ಬೆಂಗಳೂರು(ಜ. 11): ಕೃಷಿ ಮಾರುಕಟ್ಟೆಯನ್ನ ಖಾಸಗಿಯವರ ಸುಪರ್ದಿಗೆ ನೀಡಿ ನಿರ್ನಾಮ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಕೆಲ ರೈತರು ಪ್ರತಿಭಟನೆ ನಡೆಸುತ್ತಿರುವ ಹೊತ್ತಲ್ಲೇ ನೂತನ ಕೃಷಿ ಕಾಯ್ದೆ ತನ್ನ ಫಲ ಕೊಡುತ್ತಿರುವ ನಿದರ್ಶನಗಳು ಅಲ್ಲಲ್ಲಿ ಕಾಣಸಿಗುತ್ತಿದೆ. ಎಪಿಎಂಸಿ ಬದಲು ರಿಲಾಯನ್ಸ್ ಸಂಸ್ಥೆಗೆ ಭತ್ತವನ್ನು ನೇರ ಮಾರಾಟ ಮಾಡಲು ಕರ್ನಾಟಕದ 1,100 ರೈತರು ಒಪ್ಪಂದಕ್ಕೆ ಸಹಿಹಾಕಿದ್ದಾರೆ. ರಾಯಚೂರಿನ ಸಿಂಧನೂರಿನ ಸ್ವಾಸ್ಥ್ಯ ಎಂಬ ಕಂಪನಿ ಮೂಲಕ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಗಿಂತ ಹೆಚ್ಚಿನ ದರದಲ್ಲಿ ಈ ರೈತರು ತಮ್ಮ ಭತ್ತ ಬೆಳೆಯನ್ನು ರಿಲಾಯನ್ಸ್ ರೀಟೇಲ್ಗೆ ಮಾರಲಿದ್ದಾರೆ ಎಂದು ಐಎಎನ್ಎಸ್ ಸುದ್ದಿಸಂಸ್ಥೆಯ ವರದಿಯೊಂದು ತಿಳಿಸಿದೆ.
“ನಮ್ಮ ಕಂಪನಿಯ ಪಾಲುದಾರರಾಗಿರುವ 1,100 ರೈತರ ಪರವಾಗಿ ರಿಲಾಯನ್ಸ್ ರೀಟೇಲ್ ಜೊತೆ ಜನವರಿ 6ಕ್ಕೆ ಒಪ್ಪಂದ ಮಾಡಿಕೊಂಡಿದ್ದೇವೆ. ಕ್ವಿಂಟಾಲ್ಗೆ 1,850 ರೂ ಎಂಎಸ್ಪಿ ದರ ಇರುವ ಸೋನಾ ಮಸೂರಿ ಅಕ್ಕಿಯನ್ನು ರಿಲಾಯನ್ಸ್ 1,950 ರೂಗೆ ಖರೀದಿಸುತ್ತಿದೆ. ಎಂಎಸ್ಪಿಗಿಂತ 100 ರೂ ಹೆಚ್ಚಿನ ದರದಲ್ಲಿ ರಿಲಾಯನ್ಸ್ಗೆ ಮಾರುತ್ತಿದ್ದೇವೆ” ಎಂದು ಸ್ವಾಸ್ಥ್ಯ ರೈತರ ಬೆಳೆ ಸಂಸ್ಥೆ (ಎಸ್ಎಫ್ಪಿಸಿ) ನಿರ್ವಾಹಕ ನಿರ್ದೇಶಕ ವಿ ಮಲ್ಲಿಕಾರ್ಜುನ್ ಹೇಳಿದ್ದಾರೆ.
ಎಪಿಎಂಸಿ ಮಾರುಕಟ್ಟೆಯ ಆಚೆ ತಮ್ಮ ಉತ್ಪನ್ನಗಳನ್ನ ನೇರವಾಗಿ ರೈತರು ಮಾರಲು ಅನುವು ಮಾಡಿಕೊಡುವಂತೆ ಎಪಿಎಂಸಿ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತಂದಿದೆ. ಈ ಕಾಯ್ದೆಯ ಅಡಿಯಲ್ಲೇ ಸ್ವಾಸ್ಥ್ಯ ಸಂಸ್ಥೆ ರಿಲಾಯನ್ಸ್ ಜೊತೆ ಈ ಒಪ್ಪಂದ ಮಾಡಿಕೊಂಡಿದೆ.
”ಒಪ್ಪಂದ ಮಾಡಿಕೊಂಡ ನಂತರ (ಜ. 6) ಶನಿವಾರದವರೆಗೂ (ಜ. 9) ನಮ್ಮ ರೈತರು ನೂರು ಟನ್ ಭತ್ತವನ್ನು ರಾಯಚೂರಿನಲ್ಲಿರುವ ರಿಲಾಯನ್ಸ್ ರೀಟೇಲ್ ಸಂಸ್ಥೆಗೆ ಮಾರಿದ್ದಾರೆ. ದಿನಕ್ಕೆ ನೂರು ಟನ್ನಂತೆ ಇನ್ನು ಕೆಲವೇ ದಿನಗಳಲ್ಲಿ ಒಪ್ಪಂದದನ್ವಯ ಉಳಿದ 900 ಟನ್ ಭತ್ತವನ್ನು ರಿಲಾಯನ್ಸ್ ರೀಟೇಲ್ನ ಉಗ್ರಾಣಕ್ಕೆ ರೈತರು ಕಳುಹಿಸಿಕೊಡಲಿದ್ದಾರೆ” ಎಂದು ಮಲ್ಲಿಕಾರ್ಜುನ ಅವರು ತಿಳಿಸಿದ್ದಾರೆ.
ಆದರೆ, ಎಂಎಸ್ಪಿಗಿಂತ 100 ರೂ ಹೆಚ್ಚು ಬೆಲೆ ಸಿಗುತ್ತದಾದರೂ ರೈತರು ಸಾರಿಗೆ, ಲೋಡಿಂಗ್, ಅನ್ಲೋಡಿಂಗ್ ಇತ್ಯಾದಿ ವೆಚ್ಚವನ್ನು ತಾವೇ ಭರಿಸಬೇಕಾಗುತ್ತದೆ. ರಿಲಾಯನ್ಸ್ ಸಂಸ್ಥೆಯಿಂದ ಬಂದ ಹಣವನ್ನು ನೇರವಾಗಿ ರೈತರ ಖಾತೆಗೆ ವರ್ಗಾವಣೆ ಮಾಡುತ್ತೇವೆ ಎಂದಿದ್ಧಾರೆ.
ನಬಾರ್ಡ್ನ ಸಹಾಯದಿಂದ ಸ್ವಾಸ್ಥ್ಯ ಸಂಸ್ಥೆಯು ರೈತರಿಗೆ ಹಣಕಾಸು ಇತ್ಯಾದಿ ನೆರವನ್ನು ಒದಗಿಸುತ್ತಿದೆ. ರೈತರ ಬೆಳೆಗಳಿಗೆ ಹೆಚ್ಚಿನ ಬೆಲೆ ಕೊಡಿಸುವ ಕೆಲಸವನ್ನೂ ಅದು ಮಾಡುತ್ತದೆ.
ವರದಿ ಕೃಪೆ: ಐಎಎನ್ಎಸ್ ಸುದ್ದಿಸಂಸ್ಥೆ
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ