• Home
  • »
  • News
  • »
  • state
  • »
  • Kodagu: ಬಲಿಗಾಗಿ ಕಾಯ್ತಿದೆ ಶಿಥಿಲಗೊಂಡ ಕಣಿವೆ ತೂಗುಸೇತುವೆ; ಪ್ರತಿದಿನ 300ಕ್ಕೂ ಜನರ ಓಡಾಟ

Kodagu: ಬಲಿಗಾಗಿ ಕಾಯ್ತಿದೆ ಶಿಥಿಲಗೊಂಡ ಕಣಿವೆ ತೂಗುಸೇತುವೆ; ಪ್ರತಿದಿನ 300ಕ್ಕೂ ಜನರ ಓಡಾಟ

ತೂಗು ಸೇತುವೆ

ತೂಗು ಸೇತುವೆ

ಈ ಸೇತುವೆ ಬಿಟ್ಟು ಬೇರೆ ಮಾರ್ಗದಲ್ಲಿ ವಾಹನಗಳಲ್ಲಿ ಬರಬೇಕಾದರೆ 25 ಕಿಲೋ ಮೀಟರ್ ದೂರ ಬಳಸಿ ಪಿರಿಯಾಪಟ್ಟಣದ ಮೂಲಕ ಕೊಡಗೆಗೆ ಬರಬೇಕಾಗುತ್ತದೆ. ಹೀಗಾಗಿ ಅನಿವಾರ್ಯವೆಂಬಂತೆ ಇದೇ ಸೇತುವೆ ಮೇಲೆ ನಡೆದು ಬರುತ್ತಿದ್ದಾರೆ.

  • Share this:

ಕೊಡಗು: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಗುಜರಾತ್ (Gujarat) ರಾಜ್ಯದ ಮೊರ್ಬಿ ತೂಗು ಸೇತುವೆ (Morbi Bridge collapse) ದುರಂತ ಇನ್ನೂ ಜನಮಾನಸದಲ್ಲಿ ಅಚ್ಚಹಸಿರಾಗಿರುವಾಗಲೇ ಇತ್ತ ಕೊಡಗಿನ ಗಡಿ ಭಾಗದಲ್ಲಿ ಮೈಸೂರು (Mysuru) ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಕಣಿವೆ ತೂಗು ಸೇತುವೆ ಸಾವಿನ ತೂಗುಯ್ಯಾಲೆಯಾಗಿ ತೂಗುತ್ತಿದೆ. ಮತ್ತೊಂದೆಡೆ ಮಡಿಕೇರಿ ತಾಲೂಕಿನ ಅಬ್ಬಿ ಜಲಪಾತದ (Abbey Falls) ಮುಂಭಾಗದಲ್ಲಿರುವ ತೂಗು ಸೇತುವೆ ಸಂಪೂರ್ಣ ಮುರಿದು ಹೋಗಿದ್ದು, ಅದೇ ತೂಗು ಸೇತುವೆ ಮೇಲೆ ಪ್ರವಾಸಿಗರು (Tourist) ಓಡಾಡುತ್ತಿದ್ದಾರೆ. ಕೊಡಗು ಮತ್ತು ಮೈಸೂರು (Kodagu And Mysuru) ಜಿಲ್ಲೆಯಗಳನ್ನು ಇಬ್ಭಾಗಿಸಿ ಹರಿಯುತ್ತಿರುವ ಕಾವೇರಿ ನದಿಗೆ (Cauvery River) ಅಡ್ಡಲಾಗಿ ಎರಡು ಜಿಲ್ಲೆಗಳ ನಡುವೆ ಸಂಪರ್ಕ ಕಲ್ಪಿಸಲು ಜಿಲ್ಲೆಯ ಕುಶಾಲನಗರ (Kushalanagara) ತಾಲೂಕಿನ ಕಣಿವೆಯಲ್ಲಿ 11 ವರ್ಷಗಳ ಹಿಂದೆ ತೂಗು ಸೇತುವೆ ನಿರ್ಮಿಸಲಾಗಿತ್ತು.


ಕಳೆದ ಮೂರು ವರ್ಷ ಜಿಲ್ಲೆಯಲ್ಲಿ ಸುರಿದ ಭೀಕರ ಮಳೆಗೆ ಉಕ್ಕಿ ಹರಿದಿದ್ದ ಕಾವೇರಿ ನದಿಯ ಪ್ರವಾಹದ ಸೆಳೆತಕ್ಕೆ ಸಿಲುಕಿ ಸೇತುವೆ ಬಹುತೇಕ ಕೊಚ್ಚಿಹೋಗಿತ್ತು. ಬಳಿಕ ತಾತ್ಕಾಲಿಕವಾಗಿ ಸರಿಪಡಿಸಲಾಗಿತ್ತಾದರೂ ಸೇತುವೆ ಮತ್ತೆ ಸಾಕಷ್ಟು ಶಿಥಿಲಗೊಂಡಿದೆ.


ಹೀಗಾಗಿ ಯಾವುದೇ ಕ್ಷಣದಲ್ಲಾದರೂ ಕುಸಿದು ಬೀಳುವ ಅಪಾಯವಿದ್ದು, ಇದೀಗ ಸಾವಿನ ತೂಗು ಸೇತುವೆಯಾಗಿ ಬಲಿಗಾಗಿ ಕಾದು ನಿಂತಿದೆ.


ಪ್ರತಿನಿತ್ಯ 300ಕ್ಕೂ ಹೆಚ್ಚು ಜನರ ಓಡಾಟ


ಮೈಸೂರು ಜಿಲ್ಲೆಯ ಗಡಿಭಾಗದಲ್ಲಿರುವ ದೊಡ್ಡ ಕಮರವಳ್ಳಿ, ಮರಟಿಕೊಪ್ಪಲು, ಚಿಕ್ಕಕಮರವಳ್ಳಿ, ದಿಂಡಗಾಡು, ಮುತ್ತಿನಮುಳುಸೋಗೆ, ಆವರ್ತಿ, ಚನ್ನಕೇಶವಪುರ, ಅಂಬಲಾರೆ ಸೇರಿದಂತೆ 12ಕ್ಕೂ ಹೆಚ್ಚಿನ ಗ್ರಾಮಗಳ 300ಕ್ಕೂ ಹೆಚ್ಚು ಜನರು ಪ್ರತಿನಿತ್ಯ ಇದೇ ಸೇತುವೆ ಮೇಲೆ ದಿನದ ಎರಡೊತ್ತು ಓಡಾಡುತ್ತಾರೆ.


ಈ ಗ್ರಾಮಗಳ ನೂರಾರು ವಿದ್ಯಾರ್ಥಿಗಳು, ಕೂಡುಮಂಗಳೂರು ಕೈಗಾರಿಕಾ ಬಡಾವಣೆಗೆ ನೂರಾರು ಕಾರ್ಮಿಕರು ಇದೇ ಸೇತುವೆ ಮೇಲೆ ಓಡಾಡುತ್ತಿದ್ದಾರೆ. ಪ್ರತೀ ದಿನ ಬೆಳಿಗ್ಗೆ ಸಂಜೆ ಇದೇ ಸೇತುವೆಯನ್ನು ದಾಟುತ್ತಿದ್ದಾರೆ.


ಕುಸಿದು ಬೀಳುವ ಹಂತದಲ್ಲಿರುವ ಸೇತುವೆ


ಈ ಸೇತುವೆ ಬಿಟ್ಟು ಬೇರೆ ಮಾರ್ಗದಲ್ಲಿ ವಾಹನಗಳಲ್ಲಿ ಬರಬೇಕಾದರೆ 25 ಕಿಲೋ ಮೀಟರ್ ದೂರ ಬಳಸಿ ಪಿರಿಯಾಪಟ್ಟಣದ ಮೂಲಕ ಕೊಡಗೆಗೆ ಬರಬೇಕಾಗುತ್ತದೆ. ಹೀಗಾಗಿ ಅನಿವಾರ್ಯವೆಂಬಂತೆ ಇದೇ ಸೇತುವೆ ಮೇಲೆ ನಡೆದು ಬರುತ್ತಿದ್ದಾರೆ. ಜೊತೆಗೆ ಈ ಸೇತುವೆ ಪ್ರವಾಸಿ ತಾಣದಂತಾಗಿರುವುದರಿಂದ ನಿತ್ಯ ಹತ್ತಾರು ಪ್ರವಾಸಿಗರು ಇದೇ ಸೇತುವೆಯ ಮೇಲೆ ನಿಂತು ಸೆಲ್ಫಿ ತೆಗೆದುದುಕೊಳ್ಳುತ್ತಾರೆ. ಆದರೆ ಸೇತುವೆ ಯಾವುದೇ ಸಮಯದಲ್ಲಾದರೂ ಕುಸಿದು ಬೀಳುವ ಅಪಾಯವಿದೆ.


abbey falls bridge is in bad condition dangerous rsk mrq
ತೂಗು ಸೇತುವೆ


ಮುರಿದು ಬಿದ್ದಿವೆ ಸಿಮೆಂಟ್ ಹಲಗೆಗಳು


ಕಳೆದ ಹತ್ತು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ತೂಗು ಸೇತುವೆಯ ಒಂದು ಭಾಗದಲ್ಲಿ ಸಂಪೂರ್ಣ ಕುಸಿದಿದ್ದರೆ, ಸೇತುವೆಗೆ ಅಳವಡಿಸಿರುವ ಕಬ್ಬಿಣದ ಪಟ್ಟಿಗಳು ಮುರಿದಿವೆ. ಮತ್ತೆ ಕೆಲವೆಡೆ ಸೇತುವೆಯಲ್ಲಿ ಅಳವಡಿಸಿರುವ ಸಿಮೆಂಟ್ ಹಲಗೆಗಳು ಮರಿದು ಬಿದ್ದಿದ್ದು, ಸೇತುವೆ ಹ್ಯಾಂಗಲರ್‍ಗಳ ಕೆಲವು ನಟ್ಟು, ಬೋಲ್ಟ್​​​ಗಳು ಉದುರಿ ಹೋಗಿವೆ.


ಇದನ್ನೂ ಓದಿ:  Eidgah Maidaan: ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಆಗ್ರಹ; ಅಡಕತ್ತರಿಯಲ್ಲಿ ಸಿಲುಕಿಕೊಂಡ ಪಾಲಿಕೆ


ಸೇತುವೆ ಕುಸಿಯುವ ಆತಂಕ


ಹೀಗಾಗಿ ಸೇತುವೆ ಯಾವಾಗ ಬೇಕಾದರೂ ಮುರಿದು ಬೀಳುವ ಆತಂಕವಿದೆ. ಒಂದು ವೇಳೆ ಹಾಗೇನಾದರೂ ಆದರೆ ಅಲ್ಲಿ ಎದುರಾಗುವ ದುರಂತವನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಕಾವೇರಿ ನದಿಯಲ್ಲಿ ಸಾಕಷ್ಟು ನೀರು ಹರಿಯುತ್ತಿದ್ದು, ಸ್ಥಳದಲ್ಲಿ ಆಳವಾದ ನೀರು ಇದೆ. ಜೊತೆಗೆ ದೊಡ್ಡ ಬಂಡೆಗಳಿದ್ದು ಒಂದು ವೇಳೆ ಸೇತುವೆ ಕುಸಿದು ಬಿದ್ದಲ್ಲಿ ಭಾರೀ ಅನಾಹುತವೇ ಸಂಭವಿಸುತ್ತದೆ.


ಅಧಿಕಾರಿಗಳ ವಿರುದ್ಧ ಸ್ಥಳೀಯರ ಅಸಮಾಧಾನ


ಮುರಿದು ಹೋಗಿರುವ ಸೇತುವೆಯನ್ನು ಸರಿಪಡಿಸಿ ಎಂದು ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಇದು ಮಲೆನಾಡು ಅಭಿವೃದ್ಧಿ ಪ್ರಾಧಿಕಾರದಿಂದ ಮಾಡಿರುವ ಸೇತುವೆಯಾಗಿರುವುದರಿಂದ ಅವರೇ ಇದನ್ನು ಸರಿಮಾಡಬೇಕು ಎನ್ನುವ ಸಬೂಬುಗಳನ್ನು ಹೇಳಿ ಅಧಿಕಾರಿಗಳು ನುಣುಚಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ:  Chikkamagaluru: ಅಪಾಯಕ್ಕೆ ಆಹ್ವಾನ ನೀಡ್ತಿದೆ ನೆಮ್ಮಾರು ಗ್ರಾಮದ ತೂಗು ಸೇತುವೆ


ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಆಗಬಹುದಾಗಿರುವ ಅನಾಹುತವನ್ನು ತಪ್ಪಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

Published by:Mahmadrafik K
First published: