Puttur: ಹೈವೇಗಳಲ್ಲಿ ಟಿಪ್ಪರ್ ಲಾರಿಗಳ ಅಟ್ಟಹಾಸ, ಬೈಕ್ ಸವಾರರು ಅಪಘಾತಕ್ಕೆ ಬಲಿ

ಮರಳು, ಮಣ್ಣು ಸಾಗಿಸುವ ಈ ಟಿಪ್ಪರ್ ಲಾರಿ ಚಾಲಕರು ತುರ್ತು ಸೇವೆಯ ಅಂಬ್ಯುಲೆನ್ಸ್ (Ambulance) ಗಳಿಂತಲೂ ವೇಗವಾಗಿ ಚಾಲನೆ ಮಾಡುವ ಮೂಲಕ ಇತರ ವಾಹನಗಳಿಗೆ ಅಪಾಯವಾಗಿ (Danger) ಕಾಡಲಾರಂಭಿಸಿದೆ. ತಿಂಗಳೊಂದರಲ್ಲೇ ಹತ್ತಕ್ಕೂ ಮಿಕ್ಕಿದ ಅವಘಡಗಳು ಟಿಪ್ಪರ್ ಲಾರಿಗಳಿಂದಲೇ ಸಂಭವಿಸುತ್ತಿದೆ.

ಅಪಘಾತ ನಡೆದ ಸ್ಥಳ

ಅಪಘಾತ ನಡೆದ ಸ್ಥಳ

  • Share this:
ಗ್ರಾಮೀಣ, ರಾಜ್ಯ ಹಾಗು ರಾಷ್ಟ್ರೀಯ ಹೆದ್ದಾರಿಗಳಲ್ಲಿ (National Highway) ಸಂಚರಿಸುವ ಟಿಪ್ಪರ್ ಲಾರಿಗಳು ಇತ್ತೀಚಿನ ದಿನಗಳಲ್ಲಿ ಯಮಸ್ವರೂಪಿಯಾಗಿ ಬದಲಾಗುತ್ತಿವೆ. ಮರಳು, ಮಣ್ಣು ಸಾಗಿಸುವ ಈ ಟಿಪ್ಪರ್ ಲಾರಿ ಚಾಲಕರು ತುರ್ತು ಸೇವೆಯ ಅಂಬ್ಯುಲೆನ್ಸ್ (Ambulance) ಗಳಿಂತಲೂ ವೇಗವಾಗಿ ಚಾಲನೆ ಮಾಡುವ ಮೂಲಕ ಇತರ ವಾಹನಗಳಿಗೆ ಅಪಾಯವಾಗಿ (Danger) ಕಾಡಲಾರಂಭಿಸಿದೆ. ತಿಂಗಳೊಂದರಲ್ಲೇ ಹತ್ತಕ್ಕೂ ಮಿಕ್ಕಿದ ಅವಘಡಗಳು ಟಿಪ್ಪರ್ ಲಾರಿಗಳಿಂದಲೇ ಸಂಭವಿಸುತ್ತಿದ್ದು, ಈ ಲಾರಿಗಳ (Lorry) ಓಡಾಟದ ಮೇಲೆ ಕ್ರಮ ಜರುಗಿಸಬೇಕು ಎನ್ನುವ ಒತ್ತಡ ಕೇಳಿ ಬರಲಾರಂಭಿಸಿದೆ.

ಟಿಪ್ಪರ್ ಲಾರಿಗಳ ಸಂಖ್ಯೆ ಹೆಚ್ಚಳ

ಮರಳು , ಕಲ್ಲಿಗೆ ದಕ್ಷಿಣಕನ್ನಡ ಜಿಲ್ಲೆಗೆ ಎಲ್ಲೆಡೆ ಬೇಡಿಕೆಯಿದೆ. ಈ ಕಾರಣಕ್ಕಾಗಿ ಕೇರಳ ಹಾಗೂ ಹೊರ ಜಿಲ್ಲೆಗಳಿಂದ ಹೆಚ್ಚಿನ ಪ್ರಮಾಣದ ಲಾರಿಗಳು ಜಿಲ್ಲೆಯಲ್ಲಿ ಪ್ರವೇಶಿಸುತ್ತಿದೆ. ಅದರಲ್ಲೂ ಟಿಪ್ಪರ್ ಲಾರಿಗಳ ಸಂಖ್ಯೆಯೇ ಹೆಚ್ಚಾಗಿದ್ದು, ಮರಳು ಹಾಗೂ ಮಣ್ಣು ಸಾಗಾಟದ ನೆಪದಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಾಗುತ್ತಿದೆ.

ದ್ವಿಚಕ್ರ ವಾಹನ ಹಾಗೂ ಇತರ ವಾಹನಗಳಿಗೆ ಅಪಾಯ

ಗ್ರಾಮೀಣ, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚಾಗಿ ಸಂಚರಿಸುವ ಈ ಟಿಪ್ಪರ್ ಲಾರಿಗಳ ಚಾಲಕರು ತಮಗೆ ತೋಚಿದ ರೀತಿಯಲ್ಲಿ ವಾಹನವನ್ನು ಚಲಾಯಿಸುವುದರಿಂದಾಗಿ ದ್ವಿಚಕ್ರ ವಾಹನ ಹಾಗೂ ಇತರ ವಾಹನಗಳಿಗೆ ಇವುಗಳು ಯಮಸ್ವರೂಪಿಯಾಗುತ್ತಿವೆ.

ವನ್​ ವೇಗಳಲ್ಲಿ ವಿಪರೀತ ವೇಗ

ಏಕಮುಖ ಚಾಲನೆಯಿರುವ ಹೆದ್ದಾರಿಗಳಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಾಯಿಸುವುದು, ಅತೀ ವೇಗದ ಚಾಲನೆಯಿಂದಾಗಿ ಹಲವು ಅಫಘಾತಗಳಿಗೆ ಕಾರಣವಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ. ವೇಗ ನಿಯಂತ್ರಕಗಳನ್ನು ಪ್ರತೀ ವಾಹನಗಳಿಗೂ ಅಳವಡಿಸಬೇಕೆಂಬ ಕಾನೂನಿದ್ದರೂ, ಟಿಪ್ಪರ್ ವಾಹನಗಳು ಮಾತ್ರ ಈ ಕಾನೂನನ್ನು ಪಾಲಿಸುತ್ತಿಲ್ಲ ಎನ್ನುವ ಆರೋಪವಿದೆ.

ಸಾರ್ವಜನಿಕ ಆಸ್ತಿಗಳಿಗೂ ಹಾನಿ

ಪೋಲೀಸ್ ತಪಾಸಣೆಯ ವೇಳೆ ವೇಗ ನಿಯಂತ್ರಕದ ಬಿಲ್ ಗಳನ್ನು ಮಾತ್ರ ಹಾಜರುಪಡಿಸುವ ವ್ಯವಸ್ಥೆಯೂ ಇದ್ದು, ಅವುಗಳನ್ನು ತಮ್ಮ ವಾಹನಗಳಿಗೆ ಅಳವಡಿಸದೆ ಸಾಕಷ್ಟು ಲಾರಿಗಳು ಓಡಾಡುತ್ತಿವೆ. ಅತೀ ವೇಗದ ಚಾಲನೆಯಿಂದಾಗಿ  ಟಿಪ್ಪರ್ ಚಾಲಕ ವಾಹನವನ್ನು ರಸ್ತೆಯಿಂದ ಸೀದಾ ಪಾದಾಚಾರಿ ರಸ್ತೆಗೆ ನುಗ್ಗಿಸಿ ರಸ್ತೆ ಬದಿಯಲ್ಲಿರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ಸೇರಿದಂತೆ ಹಲವು ಸಾರ್ವಜನಿಕ ಆಸ್ತಿಪಾಸ್ತಿಗಳಿಗೂ ಹಾನಿಯುಂಟು ಮಾಡಿದ ಘಟನೆಯೂ ನಡೆದಿದೆ.

ಒಂದೇ ತಾಲೂಕಿನಲ್ಲಿ 10ಕ್ಕೂ ಹೆಚ್ಚು ಘಟನೆ

ಅಲ್ಲದೆ ಗ್ರಾಮೀಣ ರಸ್ತೆಯಲ್ಲಿ ಈ ಟಿಪ್ಪರ್ ಲಾರಿಗಳ ಓಡಾಟ ಅಪಾಯಕಾರಿಯಾಗಿದ್ದು, ಪುತ್ತೂರು ತಾಲೂಕೊಂದರಲ್ಲೇ ಟಿಪ್ಪರ್ ಲಾರಿಗಳು ಡಿಕ್ಕಿ ಹೊಡೆದು ಸಾವು-ನೋವು ಕಂಡ ಹತ್ತಕ್ಕೂ ಮಿಕ್ಕಿದ ಅವಘಡಗಳು ಸಂಭವಿಸಿವೆ. ಪುತ್ತೂರಿನ ದರ್ಬೆ ವೃತ್ತದಿಂದ ಮಂಜಲ್ಪಡ್ಪು ವ್ಯಾಪ್ತಿಯಲ್ಲಿ ಹಲವು ಶಾಲಾ-ಕಾಲೇಜುಗಳು ಕಾರ್ಯಾಚರಿಸುತ್ತಿದ್ದು, ಸಾವಿರಾರು ಸಂಖ್ಯೆಯ ಮಕ್ಕಳು ಈ ಹೆದ್ದಾರಿಯ ಮೂಲಕವೇ ಹಾದು ಹೋಗುತ್ತಾರೆ.

ಇಂಥಹ ಪ್ರದೇಶಗಳಲ್ಲೂ ಟಿಪ್ಪರ್ ಚಾಲಕರು ಅತಿವೇಗದಿಂದ ವಾಹನ ಚಲಾಯಿಸುತ್ತಿರುವುದು ಮುಂದಿನ ದಿನಗಳಲ್ಲಿ ಇನ್ನಷ್ಟು ಅವಘಡಗಳಿಗೆ ಇದು ಎಡೆಮಾಡಿಕೊಡಲಿದೆ ಎನ್ನುವ ಭಯ ಕಾಡುತ್ತಿದೆ ಎನ್ನುತ್ತಾರೆ ಪುತ್ತೂರು ನಿವಾಸಿ ಅಬ್ದುಲ್ ರಝಾಕ್ ಬಪ್ಪಳಿಗೆ.

ಇದನ್ನೂ ಓದಿ: Karnataka Rain Update: ಹುಬ್ಬಳಿಯಲ್ಲಿ ಮರ ಬಿದ್ದು ವ್ಯಕ್ತಿ ಸಾವು; ಚಿತ್ರದುರ್ಗದಲ್ಲಿ ಸಿಡಿಲಿಗೆ ಇಬ್ಬರು ಬಲಿ

ತುರ್ತು ಸೇವೆಗಳನ್ನು ನೀಡುವ ಆಂಬ್ಯುಲೆನ್ಸ್ ಹಾಗೂ ಅಗ್ನಿಶಾಮಕ ದಳದ ವಾಹನಗಳಿಗಿಂತಲೂ ಹೆಚ್ಚಿನ ವೇಗದಲ್ಲಿ ಈ ಟಿಪ್ಪರ್ ಗಳನ್ನು ಚಲಾಯಿಸುವ ಮೂಲಕ ಜನರ ಪ್ರಾಣಕ್ಕೆ ಕುತ್ತು ತರಲಾಗುತ್ತಿದೆ. ಅಲ್ಲದೆ ಕೆಲವು ಟಿಪ್ಪರ್ ಗಳ ಮುಂದೆ ನಂಬರ್ ಪ್ಲೇಟ್ ಇದ್ದರೆ, ಹಿಂದೆ ಇರುವುದಿಲ್ಲ,

ರೂಲ್ಸ್ ಫಾಲೋ ಮಾಡ್ತಿಲ್ಲ

ಹಿಂದೆ ಇದ್ದಲ್ಲಿ , ಮುಂದೆ ಇರದಂತಹ ಸ್ಥಿತಿಯಿದೆ. ರಸ್ತೆಗಳಲ್ಲಿ ಮರಳು, ಮಣ್ಣು ಸಾಗಾಟದ ಸಂದರ್ಭದಲ್ಲಿ ಇವುಗಳಿಗೆ ಹೊದಿಕೆಯನ್ನು ಹಾಕಿ ಚಾಲನೆ ಮಾಡಬೇಕು ಎನ್ನುವ ಕಾನೂನಿದ್ದರೂ, ಈ ಎಲ್ಲಾ ಕಾನೂನುಗಳು ಈ ವಾಹನಗಳಿಗೆ ಅನ್ವಯಿಸುವುದಿಲ್ಲ ಎನ್ನುವ ರೀತಿಯಲ್ಲಿ ಇವುಗಳು ಓಡಾಟ ನಡೆಸುತ್ತಿವೆ.

ಇದನ್ನೂ ಓದಿ: SSLC ಮೌಲ್ಯಮಾಪನಕ್ಕೆ 9 ಸಾವಿರ ಶಿಕ್ಷಕರು ಗೈರು; ಫಲಿತಾಂಶ ಮೇ. 15ಕ್ಕೆ ಪ್ರಕಟ ಸಾಧ್ಯತೆ

ಮಣ್ಣು ಹಾಗೂ ಮರಳನ್ನು ರಸ್ತೆಯಲ್ಲಿ ಎಲ್ಲೆಂದರಲ್ಲಿ ಚೆಲ್ಲುವ ಪ್ರಕರಣಗಳೂ ಹೆಚ್ಚಾಗಿ ನಡೆಯುತ್ತಿದ್ದು,  ಇವುಗಳನ್ನು ನಿಯಂತ್ರಿಸಬೇಕಾದ ಪೋಲೀಸ್ ಮತ್ತು ಸಾರಿಗೆ ಇಲಾಖೆ ಮೌನಕ್ಕೆ ಶರಣಾಗಿವೆ. ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಪ್ರತಿದಿನವೂ ದಿನಪೂರ್ತಿ ತಪಾಸಣೆ ನಡೆಸುವ ಎರಡೂ ಇಲಾಖೆಗಳು ಟಿಪ್ಪರ್ ಲಾರಿಗಳನ್ನು ತಡೆದು ನಿಲ್ಲಿಸಿ, ಅವುಗಳಿಂದ ಸಲ್ಲಬೇಕಾದ ಕಪ್ಪಕಾಣಿಕೆಗಳನ್ನು ಪಡೆದು ಸುಮ್ಮನಾಗುತ್ತಿದ್ದಾರೆ ಎನ್ನುವ ಆರೋಪವೂ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಇದೇ ರೀತಿಯ ಅವಘಡಗಳು ಸಂಭವಿಸಿದಲ್ಲಿ ಮುಂದಿನ ದಿನಗಳಲ್ಲಿ ಹೋರಾಟದ ಹಾದಿ ಹಿಡಿಯಲು ಸಾರ್ವಜನಿಕರು ತೀರ್ಮಾನಿಸಿದ್ದಾರೆ.
Published by:Divya D
First published: