ಆನೇಕಲ್(ಆ.06): ಜನ ಮಹಾಮಾರಿ ಕೊರೋನಾ ಹಾವಳಿಗೆ ತಲ್ಲಣಗೊಂಡಿದ್ದಾರೆ. ಇಂತಹ ಹೊತ್ತಿನಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಿದ್ದ ಅಧಿಕಾರಿಯೊಬ್ಬ ಲಂಚಕ್ಕೆ ಬೇಡಿಕೆಯಿಟ್ಟು ಎಸಿಬಿ ಬಲೆಗೆ ಬಿದ್ದಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ನಡೆದಿದೆ.
ಚಂದಾಪುರ ಪುರಸಭೆ ಮುಖ್ಯಾಧಿಕಾರಿ ರಾಮ್ ಪ್ರಕಾಶ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ಗುತ್ತಿಗೆದಾರ ಇಂದ್ರ ಕುಮಾರ್ ಬಳಿ ಎರಡುವರೆ ಲಕ್ಷ ಲಂಚ ಪಡೆಯುವಾಗಿ ಎಸಿಬಿ ಬಲೆಗೆ ಬಿದ್ದಿದ್ದಾನೆ. ಚಂದಾಪುರ ಪುಸಭೆ ವ್ಯಾಪ್ತಿಯಲ್ಲಿ ಗುತ್ತಿಗೆದಾರ ಇಂದ್ರ ಕುಮಾರ್ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ಟೆಂಡರ್ ಪಡೆದು ಕಾಮಗಾರಿ ಪೂರ್ಣಗೊಳಿಸಿದ್ದಾನೆ. ಕಾಮಗಾರಿ ಪೂರ್ಣಗೊಂಡು ಐದಾರು ತಿಂಗಳು ಕಳೆದರೂ ಬಿಲ್ ಪಾಸ್ ಮಾಡಿರುವುದಿಲ್ಲ.
ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಬಳಿ ವಿಚಾರಿಸಿದಾಗ ಬಿಲ್ ಪಾಸ್ ಮಾಡಲು ಗುತ್ತಿಗೆದಾರ ಇಂದ್ರ ಕುಮಾರ್ ಬಳಿ 5 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದ. ಹಣ ನೀಡದಿದ್ದರೆ ಬಿಲ್ ಪಾಸ್ ಮಾಡುವುದಿಲ್ಲ ಎಂದಿದ್ದ. ಇದರಿಂದ ರೋಸಿ ಹೋದ ಗುತ್ತಿಗೆದಾರ ಇಂದ್ರ ಕುಮಾರ್ ಎಸಿಬಿಗೆ ದೂರು ನೀಡಿದ್ದಾನೆ.
ಗುತ್ತಿಗೆದಾರ ಇಂದ್ರ ಕುಮಾರ್ ನೀಡಿದ ದೂರು ಆಧರಿಸಿ ಅಖಾಡಕ್ಕಿಳಿದ ಎಸಿಬಿ ಡಿವೈಎಸ್ಪಿ ಗೋಪಾಲ್ ಜೋಗಿನ್ ಪಕ್ಕಾ ಪ್ಲಾನ್ ಮಾಡಿ ಆರೋಪಿಯನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕುಡಿಯುವ ನೀರಿನ ಕಾಮಗಾರಿ ಬಿಲ್ ಪಾಸ್ ಮಾಡಲು ಲಂಚದ ಬೇಡಿಕೆ ಇಟ್ಟಿದ್ದ ಸಿಓ ರಾಮಪ್ರಕಾಶ್ ಕಂಟ್ರಾಕ್ಟರ್ ಇಂದ್ರ ಕುಮಾರ್ ಬಳಿ 2.5 ಲಕ್ಷ ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇನ್ನೂ ಚಂದಾಪುರ ಪುರಸಭೆ ಸಿಓ ರಾಮ್ ಪ್ರಕಾಶ್ನನ್ನು ವಶಕ್ಕೆ ಪಡೆದ ಎಸಿಬಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ. ಸಮೀಪದ ಸೂರ್ಯನಗರ ಪೊಲೀಸ್ ಠಾಣೆಗೆ ಕರೆದೊಯ್ದ ಎಸಿಬಿ ಅಧಿಕಾರಿಗಳು ದಾಳಿಗೆ ಸಂಬಂಧಿಸಿದಂತೆ ದಾಖಲೆಯನ್ನು ನೀಡಿ ಎಫ್ಐಆರ್ ದಾಖಲಿಸಿದ್ದಾರೆ. ಜೊತೆಗೆ ವೈದ್ಯಕೀಯ ತಪಾಸಣೆ ಬಳಿಕ ಕೇಂದ್ರ ಕಚೇರಿಗೆ ಕರೆದೊಯ್ದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ