HOME » NEWS » State » ADITYA ALVA BOLLYWOOD ACTOR VIVEK OBEROI BROTHER IN LAW ADITYA ALVA ARRESTED IN SANDALWOOD DRUG CASE SCT

Aditya Alva: ಸ್ಯಾಂಡಲ್​ವುಡ್​ ಡ್ರಗ್ ಕೇಸ್; ಮಾಜಿ ಸಚಿವರ ಮಗ ಆದಿತ್ಯ ಆಳ್ವ ಬಂಧನ

Sandalwood Drug Case: ಸ್ಯಾಂಡಲ್​ವುಡ್ ಡ್ರಗ್ ದಂಧೆಯ ಆರೋಪಿ ಆದಿತ್ಯ ಆಳ್ವನನ್ನು ಬಂಧಿಸಲಾಗಿದೆ. ಮಾಜಿ ಸಚಿವ ಜೀವರಾಜ್ ಆಳ್ವ ಅವರ ಮಗ ಹಾಗೂ ಬಾಲಿವುಡ್ ನಟ ವಿವೇಕ್ ಒಬೆರಾಯ್ ಬಾಮೈದನಾಗಿರುವ ಆದಿತ್ಯ ಆಳ್ವ ಬಂಧನದಿಂದ ಇನ್ನಷ್ಟು ಸೆಲೆಬ್ರಿಟಿಗಳಿಗೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.

news18-kannada
Updated:January 12, 2021, 8:28 AM IST
Aditya Alva: ಸ್ಯಾಂಡಲ್​ವುಡ್​ ಡ್ರಗ್ ಕೇಸ್; ಮಾಜಿ ಸಚಿವರ ಮಗ ಆದಿತ್ಯ ಆಳ್ವ ಬಂಧನ
ಆದಿತ್ಯ ಆಳ್ವ
  • Share this:
ಬೆಂಗಳೂರು (ಜ. 12): ಸ್ಯಾಂಡಲ್​ವುಡ್ ಡ್ರಗ್ ಕೇಸ್​ನಲ್ಲಿ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸಿಕ್ಕಿಹಾಕಿಕೊಂಡಿದ್ದರು. ಬಳಿಕ, ಸಂಜನಾ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದೀಗ ಈ ಕೇಸ್​ನಲ್ಲಿ ಮತ್ತೋರ್ವ ಪ್ರಭಾವಿ ವ್ಯಕ್ತಿಯನ್ನು ಬಂಧಿಸಲಾಗಿದೆ. ಮಾಜಿ ಸಚಿವ ಜೀವರಾಜ್ ಆಳ್ವರ ಮಗ ಹಾಗೂ ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರ ಬಾಮೈದನಾಗಿರುವ ಆದಿತ್ಯಾ ಆಳ್ವ ಅವರನ್ನು ನಿನ್ನೆ ರಾತ್ರಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸ್ಯಾಂಡಲ್​ವುಡ್​ ಡ್ರಗ್ ದಂಧೆಯ 6ನೇ ಆರೋಪಿಯಾಗಿದ್ದ ಆದಿತ್ಯ ಆಳ್ವ ಕೆಲವು ತಿಂಗಳುಗಳಿಂದ ತಲೆ ಮರೆಸಿಕೊಂಡಿದ್ದರು. ನಿನ್ನೆ ರಾತ್ರಿ ಅವರನ್ನು ಚೆನ್ನೈನಲ್ಲಿ ಆರೋಪಿಯನ್ನ ಸಿಸಿಬಿ ಪೊಲೀಸರು ಬಂಧಿಸಿದ್ದು, ಇಂದು ಬೆಳಗ್ಗೆ ಬೆಂಗಳೂರಿಗೆ ಕರೆತಂದಿದ್ದಾರೆ.

ಆದಿತ್ಯ ಆಳ್ವ ಅವರ ರೆಸಾರ್ಟ್​ನಲ್ಲಿ ಸಾಕಷ್ಟು ಸೆಲೆಬ್ರಿಟಿಗಳು, ರಾಜಕಾರಣಿಗಳು ಪಾರ್ಟಿ ಮಾಡುತ್ತಿದ್ದ ವಿಷಯ ಬೆಳಕಿಗೆ ಬಂದಿತ್ತು. ಹೀಗಾಗಿ, ಆದಿತ್ಯ ಆಳ್ವ ಅವರ ಬಂಧನದಿಂದ ಇನ್ನಷ್ಟು ಸೆಲೆಬ್ರಿಟಿಗಳಿಗೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಆದಿತ್ಯನನ್ನು ಬಂಧಿಸಿದ ಸಿಸಿಬಿ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ.

ಸ್ಯಾಂಡಲ್​ವುಡ್ ಡ್ರಗ್ ಕೇಸ್​ನ ಎ6 ಆರೋಪಿಯಾಗಿದ್ದ ಆದಿತ್ಯಾ ಆಳ್ವ ವಿರುದ್ಧ ಸೆಪ್ಟೆಂಬರ್ 4ರಂದು ದಾಖಲಾಗಿದ್ದ ಎಫ್ಐಆರ್ ದಾಖಲಾಗಿತ್ತು. ಎಫ್ಐಆರ್ ದಾಖಲು ಬಳಿಕ ಆದಿತ್ಯ ಆಳ್ವ ಅವರ ಮನೆ ಮೇಲೆ ಸಿಸಿಬಿ ದಾಳಿ ನಡೆಸಲಾಗಿತ್ತು. ಹೆಬ್ಬಾಳದ ಹೌಸ್ ಆಫ್ ಲೈಫ್ ಮೇಲೆ ದಾಳಿ ನಡೆಸಲಾಗಿತ್ತು. ಮನೆಯಲ್ಲೆ ಹಲವು ಪಾರ್ಟಿಗಳನ್ನ ಆಯೋಜನೆ ಮಾಡಿದ್ದ ಆದಿತ್ಯ ಆಳ್ವ ಈ ಕೇಸ್​ನಲ್ಲಿ ಹಲವರು ಬಂಧನಕ್ಕೊಳಗಾದ ಬಳಿಕ ನಾಪತ್ತೆಯಾಗಿದ್ದರು. ಆದಿತ್ಯ ಆಳ್ವ ಪತ್ತೆಗಾಗಿ ಲುಕ್ ಔಟ್ ನೋಟಿಸ್ ಹೊರಡಿಸಿದ್ದ ಸಿಸಿಬಿ ಪೊಲೀಸರು ಮುಂಬೈನಲ್ಲಿರುವ ವಿವೇಕ್ ಒಬೆರಾಯ್ ಮನೆಯಲ್ಲೂ ಸರ್ಚ್ ವಾರಂಟ್ ಪಡೆದು ಶೋಧ ನಡೆಸಿದ್ದರು. ಆದರೆ, ತಂಗಿ ಪ್ರಿಯಾಂಕಾ ಆಳ್ವ ಹಾಗೂ ವಿವೇಕ್ ಒಬೆರಾಯ್ ಅವರ ಮನೆಯಲ್ಲೂ ಆದಿತ್ಯ ಪತ್ತೆಯಾಗಿರಲಿಲ್ಲ.

ಇದನ್ನೂ ಓದಿ: Aditya Alva: ಸ್ಯಾಂಡಲ್​ವುಡ್ ಡ್ರಗ್ ದಂಧೆ; ಸಿಸಿಬಿ ದಾಳಿ ವೇಳೆ ಆದಿತ್ಯ ಆಳ್ವ ಮನೆಯಲ್ಲಿ ಗಾಂಜಾ ಪತ್ತೆ

ಇದೀಗ ಸುಮಾರು ನಾಲ್ಕು ತಿಂಗಳ ಬಳಿಕ ಸಿಸಿಬಿ ಪೊಲೀಸರ ಬಲೆಗೆ ಬಿದ್ದ ಆದಿತ್ಯ ಆಳ್ವನನ್ನು ಬಂಧಿಸಿ ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ. ಚೆನ್ನೈನಿಂದ ಇಂದು ಮುಂಜಾನೆ ಬೆಂಗಳೂರಿನ ಸಿಸಿಬಿ ಕಚೇರಿಗೆ ಆದಿತ್ಯ ಆಳ್ವನನ್ನು ಕರೆತರಲಾಗಿದೆ. ಇನ್ಸ್‌ಪೆಕ್ಟರ್ ಪುನೀತ್ ನೇತೃತ್ವದ ತಂಡದಿಂದ ಆದಿತ್ಯ ಆಳ್ವನನ್ನು ಬಂಧಿಸಲಾಗಿದೆ. ಆದಿತ್ಯ ಆಳ್ವಾ ಚೆನ್ನೈನಲ್ಲಿ ಇರುವ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ನಿನ್ನೆ ಚೆನ್ನೈಗೆ ತೆರಳಿ ಆದಿತ್ಯನನ್ನು ಬಂಧಿಸಿದ್ದಾರೆ.

ಒಂದುವೇಳೆ ಆದಿತ್ಯ ಅಳ್ವ ಬಾಯಿ ಬಿಟ್ಟರೆ ಇನ್ನೂ ಕೆಲವು ಸೆಲೆಬ್ರಿಟಿಗಳಿಗೆ ಡ್ರಗ್ಸ್ ಕೇಸ್​ನ ಬಿಸಿ ತಟ್ಟುವ ಸಾಧ್ಯತೆಯಿದೆ. ಆದಿತ್ಯ ಆಳ್ವನ ಹೌಸ್ ಆಫ್​ ಲೈಫ್​ನಲ್ಲಿ ನಡೆಯುತ್ತಿದ್ದ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದ ನಟ ನಟಿಯರಲ್ಲದೆ ಹಲವು ಸೆಲೆಬ್ರಿಟಿಗಳು ಸಹ ಪೇಜ್ 3 ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದರು. ಹೌಸ್ ಆಫ್ ಲೈಫ್ ಮೇಲೆ ಸಿಸಿಬಿ ದಾಳಿ ವೇಳೆ ಗಾಂಜಾ, ಎಕ್ಸಟೆಸಿ ಮಾತ್ರೆಗಳು ಪತ್ತೆಯಾಗಿತ್ತು. ಪಾರ್ಟಿಗಳು ನಡೆದಿರುವುದಕ್ಕೆ ಸಾಕಷ್ಟು ಸಾಕ್ಷ್ಯಗಳನ್ನು ಸಿಸಿಬಿ ಕಲೆ ಹಾಕಿದೆ. ಇದೀಗ ಆದಿತ್ಯ ಆಳ್ವನ ವಿಚಾರಣೆಯಿಂದ ಮತ್ತಷ್ಟು ಮಂದಿಯ ಬಣ್ಣ ಬಯಲಾಗೋ ಸಾಧ್ಯತೆಯಿದೆ.
ಮಾಜಿ ಸಚಿವ ಜೀವರಾಜ್ ಆಳ್ವ ಮತ್ತು ನಂದಿನಿ ಆಳ್ವ ಅವರ ಮಗನಾಗಿರುವ ಆದಿತ್ಯ ಆಳ್ವ ಸ್ಯಾಂಡಲ್​ವುಡ್ ಡ್ರಗ್ ಪ್ರಕರಣದಲ್ಲಿ ಎ6 ಆರೋಪಿಯಾಗಿದ್ದಾರೆ. ಪ್ರಕರಣ ಬೆಳಕಿಗೆ ಬಂದ ನಂತರ ಆದಿತ್ಯ ಆಳ್ವ ಮಾತ್ರವಲ್ಲದೆ ಅವರ ಕುಟುಂಬಸ್ಥರೂ ನಾಪತ್ತೆಯಾಗಿದ್ದಾರೆ. ಜನತಾ ಪರಿವಾರದ ಹಿರಿಯ ರಾಜಕಾರಣಿ ಜೀವರಾಜ್ ಆಳ್ವ ಕರ್ನಾಟಕದ ಸಚಿವರಾಗಿದ್ದವರು. ಅವರ ಹೆಂಡತಿ ನಂದಿನಿ ಆಳ್ವ ಖ್ಯಾತ ನೃತ್ಯಗಾರ್ತಿ. ಅವರ ಮಗಳು ಪ್ರಿಯಾಂಕಾ ಆಳ್ವ ಅವರನ್ನು ಬಾಲಿವುಡ್ ನಟ ವಿವೇಕ್ ಒಬೆರಾಯ್ ಮದುವೆಯಾಗಿದ್ದಾರೆ. ಅವರ ಮಗ ಆದಿತ್ಯ ಆಳ್ವ ಇದೀಗ ಡ್ರಗ್ಸ್​ ದಂಧೆಯಲ್ಲಿ ಆರೋಪಿಯಾಗಿದ್ದಾರೆ.
Published by: Sushma Chakre
First published: January 12, 2021, 8:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories