Actor Shashikumar; ಚಿತ್ರದುರ್ಗ ಜಿಲ್ಲೆಯ ರಾಜಕೀಯಕ್ಕೆ ಚಿತ್ರನಟ ಶಶಿಕುಮಾರ್ ಮತ್ತೆ ಎಂಟ್ರಿ..!

ಚುನಾವಣೆಗೆ ಸ್ಪರ್ಧೆ ಮಾಡೋದು ಖಚಿತ. ಆದ್ರೆ ಯಾವ ಕ್ಷೇತ್ರ ಮತ್ತು ಪಕ್ಷ ಅಂತ ಅಂತಿಮಗೊಂಡಿಲ್ಲ. ಶೀಘ್ರದಲ್ಲಿಯೇ ಈ ಕುರಿತು ಅಧಿಕೃತವಾಗಿ ತಿಳಿಸುತ್ತೇನೆ. ಜಿಲ್ಲೆಯ ಎಸ್ ಟಿ ಮೀಸಲು ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದೇನೆ.

ಶಶಿಕುಮಾರ್

ಶಶಿಕುಮಾರ್

  • Share this:
ಚಿತ್ರದುರ್ಗ: ನಟ ಶಶಿಕುಮಾರ್ (Actor Shashikumar) ಮತ್ತೆ ರಾಜಕೀಯಕ್ಕೆ ಕಮ್ ಬ್ಯಾಕ್ ಮಾಡುವ ಸಾಧ್ಯತೆಗಳಿವೆ. ಮುಂದಿನ ವಿಧಾನಸಭಾ ಚುನಾವಣೆಗೆ (Assembly Election)  ಹದಿನೈದು ತಿಂಗಳು ಇರುವಾಗಲೇ ಮತ್ತೆ ತಮ್ಮ ಹಳೆ ಲಯಕ್ಕೆ ಮರಳಲು ಶಶಿಕುಮಾರ್ ತಯಾರಿ ನಡೆಸುತ್ತಿದ್ದಾರೆ. ಚಿತ್ರದುರ್ಗ (Chitradurga) ಜಿಲ್ಲೆಯ ಎರಡು ಕ್ಷೇತ್ರಗಳ ಮೇಲೆ ಕಾಲಿಟ್ಟಿರುವ ಶಶಿಕುಮಾರ್, ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆಗಳಿವೆ. ಆದರೆ ಯಾವ ಕ್ಷೇತ್ರ? ಯಾವ ಪಕ್ಷ  ಎಂಬ ಪ್ರಶ್ನೆಗೆ ಉತ್ತರ ಅಸ್ಪಷ್ಟ. ಸದ್ಯದಲ್ಲಿಯೇ ತಮ್ಮ ಮುಂದಿನ ರಾಜಕೀಯ ನಡೆಯ ಕುರಿತು ಅಧಿಕೃತ ಹೇಳಿಕೆ ನೀಡೋದಾಗಿ ನಟ ಶಶಿಕುಮಾರ್ ತಿಳಿಸಿದ್ದಾರೆ. ಕಳೆದ ಬಾರಿ ಹೊಸದುರ್ಗದಿಂದ ಸ್ಪರ್ಧೆ ಮಾಡಿದ ಶಶಿಕುಮಾರ್ ಸೋಲು ಕಂಡಿದ್ದರು.

ಎರಡು ಕ್ಷೇತ್ರಗಳ ಮೇಲೆ ಕಣ್ಣಿಟ್ಟ ಶಶಿಕುಮಾರ್?

ಪರಿಶಿಷ್ಠ ವರ್ಗಕ್ಕೆ ಮೀಸಲಾಗಿರುವ ಮೊಳಕಾಲ್ಮೂರು ಮತ್ತು ಚಳ್ಳಕೆರೆ ವಿಧಾನಸಭಾ ಕ್ಷೇತ್ರಗಳಲ್ಲಿ ಶಶಿಕುಮಾರ್ ಕಣ್ಣಿಟ್ಟಿದ್ದಾರೆ. ಸೋಮವಾರ ಎರಡೂ ಕ್ಷೇತ್ರಗಳಿಗೆ ಭೇಟಿ ನೀಡಿದ್ದ ಶಶಿಕುಮಾರ್ ಗೆ ಅಭಿಮಾನಿಗಳು ಸಾಥ್ ನೀಡಿದರು. ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇಗುಲ ಮತ್ತು ಮೊಳಕಾಲ್ಮೂರು ಕ್ಷೇತ್ರದ ಸಾಯಿಬಾಬ ಮಂದಿರಕ್ಕೆ ಭೇಟಿ ನೀಡಿದ  ಶಶಿಕುಮಾರ್ ವಿಶೇಷ ಪೂಜೆ ಸಲ್ಲಿಸಿದರು. ಶಶಿಕುಮಾರ್ ಕ್ಷೇತ್ರಕ್ಕೆ ಹಿಂದಿರುಗಿರೋದಕ್ಕೆ ಸ್ಥಳೀಯ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಚುನಾವಣೆ ಸ್ಪರ್ಧೆ ಖಚಿತ ಪಡಿಸಿದ ಶಶಿಕುಮಾರ್

ಚಳ್ಳಕೆರೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಶಿಕುಮಾರ್, ಚುನಾವಣೆಗೆ ಸ್ಪರ್ಧೆ ಮಾಡೋದು ಖಚಿತ. ಆದ್ರೆ ಯಾವ ಕ್ಷೇತ್ರ ಮತ್ತು ಪಕ್ಷ ಅಂತ ಅಂತಿಮಗೊಂಡಿಲ್ಲ. ಶೀಘ್ರದಲ್ಲಿಯೇ ಈ ಕುರಿತು ಅಧಿಕೃತವಾಗಿ ತಿಳಿಸುತ್ತೇನೆ. ಜಿಲ್ಲೆಯ ಎಸ್ ಟಿ ಮೀಸಲು ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದೇನೆ. ಕಳೆದ ಬಾರಿ ಟಿಕೆಟ್ ಸಿಗದ ಕಾರಣ  ಹೊಸದುರ್ಗಕ್ಕೆ ಹೋಗಿದ್ದೆ. ಆದ್ರೆ ಈ ಬಾರಿ  ಚಿತ್ರದುರ್ಗ ಜಿಲ್ಲೆಯ ಕ್ಷೇತ್ರದಿಂದಲೇ ಚುನಾವಣೆಗೆ ಸ್ಪರ್ಧಿಸೋದು ಖಚಿತ ಅಂತ ಹೇಳಿದ್ದಾರೆ.

ಇದನ್ನೂ ಓದಿ: ಮನೆ ಹಾಳು ಮಾಡೋಕೆ ಸಿದ್ದರಾಮಯ್ಯನ ಸಿದ್ದ ಸೂತ್ರ ಒಂದೇ ಸಾಕು: C.T.Ravi ವ್ಯಂಗ್ಯ

2018ರಲ್ಲಿ ತಪ್ಪಿತ್ತು ಟಿಕೆಟ್

2018ರ ವಿಧಾನಸಭಾ ಚುನಾವಣೆಯಲ್ಲಿ ಈ ಎರಡು ಕ್ಷೇತ್ರಗಳಿಂದಲೇ ಸ್ಪರ್ಧಿಸಲು ಶಶಿಕುಮಾರ್ ಪ್ರಯತ್ನಿಸಿದ್ದರು. ಆದ್ರೆ ಎರಡೂ ಕ್ಷೇತ್ರದ ಟಿಕೆಟ್ ಕೊನೆ ಗಳಿಗೆಯಲ್ಲಿ ತಪ್ಪಿತ್ತು. ಹಾಗಾಗಿ ಜೆಡಿಎಸ್ ನಿಂದ ಟಿಕೆಟ್ ಪಡೆದು ಹೊಸದುರ್ಗ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. 1999 (1999-2004) ರಲ್ಲಿ ಸಂಯುಕ್ತ ಜನತಾದಳದಿಂದ ಸ್ಪರ್ಧಿಸಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ಶಶಿಕುಮಾರ್ ಆಯ್ಕೆಯಾಗಿದ್ದರು. ಇನ್ನು 2008ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಶಿಕುಮಾರ್, ಮಾಜಿ ಸಚಿವ ತಿಪ್ಪೇಸ್ವಾಮಿ ಅವರ ವಿರುದ್ಧ ಸೋತಿದ್ದರು. 1999ರಲ್ಲಿ ಸ್ಪರ್ಧೆ ಮಾಡಿದ್ದಾಗ ಚುನಾವಣೆ ಪ್ರಚಾರದ ವೇಳೆ ಡ್ಯಾನ್ಸ್ ಮಾಡಿ ಜನರನ್ನು ರಂಜಿಸಿದ್ದರು. ಸಂಸದರಾಗಿದ್ದ ವೇಳೆ ಶಶಿಕುಮಾರ್ ಜಿಲ್ಲೆಯ ಆರು ತಾಲೂಕುಗಳಿಗೆ ಹೊಸ ಬಸ್ ನಿಲ್ದಾಣ ನಿರ್ಮಿಸಿದದ್ರು.

ಇದನ್ನೂ ಓದಿ: ರಾಜ್ಯದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೆ ಸಿದ್ದರಾಮಯ್ಯ, ಜಾತಿ ಜಾತಿಗಳನ್ನೇ ಒಡೆದರು: HD Kumaraswamy ಆರೋಪ

ಜೆಡಿಎಸ್ ಟಿಕೆಟ್ ಸಿಗುತ್ತಾ?

ಸದ್ಯ ಜೆಡಿಎಸ್ ನಲ್ಲಿರುವ ಶಶಿಕುಮಾರ್, ಕಳೆದ ಬಾರಿಯೂ ಚಳ್ಳಕೆರೆಯ ಟಿಕೆಟ್ ಕೇಳಿದ್ದರು. ಕೊನೆಗೆ ಹೊಸದುರ್ಗದಿಂದ ಸ್ಪರ್ಧಿಸಿ ಕೇವಲ 1500 ಮತಗಳನ್ನು ಮಾತ್ರ ಪಡೆದುಕೊಂಡು ಸೋತಿದ್ದರು. ಚಳ್ಳಕೆರೆಯಲ್ಲಿ ಸ್ಥಳೀಯ ಮುಖಂಡ ರವೀಶ್ ಮುಂದಿನ ಚುನಾವಣೆಯ ಜೆಡಿಎಸ್ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದಾರೆ. ಹಾಗಾಗಿ ಚಳ್ಳಕೆರೆಯ ಟಿಕೆಟ್ ಪಡೆಯಲು ಶಶಿಕುಮಾರ್ ಅವರಿಗೆ ಪ್ರಬಲ ಪೈಪೋಟಿ ಇದೆ. ಇತ್ತ ಮೊಳಕಾಲ್ಮೂರು ಸಚಿವ ಶ್ರೀರಾಮುಲು ಅವರು ಪ್ರತಿನಿಧಿಸುವ ಕ್ಷೇತ್ರ ಜೊತೆಗೆ ತಿಪ್ಪೇಸ್ವಾಮಿ ಸಹ ಪ್ರಬಲ ಮುಖಂಡರಾಗಿದ್ದಾರೆ. ಆದ್ದರಿಂದ ಮೊಳಕಾಲ್ಮೂರು ಕ್ಷೇತ್ರದಲ್ಲಿ ಸ್ಪರ್ಧೆ ದೊಡ್ಡ ಮಟ್ಟದಲ್ಲಿ ಇರಲಿದೆ. ಇದೀಗ ಮತ್ತೆ ಜಿಲ್ಲೆಗೆ ಹಿಂದಿರುಗಿರುವ ಶಶಿಕುಮಾರ್ ಗೆ ಜನರ ಪ್ರೀತಿ ಸಿಗುತ್ತಾ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
Published by:Mahmadrafik K
First published: