Acid Attack: ನಾಪತ್ತೆಯಾಗಿದ್ದ ಆಸಿಡ್ ನಾಗ ಪೊಲೀಸರಿಗೆ ಸಿಕ್ಕಿದ್ದೇ ರೋಚಕ; ಇಲ್ಲಿದೆ ತನಿಖೆಯ ಇನ್ ಸೈಡ್ ಸ್ಟೋರಿ

ಧರ್ಮಸ್ಥಳದಲ್ಲಿಯೂ ಒಂದೇ ಒಂದು ಲಾಡ್ಜ್ ಕೂಡ ಬಿಡದೇ ಹುಡುಕಾಟ ನಡೆಸಲಾಗಿತ್ತು. ಕೇದಾರನಾಥ ಸೇರಿದಂತೆ ಬೇರೆ ಬೇರೆ ಪವಿತ್ರ ಕ್ಷೇತ್ರಗಳಲ್ಲೂ ಪೊಲೀಸರು ನಿಗಾ ಇರಿಸಿದ್ದರು.

ಆರೋಪಿ ನಾಗ

ಆರೋಪಿ ನಾಗ

  • Share this:
ಯುವತಿ ಮೇಲೆ ಆಸಿಡ್ ದಾಳಿ (Bengaluru Acid Attack) ಬಳಿಕ ನಾಪತ್ತೆಯಾಗಿದ್ದ ಆಸಿಡ್ ನಾಗ ಕೊನೆಗೂ ಪೊಲೀಸರ (Police) ಬಲೆಗೆ ಬಿದ್ದಿದ್ದಾನೆ. ಬೆಂಗಳೂರಿಗೆ ಕರೆ ತರುವ ವೇಳೆ ಕೆಂಗೇರಿ (Kengeri) ಮೇಲ್ಸೇತುವೆ ಬಳಿ ಎಸ್ಕೇಪ್ ಆಗಲು ಪ್ರಯತ್ನಿಸಿದ್ದರಿಂದ ಪೊಲೀಸರು ನಾಗನ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಸದ್ಯ ನಾಗನಿಗೆ ಬಿಜಿಎಸ್ ಆಸ್ಪತ್ರೆಯಲ್ಲಿ (BGS Hospital) ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ನಾಗನ ಬಂಧನ (Acid Naga Arrest) ಹೇಗಾಯ್ತು ಎಂಬುದರ ರೋಚಕ ಸ್ಟೋರಿ ಇಲ್ಲಿದೆ. ಸ್ವಾಮೀಜಿ ಅಂತೆ ವೇಷ ಧರಿಸಿಕೊಂಡಿದ್ದ ನಾಗ ಒಳ್ಳೆಯವನಂತೆ ನಟಿಸಿದ್ದನು. ನಾನೊಬ್ಬ ಅನಾಥ, ಆಶ್ರಮದಲ್ಲಿ ಏನು ಕೆಲಸ ಬೇಕಾದ್ರೂ ಮಾಡ್ತೀನಿ ಎಂದು ಆಶ್ರಮ ಸೇರಿಕೊಂಡಿದ್ದನು.

ಎಲ್ಲರ ಪ್ರೀತಿ, ವಿಶ್ವಾಸ ಗಳಿಸಿದ್ದ ಆಸಿಡ್ ನಾಗ 10 ದಿನದಿಂದ ರಮಣ ಆಶ್ರಮದಲ್ಲಿ ಉಳಿದುಕೊಂಡಿದ್ದನು. ಮೊದಲೇ ಎರಡು ಜೊತೆ ಖಾವಿ ಪಂಚೆ ಶಲ್ಯ ಖರೀದಿಸಿಕೊಂಡು ಆಶ್ರಮಕ್ಕೆ ಹೋಗಿದ್ದನು. ಖಾವಿ ತೊಟ್ಟು ಸನ್ಯಾಸಿಯಂತೆ ನಾಟಕವಾಡಿ ಅಲ್ಲಿದ್ದವರ ವಿಶ್ವಾಸ ಗಳಿಸಿದ್ದನು.

ಈತ ಒಳ್ಳಯವನು ಅಂತ ಹೇಳಿದ್ದರಂತೆ ಆಶ್ರಮದವರು!

ಕೈ ಗಾಯದ ಬಗ್ಗೆ ಕೇಳಿದ್ದಾಗ ಕಾದಿದ ಎಣ್ಣೆ ಎಗರಿ ಗಾಯವಾಗಿದೆ ಎಂದು ಸುಳ್ಳು ಹೇಳಿದ್ದನು. ಪ್ರತಿ ನಿತ್ಯ ಆಶ್ರಮದಲ್ಲಿ ಬೆಳಗ್ಗೆ ತಣ್ಣೀರು ಸ್ನಾನ, ಧ್ಯಾನ, ಜಪ - ತಪ ಮಾಡಿಕೊಂಡಿದ್ದನು. ನಾಗನನ್ನು ಬಂಧಿಸಲು ಪೊಲೀಸರು ಆಶ್ರಮಕ್ಕೆ ತೆರಳಿದ್ರೆ ಅಲ್ಲಿದ್ದವರು, ಈತ ತುಂಬಾ ಒಳ್ಳೆಯವನು ಎಂದು ಹೇಳಿದ್ದರಂತೆ. ಈತ ಅವನಲ್ಲ ಇನ್ನೊಮ್ಮೆ ನೋಡಿ ಈತ ಅ ರೀತಿಯವನಲ್ಲ ಎಂದಿದ್ದ ಹೇಳಿದ್ದರು  ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:  Acid Naga: ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನ; ಆಸಿಡ್ ನಾಗನ ಕಾಲಿಗೆ ಗುಂಡೇಟು

ಪೊಲೀಸರ ತನಿಖೆ ಹೇಗಿತ್ತು?

ತಿರುಪತಿ ಸುತ್ತಮುತ್ತಲಿದ್ದ 4 ಸಾವಿರ ಲಾಡ್ಜ್ ಗಳ‌ ಶೋಧ ನಡೆಸಲಾಗಿತ್ತು. ಮೂರು ಸಾವಿರ ಪೇಸ್ ಐಡೆಂಟಿಫಿಕೇಷನ್ ಕ್ಯಾಮರಾ ಪರಿಶೀಲನೆ ನಡೆಸಿದ್ದರು. ಧರ್ಮಸ್ಥಳದಲ್ಲಿಯೂ ಒಂದೇ ಒಂದು ಲಾಡ್ಜ್ ಕೂಡ ಬಿಡದೇ ಹುಡುಕಾಟ ನಡೆಸಲಾಗಿತ್ತು. ಕೇದಾರನಾಥ ಸೇರಿದಂತೆ ಬೇರೆ ಬೇರೆ ಪವಿತ್ರ ಕ್ಷೇತ್ರಗಳಲ್ಲೂ ಪೊಲೀಸರು ನಿಗಾ ಇರಿಸಿದ್ದರು.

ಆಸಿಡ್ ನಾಗನ ಪಕ್ಕದಲ್ಲಿಯೇ ಕುಳಿತು ಲಾಕ್

ತಮಿಳುನಾಡಿನ ಆಶ್ರಮದಲ್ಲಿ ಆರೋಪಿ ನಾಗೇಶ್ ನನ್ನ ನೋಡಿ ವ್ಯಕ್ತಿಯೊಬ್ಬ ಅನುಮಾನ ವ್ಯಕ್ತಪಡಿಸಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ವಿಷಯ ಕ್ಷಣದಲ್ಲಿಯೇ ಕಾಮಾಕ್ಷಿಪಾಳ್ಯದ ಪೊಲೀಸ್ ಇನ್ ಸ್ಪೆಕ್ಟರ್ ಅವರನ್ನ ತಲುಪಿತ್ತು. ಭಕ್ತರ ಸೋಗಿನಲ್ಲಿ ಧ್ಯಾನ ಮಾಡ್ತಿದ್ದ ನಾಗೇಶ್ ಪಕ್ಕದಲ್ಲೇ ಕುಳಿತು ಆತನನ್ನು ಬಂಧಿಸಲಾಗಿದೆ. ತಮಿಳುನಾಡು ಪೊಲೀಸರ ಸಹಾಯದಿಂದ ಆರೋಪಿಯನ್ನ ಬಂಧಿಸಲಾಗಿದೆ.

ಆಸಿಡ್ ನಾಗನ ಬಂಧನಕ್ಕೆ ನೆರವಾಯ್ತು ಕರಪತ್ರ

ಯಾವುದೇ ಸುಳಿವು ಇಲ್ಲದೆ, ಟೆಕ್ನಿಕಲ್ ಕ್ಲೂ ಸಹ ಸಿಗದೆ ತಲೆಕೆಡಿಸಿಕೊಂಡಿದ್ದ ಪೊಲೀಸರು ಆರೋಪಿ ವಿವಿಧ ವೇಷದಲ್ಲಿರುವ ಫೋಟೋಗಳ ಕರಪತ್ರಗಳನ್ನ ತಮಿಳುನಾಡಿನ ಪ್ರತಿಯೊಂದು ಮಠ ಮಂದಿರಕ್ಕೂ ಹಂಚಲಾಗಿತ್ತು. ಇದೇ ನಾಗೇಶ್ ಬಂಧನಕ್ಕೆ ಸಹಕಾರಿಯಾಗಿತ್ತು.

ಏಪ್ರಿಲ್ 28 ರಂದು ಯುವತಿ ಮೇಲೆ ಆಸಿಡ್ ಹಾಕಿದ ಬಳಿಕ ಕೋರ್ಟ್ ಬಳಿ ತೆರಳಿ ವಕೀಲರನ್ನ ಭೇಟಿಯಾಗಿದ್ದನು. ವಕೀಲರು ಆಸಿಡ್ ಕೇಸ್ ತೆಗೆದುಕೊಳ್ಳೊಲ್ಲ ಎನ್ನುತ್ತಿದ್ದಂತೆ ಅಲ್ಲಿಂದ ಕಾಲ್ಕಿತ್ತಿದ್ದನು. ಕೋರ್ಟ್ ಬಳಿ ಬೈಕ್ ಬಿಟ್ಟು ನಾಪತ್ತೆಯಾಗಿದ್ದನು. ಕೋರ್ಟ್ ಬಳಿಯಿಂದ ಹೊಸಕೋಟೆ ಬಸ್ ಹಿಡಿದು ತಮಿಳುನಾಡಿಗೆ ಎಸ್ಕೇಪ್ ಆಗಿದ್ದನು. ಪೊಲೀಸರಿಗೆ ಸಿಗಬಾರದು ಎಂದು ಹೊಸಕೋಟೆ ಟೋಲ್ ಬಳಿ ಮೊಬೈಲ್ ಎಸೆದಿದ್ದನು.

ಆರಗ ಜ್ಞಾನೇಂದ್ರ ಪತ್ರಿಕಾ ಹೇಳಿಕೆ

ಯುವತಿಯ ಮೇಲೆ ಆಸಿಡ್ ಎರಚುವಿಕೆ ಯಂಥ ಅಮಾನುಷ ಕೃತ್ಯ ಎಸಗಿ ಪರಾರಿಯಾಗಿದ್ದ ಕಿರಾತಕ   ನಾಗೇಶ್ ಎಂಬ ಆರೋಪಿಯನ್ನು ನಮ್ಮ ಪೊಲೀಸರು, ಅತ್ಯಂತ ಶ್ರಮ ಹಾಗೂ ದಕ್ಷತೆಯಿಂದ ನೆರೆಯ ತಮಿಳುನಾಡು ರಾಜ್ಯದಲ್ಲಿ ಅಡಗಿದ್ದವನನ್ನು  ಬಂಧಿಸಿದ್ದಾರೆ.

ಆರೋಪಿಯನ್ನು ಬಂಧಿಸಿ ಹೆಡೆಮುರಿ ಕಟ್ಟುವುದರ ಮೂಲಕ ನಮ್ಮ ಪೊಲೀಸರು, ದೇಶದಲ್ಲಿಯೇ, ಅತ್ಯಂತ ದಕ್ಷತೆಯ ಹಾಗೂ ವೃತ್ತಿಪರ ಪಡೆಯೆಂದು, ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸುತ್ತನೆ. ತಮಿಳುನಾಡು ಪೊಲೀಸರೂ, ಹೀನ ಕೃತ್ಯ ನಡೆಸಿದ ಅಪರಾಧಿಯನ್ನು ಬಂಧಿಸುವ ಕಾರ್ಯದಲ್ಲಿ ನಮ್ಮ ಪೊಲೀಸರಿಗೆ ನೆರವಾಗಿದ್ದಾರೆ.ಅವರಿಗೂ ನನ್ನ ಅಭಿನಂದನೆಗಳು.

ಇದನ್ನೂ ಓದಿ:  Udupi: ಎರಡು ಕೊಲೆ, ನಾಲ್ಕು ಸಂಬಂಧ: ಚೆಲುವಿ ಹೆಸರಿನ ಚೆಲುವೆಯ ಕೊಲೆ: ಬಚಾವ್ ಆಗಲು ಮಗುವನ್ನ ಕೊಂದ ನೀಚ

ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದಲ್ಲಿ ವಿಚಾರಣೆ

ಅಪರಾಧಿಗೆ ಉಗ್ರ ಶಿಕ್ಷೆಯಾಗುವಂತೆ, ಅಪರಾಧಿಯನ್ನು, ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದಲ್ಲಿ ಆರೋಪಿಯ ವಿಚಾರಣೆ ನಡೆಸಿ  ಎಲ್ಲಾ ರೀತಿಯ ಕಾನೂನು ಕ್ರಮ ಜರುಗಿಸಲಾಗುತ್ತದೆ. ಆರೋಪಿಗೆ ತಕ್ಕ ಶಿಕ್ಷೆ ಆಗುವ ಮೂಲಕ ಸಂತ್ರಸ್ತ ಮಹಿಳೆಗೆ ಹಾಗೂ ಕುಟುಂಬ ವರ್ಗಕ್ಕೆ ಸ್ವಲ್ಪವಾದರೂ ನೆಮ್ಮದಿ ದೊರಕಿದಂತಾಗುವುದು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ, ಸಂತ್ರಸ್ತ ಮಹಿಳೆ, ಚೇತರಿಸಿಕೊಳ್ಳುತ್ತಿದ್ದು ಶೀಘ್ರ ಗುಣಮುಖ ವಾಗಲಿ ಎಂದು, ಪ್ರಾರ್ಥಿಸುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿದ್ದಾರೆ.
Published by:Mahmadrafik K
First published: