ಬೆಂಗಳೂರು (ಸೆಪ್ಟೆಂಬರ್ 04); ಇಡೀ ದೇಶದ ಗಮನ ಸೆಳೆದಿದ್ದ ಬೆಂಗಳೂರು ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿಯನ್ನು ಇಂದು ಕೊನೆಗೂ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಇಂದು ಬೆಳಗ್ಗೆಯಿಂದ ಪ್ರಕರಣ ಕುರಿತು ಹಲವು ಗಂಟೆಗಳ ಕಾಲ ಸತತ ವಿಚಾರಣೆ ನಡೆಸಿದ ಪೊಲೀಸರು ಸಂಜೆ ವೇಳೆಗೆ ನಟಿಯನ್ನು ಅಧಿಕೃತವಾಗಿ ಬಂಧಿಸಿದ್ದಾರೆ. ಜಯನಗರ ಆರ್ಟಿಓ ಕಚೇರಿಯ ಸಹಾಯಕ ಕ್ಲರ್ಕ್ ರವಿಶಂಕರ್ ಹಾಗೂ ಇಂಟಿರಿಯರ್ ಡಿಸೈನರ್ ರಾಹುಲ್ ಬೆನ್ನಲ್ಲೀಗ ನಟಿ ರಾಗಿಣಿಯನ್ನು ಬಂಧಿಸಿರುವುದಾಗಿ ನ್ಯೂಸ್-18 ಕನ್ನಡಕ್ಕೆ ಸಿಸಿಬಿ ಪೊಲೀಸ್ ಮೂಲಗಳು ತಿಳಿಸಿವೆ. ಆದರೆ, ನಟಿ ಬಂಧನದಿಂದಾಗಿ ದಿಗ್ಭ್ರಾಂತರಾಗಿರುವ ಅವರ ಪೋಷಕರೀಗ ಕಣ್ಣೀರು ಹಾಕುತ್ತಾ ಅವರ ಅಪಾರ್ಟ್‌ಮೆಂಟ್‌ನಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ನಟಿ ರಾಗಿಣಿಯನ್ನು ಪೊಲೀಸರು ಇಂದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಆಕೆಯ ತಾಯಿ ಬೆಳಗ್ಗೆಯಿಂದ ಏನನ್ನೂ ತಿಂದಿಲ್ಲ. ಇನ್ನೂ ಪೊಲೀಸರು ನಟಿಯನ್ನು ಬಂಧಿಸಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ತಾಯಿ ಕಣ್ಣೀರು ಹಾಕ್ತಾ ಕೊಠಡಿಯಲ್ಲೇ ಕಾಲ ಕಳೆಯುತ್ತಿದ್ದಾರೆ. ಆಕೆಯ ಸಹೋದರ ಸಹ ಮನೆಯಿಂದ ಹೊರ ಬಂದಿಲ್ಲ. ಪ್ರಸ್ತುತ ಇಡೀ ಮನೆಯಲ್ಲಿ ನೀರವ ಮೌನ ಆವರಿಸಿದೆ.
ಇನ್ನು, ಡ್ರಗ್ಸ್ ಜಾಲದ ಪ್ರಕರಣದಲ್ಲಿ ಬಂಧನವಾಗಿರುವ ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿಯವರಿಗೆ ನಿರೀಕ್ಷಣಾ ಜಾಮೀನು ಕೋರಿ ವಕೀಲರ ತಂಡವೊಂದು ಸಂಜೆ ಸಿಟಿ ಸಿವಿಲ್ ಕೋರ್ಟ್ ಮೊರೆ ಹೋಗಿತ್ತು. ಇವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಸೆಪ್ಟೆಂಬರ್ 7ಕ್ಕೆ ಮುಂದೂಡಿದೆ.
ಇದನ್ನೂ ಓದಿ : Ragini Arrested: ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ: ಸಿಸಿಬಿ ಪೊಲೀಸರಿಂದ ನಟಿ ರಾಗಿಣಿ ಬಂಧನ
ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟಿದೆ ಎಂಬ ಪ್ರಕರಣಕ್ಕೆ ಸಂಬಂಧ ನಟಿ ರಾಗಿಣಿ ದ್ವಿವೇದಿ ಅವರನ್ನು ಸಿಸಿಬಿ ವಶಕ್ಕೆ ಪಡೆದರು. ಇಂದು ಬೆಳಗ್ಗೆಯೇ ಸಿಸಿಬಿ ಇನ್ಸ್ಪೆಕ್ಟರ್ ಅಂಜುಮಾಲಾ ನೇತೃತ್ವದಲ್ಲಿ ರಾಗಿಣಿಯವರ ಯಲಹಂಕದ ಜ್ಯುಡಿಷಿನಲ್ ಲೇಔಟ್ನಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಶೋಧ ಕಾರ್ಯ ನಡೆಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ