ಬೆಂಗಳೂರು (ಜೂನ್ 03): ಕನ್ನಡವನ್ನು ಕೆಟ್ಟ ಭಾಷೆಯೆಂದು ಬಿಂಬಿಸಿದ ಗೂಗಲ್ ಸಂಸ್ಥೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶ್ರೀ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ. ಅಸಲಿಗೆ 2 ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ವಿಶ್ವದ ಲಿಪಿಗಳ ರಾಣಿ ಎಂದೆಲ್ಲ ವಿನೋಬಾ ಬಾವೆ ಬಣ್ಣಿಸಿದ್ದರು. ಕನ್ನಡ ಭಾಷೆಯನ್ನು ಬಳಸುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಆರೋಪದ ನಡುವೆಯೂ ಒಂದಷ್ಟು ಯುವಪೀಳಿಗೆಯವರು ಕನ್ನಡ ಭಾಷೆಯ ಉಳಿವಿಗಾಗಿ ಅಭಿಯಾನಗಳನ್ನು ಮಾಡುತ್ತಾ, ಆಧುನಿಕ ತಂತ್ರಜ್ಞಾನದಲ್ಲೂ ಕನ್ನಡದ ಉಳಿಸುವಿಕೆಗೆ ಪ್ರಯತ್ನಿಸುತ್ತಿದ್ದಾರೆ. ಆದರೆ, ಈ ಕನ್ನಡ ಭಾಷೆಗೆ ಇದೀಗ ಹೊಸದೊಂದು ಕಳಂಕ ಅಂಟಿಕೊಂಡಿದೆ. ಕನ್ನಡ ಭಾಷೆ ಭಾರತದ ಅತ್ಯಂತ ಅಸಹ್ಯಕರ, ಕೊಳಕು ಭಾಷೆ ಎಂದು ಗೂಗಲ್ ಘೋಷಿಸಿದೆ. ಇದರ ವಿರುದ್ಧ ವ್ಯಾಪಕ ಜನಾಕ್ರೋಶ ಹೊರಬಿದ್ದಿದ್ದು, ಸಚಿವ ಅರವಿಂದ ಲಿಂಬಾವಳಿ ಕಾನೂನು ಕ್ರಮ ಜರುಗಿಸುವ ಮಾತುಗಳನ್ನಾಡಿದ್ದಾರೆ.
ಈ ಬಗ್ಗೆ ವಿಷಾಧ ವ್ಯಕ್ತಪಡಿಸಿರುವ ಸಚಿವ ಅರವಿಂದ ಲಿಂಬಾವಳಿ, "ಇದು ಅತ್ಯಂತ ಖಂಡನೀಯ ಸಂಗತಿ. ಗೂಗಲ್ ಆಗಲಿ, ಬೇರೆ ಯಾರೇ ಆಗಲಿ ಕನ್ನಡ ಭಾಷೆ ಬಗ್ಗೆ ಗೌರವವಿಲ್ಲದೆ ವರ್ತಿಸಿದರೆ ಅಥವಾ ಕನ್ನಡಕ್ಕೆ ಅಪಮಾನ ಎಸಗಿದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಎಚ್ಚರಿಸಿದ್ದಾರೆ.
"ಕನ್ನಡ ಭಾಷೆ ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿದೆ. ಭಾರತದ ಶಾಸ್ತ್ರೀಯ ಭಾಷೆ ಎಂಬ ಹೆಗ್ಗಳಿಕೆ ಪಡೆದಿರುವ ಭಾಷೆಯ ಬಗ್ಗೆ ಕೀಳಾಗಿ ಮಾತಾಡಿದರೂ ಅದನ್ನು ಸಹಿಸಲಾಗುವುದಿಲ್ಲ. ಸದ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಅವರಿಗೆ ಈ ಸಂಬಂಧ ಕಾನೂನು ಇಲಾಖೆಯ ಜೊತೆಗೂಡಿ ಚರ್ಚಿಸಿ ಕೂಡಲೇಗೂಗಲ್ ಗೆ ನೋಟಿಸ್ ನೀಡಲು ಸೂಚಿಸಿದ್ದೇನೆ" ಎಂದು ಅವರು ತಿಳಿಸಿದರು.
ಈ ಬಗ್ಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸಹ ಕಿಡಿಕಾರಿದ್ದು, "ಗೂಗಲ್ ಯಾಕಿಷ್ಟು ಅಸೂಕ್ಷ್ಮವಾಗಿ ನಡೆದುಕೊಳ್ಳುತ್ತದೆ? 'Ugliest language in India' ಎಂಬ ಹುಡುಕಾಟಕ್ಕೆ #Kannada ಎಂದು ಉತ್ತರ ನೀಡುತ್ತಿದ್ದ ವೆಬ್ ಪುಟ ತೆಗೆದು ಹಾಕಲು ಕನ್ನಡಿಗರು ಬಂಡೇಳಬೇಕಾಯ್ತೆ? ಯಾವುದೇ ಭಾಷೆ ವಿರುದ್ಧದ ಇಂಥ ದ್ವೇಷವನ್ನು ಮೊದಲೇ ನಿಯಂತ್ರಿಸಲು Googleಗೆ ಅಸಾಧ್ಯವೇ?
ಕನ್ನಡವೊಂದೇ ಅಲ್ಲ, ಯಾವ ಭಾಷೆಯೂ ಕೆಟ್ಟ, ಕುರೂಪವಲ್ಲ. ಎಲ್ಲ ಭಾಷೆಗಳೂ ಸುಂದರವೇ. ಭಾಷೆ ಭಾವನೆಗಳಿಗೆ ಸಂಬಂಧಿಸಿದ ವಿಷಯ. ಭಾಷೆ ವಿರುದ್ಧ ನಿಂದನೆ ಬಹಳ ನೋವಿನದ್ದು. ಹೀಗಾಗಿ ಈ ವಿಚಾರದಲ್ಲಿ ಗೂಗಲ್ ಸೂಕ್ಷ್ಮವಾಗಿರಬೇಕು. ಕನ್ನಡವನ್ನು ಅವಹೇಳನ ಮಾಡಿದ್ದ ವೆಬ್ಪುಟ ಡಿಲಿಟ್ ಆಗಿರಬಹುದು.ಆದರೆ, ಅದರಿಂದ ಕನ್ನಡಿಗರಿಗಾದ ನೋವಿಗೇನು ಪರಿಹಾರ?
ಇದನ್ನೂ ಓದಿ: Kannada Google: ಕನ್ನಡಿಗರ ಸ್ವಾಭಿಮಾನಕ್ಕೆ ಮಣಿದ ಗೂಗಲ್; ಕೊಳಕು ಭಾಷೆ ಪ್ರಮಾದಕ್ಕೆ ಅಂತ್ಯ
ಗೂಗಲ್ ಮಾಡಿದ ಈ ಪ್ರಮಾದ ಒಪ್ಪುವಂಥದ್ದಲ್ಲ. ಭಾಷೆ ವಿಚಾರದಲ್ಲಿ ಯಾರೇ ಅದರೂ ಇನ್ನು ಮುಂದೆ ಎಚ್ಚರವಾಗಿರಬೇಕು. ಅದರಲ್ಲೂ ಕನ್ನಡದ ವಿಚಾರದಲ್ಲಂತೂ ಎಲ್ಲರೂ ಎರಡು ಪಟ್ಟು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಇಲ್ಲವಾದರೆ, ಒಂದೇ ಗಂಟೆಯಲ್ಲಿ ಸೃಷ್ಟಿಯಾದ ಕನ್ನಡಿಗರ ಸ್ವಾಭಿಮಾನದ ಅಲೆ,ಮರುಗಳಿಗೆಯಲ್ಲಿ ಸುನಾಮಿಯಾಗಿ ಪರಿಣಮಿಸಿದರೆ ಅಚ್ಚರಿ ಇಲ್ಲ" ಎಂದು ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ