ಕೊಡಗು : ಕೊಡಗು (Coorg Tourism) ಪ್ರಕೃತಿಯ ತವರು ಜಿಲ್ಲೆ. ಕರ್ನಾಟಕದ ಕಾಶ್ಮೀರ, ಭಾರತದ ಸ್ಕಾಟ್ಲ್ಯಾಂಡ್ ಎಂದೆಲ್ಲಾ ಹೆಸರು ಪಡೆದುಕೊಂಡಿದೆ. ಹೀಗಾಗಿಯೇ ಇಲ್ಲಿಯ ಪ್ರಾಕೃತಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳೋದಕ್ಕೆ ನಿತ್ಯ ದೇಶ ವಿದೇಶದ ಸಾವಿರಾರು ಪ್ರವಾಸಿಗರು (Tourists) ಬರುತ್ತಾರೆ. ಇನ್ನು ಪ್ರವಾಸೋದ್ಯಮವನ್ನು ನಂಬಿ ಕೊಡಗಿನ (kodagu) ಶೇಕಡ 16 ರಷ್ಟು ಜನರು ಬದುಕು ದೂಡುತಿದ್ದಾರೆ. ಸರ್ಕಾರಕ್ಕೂ ಕೂಡ ಕೋಟ್ಯಂತರ ರೂಪಾಯಿಯ ಆದಾಯ ಕೂಡ ಬರುತ್ತೆ ಎನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಆದ್ದರಿಂದಲೇ ಸರ್ಕಾರ ಕೂಡ ಪ್ರವಾಸೋದ್ಯಮಕ್ಕೆ (karnataka tourism) ಒತ್ತು ನೀಡುತ್ತೆ ಅಂತ ಹೇಳುತ್ತದೆ. ಆದರೆ ಕೊಡಗಿನಲ್ಲಿ 2018 ರ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ್ದ ಭೀಕರ ಪ್ರಾಕೃತಿಕ ವಿಕೋಪಕ್ಕೆ (Kodagu Flood)ಮುರಿದಿಬಿದ್ದಿದ್ದ ಅಬ್ಬಿಫಾಲ್ಸ್ ನ (Abbey Falls Coorg) ತೂಗು ಸೇತುವೆಗೆ ಇಂದಿಗೂ ಮರುನಿರ್ಮಾಣದ ಭಾಗ್ಯ ದೊರೆತಿಲ್ಲ.
ಪ್ರವಾಸಿಗರಿಗೆ ನಿರಾಸೆ
ಹೌದು 2018 ರಲ್ಲಿ ಕೊಡಗಿನಲ್ಲಿ ಎಂದು ಕಂಡು ಕೇಳರಿಯದ ಪ್ರವಾಹ (Karnataka Food 2018) ಭೂಕುಸಿತ ಎದುರಾಗಿತ್ತು. ಈ ವೇಳೆ ಮಡಿಕೇರಿಯ (Madikeri) ಅನತಿ ದೂರದಲ್ಲೇ ಇರುವ ಪ್ರವಾಸಿಗರ ನೆಚ್ಚಿನ ತಾಣ ಅಬ್ಬಿಜಲಪಾತದ (Abbey Falls) ಎದುರಿಗೆ ಇದ್ದ ತೂಗು ಸೇತುವೆ ಕುಸಿದು ಬಿದ್ದಿತ್ತು. ಆದಾದ ಬಳಿಕ ತೂಗು ಸೇತುವೆಯನ್ನು ಮರುನಿರ್ಮಿಸುವಂತೆ ಪಂಚಾಯಿತಿಯಿಂದ ಎಷ್ಟೇ ಮನವಿ ಮಾಡಿದರು ಅದು ಸಾಧ್ಯವೇ ಆಗಿಲ್ಲ. ಇದರಿಂದಾಗಿ ಇಲ್ಲಿಗೆ ಬರುವ ಪ್ರವಾಸಿಗರು ಅಬ್ಬಿಜಲಪಾತದ ಸೌಂದರ್ಯವನ್ನು ಸಂಪೂರ್ಣ ಕಣ್ಣು ತುಂಬಿಕೊಳ್ಳಲಾಗದೆ ನಿರಾಸೆಯಿಂದ ವಾಪಸ್ ಆಗುವಂತೆ ಮಾಡಿದೆ.
ಇದನ್ನೂ ಓದಿ: Kodagu: ಕೋಟೆ ಬೆಟ್ಟ-ಮೇದೂರನ್ನು ಪ್ರವಾಸಿ ತಾಣಗಳೆಂದು ಘೋಷಿಸಲು ಒತ್ತಾಯ
ರಿಪೇರಿಯಾಗದ ತೂಗು ಸೇತುವೆ
ಅಬ್ಬಿಜಲಪಾತ ಅತ್ಯಂತ ನಯನ ಮನೋಹರವಾದ ಮತ್ತು ಪ್ರವಾಸಿಗರಿಗೆ ಅಷ್ಟೇ ಆಪ್ಯಾಯಮಾನವಾದ ಜಲಪಾತ. 100 ಅಡಿ ಎತ್ತರದಿಂದ ಹಾಲಿನ ಬೆಳ್ನೊರೆಯಂತೆ ಧುಮ್ಮಿಕ್ಕುವ ಜಲರಾಶಿಯನ್ನು ಕಣ್ತುಂಬಿಕೊಳ್ಳೋದೆ ಪ್ರವಾಸಿಗರಿಗೆ ಒಂದು ಮಹಾದಾನಂದ. ಇನ್ನು ಜಲಪಾತದ ಎದುರಿಗಿದ್ದ ತೂಗು ಸೇತುವೆಯ ಮೇಲೆ ನಿಂತು ಜನರು ಇನ್ನಿಲ್ಲದ ಸಂಭ್ರಮ ಪಡುತ್ತಿದ್ದರು.
ಪ್ರವಾಸ ಅಪೂರ್ಣ
ಜಲಪಾತದಿಂದ ಪುಟಿದೆದ್ದ ಮಂಜಿನ ಸಿಂಚನಕ್ಕೆ ಪ್ರವಾಸಿಗರು ಮೈಯೊಡ್ಡಿ ಫೋಟೋ ಕ್ಲಿಕ್ಕಿಸಿಕೊಂಡು ಮೈಮನಗಳನ್ನು ತೊಯ್ಸಿಕೊಳ್ಳುತ್ತಿದ್ದರು. ಇದನ್ನೆಲ್ಲಾ ಪ್ರವಾಸಿಗರು ಅದೆಷ್ಟು ಆಸ್ವಾದಿಸುತ್ತಿದ್ದರೆಂದರೆ ಜಲಪಾತದ ಬಳಿಯಿಂದ ಎಷ್ಟೇ ಹೊತ್ತಾದರೂ ಕದಲದಂತೆ ನಿಂತುಬಿಡುತ್ತಿದ್ದರು. ಪ್ರವಾಸಿಗರು ಅಷ್ಟು ಸಂತೋಷ ಪಡುತ್ತಿದ್ದರು. ಆದರೆ ತೂಗು ಸೇತುವೆ ಇಲ್ಲದ ಕಾರಣ ಕೇವಲ ಜಲಪಾತದ ಎದುರು ಕೆಲ ಸಮಯ ನಿಂತ ಪ್ರವಾಸಿಗರು ಸಂಪೂರ್ಣ ಅದರ ಸೌಂದರ್ಯವನ್ನು ಸವಿಯದೆ ಹೊರಟು ಹೋಗುವಂತಾಗಿದೆ.
ಇದನ್ನೂ ಓದಿ: ಕೊಡಗಿನಲ್ಲಿ ಸ್ವರ್ಗವೇ ಧರೆಗಿಳಿದಿದೆ.. ಹಸಿರು ಸೀರೆಯುಟ್ಟ ಜಲಕನ್ಯೆಯರನ್ನು ಕಣ್ತುಂಬಿಕೊಂಡವರೇ ಅದೃಷ್ಟವಂತರು
ಮನವಿಗೆ ಸ್ಪಂದಿಸದ ಸರ್ಕಾರ
ತೂಗು ಸೇತುವೆ ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಕೆಲವು ತಿಂಗಳಲ್ಲಿ ಗಮನಹರಿಸಿದ್ದ ಸರ್ಕಾರ, ಕೂಡಲೇ ಸೇತುವೆ ನಿರ್ಮಿಸಿ ಕೊಡುವ ಭರವಸೆ ನೀಡಿತ್ತು. ಜೊತೆಗೆ ಸಂಬಂಧಿಸಿದ ಎಂಜಿನಿಯರ್ ಗಳು ಕೂಡ ಬಂದು ಪರಿಶೀಲನೆ ಮಾಡಿದ್ದರು. ಆದರೆ ಇಂದಿಗೂ ಆ ಕೆಲಸ ಆಗಿಯೇ ಇಲ್ಲ. ಹೀಗಾಗಿ ಕೆ ನಿಡುಗಣೆ ಗ್ರಾಮ ಪಂಚಾಯಿತಿ, ಜಿಲ್ಲಾಡಳಿತ ಮತ್ತು ಸರ್ಕಾರ ಜುಲೈ ತಿಂಗಳಲ್ಲಿ ಮತ್ತೆ ಮನವಿ ಮಾಡಲಾಗಿದೆ.
ಇಂದಿಗೂ ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ ಅನ್ನೋದು ಪಂಚಾಯಿತಿ ಅಧ್ಯಕ್ಷರಾದ ಅಯ್ಯಪ್ಪ ಅವರ ಅಸಮಾಧಾನ. ಇನ್ನಾದರೂ ಸರ್ಕಾರ ಇತ್ತ ಗಮನಹರಿಸಿ ಪ್ರವಾಸೋದ್ಯಮಕ್ಕೆ ಒತ್ತು ನೀಡುತ್ತಾ ಕಾದು ನೋಡಬೇಕಾಗಿದೆ.
ಸರ್ಕಾರಕ್ಕೆ ಪ್ರವಾಸಿಗರ ಆಗ್ರಹ
ಕೆಲ ವರ್ಷಗಳ ಹಿಂದೆ ಬಂದಾಗ ಸೇತುವೆ ಮೇಲೆ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳಲಾಗಿತ್ತು. ಆದ್ರೆ ಈ ಬಾರಿ ಸೇತುವೆ ಕೊಚ್ಚಿ ಹೋದ ಹಿನ್ನೆಲೆ ಇಲ್ಲಿಯೇ ಸಂಭ್ರಮಿಸುವಂತಾಗಿದೆ. ಸರ್ಕಾರ ಆದಷ್ಟು ಬೇಗ ಸೇತುವೆ ಕಾಮಗಾರಿಗೆ ಮುಂದಾಗಬೇಕು ಎಂದು ಪ್ರವಾಸಿಗರು ಆಗ್ರಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ