ಮಾಹಿತಿ ಸೋರಿಕೆ ಆರೋಪದಲ್ಲಿ ಬಿಡಿಎ ಡಾಟಾ ಎಂಟ್ರಿ ಆಪರೇಟರ್​ಗಳ ಸಾಮೂಹಿಕ ವರ್ಗಾವಣೆ

ಮಾಹಿತಿ ಸೋರಿಕೆ ಮಾಡುತ್ತಿರುವ ಆರೋಪದ ಹಿನ್ನಲೆಯಲ್ಲಿ ಮೂವರು ಭ್ರಷ್ಟರನ್ನು ಬಿಟ್ಟು ಉಳಿದೆಲ್ಲ ಡಾಟಾ ಎಂಟ್ರಿ ಆಪರೇಟರ್​ಗಳನ್ನು ವರ್ಗಾವಣೆ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ

news18-kannada
Updated:July 12, 2020, 6:45 PM IST
ಮಾಹಿತಿ ಸೋರಿಕೆ ಆರೋಪದಲ್ಲಿ ಬಿಡಿಎ ಡಾಟಾ ಎಂಟ್ರಿ ಆಪರೇಟರ್​ಗಳ ಸಾಮೂಹಿಕ ವರ್ಗಾವಣೆ
ಬಿಡಿಎ
  • Share this:
ಬೆಂಗಳೂರು(ಜುಲೈ.12): ಬಿಡಿಎಗೆ ಸಂಬಂಧಿಸಿದ ಅಪಾರ ಪ್ರಮಾಣದ ಮಾಹಿತಿ ಸೋರಿಕೆಯಾಗಿದೆ ಎಂಬ ಕಾರಣ ಮುಂದಿಟ್ಟುಕೊಂಡು ಬಿಡಿಎ ಆಯುಕ್ತ ಮಹಾದೇವ್ ಒಂದೇ ಬಾರಿ ಎಲ್ಲರಿಗೂ ವರ್ಗಾವಣೆಯ ಶಾಕ್ ನೀಡಿ ಸುದ್ದಿಯಲ್ಲಿದ್ದಾರೆ. ವರ್ಗಾವಣೆಯ ವಿಷಯದಲ್ಲಿ ಅವರ ಕ್ರಮ ಪ್ರಶ್ನಾತೀತ. ಆದರೆ, ಅವರ ನಡೆ ಅನುಮಾನಕ್ಕೆ ಕಾರಣ ಸಾಮಾಜಿಕ ನ್ಯಾಯದ ಪಾಲನೆಯಾಗಿಲ್ಲ ಎನ್ನುವುದು. 103 ಡಾಟಾ ಎಂಟ್ರಿ ಆಪರೇಟರ್​ ಗಳ ವರ್ಗಾವಣೆಯಲ್ಲಿ ಎಲ್ಲರನ್ನೂ ವರ್ಗಾವಣೆ ಮಾಡಿದ್ದರೆ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ. ಆದರೆ, ಆಯಕಟ್ಟಿನ ಸ್ಥಳದಲ್ಲಿರುವ  ಮೂವರು ಡಾಟಾ ಎಂಟ್ರಿ ಆಪರೇಟರ್​ ಗಳಿಗೆ ಮಾತ್ರ ವರ್ಗಾವಣೆಯಿಂದ ಪ್ರತ್ಯೇಕ ರಿಯಾಯ್ತಿ ಕೊಡಲಾಗಿದೆ ಎನ್ನುವುದೇ ಪ್ರಶ್ನೆಯಾಗಿದೆ.

ನವೀನ್, ಸುನೀಲ್ ಹಾಗು ಚೇತನ್ ಎನ್ನುವ ಮೂವರು ಡಾಟಾ ಎಂಟ್ರಿ ಆಪರೇಟರ್ಸ್ ಗಳನ್ನು ವರ್ಗಾವಣೆಯ ವ್ಯಾಪ್ತಿಗೆ ತಂದಿಯೇ ಇಲ್ಲ. ಯಾಕೆ ಈ ತಾರತಮ್ಯ ಸಾಮಾಜಿಕ ಅಸಮಾನತೆ ಎಲ್ಲ 103 ಜನರನ್ನು ವರ್ಗಾವಣೆ ಮಾಡಲಾಗುತ್ತೆ ಎಂದ್ರೆ ಇವರಿಗೂ ಇದು ಅಪ್ಲೈ  ಆಗಬೇಕಲ್ವೇ. ಈ ಮೂವರಿಗೆ ವಿಶೇಷ ರಿಯಾಯ್ತಿ. ಅವರ ಬಗ್ಗೆ ವಿಶೇಷ ಕಾಳಜಿ ತೋರುವುದಕ್ಕೆ ಕಾರಣವೇನು. 100 ಜನರು ಮಾತ್ರ ಮಾಹಿತಿ ಸೋರಿಕೆ ಮಾಡುತ್ತಿದ್ದರು, ಆದರೆ, ಈ ಮೂವರು ಮಾತ್ರ ಅತ್ಯಂತ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆನ್ನುವುದು ಇದರ ಅರ್ಥನಾ. ಎಲ್ಲರನ್ನೂ ವರ್ಗಾವಣೆ ಮಾಡಲಾಗುತ್ತೆ ಎಂದ್ರೆ ಈ ಮೂವರಿಗೂ ಅದು ಅನ್ವಯ ಆಗಬೇಕಿತ್ತು. ಅದನ್ನು ಮಾಡದೇ ಆಯುಕ್ತ ಮಹಾದೇವ್ ಸಾಮಾಜಿಕ ನ್ಯಾಯ ಪಾಲಿಸಿಲ್ಲ ಎನ್ನುವುದು ಅವರ ಮೇಲಿರುವ ಆರೋಪ.

ನವೀನ್, ಸುನೀಲ್ ಹಾಗೂ ಚೇತನ್ ಅವರನ್ನು ವರ್ಗಾವಣೆ ವ್ಯಾಪ್ತಿಯಿಂದ ಕೈ ಬಿಟ್ಟಿರುವುದರ ಹಿಂದೆ ಅನೇಕ ರೋಚಕ ಕಥೆಗಳಿವೆ. ಬಿಡಿಎನಲ್ಲಿ ನಡೆಯುತ್ತಿರುವ ಅವ್ಯವಹಾರಗಳಿಗೆ ಈ ಮೂವರೇ ಕಿಂಗ್ ಪಿನ್ ಎನ್ನುವ ಆರೋಪವೂ ಇದೆ. ಜೀವಮಾನವೆಲ್ಲಾ ದುಡಿದರು ಇವತ್ತಿಗೂ ಅದೆಷ್ಟೋ ಡಾಟಾ ಎಂಟ್ರಿ ಆಪರೇಟರ್​​​ಗಳಿಗೆ ಕೈ ತುಂಬಾ ಸಂಪಾದನೆ  ಆಗುವುದಿಲ್ಲ.

ಇಚ್ಛಿಸಿದ್ದನ್ನು ಧರಿಸುವುದಕ್ಕೂ ಆಗುವುದಿಲ್ಲ. ಬಾಯಿ ಕೇಳಿದ್ದನ್ನು ತಿನ್ನುವುಕ್ಕೆ ಆಗುವುದಿಲ್ಲ. ಅಂಥಾ ಸ್ಥಿತಿಯಲ್ಲಿರುವ ಅದೆಷ್ಟೋ ಡಾಟಾ ಎಂಟ್ರಿ ಆಪರೇಟರ್​ಗಳಿದ್ದಾರೆ. ಇಂತವರ ನಡುವೆ ಮೇಲ್ಕಂಡ ಮೂವರು ಖತರ್ನಾಕ್ ಡಾಟಾ ಎಂಟ್ರಿ ಆಪರೇಟರ್ಸ್ ಗಳ ಇತಿಹಾಸ ಅಚ್ಚರಿ ಮೂಡಿಸುತ್ತೆ. ಅವರ ಅಂದಾ ದರ್ಬಾರ್ ಗಾಬರಿ ಹುಟ್ಟಿಸುತ್ತೆ. ಐಷಾರಾಮಿ ಕಾರುಗಳಲ್ಲಿ ಇವರು ಬರುತ್ತಾರೆ. ಆಯಕ್ತರು ಮೊದಲು ಯಾರನ್ನು ತೆಗೆದು ಹಾಕಬೇಕಾಗಿತ್ತ. ಆದರೆ, ಅಂಥದ್ದೊಂದು ಕೆಲಸವನ್ನು ಅವರು ಮಾಡಲಿಲ್ಲ. ಮೂವರನ್ನು ಉಳಿಸಿಕೊಂಡು ಉಳಿದವರನ್ನೆಲ್ಲಾ ವರ್ಗಾವಣೆ ಮಾಡಿದ್ದಾರೆ

ಬಿಡಿಎನಲ್ಲಿ ಸೂಪರ್ ಕಮಿಷನರ್ ಆಗಿರುವ ಡಿಎಸ್-1 ಚಿದಾನಂದ್ ಅವರ ಕಚೇರಿಯಲ್ಲಿ ಕೆಲಸ ಮಾಡುವ ನವೀನ್ ಬಗ್ಗೆ ವ್ಯಾಪಕ ಆರೋಪಗಳಿವೆ. ಬಿಡಿಎನಲ್ಲಿ ದಲ್ಲಾಳಿಗಳ ಮೇನ್ ಕನೆಕ್ಷನ್ ಇರುವುದೇ ಇವನ ಬಳಿ ಎನ್ನಲಾಗುತ್ತೆ. ಬಿಡಿಎ ಅಧಿಕಾರಿಗಳು ಹಾಗೂ ದಲ್ಲಾಳಿಗಳ ನಡುವೆ ಕಿಂಗ್ ಪಿನ್ ಆಗಿ ಕೆಲಸ ಮಾಡುತ್ತಾ ಕಮಿಷನ್ ಹಣದಲ್ಲಿ ತನ್ನ ಮೇಲಾಧಿಕಾರಿಗಳಿಗೆ ಒಂದಷ್ಟು ಎಂಜಿಲು ಕಾಸನ್ನು ಕೊಡುತ್ತಾ ಅವರನ್ನು ಚೆನ್ನಾಗಿಟ್ಟುಕೊಂಡಿರುವುದರಿಂದಲೇ ನವೀನ್ ಬಚಾವಾಗಿದ್ದಾನೆ ಎನ್ನುತ್ತಾರೆ ಸಮಾಜಿಕ ಕಾರ್ಯಕರ್ತ ಶಿವಕುಮಾರ್.

ಹಾಗೆ ನೋಡಿದರೆ ಬಿಡಿಎನ ಬಹುಮೂಲ್ಯ ಮಾಹಿತಿಗಳು ಸೋರಿಕೆ ಆಗುತ್ತಿರುವುದೇ ನವೀನ್ ನಿಂದ ಎನ್ನುವ ಆರೋಪಗಳಿವೆ. ಆದರೆ, ಅಧಿಕಾರಿಗಳನ್ನು ಚೆನ್ನಾಗಿಟ್ಟುಕೊಂಡು ಎಲ್ಲವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಿರುವ ಈತನ ವಿರುದ್ದ ಇತ್ತೀಚೆಗೆ ಎಚ್ ಎಸ್ ಆರ್ ಲೇ ಔಟ್ ಪೊಲೀಸ್ ಠಾಣೆಯಲ್ಲೂ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ಬಿಡಿಎ ನಲ್ಲಿ ಕೆಲಸ ಮಾಡುವ ವೆಂಕಟರಮಣಪ್ಪ ಅವರ ಮೇಲೆ ಹಲ್ಲೆ ನಡೆಸಿ ಅದಕ್ಕೆ ತಪ್ಪೊಪ್ಪಿಗೆ ಬರೆದುಕೊಟ್ಟಿರುವ ದಾಖಲೆಗಳೂ ಇವೆ. ಇಷ್ಟೆಲ್ಲಾ ಆರೋಪ ಇರುವ ಈತ ಡಿಎಸ್-1 ಗೆ ತುಂಬಾ ಆತ್ಮೀಯ ಎನ್ನುವ ಕಾರಣಕ್ಕೆ ವರ್ಗಾವಣೆಯಿಂದ ನಿಂದ ಬಚಾವಾಗಿದ್ದಾನೆ.

ಮಾಹಿತಿ ಸೋರಿಕೆ ಮಾಡುತ್ತಿರುವ ಆರೋಪದ ಹಿನ್ನಲೆಯಲ್ಲಿ ಮೂವರು ಭ್ರಷ್ಟರನ್ನು ಬಿಟ್ಟು ಉಳಿದೆಲ್ಲ ಡಾಟಾ ಎಂಟ್ರಿ ಆಪರೇಟರ್​ಗಳನ್ನು ವರ್ಗಾವಣೆ ಮಾಡಿರುವುದು ಸರಿಯಾಗಿ ಕೆಲಸ ಮಾಡುತ್ತಿರುವ ಅದೆಷ್ಟೋ ಡಾಟಾ ಎಂಟ್ರಿ ಆಪರೇಟರ್​ ಗಳನ್ನು ಅನುಮಾನದ ದೃಷ್ಟಿಯಲ್ಲಿ ನೋಡುವಂತಾಗಿದೆ. ಅವರವರ ಮನೆಗಳಲ್ಲೇ ಅವರನ್ನು ಅಪರಾಧಿ ಸ್ಥಾನದಲ್ಲಿ ನೋಡುವಂತಾಗಿದೆಯಂತೆ.ತಪ್ಪು ಮಾಡಿದ್ದರೆ ಶಿಕ್ಷೆ ಎದುರಿಸಲಿಕ್ಕೆ ಸಿದ್ಧವಿದ್ದೇವೆ. ಕೆಲವು ಭ್ರಷ್ಟರು ಮಾಡುವ ತಪ್ಪಿಗೆ ಪ್ರಾಮಾಣಿಕವಾಗಿ ದುಡಿಯುವ ನಮ್ಮಂಥವರನ್ನು ಟಾರ್ಗೆಟ್ ಮಾಡಿ ವರ್ಗಾವಣೆ ಮಾಡಿರುವುದು ಯಾವ ನ್ಯಾಯ. ಬಿಡಿಎನಲ್ಲಿ ನಮ್ಮನ್ನು ಕಳ್ಳರಂತೆ ನೋಡುತ್ತಿದ್ದಾರೆ. ಮನೆಯಲ್ಲಿ ಅಡ್ಡದಾರಿ ಹಿಡಿದು ಮಾಡಿದ ದುಡ್ಡು ಎಲ್ಲಿ ಎಂದು ಪ್ರಶ್ನಿಸುತ್ತಿದ್ದಾರೆ. ನಮ್ಮ ನೋವನ್ನು ಯಾರ ಬಳಿ ಹೇಳಿಕೊಳ್ಳೋಣ ಹೇಳಿ ಎಂದು ಪ್ರಶ್ನಿಸುತ್ತಾರೆ ಡಾಟಾ ಎಂಟ್ರಿ ಆಪರೇಟರ್ಸ್.

ಇದನ್ನೂ ಓದಿ : ಉತ್ತರ ಕನ್ನಡದಲ್ಲಿ ಟ್ರಾವೆಲ್ ಹಿಸ್ಟರಿ ಮುಚ್ಚಿಡುವ ಜನ ; ಕೊರೋನಾ ಸೋಂಕಿತರ ಸಂಖ್ಯೆಯ ಪ್ರಮಾಣ ಹೆಚ್ಚಳ

ಮಾಹಿತಿ ಸೋರಿಕೆ ಆರೋಪದ ಕಾರಣಕ್ಕೆ ಡಾಟಾ ಎಂಟ್ರಿ ಆಪರೇಟರ್​ ಗಳನ್ನು ಕಮಿಷನರ್ ಮಹಾದೇವ್ ಅವರು ವರ್ಗಾವಣೆ ಮಾಡಿದ್ದನ್ನು ಯಾರು ಪ್ರಶ್ನಿಸುತ್ತಿಲ್ಲ. ಆದರೆ, ಅಕ್ರಮಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪಗಳಿರುವ ನವೀನ್, ಚೇತನ್, ಸುನೀಲ್ ಎನ್ನುವವರನ್ನು ವರ್ಗಾವಣೆ ವ್ಯವಸ್ಥೆಯಿಂದ ದೂರವಿಟ್ಟು ಅವರನ್ನು ಉಳಿಸಿಕೊಂಡಿದ್ದೇಕೆ. ಇದು ಸಾಮಾಜಿಕ ನ್ಯಾಯನಾ ಎನ್ನುವುದೇ ಎಲ್ಲರ ಪ್ರಶ್ನೆ. ಈ ವರ್ಗಾವಣೆಯಿಂದ ನೊಂದವರ ಪರ ಕಾನೂನಾತ್ಮಕ ಹೋರಾಟಕ್ಕೂ ವ್ಯವಸ್ಥೆ ಮಾಡಿಕೊಳ್ಳುತ್ತಿರುವುದಾಗಿ ಸಾಮಾಜಿಕ ಕಾರ್ಯಕರ್ತ ಶಿವಕುಮಾರ್ ನ್ಯೂಸ್-18 ಕನ್ನಡಕ್ಕೆ ಸ್ಪಷ್ಟಪಡಿಸಿದ್ದಾರೆ.

ಅದೇನೇ ಇರಲಿ ಇಡೀ ವ್ಯವಸ್ಥೆಯನ್ನು ಸರಿಪಡಿಸಲು ಹೋಗಿ ಜೊಳ್ಳುಗಳ ನಡುವೆ ಫಲ ನೀಡುವ ಕಾಳುಗಳನ್ನು ಎತ್ತಿ ಬಿಸಾಕಿದ ಬಿಡಿಎ ಆಯುಕ್ತರಾದ ಮಹಾದೇವ್ ಅವರ ಧೋರಣೆ ಒಂದಷ್ಟು ಆಕ್ಷೇಪಕ್ಕೆ ಕಾರಣವಾಗಿರುವುದಂತು ಸತ್ಯ. ವರ್ಗಾವಣೆ ವಿಷಯದಲ್ಲಿ ಮತ್ತೆ ಒಂದಷ್ಟು ಪರಿಷ್ಕರಣೆ ಆಗುತ್ತಾ ಕಾದು ನೋಡಬೇಕಿದೆ.
Published by: G Hareeshkumar
First published: July 12, 2020, 6:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading