news18-kannada Updated:September 16, 2020, 8:04 AM IST
ಸಂಜನಾ ಗಲ್ರಾನಿ
ಬೆಂಗಳೂರು (ಸೆಪ್ಟೆಂಬರ್ 16) ಈಗಾಗಲೇ ಸ್ಯಾಂಡಲ್ವುಡ್ ಡ್ರಗ್ಸ್ ಆರೋಪ ಪ್ರಕರಣದಲ್ಲಿ ನಟಿ ರಾಗಿಣಿ ಜೈಲು ಸೇರಿದ್ದಾರೆ. ಈ ಮಧ್ಯೆ ನಟಿ ಸಂಜನಾ ಪೊಲೀಸ್ ಕಸ್ಟಡಿ ಅವಧಿ ಇಂದು ಕೊನೆಯಾಗಲಿದೆ. ಹೀಗಾಗಿ ಇಂದು ಅವರು ಪರಪ್ಪನ ಅಗ್ರಹಾರ ಸೇರೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕೇವಲ ಸಂಜನಾ ಅಷ್ಟೆ ಅಲ್ಲದೆ ಡ್ರಗ್ ಪ್ರಕರಣದ ಆರೋಪಿಗಳಾದ ವಿರೇನ್ ಖನ್ನಾ ಹಾಗೂ ರವಿಶಂಕರ್ ಪೊಲೀಸ್ ಕಸ್ಟಡಿ ಸಹ ಇಂದಿಗೆ ಕೊನೆಯಾಗಲಿದೆ. ಅವರು ಕೂಡ ಜೈಲು ಸೇರುವ ಸಾಧ್ಯತೆ ಇದೆಯಂತೆ. ಸಿಸಿಬಿ ಪೊಲೀಸರು ಇಂದು ಮದ್ಯಾಹ್ನದ ಬಳಿಕ ಮೂವರು ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಿದ್ದಾರೆ. ಈಗಾಗಲೆ 11 ದಿನಗಳ ಕಾಲ ನಟಿ ಸಂಜನಾ ಅವರನ್ನು ಅಧಿಕಾರಿಗಳು ಕಸ್ಟಡಿಗೆ ಪಡೆದಿದ್ದು ಮತ್ತೆ ಕಸ್ಟಡಿಗೆ ಕೇಳುವ ಸಾಧ್ಯತೆ ತುಂಬಾ ಕಡಿಮೆ ಇದೆ.
ಯಾವುದೇ ಆರೋಪಿಯನ್ನು ಕೇವಲ 14 ದಿನಗಳು ಮಾತ್ರ ಪೊಲೀಸ್ ಕಸ್ಟಡಿಯಲ್ಲಿ ಇಟ್ಟುಕೊಳ್ಳಲು ಸಾಧ್ಯ. ಸಂಜನಾ ಪೊಲೀಸ್ ಕಸ್ಟಡಿಗೆ ಈಗಾಗಲೇ 11 ದಿನಗಳು ಕಳೆದಿದೆ. ಹೀಗಾಗಿ ಮತ್ತೆ ಅವರನ್ನು ಕಸ್ಟಡಿಗೆ ಕೇಳೋದು ಅನುಮಾನ.
ಇನ್ನು ಇವತ್ತು ಮುಂಜಾನೆ 10 ಗಂಟೆಯ ಬಳಿಕ ಇನ್ಸ್ಪೆಕ್ಟರ್ ಅಂಜುಮಾಲ ನೇತೃತ್ವದಲ್ಲಿ ಮತ್ತೊಮ್ಮೆ ಮಹಿಳಾ ಕೇಂದ್ರದಲ್ಲಿ ನಟಿ ಸಂಜನಾ ವಿಚಾರಣೆ ನಡೆಯಲಿದೆ. ವಿಚಾರಣೆ ಆದ ಬಳಿಕ ಮೆಡಿಕಲ್ ಚೆಕಪ್ ಮಾಡಿಸಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಿದ್ದಾರೆ.
ಈ ಬೆಳವಣಿಗೆ ಜೊತೆ ನಟಿ ಸಂಜನಾ ನಿನ್ನೆ ಅವರ ವಕೀಲರ ಜೊತೆ ಮಾತನಾಡಿದ್ದು ಇಂದು ಜಾಮೀನಿಗಾಗಿ ಅರ್ಜಿ ಸಲ್ಲಿಸೋ ಸಾಧ್ಯತೆ ಇದೆ. ಒಂದು ವೇಳೆ ಪೊಲೀಸರು ಕಸ್ಟಡಿಗೆ ಕೇಳದೆ ಇದ್ದರೆ, ಇತ್ತ ಜಾಮೀನು ಸಿಗದೆ ಇದ್ದರೆ ನಟಿ ಸಂಜನಾ ಸಹ ಇಂದು ಪರಪ್ಪನ ಅಗ್ರಹಾರ ಜೈಲು ಸೇರೋದು ಖಚಿತ ಎನ್ನಲಾಗಿದೆ.
Published by:
Rajesh Duggumane
First published:
September 16, 2020, 8:04 AM IST