ಹುಬ್ಬಳ್ಳಿ(ಜ.27): ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು ಅನ್ನೋ ಮಾತಿದೆ. ಕೆಲವರು ಮಕ್ಕಳಿದ್ದಾಗಲೇ ತಮ್ಮಲ್ಲಿದ್ದ ಅಗಾಧ ಪ್ರತಿಭೆಯನ್ನು ಹೊರಹಾಕಿ ಗಮನ ಸೆಳೆಯುತ್ತಾರೆ. ಇದೀಗ ಬಾಲಕನೋರ್ವ ಮೂವ್ವರ ಪ್ರಾಣ ರಕ್ಷಣೆ ಮಾಡಿ, ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೂ ಭಾಜನನಾಗಿದ್ದಾನೆ. ಆತನ ಸಾಧನೆಗೆ ಉತ್ತರ ಕರ್ನಾಟಕದ ಜನತೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೀರೆಂದರೆ ಹೆದರುತ್ತಿದ್ದ ಈ ಬಾಲಕ ಅದೇ ನೀರಿನೊಳಗೆ ಜಿಗಿದು ಮೂವರ ಪ್ರಾಣ ರಕ್ಷಣೆ ಮಾಡಿದ ಘಟನೆ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿಲ್ಲ.
ಹುಬ್ಬಳ್ಳಿಯ ಹುಡುಗನಿಗೆ ರಾಷ್ಟ್ರ ಪ್ರಶಸ್ತಿ ಒಲಿದು ಬಂದಿದೆ. ಹುಬ್ಬಳ್ಳಿಯ ಕಾನೂನು ವಿದ್ಯಾರ್ಥಿ ಆದಿತ್ಯ ಶಿವಳ್ಳಿ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಭಾರತೀಯ ಮಕ್ಕಳ ಕಲ್ಯಾಣ ಪರಿಷತ್ ನಿಂದ ದೆಹಲಿಯಲ್ಲಿ ಶೌರ್ಯ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಕಾರವಾರ ಜಿಲ್ಲೆ ಶಿರಸಿ ಬಳಿಯ ಮೋರೆಗಾರ ಫಾಲ್ಸ್ ನಲ್ಲಿ ಮೂವರನ್ನು ರಕ್ಷಿಸಿದ್ದ ಆದಿತ್ಯಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಇದನ್ನೂ ಓದಿ: Hubballi News: ಹುಬ್ಬಳ್ಳಿಯಲ್ಲಿ ಮೆಣಸಿನಕಾಯಿ ಮೇಳ, ಉತ್ತರ ಕರ್ನಾಟಕ ಭಾಗದ ರೈತರಲ್ಲಿ ಹೆಚ್ಚಿದ ನಿರೀಕ್ಷೆ
ಶೌರ್ಯ ಪ್ರಶಸ್ತಿ ಪಡೆದ ಆದಿತ್ಯ ಹುಬ್ಬಳ್ಳಿಗೆ ಆಗಮಿಸಿದ್ದು, ಕುಟುಂಬದ ಸದಸ್ಯರು ಆತ್ಮೀಯತೆಯಿಂದ ಬರಮಾಡಿಕೊಂಡಿದ್ದಾರೆ. ನಿನ್ನೆ ದೆಹಲಿಯ ಹೆಬಿಟೆಟ್ ಸೆಂಟರ್ ನಲ್ಲಿ ಆದಿತ್ಯ ಪ್ರಶಸ್ತಿ ಸ್ವೀಕರಿಸಿದ್ದಾನೆ. ಶಿರಸಿ ಬಳಿ ಮೊರೇಗಾರ ಫಾಲ್ಸ್ ನಲ್ಲಿ ನೀರು ಪಾಲಾಗುತ್ತಿದ್ದವರನ್ನು ಆದಿತ್ಯ ರಕ್ಷಣೆ ಮಾಡಿದ್ದ.
2020ರ ಜನವರಿ 15 ರಂದು ಸಂಕ್ರಾಂತಿಯ ಹಿನ್ನೆಲೆಯಲ್ಲಿ ಆದಿತ್ಯ ಮತ್ತು ಕುಟುಂಬದ ಸದಸ್ಯರು ಫಾಲ್ಸ್ ವೀಕ್ಷಣೆಗೆಂದು ಹೋಗಿದ್ದರು. ಈ ವೇಳೆ ಓರ್ವ ಬಾಲಕ, ಮತ್ತೋರ್ವ ವ್ಯಕ್ತಿ ನೀರಿನಲ್ಲಿ ಜಾರಿ ಕೊಚ್ಚಿಕೊಂಡು ಹೋಗುತ್ತಿದ್ದುದನ್ನು ನೋಡಿ ರಕ್ಷಿಸಿದ್ದ. ಅದೇ ವೇಳೆ ಮತ್ತೋರ್ವ ವ್ಯಕ್ತಿಯೂ ಜಲಸಮಾಧಿಯಾಗುತ್ತಿದ್ದುದನ್ನು ಗಮನಿಸಿ ರಕ್ಷಣೆ ಮಾಡಿದ್ದ. ಈ ಹಿನ್ನೆಲೆಯಲ್ಲಿ ಆದಿತ್ಯನ ಸಾಹಸ ಮೆಚ್ಚಿ ಶೌರ್ಯ ಪ್ರಶಸ್ತಿ ನೀಡಿ ಪುರಸ್ಕರಿಸಲಾಗಿದೆ.
ಕುಟುಂಬಸ್ಥರಲ್ಲಿ ಹರ್ಷ
ಪ್ರಶಸ್ತಿ ಸ್ವೀಕರಿಸಿದ ಆದಿತ್ಯ ಹರ್ಷ ವ್ಯಕ್ತಪಡಿಸಿದ್ದಾನೆ. ಸಂಕ್ರಾಂತಿ ಹಬ್ಬದ ಸವಿ ಸವಿಯೋಕೆ ಮೋರೆಗೆರೆ ಫಾಲ್ಸ್ ಗೆ ಹೋಗಿದ್ದೆವು. ಆ ವೇಳೆ ನನ್ನ ಕಣ್ಣಮುಂದೆಯೇ ನೀರಿನಲ್ಲಿ ಮುಳುಗಿ ಸಾಯುತ್ತಿದ್ದವರನ್ನು ರಕ್ಷಿಸಬೇಕೆಂದು ಜೀವದ ಹಂಗುದೊರೆದು ಜಿಗಿದೆ. ಕೊನೆಗೂ ಮೂವರನ್ನು ರಕ್ಷಿಸಿ ದಡ ಸೇರಿಸಿದ್ದೆ. ಅದರ ಫಲವಾಗಿ ಇಂದು ಶೌರ್ಯ ಪ್ರಶಸ್ತಿಗೆ ಪಾತ್ರವಾಗಿದ್ದು, ತುಂಬಾ ಖುಷಿಯಾಗುತ್ತಿದೆ ಎಂದು ಆದಿತ್ಯ ಸಂತಸ ವ್ಯಕ್ತಪಡಿಸಿದ್ದಾನೆ.
ಇದನ್ನೂ ಓದಿ: JOB News: ಅಮೆಜಾನ್ ಕಂಪನಿಯಲ್ಲಿ ಉದ್ಯೋಗ ಮಾಡಲು ಇಲ್ಲಿದೆ ಅವಕಾಶ! ಹುಬ್ಬಳ್ಳಿಯಲ್ಲಿ ಕೆಲಸ
ಮೂಲತಃ ಹುಬ್ಬಳ್ಳಿಯ ಸನ್ ಸಿಟಿ ನಿವಾಸಿಯಾಗಿರೋ ಆದಿತ್ಯ ಶಿವಳ್ಳಿ, ಕಾರವಾರ ಜಿಲ್ಲೆಗೆ ಪ್ರವಾಸಕ್ಕೆಂದು ಹೋಗಿದ್ದ ಸಂದರ್ಭದಲ್ಲಿ ಮೂವರನ್ನು ರಕ್ಷಿಸಿ ಜನ ಮೆಚ್ಚುಗೆಗೆ ಪಾತ್ರವಾಗಿದ್ದ. ಮಗನಿಗೆ ಪ್ರಶಸ್ತಿ ಸಿಕ್ಕಿದ್ದಕ್ಕೆ ತಂದೆ ಮಲ್ಲಿಕಾರ್ಜುನ ಶಿವಳ್ಳಿ ಸಂತಸ ವ್ಯಕ್ತಪಡಿಸಿದ್ದಾರೆ. ಈಗ ಪ್ರಶಸ್ತಿ ಸಿಕ್ಕಿದ್ದಕ್ಕಿಂತಲೂ ಆಗ ಮೂವರನ್ನು ರಕ್ಷಿಸಿದ್ದೇ ನಮಗೆ ದೊಡ್ಡ ಪ್ರಶಸ್ತಿ ಎಂದಿದ್ದಾರೆ. ಇದೇ ವೇಳೆ ಮಾತನಾಡಿದ ತಾಯಿ ಸುಜಾತಾ, ಮಗನಿಗೆ ನೀರು ಅಂದ್ರೆ ಭಯ ಇತ್ತು, ಹಾಗಾಗಿ ಈಜು ತರಬೇತಿಗೆ ಹಾಕಿದ್ದೆವು. ಇದೀಗ ಮಗ ಅದೇ ನೀರಿನಲ್ಲಿ ಮುಳುಗುತ್ತಿದ್ದವರನ್ನ ರಕ್ಷಣೆ ಮಾಡಿದ್ದ. ನಮ್ಮ ಮಗನ ಸಾಧನೆ ಬಗ್ಗೆ ನಮಗೆಲ್ಲಾ ಹೆಮ್ಮೆ ಎನಿಸುತ್ತಿದೆ ಎಂದರು.
ಪ್ರಶಸ್ತಿ ಸಿಕ್ಕಿದ್ದಕ್ಕಿಂತ ಮೂರು ಜನರ ಜೀವ ರಕ್ಷಣೆ ಮಾಡಿದ್ದು ದೊಡ್ಡ ಪ್ರಶಸ್ತಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾದರೆ. ದೆಹಲಿಯಿಂದ ಬಂದಿಳಿದ ಆದಿತ್ಯನನ್ನು ಕುಟುಂಬದ ಸದಸ್ಯರು ಆತ್ಮೀಯತೆಯಿಂದ ಬರಮಾಡಿಕೊಂಡಿದ್ದಾರೆ. ಆದಿತ್ಯ ಸಾಧನೆಗೆ ಉತ್ತರ ಕರ್ನಾಟಕದ ಜನರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ