ನುಸುಳುಕೋರರ ತಾಣವಾದ ವೀರಪ್ಪನ್ ಕಾರ್ಯಕ್ಷೇತ್ರ ಮಹದೇಶ್ವರ ಬೆಟ್ಟ

ಮಹದೇಶ್ವರಬೆಟ್ಟದ ಸುತ್ತಮುತ್ತಲ ನಿವಾಸಿಗಳು ಸಹ ಕಾಡುದಾರಿಗಳ ಮೂಲಕ ತಮಿಳುನಾಡಿಗೆ ಹೋಗಿಬರುತ್ತಿದ್ದಾರೆ. ಪಾಲಾರ್ ನದಿಯ ಪಕ್ಕದಲ್ಲೇ ಚೆಕ್ ಪೋಸ್ಟ್ ಇದ್ದರೂ ಪೊಲೀಸರ ಕಣ್ತಪ್ಪಿಸಿ ಓಡಾಟ ನಡೆಸಲಾಗುತ್ತಿದೆ.

news18-kannada
Updated:May 23, 2020, 7:01 AM IST
ನುಸುಳುಕೋರರ ತಾಣವಾದ ವೀರಪ್ಪನ್ ಕಾರ್ಯಕ್ಷೇತ್ರ ಮಹದೇಶ್ವರ ಬೆಟ್ಟ
ಪ್ರಾತಿನಿಧಿಕ ಚಿತ್ರ
  • Share this:
ಚಾಮರಾಜನಗರ (ಮೇ. 23): ಕೊರೋನಾ ಪ್ರಕರಣಗಳ ಸಂಖ್ಯೆ ಅತ್ಯಧಿಕವಾಗಿರುವ ರಾಜ್ಯಗಳಲ್ಲಿ ಒಂದಾದ ತಮಿಳುನಾಡಿನಿಂದ ಕರ್ನಾಟಕಕ್ಕೆ  ಬರುವವರಿಗೆ ಪ್ರವೇಶ ನಿಷೇಧ ಹೇರಿರುವುದರಿಂದ ತಮಿಳರು ಗಡಿಭಾಗದಲ್ಲಿ ಕಾಡಿನ ಅಡ್ಡದಾರಿಗಳ ಮೂಲಕ ನುಸುಳತೊಡಗಿದ್ದಾರೆ. ತಮಿಳುನಾಡಿನಲ್ಲಿ ಕೊರೊನಾ ಪ್ರಕರಣಗಳೂ ಹೆಚ್ಚಾಗಿರುವುದರಿಂದ ಅಲ್ಲಿಂದ ಬರುವವರನ್ನು ಚಾಮರಾಜನಗರ ಜಿಲ್ಲೆಯ ಪಾಲಾರ್ ಚೆಕ್ ಪೋಸ್ಟ್ ನಲ್ಲೇ ತಡೆದು ವಾಪಸ್ ಕಳುಹಿಸಲಾಗುತ್ತಿದೆ. ಹಾಗಾಗಿ, ತಮಿಳುನಾಡಿನ ಧರ್ಮಪುರಿ, ಮೆಟ್ಟೂರು ಮೊದಲಾದ ಕಡೆಯಿಂದ ಬರುವವರು ಕಾಡುಗಳ್ಳ ವೀರಪ್ಪನ್ ಕಾರ್ಯಕ್ಷೇತ್ರವಾಗಿದ್ದ ಮಹದೇಶ್ವರ ಬೆಟ್ಟ ಅರಣ್ಯದಲ್ಲಿ ಪಾಲಾರ್ ಹಳ್ಳ ದಾಟಿ ಬರತೊಡಗಿದ್ದಾರೆ.

ಹಾಗೆಯೇ, ಮಹದೇಶ್ವರಬೆಟ್ಟದ ಸುತ್ತಮುತ್ತಲ ನಿವಾಸಿಗಳು ಸಹ ಕಾಡುದಾರಿಗಳ ಮೂಲಕ ತಮಿಳುನಾಡಿಗೆ ಹೋಗಿಬರುತ್ತಿದ್ದಾರೆ. ಪಾಲಾರ್ ನದಿಯ ಪಕ್ಕದಲ್ಲೇ ಚೆಕ್ ಪೋಸ್ಟ್ ಇದ್ದರೂ ಪೊಲೀಸರ ಕಣ್ತಪ್ಪಿಸಿ ಓಡಾಟ ನಡೆಸಲಾಗುತ್ತಿದೆ. ವ್ಯಾಪಾರ, ವಹಿವಾಟು, ಆಸ್ಪತ್ರೆ ಮೊದಲಾದ ಕೆಲಸಗಳಿಗೆ ಕಾಡುದಾರಿಗಳ ಮೂಲಕ ಎರಡೂ ಕಡೆಯಿಂದ ನುಸುಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ, ಅಕ್ರಮ ನುಸುಳುವಿಕೆಯನ್ನು  ತಡೆಗಟ್ಟಲು ನಿರಂತರವಾಗಿ ಗಸ್ತು ನಡೆಸಲು ಅರಣ್ಯ ಇಲಾಖೆಗೆ ಸೂಚಿಸಲಾಗಿದೆ. ಅಡ್ಡದಾರಿಗಳ ಮೂಲಕ ಬರುವುದನ್ನು ತಡೆಗಟ್ಟಲು ಪೊಲೀಸ್, ಕಂದಾಯ ಹಾಗೂ ಅರಣ್ಯ ಇಲಾಖೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಯಾರೇ ಹೊಸಬರು ಬಂದರೂ ತಕ್ಷಣ ಮಾಹಿತಿ ನೀಡುವಂತೆ ಗ್ರಾಮಕಾರ್ಯಪಡೆಗಳಿಗೂ ಸೂಚಿಸಲಾಗಿದ್ದು ಅಂತರಾಜ್ಯಗಳಿಂದ ಬರುವವರನ್ನು ಕಡ್ಡಾಯವಾಗಿ ಕ್ವಾರಂಟೈನ್ ಗೆ ಒಳಪಡಿಸಲಾಗುವುದು  ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Sunday Lockdown: ಬೆಂಗಳೂರಲ್ಲಿ ಭಾನುವಾರ ಏನಿರುತ್ತೆ, ಏನಿರಲ್ಲ?; ಇಲ್ಲಿದೆ ಸಂಪೂರ್ಣ ಮಾಹಿತಿ

ಇದೇ ವಿಷಯಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ ಕುಮಾರ್  ತಮಿಳುನಾಡಿನಿಂದ ಬರಲು ಅನುಮತಿ ನೀಡದ ಹಿನ್ನಲೆಯಲ್ಲಿ ಕೆಲವರು ಕಾಡುದಾರಿಗಳ ಮೂಲಕ ಬರುತ್ತಿರುವ ಬಗ್ಗೆ ಮಾಹಿತಿ ಇದೆ. ಹೀಗೆ ಅಡ್ಡದಾರಿ ಮೂಲಕ ಹಾಗೂ ಅನುಮತಿ ಇಲ್ಲದೆ ಬೇರೆಬೇರೆ ದಾರಿಗಳ ಮೂಲಕ ಬಂದಿರುವ 111 ಮಂದಿಯನ್ನು  ಕ್ವಾರಂಟೈನ್ ಗೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಮುಂಬೈನಿಂದ ವಾಪಸ್ ಬಂದ ಯುವಕನ ವರದಿ ನೆಗಟಿವ್:
ಬೆಂಗಳೂರಿನ ಹೋಟೆಲ್ ಒಂದರಲ್ಲಿ  ಕೆಲಸ ಮಾಡುತ್ತಾ ತನ್ನ ಮಾಲೀಕನ ಜೊತೆ ಮುಂಬೈಗೆ ಹೋಗಿದ್ದ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೋಕಿನ ಬಲಚವಾಡಿ ಗ್ರಾಮದ ಯುವಕನ ವರದಿ ನೆಗೆಟಿವ್ ಬಂದಿದ್ದು ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಈತ ಮುಂಬೈನಿಂದ ಬೆಂಗಳೂರು ಮಾರ್ಗವಾಗಿ ಚೆಕ್ ಪೋಸ್ಟ್ ಕಣ್ತಪ್ಪಿಸಿ ಚಾಮರಾಜನಗರ ಜಿಲ್ಲೆಗೆ  ವಾಪಸ್ ಬರುವಾಗ ಸಿಕ್ಕಿಬಿದ್ದು ಕ್ವಾರಂಟೈನ್ ಗೆ ಒಳಗಾಗಿದ್ದ.ಅತಿಹೆಚ್ಚು ಕೊರೊನಾ ಪ್ರಕರಣಗಳು ಇರುವ ರಾಜ್ಯದಿಂದ ಬಂದಿದ್ದರಿಂದ ಈ ಯುವಕನನ್ನು ಚಾಮರಾಜನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. ಈತನ ಗಂಟಲುದ್ರವ ಹಾಗು ರಕ್ತಮಾದರಿ ಪರೀಕ್ಷೆ ನಡೆಸಲಾಗಿದ್ದು, ನೆಗೆಟಿವ್ ಬಂದಿದ್ದು ನಂತರ ಕ್ವಾರಂಟೈನ್ ನಿಂದ ಬಿಡುಗಡೆ ಮಾಡಲಾಗಿದೆ ಎಂದು ಗುಂಡ್ಲುಪೇಟೆ ತಾಲೋಕು  ಆರೋಗ್ಯಾಧಿಕಾರಿ  ಡಾ. ರವಿಕುಮಾರ್ ತಿಳಿಸಿದ್ದಾರೆ.
First published: May 23, 2020, 7:01 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading