ಬೆಂಗಳೂರು: ಹಿಂದು ವಿವಾಹ ಕಾಯ್ದೆ (Hindu Marriage Act) ಸೆಕ್ಷನ್ 24ರ ಅನ್ವಯ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢವಾಗಿದ್ದರೆ, ಆತ ತನ್ನ ಪತ್ನಿಯಿಂದ ಯಾವುದೇ ರೀತಿಯ ಜೀವನಾಂಶ (Alimony) ಕೇಳುವ ಹಾಗಿಲ್ಲ. ಆತನ ತಾನೇ ಉದ್ಯೋಗವನ್ನು ಹುಡುಕಿಕೊಂಡು ಸಂಪಾದಿಸಬೇಕು ಎಂದು ಕರ್ನಾಟಕ ಹೈಕೋರ್ಟ್ (Karnataka High Court) ಇತ್ತೀಚಿನ ಪ್ರಕರಣವೊಂದರಲ್ಲಿ ಮಹತ್ವದ ತೀರ್ಪು ನೀಡಿದೆ. ವಾಸ್ತವಾಗಿ ತನ್ನ ಜೊತೆಗೆ ತನ್ನ ಪತ್ನಿ ಮತ್ತು ಮಕ್ಕಳನ್ನು ನೋಡಿಕೊಳ್ಳುವುದು ಸಶಕ್ತ ಗಂಡನಾದವನ ಕರ್ತವ್ಯವಾಗಿದೆ. ಜೀವನಾಂಶ ಕೇಳಿ ಅರ್ಜಿ ಸಲ್ಲಿಸಿರುವ ವ್ಯಕ್ತಿಗೆ ಮನೆಯಲ್ಲಿ ಕುಳಿತು ತಿನ್ನುವುದಕ್ಕಿಂದ ದುಡಿದು ಬದುಕುವುದು ಉತ್ತಮ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೈಕೋರ್ಟ್ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಎಮ್, ನಾಗಪ್ರಸನ್ನ ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಾಲುಹುಣಸೆ ಗ್ರಾಮದ ನಿವಾಸಿಯಾಗಿರುವ ಅರ್ಜಿದಾರ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಪತ್ನಿಯಿಂದ 2 ಲಕ್ಷ ರೂಪಾಯಿ ಜೀವನಾಂಶವನ್ನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದಾರೆ.
ಹಿಂದೂ ಮ್ಯಾರೇಜ್ ಆಕ್ಟ್ ಸೆಕ್ಷನ್ 24 ರ ಪ್ರಕಾರ, ಜೀವನಾಂಶಕ್ಕೆ ಗಂಡ-ಹೆಂಡತಿ ಇಬ್ಬರೂ ಅರ್ಹರು. ಆದರೆ ಅರ್ಜಿದಾರ ಯಾವುದೇ ಅಂಗವೈಕಲ್ಯ ಇಲ್ಲದೆಯೂ, ಮಾನಸಿಕ ಸಮಸ್ಯೆಯಿಂದ ಬಳಲುತ್ತಿಲ್ಲವಾದರೆ, ಕಾಯ್ದೆ ಪ್ರಕಾರ ಪತ್ನಿ ಜೀವನಾಂಶ ನೀಡಬೇಕು ಎಂದು ಆದೇಶಿಸಿದರೆ ಪತಿಯ ಆಲಸ್ಯತನವನ್ನು ಉತ್ತೇಜಿಸಿದಂತಾಗುತ್ತದೆ ಎಂದು ನ್ಯಾಯದೀಶರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: Police Medal: ಅತ್ಯುತ್ತಮ ಸೇವೆ ನೀಡಿದ ಕರ್ನಾಟಕದ 20 ಪೊಲೀಸರಿಗೆ ರಾಷ್ಟ್ರಪತಿ ಪದಕ ಘೋಷಣೆ
ಪತಿಯ ವಾದವೇನು
ಕೋವಿಡ್ 19 ಬಳಿಕ ಕೆಲಸ ಕಳೆದುಕೊಂಡಿದ್ದೇನೆ. ಉದ್ಯೋಗ ಹಾಗೂ ಆದಾಯವಿಲ್ಲದ ಕಾರಣಪತ್ನಿಗೆ ಜೀವನಾಂಶ ನೀಡಲಾಗದ ಸ್ಥಿತಿಯಲ್ಲಿದ್ದೇನೆ. ಬದಲಾಗಿ ಪತ್ನಿ ಕಡೆಯಿಂದ ಜೀವನಾಂಶ ಕೊಡಿಸಬೇಕು ಎಂದು ಕೇಳಿಕೊಂಡಿದ್ದಾನೆ. ಪತ್ನಿ ಕಡೆಯವರು ಉತ್ತಮ ಸ್ಥಿತಿಯಲ್ಲಿದ್ದಾರೆ. ಅಲ್ಲದೆ ಈ ಹಿಂದೆ ಪತ್ನಿ ತನ್ನ ಮನೆಯವರ ಮೇಲೆ ಹೂಡಿದ್ದ ಮೊಕದ್ದಮೆಗೆ ಸಾಕಷ್ಟು ಖರ್ಚು ಮಾಡಿದ್ದೇನೆ. ಹಾಗಾಗಿ ಜೀವನಾಂಶ ಮತ್ತು ಮೊಕದ್ದಮೆಯ ಖರ್ಚನ್ನು ಭರಿಸಿಕೊಡಬೇಕೆಂದು ಕೇಳಿಕೊಂಡಿದ್ದರು.
ದೋಷಪೂರಿತ ವಾದ ಎಂದ ಕೋರ್ಟ್
ಕೆಲಸ ಹೋಗಿದೆ, ನನ್ನ ಖರ್ಚುವೆಚ್ಚವನ್ನು ಭರಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದೇನೆ. ಪತ್ನಿಗೆ ಜೀವನಾಂಶ ಕೊಡಲು ಸಾಧ್ಯವಿಲ್ಲ ಬದಲಾಗಿ ಪತ್ನಿಯೇ ಜೀವನಾಂಶ ಕೊಡಬೇಕೆನ್ನುವ ವಾದವೇ ದೋಷಪೂರಿತ . ಈ ಪ್ರಕರಣವನ್ನು ಗಮನಿಸಿದರೆ ಪತಿ ತನ್ನ ಪತ್ನಿಯಿಂದ ಜೀವನಾಂಶ ಪಡೆದು ಆರಾಮಾಗಿ ಜೀವನ ನಡೆಸಲು ನಿರ್ಧರಿಸಿ ದಂತಿದೆ. ಹಾಗಾಗಿ ಪತ್ನಿ ಜೀವನಾಂಶ ಕೊಡಬೇಕೆಂಬ ಅರ್ಜಿ ಒಪ್ಪಲು ಸಾಧ್ಯವಿಲ್ಲ. ಸೆಕ್ಷನ್ 24 ರ ಅಡಿಯಲ್ಲಿ ತನ್ನನ್ನು ತಾನು ಅಸಮರ್ಥನಾಗಿಸಿಕೊಂಡು ಅರ್ಜಿಯನ್ನು ಸಲ್ಲಿಸುವುದು ಕಾಯಿದೆಯ ಸೆಕ್ಷನ್ 24 ರ ಮನೋಭಾವಕ್ಕೆ ಅಸಹ್ಯಕರವಾಗಿದೆ ಹಾಗೂ ಮೂಲಭೂತವಾಗಿ ಇದು ಸರಿಯಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.
2017ರಲ್ಲಿ ವಿವಾಹ
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಜೋಡಿ ಫೆಬ್ರವರಿ 6, 2017 ರಂದು ವಿವಾಹವಾದ್ದರು. ಆದರೆ ಕೆಲವು ಭಿನ್ನಾಭಿಪ್ರಾಯಗಳ ನಂತರ, ಪತ್ನಿ ತನ್ನ ವೈವಾಹಿಕ ಜೀವನ ತೊರೆದು ಹೆತ್ತವರ ಜೊತೆಗೆ ವಾಸಿಸುತ್ತಿದ್ದರು. ಪತ್ನಿ ತವರಿಗೆ ಸೇರಿದ ನಂತರ ಪತಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಇನ್ನು ಪತ್ನಿ ಜೀವನ ನಿರ್ವಹಣೆಗಾಗಿ ತಿಂಗಳಿಗೆ 25,000 ರೂ. ಮತ್ತು ವ್ಯಾಜ್ಯ ವೆಚ್ಚವಾಗಿ 1 ಲಕ್ಷ ರೂ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು. ಪತಿಯೂ ಕೂಡ ಇದೇ ರೀತಿಯ ಅರ್ಜಿ ಸಲ್ಲಿಸಿದ್ದು, 2 ಲಕ್ಷ ರೂ. ಜೀವನಾಂಶ ಮತ್ತು 30,000 ರೂ. ವ್ಯಾಜ್ಯ ವೆಚ್ಚವನ್ನು ಕೊಡಿಸಬೇಕೇಂದು ಅರ್ಜಿ ಸಲ್ಲಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ