ದಶಕಗಳ ಕೂಗಿಗೆ ಕಡೆಗೂ ಕಾಯಕಲ್ಪ: ಸಾಗರ ತಾಲೂಕಿನ ಸಿಂಗದೂರು ಸೇತುವೆ ಕಾಮಗಾರಿ ಆರಂಭ

ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು 2.42 ಕಿ.ಮೀ ಉದ್ದದ ಸೇತುವೆ ನಿರ್ಮಾಣ ಕಾರ್ಯ ಆರಂಭವಾಗಿದೆ. ಹಿನ್ನೀರಿನ ಎರಡೂ ದಡಗಳಲ್ಲಿ ಸೇತುವೆಗೆ ಪೂರಕ ರಸ್ತೆ ನಿರ್ಮಾಣ ಕೂಡ ಮಾಡಲಾಗುತ್ತಿದೆ

Seema.R | news18-kannada
Updated:January 24, 2020, 6:12 PM IST
ದಶಕಗಳ ಕೂಗಿಗೆ ಕಡೆಗೂ ಕಾಯಕಲ್ಪ: ಸಾಗರ ತಾಲೂಕಿನ ಸಿಂಗದೂರು ಸೇತುವೆ ಕಾಮಗಾರಿ ಆರಂಭ
ಸೇತುವೆ ನಿರ್ಮಾಣ ಕಾರ್ಯಾರಂಭದ ಚಿತ್ರಣ
  • Share this:
ಶಿವಮೊಗ್ಗ (ಜ.24): ಬಹುದಿನಗಳ ಬೇಡಿಕೆಯಾಗಿದ್ದ ಶರಾವತಿ ಹಿನ್ನೀರಿನ ಸಿಂಗದೂರಿನ ಸೇತುವೆ ನಿರ್ಮಾಣ ಕಾಮಾಗಾರಿ ಆರಂಭವಾಗಿದ್ದು,  ಇಲ್ಲಿನ ಜನರಲ್ಲಿ ಸಂತಸ ಮೂಡಿದೆ. ಸಾಗರ ತಾಲ್ಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ನಡುವೆ ಸೇತುವೆ ನಿರ್ಮಾಣಕ್ಕೆ ಕೇಂದ್ರ ಒಪ್ಪಿಗೆ ನೀಡುತ್ತಿದ್ದಂತೆ ಕಾಮಗಾರಿ ಕೂಡ ಪ್ರಾರಂಭವಾಗಿದೆ. 

ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು 2.42 ಕಿ.ಮೀ ಉದ್ದದ ಸೇತುವೆ ನಿರ್ಮಾಣ ಕಾರ್ಯ ಆರಂಭವಾಗಿದೆ. ಹಿನ್ನೀರಿನ ಎರಡೂ ದಡಗಳಲ್ಲಿ ಸೇತುವೆಗೆ ಪೂರಕ ರಸ್ತೆ ನಿರ್ಮಾಣ ಕೂಡ ಮಾಡಲಾಗುತ್ತಿದೆ. ಇನ್ನು ಈ ಕಾಮಾಗರಿಯನ್ನು ಮಧ್ಯಪ್ರದೇಶ ಮೂಲದ ದಿಲೀಪ್ ಬಿಲ್ಡ್ ಕಾನ್ ಕಂಪನಿಯು ಗುತ್ತಿಗೆ ಪಡೆದಿದೆ.

24 ಪಿಲ್ಲರ್​ಗಳನ್ನು ಬಳಸಿ ಈ ಸೇತುವೆ ನಿರ್ಮಾಣ ಮಾಡುತ್ತಿದ್ದು, ಆರು ಪಿಲ್ಲರ್​ಗಳು ನೀರಿನಲ್ಲಿ ಬರಲಿದೆ. ಸದ್ಯ ಪ್ರಾರಂಭಿಕ ಹಂತದ ಕಾರ್ಯ ಆರಂಭವಾಗಿರುವ ಹಿನ್ನೆಲೆ ಕೇವಲ ಕಾಮಗಾರಿಯ ರೂಪುರೇಷೆ ಸಿದ್ದವಾಗಿದ್ದು, ಇನ್ನು 36 ತಿಂಗಳೊಳಗೆ ಈ ಸೇತುವೆ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ತುಮರಿ ಗ್ರಾಮಪಂಚಾಯತಿ ಅಧ್ಯಕ್ಷ ಜಿಟಿ ಸತ್ಯನಾರಾಯಣ ತಿಳಿಸಿದ್ದಾರೆ.

ಹೇಗಿರಲಿದೆ ಲಾಂಚ್​ ವ್ಯವಸ್ಥೆ?:

ಅಂಬಾರಗೋಡ್ಲು-ಕಳಸವಳ್ಳಿ ಮಾರ್ಗದಲ್ಲಿ ಸಂಚರಿಸುವ ಜನರಿಗೆ ಇಲ್ಲಿನ ಲಾಂಚ್​ ಒಂದೇ ಏಕೈಕ ಮಾರ್ಗ. ಸದ್ಯ ಮಾಮೂಲಿಯಂತೆ ಈ ಲಾಂಚ್​ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಈ ಸೇವೆಯಲ್ಲಿ ವ್ಯತ್ಯಾಸವಾಗಬಹುದು. ಸದ್ಯ ಎರಡು ಲಾಂಚ್​ಗಳು ಕಾರ್ಯನಿರ್ವಹಿಸುತ್ತಿದ್ದು, ಕಾಮಗಾರಿಗೆ ಅಡಚಣೆಯುಂಟಾದಲ್ಲಿ ಲಾಂಚ್​ ನಿಲ್ದಾಣಕ್ಕೆ ಬೇರೆ ಮಾರ್ಗ ತೆರೆಯಲಾಗುವುದು. ಇಲ್ಲವಾದಲ್ಲಿ ಪ್ರವಾಸಿಗರ ವಾಹನಕ್ಕೆ ಅವಕಾಶ ನೀಡದೇ ಜನರ ಓಡಾಟಕ್ಕೆ ಮಾತ್ರ ಲಾಂಚ್​ ಬಳಸಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಸತ್ಯನಾರಾಯಣ ಮಾಹಿತಿ ನೀಡಿದ್ದಾರೆ.ನಿತಿನ್​ ಗಡ್ಕರಿ ಚಾಲನೆ:ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಸಮಯದಿಂದಲೂ ಈ ಮಾರ್ಗಕ್ಕೆ ಸೇತುವೆ ನಿರ್ಮಾಣದ ಕೂಗು ಕೇಳಿ ಬಂದಿತ್ತು. ಆದರೆ, ಈ ಕಾರ್ಯ ನೆನೆಗುದಿಗೆ ಬಿದ್ದ ಪರಿಣಾಮ ಜನ ಲಾಂಚ್​ ಮೂಲಕವೇ ಓಡಾಟ ನಡೆಸುತ್ತಿದ್ದಾರೆ. ಕಳೆದ ವರ್ಷ ಇಲ್ಲಿ ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿತ್ತು. ಈ ಕಾರ್ಯಕ್ಕೆ ಕೇಂದ್ರ ರಸ್ತೆ ಹೆದ್ದಾರಿ ಸಚಿವ ನಿತಿನ್​ ಗಡ್ಕರಿ ಚಾಲನೆ ನೀಡಿದರು. ಸದ್ಯ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ ಕಾಮಗಾರಿ ಕಾರ್ಯಾರಂಭವಾಗಿದೆ.

ಪ್ರವಾಸಿಗರಿಗೆ ಅನುಕೂಲ:

ಸಾಗರದಲ್ಲಿನ ತುಮರಿ ಪಂಚಾಯತಿ ವ್ಯಾಪ್ತಿಯ ಇಲ್ಲಿನ ಸಿಂಗದೂರು ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆ ಕೂಡ ಹೆಚ್ಚು. ಈ ಪ್ರದೇಶಕ್ಕೆ ಅಂಬಾರಗೊಡ್ಲು ಮಾರ್ಗದ ಹಿನ್ನೀರನ ಮೂಲಕ  ಕಳಸವಳ್ಳಿಗೆ ತೆರಳಬೇಕಾಗಿದ್ದು, ಇದು ಪ್ರಯಾಸದಾಯಕವಾಗಿತ್ತು. ಇದನ್ನು ಬಿಟ್ಟರೆ ಜೋಗದ ಮೇಲಿಂದ ಬಳಸಿ ಈ ಮಾರ್ಗ ತಲುಪಬೇಕಿತ್ತು.

ಈಗ ಈ ಸೇತುವೆ ನಿರ್ಮಾಣದಿಂದ ಜನರ ತೊಂದರೆ ಪಡುವುದು ತಪ್ಪಲಿದ್ದು, ಜನರ ಬಹುದಿನದ ಕನಸು ನನಸಾಗಲಿದೆ. ಜೊತೆಗೆ ಕೊಲ್ಲೂರು ಮತ್ತು ಉಡುಪಿಗೆ ಸಂಪರ್ಕ ಕಲ್ಪಿಸುವ ಮಾರ್ಗ ಇನ್ನಷ್ಟು ಹತ್ತಿರ ಕೂಡ ಆಗಲಿದೆ.

ಇದನ್ನು ಓದಿ: ಸಾಮೂಹಿಕ ನಕಲಿನಿಂದ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಹಾಸನಕ್ಕೆ ಮೊದಲ ಸ್ಥಾನ; ರಹಸ್ಯ ಬಿಚ್ಚಿಟ್ಟ ನೊಂದ ಶಿಕ್ಷಕ

ಪ್ರವಾಸೋದ್ಯಮಕ್ಕೆ ಉತ್ತೇಜನ:

ಸಿಂಗದೂರು ಚೌಡೇಶ್ವರಿ ಕ್ಷೇತ್ರ ಈಗಾಗಲೇ ಖ್ಯಾತಿ ಪಡೆದಿದ್ದು, ರಾಜ್ಯ ಹೊರ ರಾಜ್ಯಗಳಿಂದಲೂ ಇಲ್ಲಿಗೆ ಭಕ್ತರು ಆಗಮಿಸುತ್ತಾರೆ. ಸೇತುವೆ ನಿರ್ಮಾಣದಿಂದ ಭಕ್ತರ ಸಂಖ್ಯೆ ಕೂಡ ಹೆಚ್ಚಲಿದೆ. ಇನ್ನು ಇಲ್ಲಿಂದ ಕೊಲ್ಲೂರು, ಉಡುಪಿ ಜಿಲ್ಲೆ ಮಾರ್ಗ ಕೂಡ ಹತ್ತಿರವಾಗುವುದರಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶ ದೊರೆಯುವ ಸಾಧ್ಯತೆ ಇದೆ.

 
First published:January 24, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ