ಫ್ರೀ ಕಾಶ್ಮೀರ ನಾಮಫಲಕ ವಿವಾದ; ನಳಿನಿ ಪರ ವಾದ ಮಂಡಿಸಲು ಮೈಸೂರು ವಕೀಲರ ನಿರ್ಧಾರ

ಆರೋಪಿ ನಳಿನಿ ಪರವಾಗಿ ವಕಾಲತ್ತು ವಹಿಸದಿರಲು ಮೈಸೂರಿನ ವಕೀಲರು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ನಳಿನಿ ಪರ ಬೆಂಗಳೂರಿನ ವಕೀಲರು ವಕಾಲತ್ತು ವಹಿಸಲು ಮುಂದಾಗಿದ್ದರು.

ನಳಿನಿ ಬಾಲಕುಮಾರ್

ನಳಿನಿ ಬಾಲಕುಮಾರ್

  • Share this:
ಮೈಸೂರು (ಜ. 20): ಜೆಎನ್​ಯುನಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ಮೈಸೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ 'ಫ್ರೀ ಕಾಶ್ಮೀರ' ನಾಮಫಲಕ ಪ್ರದರ್ಶಿಸಿದ್ದ ನಳಿನಿ ಪರ ವಕಾಲತ್ತು ವಹಿಸಲು ಇದೀಗ ಮೈಸೂರಿನ ವಕೀಲರು ಕೂಡ ಮುಂದೆ ಬಂದಿದ್ದಾರೆ.

ಜೆಎನ್​ಯು ಹಿಂಸಾಚಾರವನ್ನು ಖಂಡಿಸಿ ಕೆಲ ದಿನಗಳ ಹಿಂದೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ನಡೆದಿತ್ತು. ಈ ವೇಳೆ 'ಫ್ರೀ ಕಾಶ್ಮೀರ' ನಾಮಫಲಕ ಪ್ರದರ್ಶಿಸಿದ್ದ ನಳಿನಿ ಎಂಬ ಯುವತಿ ವಿರುದ್ಧ ಕೇಸು ದಾಖಲಾಗಿತ್ತು. ನಳಿನಿ ಪರವಾಗಿ ವಕಾಲತ್ತು ವಹಿಸದಿರಲು ಮೈಸೂರಿನ ವಕೀಲರು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ನಳಿನಿ ಪರ ಬೆಂಗಳೂರಿನ ವಕೀಲರು ವಕಾಲತ್ತು ವಹಿಸಲು ಮುಂದಾಗಿದ್ದರು. ಆದರೆ, ಇದೀಗ ಮತ್ತೆ ತಮ್ಮ ನಿರ್ಧಾರ ಬದಲಾಯಿಸಿರುವ ಮೈಸೂರಿನ ವಕೀಲರು ತಮ್ಮ ಸಂಘದ ನಿರ್ಧಾರವನ್ನು ವಿರೋಧಿಸಿ, ನಳಿನಿ ಪರ ವಕಾಲತ್ತು ವಹಿಸಲು ನಿರ್ಧರಿಸಿದ್ದಾರೆ.

ಫ್ರೀ ಕಾಶ್ಮೀರ ಪೋಸ್ಟರ್ ಪ್ರದರ್ಶಿಸಿದ ಯುವತಿ ಪರವಾಗಿ ಮೈಸೂರಿನ ಯಾವ ವಕೀಲರೂ ವಕಾಲತ್ತು ವಹಿಸಬಾರದು. ಈ ಹಿಂದೆ ಕೂಡ ಇಂತಹ ಪ್ರಕರಣಗಳಲ್ಲಿ ಆರೋಪಿ ಪರ ಯಾರೂ ವಕಾಲತ್ತು ವಹಿಸಿಲ್ಲ. ಶಂಕಿತ ಉಗ್ರರಾದ ಫಹಾದ್ ಮತ್ತು ಅಲಿ ಪ್ರಕರಣದಲ್ಲೂ ವಕಾಲತ್ತು ವಹಿಸಿಲ್ಲ. ಈ ಬಾರಿಯೂ ಇದೇ ದಿಟ್ಟ ನಿರ್ಣಯ ಕೈಗೊಳ್ಳಿ. ಈ ಮೂಲಕ ಸಂಘದ ಗೌರವ ಕಾಪಾಡಿ ಎಂದು ಯುವ ವಕೀಲರು ಮೈಸೂರಿನ ವಕೀಲರ ಸಂಘದ ಅಧ್ಯಕ್ಷ ಆನಂದ ಕುಮಾರ್​ಗೆ ಮನವಿ ಮಾಡಿದ್ದರು.ಈ ಹಿನ್ನೆಲೆಯಲ್ಲಿ ಯುವತಿ ನಳಿನಿ ಪರ ವಕೀಲರು ವಕಾಲತ್ತು ಹಿಂಪಡೆಯಲು ನಿರ್ಧಾರ ಮಾಡಿದ್ದರು.

ಇದನ್ನೂ ಓದಿ: ಪಕ್ಷಾಂತರ ಮಾಡಿದ 17 ಶಾಸಕರು ಅಂತರ್ ಪಿಶಾಚಿಯಾಗಿದ್ದಾರೆ; ಸಿದ್ದರಾಮಯ್ಯ ಲೇವಡಿ

ಈ ಕುರಿತು ಇಂದು ಬೆಳಗ್ಗೆ ಮೈಸೂರು ವಕೀಲರ ಸಂಘದ ಸಭೆ ನಡೆದಿದ್ದು, ಸಂಘದ ನಿರ್ಣಯಕ್ಕೆ ಬದ್ಧರಾಗಿರಲು ನಿರ್ಧರಿಸಿದ್ದರು. ಎಲ್ಲದಕ್ಕಿಂತ ದೇಶದ ಭದ್ರತೆ ಮುಖ್ಯವಾಗಿರುವುದರಿಂದ ಈ ಪ್ರಕರಣದ ಪರ ವಕಾಲತು ವಹಿಸದಂತೆ ಬೇರೆ ಜಿಲ್ಲೆಗಳ ವಕೀಲರಿಗೂ ಮನವಿ ಮಾಡಲು ನಿರ್ಧರಿಸಲಾಗಿತ್ತು. ಆದರೀಗ, ಮೈಸೂರಿನ ಕೆಲವು ವಕೀಲರೇ ತಮ್ಮ ಸಂಘದ ನಿರ್ಧಾರವನ್ನು ಉಲ್ಲಂಘಿಸಿ, ನಳಿನಿ ಪರ ವಕಾಲತ್ತು ವಹಿಸಲು ಸಿದ್ಧರಿರುವುದಾಗಿ ಸಹಿ ಹಾಕಿ, ಅರ್ಜಿ ಸಲ್ಲಿಸಿದ್ದಾರೆ.

ವಕೀಲರ ಸಂಘದ ನಿರ್ಣಯದ ವಿರುದ್ಧವೇ ನಿಲ್ಲಲು ನಿರ್ಧರಿಸಿರುವ ಮೈಸೂರಿನ ಸುಮಾರು 150 ವಕೀಲರಿಂದ ನಳಿನಿ ಪರ ವಕಾಲತ್ತಿಗೆ ಅರ್ಜಿ ಸಲ್ಲಿಕೆಯಾಗಿದೆ. ನಳಿನಿಗೆ ಜಾಮೀನು ಕೊಡಿಸಲು ಮೈಸೂರಿನ ವಕೀಲರು ಅರ್ಜಿ ಸಲ್ಲಿಸಿದ್ದಾರೆ. ನಿರ್ಣಯ ಉಲ್ಲಂಘಿಸಿದರೆ ಏನು ಮಾಡುತ್ತೇವೆಂದು ವಕೀಲರ ಸಂಘದವರು ಹೇಳಿಲ್ಲ. ವೃತ್ತಿಧರ್ಮದ ದೃಷ್ಟಿಯಿಂದ ವಕಾಲತ್ತು ವಹಿಸಲು ನಿರ್ಧರಿಸಿದ್ದೇವೆ. ನಮ್ಮ ವಿರುದ್ಧ ಕ್ರಮ ಕೈಗೊಂಡರೆ ಅದು ಏಕಪಕ್ಷೀಯ ನಿರ್ಧಾರವಾಗಿರುತ್ತದೆ ಎಂದು ಮೈಸೂರಿನ ವಕೀಲೆ ಮಂಜುಳಾ ಮಾನಸ ಮಾಹಿತಿ ನೀಡಿದ್ದಾರೆ.

ಏನಿದು ಘಟನೆ?:

ಜನವರಿ 8 ಸಂಜೆ ಮೈಸೂರಿನಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಮೈಸೂರು ವಿವಿಯ ಹಳೆಯ ವಿದ್ಯಾರ್ಥಿನಿ ನಳಿನಿ ಬಾಲಕುಮಾರ್ ಭಾಗಿಯಾಗಿ 'ಫ್ರೀ ಕಾಶ್ಮೀರ' ನಾಮಫಲಕ ಪ್ರದರ್ಶನ ಮಾಡಿದ್ದರು. ಜನವರಿ 9ರಂದು ಇದು ದೇಶಾದ್ಯಂತ ಸುದ್ದಿಯಾಗಿ ಜಯಲಕ್ಷೀಪುರಂ ಪೊಲೀಸ್ ಠಾಣೆಯಲ್ಲಿ ದೇಶದ್ರೋಹದ ಕೇಸ್ ದಾಖಲಾಗಿತ್ತು. ರಾಜ್ಯಪಾಲರು ಸಹ ಮಧ್ಯಪ್ರವೇಶ ಮಾಡಿ ಮೈಸೂರು ವಿವಿಯಿಂದ ವರದಿ ಕೇಳಿದ್ದರು. ಈ ಪ್ರಕರಣದ ಗಂಭೀರತೆಯನ್ನು ಅರಿತ ನಳಿನಿ ನೇರವಾಗಿ ಮೈಸೂರು ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯದಲ್ಲಿ ಪೃಥ್ವಿ ಕಿರಣ್ ಶೆಟ್ಟಿ ಮೂಲಕ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ನಳಿನಿ ಮನವಿ ಪುರಸ್ಕರಿಸಿದ ನ್ಯಾಯಾಲಯ 1 ಲಕ್ಷ ಶ್ಯೂರಿಟಿಯೊಂದಿಗೆ ಷರತ್ತುಬದ್ದ ಜಾಮೀನು ಮಂಜೂರು ಮಾಡಿತ್ತು.

ಇದನ್ನೂ ಓದಿ: ಫ್ರೀ ಕಾಶ್ಮೀರ ನಾಮಫಲಕ ಪ್ರದರ್ಶನ ಪ್ರಕರಣ; ನಳಿನಿ ಪರ ಬೆಂಗಳೂರು ವಕೀಲರಿಂದ ವಕಾಲತ್ತು

ಮೈಸೂರು ವಕೀಲರು ನಳಿನಿ ಪರ ವಾದ ಮಂಡಿಸಲು ಮುಂದೆ ಬಾರದ ಕಾರಣ ನಳಿನಿ, ಮರಿದೇವಯ್ಯ ಪರ ಬೆಂಗಳೂರಿನ ವಕೀಲ ಜಗದೀಶ್ ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣ ನ್ಯಾಯಾಲಯದಲ್ಲಿ ತೀರ್ಮಾನವಾಗಲಿ. ತಪ್ಪಿತಸ್ಥರಾದರೆ ನಳಿನಿಗೆ ಶಿಕ್ಷೆಯಾಗಲಿ. ತಪ್ಪಿತಸ್ಥರಲ್ಲದಿದ್ದರೆ ಆಕೆಗೆ ನ್ಯಾಯ ಸಿಗಲಿ. ಈ ವಿಚಾರದಲ್ಲಿ ಮೈಸೂರು ವಕೀಲರ ಸಂಘದ ನಿರ್ಧಾರ ಅವರಿಗೆ ಬಿಟ್ಟಿದ್ದು. ಮೈಸೂರು ವಕೀಲರು ಮತ್ತು ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಮ್ಮ ಕರ್ತವ್ಯವನ್ನು ನಾವು ನಿರ್ವಹಿಸುತ್ತಿದ್ದೇವೆ ಎಂದು ನಳಿನಿ ಪರ ವಕೀಲ ಜಗದೀಶ್ ಹೇಳಿಕೆ ನೀಡಿದ್ದರು.
First published: