news18-kannada Updated:December 7, 2020, 4:20 PM IST
ನಟ ಚೇತನ್.
ಬೆಂಗಳೂರು (ಡಿಸೆಂಬರ್ 12); ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತಂದಿರುವ ವಿವಾದಾತ್ಮಕ ಮೂರು ಕೃಷಿ ಮಸೂದೆಗಳನ್ನು ಹಿಂಪಡೆಯಬೇಕು ಎಂದು ಇಡೀ ದೇಶದ ರೈತರು ಕಳೆದ 12 ದಿನಗಳಿಂದ ದೆಹಲಿಯಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಿದ್ದಾರೆ. ಅಲ್ಲದೆ, ಡಿಸೆಂಬರ್ 08 ರಂದು ಭಾರತದದ ಬಂದ್ಗೂ ಕರೆ ನೀಡಿದ್ದಾರೆ. ಕಾಂಗ್ರೆಸ್, ಎಡಪಕ್ಷಗಳು ಹಾಗೂ ಎಲ್ಲಾ ಕಾರ್ಮಿಕ ಸಂಘಟನೆಗಳು ಈ ಬಂದ್ಗೆ ಬೆಂಬಲ ಸೂಚಿಸಿವೆ. ಆದರೆ. ಈ ಬೆಳವಣಿಗೆಗೆ ಸಂಬಂಧಿಸಿದಂತೆ ಇಂದು ಟ್ವೀಟ್ ಮಾಡಿರುವ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್, "ಕನ್ನಡ ಚಲನಚಿತ್ರ ನಟರು ಚುನಾವಣಾ ಪ್ರಚಾರಕ್ಕೆ ವೇಗವಾಗಿ ಸ್ಪಂಧಿಸುತ್ತಾರೆ. ಆದರೆ, ಆದರೆ, ರೈತರ ಪರವಾಗಿ ಒಂದೂ ಮಾತನ್ನು ಆಡಿಲ್ಲ” ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರೈತ ಹೋರಾಟಕ್ಕೆ ಸಿನಿಮಾ ರಂಗದವರೂ ಬೆಂಬಲ ನೀಡಬೇಕು ಎಂದು ಒತ್ತಾಯಿಸಿ ಫೇಸ್ಬುಕ್ ಮತ್ತು ಟ್ವಿಟರ್ನಲ್ಲಿ ಪೋಸ್ಟ್ ಹಾಕಿರುವ ನಟ ಚೇತನ್, "ಕೇಂದ್ರ ಕೃಷಿ ಮಸೂದೆಯನ್ನು ಖಂಡಿಸಿ ರೈತರು ಕಳೆದ ಹಲವು ತಿಂಗಳುಗಳಿಂದ ದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಚುನಾವಣಾ ಪ್ರಚಾರದ ಬ್ಯಾಂಡ್ವ್ಯಾಗನ್ಗಳ ಮೇಲೆ ವೇಗವಾಗಿ ನೆಗೆಯುವ ಕನ್ನಡ ಚಲನಚಿತ್ರ ನಟರು ರೈತರಿಗೆ ಬೆಂಬಲವಾಗಿ ಒಂದು ಮಾತನ್ನೂ ಹೇಳಿಲ್ಲ. ನಾವು ನಟರು ಜನರಿಗೆ ಸಹಾಯ ಮಾಡುವ ಬಗ್ಗೆ ಕಾಳಜಿ ವಹಿಸುತ್ತೇವೆಯೇ? ಅಥವಾ ನಮ್ಮ ಶ್ರೀಮಂತ ಗಣ್ಯ ಸ್ನೇಹಿತರನ್ನು ಸಂಸತಪಡಿಸುವುದಕ್ಕಷ್ಟೇ ಆಸಕ್ತಿ ತೋರಿಸುತ್ತೇವೆಯೇ?" ಎಂದು ಚಿತ್ರರಂಗದವರನ್ನು ಪ್ರಶ್ನಿಸಿದ್ದಾರೆ.
ಮೊದಲಿನಿಂದಲೂ ಕೇವಲ ನಟನೆ ಮಾತ್ರವಲ್ಲದೇ ಜನಪರ ಹೋರಾಟಗಳಲ್ಲಿಯೂ ತೊಡಗಿಸಿಕೊಂಡು ವೈಚಾರಿಕವಾಗಿ ಚಿಂತಿಸುವ ನಟ ಚೇತನ್ ಇದೀಗ ರೈತರ ಪರವಾಗಿ ದನಿಯೆತ್ತಿದ್ದಾರೆ. ಇಷ್ಟೇ ಅಲ್ಲದೇ ತಾವು ಪ್ರತಿನಿಧಿಸುತ್ತಿರುವ ಕನ್ನಡ ಚಿತ್ರರಂಗದ ಇತರ ನಟರ ಮೇಲೂ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಸದ್ಯಕ್ಕಿಲ್ಲ ಬಿಬಿಎಂಪಿ ಚುನಾವಣೆ; ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಲು ರಾಜ್ಯ ಸರ್ಕಾರ ನಿರ್ಧಾರ
ಕೇಂದ್ರದ ಬಿಜೆಪಿ ಸರ್ಕಾರವು ಮೂರು ಪ್ರಮುಖ ಕೃಷಿ ಮಸೂದೆಗಳಿಗೆ ಸುಗ್ರೀವಾಜ್ಞೆ ಹೊರಡಿಸಿ ಕಾಯ್ದೆ ಜಾರಿಗೊಳಿಸಲು ಮುಂದಾಗಿತ್ತು. ಇದನ್ನು ವಿರೋಧಿಸಿ ದೇಶದಾದ್ಯಂತ ಲಕ್ಷಾಂತರ ರೈತ, ಕಾರ್ಮಿಕ ಮತ್ತು ದಲಿತ ಸಂಘಟನೆಗಳು ಪ್ರತಿಭಟನೆ ಮಾಡುತ್ತಿವೆ. ಇದೀಗ ಲಕ್ಷಾಂತರ ಪಂಜಾಬ್ ರೈತರು ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಇದು 12 ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಕೇಂದ್ರ ಸರ್ಕಾರ ಮತ್ತು ರೈತರ ನಡುವೆ ಸಾಕಷ್ಟು ಸುತ್ತಿನ ಮಾತುಕತೆಗಳು ನಡೆದರೂ ಅವುಗಳೆಲ್ಲಾ ವಿಫಲವಾಗಿವೆ.
ರೈತರ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರವು ಅಮಾನವೀಯ ಕ್ರಮಗಳನ್ನು ಕೈಗೊಂಡಿತ್ತು. ಇವುಗಳನ್ನೆಲ್ಲಾ ಲೆಕ್ಕಿಸದ ರೈತರು ತಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ಈ ರೈತ ಹೋರಾಟಕ್ಕೆ ಇದೀಗ ದೇಶದಾದ್ಯಂತ ಬೆಂಬಲ ವ್ಯಕ್ತವಾಗುತ್ತಿದೆ. ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಬಿಹಾರ, ಉತ್ತರಪ್ರದೇಶ ಸೇರಿದಂತೆ ಅನೇಕ ರಾಜ್ಯಗಳ ರೈತರು ತಮ್ಮ ರಾಜ್ಯದಲ್ಲೂ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸುವ ಮೂಲಕ ರೈತ ಹೋರಾಟಕ್ಕೆ ಬಲ ತುಂಬುತ್ತಿದ್ದಾರೆ.
Published by:
MAshok Kumar
First published:
December 7, 2020, 4:18 PM IST