿಕ ಸಂಕಷ್ಟದಲ್ಲಿರುವ ವಿನಯ್

top videos


    2016 ರಲ್ಲಿ ನಡೆದ ಅಪಘಾತದಲ್ಲಿ ಜೀವನ್ಮರಣದಲ್ಲಿರುವಂತೆ ಗಾಯಗೊಂಡಿದ್ದ ವಿನಯ್ ಈಗಲೂ ಹಿಂದಿನಂತೆಯೇ ವಿವಿಧ ಕಾಲೇಜು ಶಾಲೆಗಳಲ್ಲಿ ತಾತ್ಕಾಲಿಕವಾಗಿ ಹಾಕಿ ತರಬೇತಿ ನೀಡುತ್ತಿದ್ದಾರೆ. ದೇಹದಲ್ಲಿ ರಾಡುಗಳು ಇರುವುದರಿಂದ ಎನ್ಐಎಸ್ ತರಬೇತಿ ಪಡೆಯಬೇಕೆಂದಿದ್ದ ವಿನಯ್ ಕನಸ್ಸು ನುಚ್ಚು ನೂರಾಗಿದೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿನಯ್ ಬದುಕಿಗೆ ಈಗ ಶಾಶ್ವತದ ದುಡಿಮೆಯ ದಾರಿ ಬೇಕಾಗಿದೆ ಎನ್ನುತ್ತಾರೆ ಕೋಚ್ ರಮೇಶ್.

    First published: