Ragini Dwivedi - ರಾಗಿಣಿ ವಿರುದ್ಧ ಕಠಿಣ ಸೆಕ್ಷನ್ ಅಡಿ ಪ್ರಕರಣ ದಾಖಲು; 20 ವರ್ಷ ಜೈಲುಶಿಕ್ಷೆ ಆದೀತು
Drugs Case - 1985ರ ನಾರ್ಕೋಟಿಕ್ಸ್ ಡ್ರಗ್ಸ್ ಆಂಡ್ ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಕಾಯ್ದೆಯ ಕಠಿಣ ಸೆಕ್ಷನ್ಗಳ ಅಡಿ ರಾಗಿಣಿ ವಿರುದ್ಧ ಕೇಸ್ ದಾಖಲಾಗಿದೆ. ಆಕೆ ದೋಷಿ ಎಂದು ಸಾಬೀತಾದರೆ 20 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶ ಇದೆ.
ಬೆಂಗಳೂರು(ಸೆ. 05): ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ಅವರು ಮೂರು ದಿನ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ನಿನ್ನೆ ಅವರ ವಿಚಾರಣೆ ನಡೆಸಿದ ಬಳಿಕ ಪೊಲೀಸರು ಬಂಧಿಸಿದ್ದರು. ರಾಗಿಣಿ ವಿರುದ್ಧ ಕಠಿಣ ಕೇಸ್ಗಳನ್ನ ದಾಖಲಿಸಲಾಗಿದೆ. 1985ರ ಎನ್ಡಿಪಿಎಸ್ ಕಾಯ್ದೆಯ ಸೆಕ್ಷನ್ 21(ಬಿ), 21(ಸಿ) ಮತ್ತು 22(ಸಿ) ಸೆಕ್ಷನ್ ಅಡಿ ಪ್ರಕರಣ ಹಾಕಲಾಗಿದೆ. ಮಾದಕ ವಸ್ತು ಮತ್ತು ಮಾನಸಿಕ ಪ್ರಭಾವ ಬೀರುವ ವಸ್ತುಗಳನ್ನ ಹೊಂದಿರುವುದು, ಅವುಗಳ ತಯಾರಿಕೆ, ಮಾರಾಟ, ಖರೀದಿ, ಸಾಗಣೆ ಮಾಡಿದ ಅಪರಾಧಗಳಿಗೆ ಈ ಸೆಕ್ಷನ್ಗಳು ಅನ್ವಯವಾಗುತ್ತವೆ. ಇದಕ್ಕೆ ಬಹಳ ಕಠಿಣ ಶಿಕ್ಷೆ ಇದೆ. ಒಂದು ವೇಳೆ ಸ್ಯಾಂಡಲ್ವುಡ್ ನಟಿ ರಾಗಿಣಿ ಮೇಲಿನ ಆರೋಪ ಸಾಬೀತಾದಲ್ಲಿ ನ್ಯಾಯಾಲಯವು ಆಕೆಗೆ 20 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 2 ಲಕ್ಷ ರೂವರೆಗೆ ದಂಡ ವಿಧಿಸುವ ಅವಕಾಶ ಹೊಂದಿದೆ.
ನಗರದ ಡ್ರಗ್ಸ್ ಪೆಡ್ಲರ್ಗಳಾದ ರಾಹುಲ್ ಮತ್ತು ರವಿಶಂಕರ್ ಜೊತೆಗೆ ಹೊಂದಿದ್ದ ನಂಟೇ ಇದೀಗ ನಟಿ ರಾಗಿಣಿಗೆ ಮುಳುವಾಗಿದೆ. ಆರ್ಟಿಒ ಅಧಿಕಾರಿ ರವಿಶಂಕರ್ ಬಂಧನದ ಬಳಿಕ ರಾಗಿಣಿ ಈ ಜಾಲದಲ್ಲಿರುವುದು ಬೆಳಕಿಗೆ ಬಂದಿತ್ತು. ರಾಗಿಣಿ ಇವರ ಜೊತೆ ಡ್ರಗ್ಸ್ ಜಾಲದಲ್ಲೂ ಭಾಗಿಯಾಗಿದ್ದು, ಜೊತೆಗೆ ಹಣಕಾಸಿವ ವ್ಯವಹಾರವನ್ನೂ ನಡೆಸಿದ್ದಕ್ಕೆ ಸಿಸಿಬಿ ಪೊಲೀಸರಿಗೆ ಸಾಕಷ್ಟು ಸಾಕ್ಷ್ಯಾಧಾರಗಳು ಲಭ್ಯವಾಗಿವೆ. ಇದೇ ಆಧಾರದಲ್ಲಿ ರಾಗಿಣಿಯನ್ನು ಬಂಧಿಸಲಾಗಿದೆ. ರಾಗಿಣಿಯನ್ನು ಮೊನ್ನೆಯೇ ವಿಚಾರಣೆ ನಡೆಸಬೇಕಿತ್ತು. ಅನಾರೋಗ್ಯದ ನೆಪವೊಡ್ಡಿದ್ದರಿಂದ ನಿನ್ನೆ ವಿಚಾರಣೆ ನಡೆಸಿ ಆ ಬಳಿಕ ಪೊಲೀಸರು ಬಂಧಿಸಿದ್ದಾರೆ. ನಂತರ ವಿಡಿಯೋ ಕಾನ್ಫೆರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈಕೆಯನ್ನು 3 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಕೋರ್ಟ್ ಆದೇಶ ನೀಡಿತು.
ಇಂದು ಬೆಳಗ್ಗೆಯವರೆಗೂ ರಾಗಿಣಿ ಅವರನ್ನ ಕಿದ್ವಾಯಿ ಆಸ್ಪತ್ರೆ ಸಮೀಪದ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿತ್ತು. ಸಾಮಾನ್ಯ ಆರೋಪಿಗಳ ರೀತಿಯಲ್ಲಿ ರಾಗಿಣಿಗೆ ಊಟ ಹಾಗೂ ಸೌಲಭ್ಯ ನೀಡಲಾಗಿತ್ತು. ಇಂದು ಸಿಸಿಬಿ ಕಚೇರಿಯಲ್ಲಿ ಡಿಸಿಪಿ ರವಿಕುಮಾರ್ ಮತ್ತು ಇನ್ಸ್ಪೆಕ್ಟರ್ ಅಂಜುಮಾಲ ನೇತೃತ್ವದಲ್ಲಿ ರಾಗಣಿಯ ವಿಚಾರಣೆ ನಡೆಯಲಿದೆ.
ರಾಗಿಣಿ ಅವರ ಮನೆಯಲ್ಲಿ ಸಿಕ್ಕ ವಸ್ತುಗಳನ್ನ ಎಫ್ಎಸ್ಎಲ್ಗೆ ಕಳುಹಿಸಿದ್ದು, ಅದರ ವರದಿಗಾಗಿಯೂ ಎದುರು ನೋಡಲಾಗುತ್ತಿದೆ.
ಬೆಂಗಳೂರಿನಲ್ಲಿರುವ ಡ್ರಗ್ಸ್ ಜಾಲವನ್ನು ಅಮೂಲಾಗ್ರವಾಗಿ ಬಯಲಿಗೆಳೆಯಲು ಸಿಸಿಬಿಯಿಂದ ಆರು ತಂಡಗಳು ಪ್ರತ್ಯೇಕವಾಗಿ ತನಿಖೆ ನಡೆಸುತ್ತಿವೆ. ಹಲವು ಡ್ರಗ್ಸ್ ಪೆಡ್ಲರ್ಗಳನ್ನ ಬಂಧಿಸಲಾಗಿದೆ. ರಾಗಿಣಿ ದ್ವಿವೇದಿ, ರಾಹುಲ್, ರವಿಶಂಕರ್ ಮತ್ತು ವೀರೇನ್ ಖನ್ನಾ ಅವರನ್ನ ಪ್ರತ್ಯೇಕವಾಗಿ ವಿಚಾರಣೆ ಮಾಡಲಾಗತ್ತಿದೆ. ವೀರೇನ್ ಖನ್ನಾ ದೆಹಲಿಯವರಾಗಿದ್ದು ಫ್ಯಾಷನ್ ಲೋಕದಲ್ಲಿ ಹೆಸರು ಮಾಡಿದವರು. ಬೆಂಗಳೂರಿನ ಹಲವು ಹೈಫೈ ಪಾರ್ಟಿಗಳ ಆಯೋಜಕರೂ ಹೌದು. ಅವರ ಸಂಪರ್ಕದಲ್ಲಿರುವವರನ್ನ ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ.
ಇನ್ನು, ರಾಹುಲ್ ಜೊತೆ ನಿಕಟ ಸಂಪರ್ಕ ಇರುವ ನಟಿ ಸಂಜನಾ ಗಲ್ರಾಣಿ ಮೇಲೂ ಸಿಸಿಬಿ ಪೊಲೀಸರ ಕಣ್ಣು ನೆಟ್ಟಿದೆ. ಇಂದು ಸಂಜನಾಗೆ ವಿಚಾರಣೆಗೆ ಹಾಜರಾಗಲು ನೋಟೀಸ್ ನೀಡುವ ಸಾಧ್ಯತೆ ಇದೆ.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ