ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ ಖಂಡಿಸಿ ಎಎಪಿ ಪ್ರತಿಭಟನೆ; ತೈಲ ದರ ಇಳಿಕೆಗೆ ಆಗ್ರಹ

ಭಾರತದಿಂದ ರಫ್ತು ಆಗುವ ನಮ್ಮ ದೇಶದ ಪೆಟ್ರೋಲ್ ನೇಪಾಳದಲ್ಲಿ 65 ರೂ.ಗೆ ಸಿಗುತ್ತದೆ ಎನ್ನುವುದು ಕುಚೋದ್ಯವೇ ಸರಿ. ಪ್ರಪಂಚದ 4ನೇ ಅತೀದೊಡ್ಡ ಗುಜರಾತಿನ ತೈಲ ಘಟಕವನ್ನು ಸಂಪೂರ್ಣವಾಗಿ ರಿಲಾಯನ್ಸ್ ಕಂಪೆನಿಗೆ ಸಬ್ಸಿಡಿ ಆಧಾರದಲ್ಲಿ ನಡೆಸಲು ಅನುಮತಿ ನೀಡಿರುವ ಮೋದಿ ಸರ್ಕಾರ, ದೇಶದ ಬಡ ಜನರ ಬೆನ್ನಿನ ಮೇಲೆ ಬಾರ ಹಾಕಿ ಗೂನಾಗುವಂತೆ ಮಾಡಿದೆ.

news18-kannada
Updated:March 9, 2020, 4:36 PM IST
ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ ಖಂಡಿಸಿ ಎಎಪಿ ಪ್ರತಿಭಟನೆ; ತೈಲ ದರ ಇಳಿಕೆಗೆ ಆಗ್ರಹ
ತೈಲ ದರ ಏರಿಕೆ ಖಂಡಿಸಿ, ಎಎಪಿ ಕಾರ್ಯಕರ್ತರ ಪ್ರತಿಭಟನೆ.
  • Share this:
ಬೆಂಗಳೂರು: ಮುಖ್ಯ ಮಂತ್ರಿ ಯಡಿಯೂರಪ್ಪ ಅವರು ರಾಜ್ಯ ಬಜೆಟ್‌ನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು ಕ್ರಮವಾಗಿ 1.59 ಹಾಗೂ 1.60 ರೂಪಾಯಿ  ಏರಿಸಿರುವುದನ್ನು ಖಂಡಿಸಿ ಆನಂದ್​ರಾವ್ ವೃತ್ತದ ಬಳಿ ಎಎಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಟಾಂಗಾ ಹಾಗೂ ಸೈಕಲ್ ಏರಿ ಬಂದ ಎಎಪಿ ಕಾರ್ಯಕರ್ತರು ಸರ್ಕಾರದ ಈ ನಡೆ  ಖಂಡಿಸಿದರು. ಖಾಲಿಯಾಗಿರುವ ರಾಜ್ಯದ ಬೊಕ್ಕಸ ಭರ್ತಿ ಮಾಡಲು ರಾಜ್ಯ ಸರ್ಕಾರ ಜನ ಸಾಮಾನ್ಯರ ಮೇಲೆ ಹೊರೆ ಹಾಕುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಈ ಹಿಂದಿನ ಸಮ್ಮಿಶ್ರ ಸರ್ಕಾರ ತೈಲ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಕೇವಲ 10 ಪೈಸೆ ಹೆಚ್ಚಳ ಮಾಡಿದ್ದಕ್ಕೆ ಆಕಾಶ ಭೂಮಿ ಒಂದಾಗುವಂತೆ ಕೂಗಾಡಿದ್ದ ಇದೇ ಬಿಜೆಪಿ ಮಂದಿ ಇಂದು ಬಾಯಿಗೆ ಕಡುಬು ತುರುಕಿಕೊಂಡಿರುವುದನ್ನು ನೋಡಿದರೆ, 'ತಾನು ಕಳ್ಳ, ಪರರ ನಂಬ' ಎನ್ನುವ ಸ್ಥಿತಿಗೆ ಬಿಜೆಪಿಯವರು ತಲುಪಿದ್ದಾರೆ ಎಂದು ಪ್ರತಿಭಟನಾಕಾರರು ಅಸಮಾಧಾನ ಹೊರಹಾಕಿದರು.

15ನೇ ಹಣಕಾಸು ಆಯೋಗದ ಅನುದಾನ ಹಾಗೂ ಕೇಂದ್ರದ ತೆರಿಗೆಯಲ್ಲಿ ರಾಜ್ಯಕ್ಕೆ ಬರುವ ಪಾಲು ಕಡಿತ ಆಗಿದೆ. ಜಿಎಸ್‌ಟಿ ಪರಿಹಾರವೂ ಸಹ ಕಡಿಮೆ ಆಗಿದ್ದು, ಸಂಪನ್ಮೂಲ ಸಂಗ್ರಹದಲ್ಲಿ ಕೇಂದ್ರದ ಪಾಲು ಸಹ ಸುಮಾರು 15 ಸಾವಿರ ಕೋಟಿ  ರೂ. ಕಡಿಮೆ ಆಗಿದೆ.  ಇದರ ಪರಿಣಾಮ, ಸಾರ್ವಜನಿಕರು ದಿನನಿತ್ಯ ಬಳಕೆ ಮಾಡುವ ಅಗತ್ಯ ವಸ್ತುಗಳ ಮೇಲೆ ಸಾಗಾಣೆ ವೆಚ್ಚ ಹೆಚ್ಚಾಗಿ, ಇವುಗಳ ಬೆಲೆ ಗಗನಕ್ಕೆ ಏರುವ ಸಾಧ್ಯತೆ ಇದೆ. ಕೇಂದ್ರ ಬಿಜೆಪಿ ಸರ್ಕಾರದ ನೀತಿಯಿಂದಲೂ ಸಹ ತೈಲ ಬೆಲೆ ಏರಿಕೆ ಆಗುತ್ತಲೇ ಇದೆ. ಈಗಾಗಲೇ ಅತಿವೃಷ್ಟಿ, ಅನಾವೃಷ್ಟಿ, ಉದ್ಯೋಗ ಕಡಿತ ಹೀಗೆ ನಾನಾ ಪೆಟ್ಟುಗಳನ್ನು ತಿಂದಿರುವ 'ಜನ ಸಾಮಾನ್ಯ' ನ ಕಾಲು ಮುರಿದು ದುಡಿದು ತಿನ್ನಲು ಆಗದಂತಹ ಪರಿಸ್ಥಿತಿ ನಿರ್ಮಿಸಲಾಗುತ್ತಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಕರ್ನಾಟಕದಲ್ಲಿಯೂ ಬಿಜೆಪಿ, ಕೇಂದ್ರದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯವನ್ನು 'ಸ್ವರ್ಗ' ಮಾಡಲಾಗುವುದು, 'ಸಿಂಗಾಪುರ' ಮಾಡಲಾಗುವುದು ಎನ್ನುತ್ತಿದ್ದ ಜನ ಪ್ರತಿನಿಧಿಗಳ ಗಾಢ ನಿದ್ದೆಯಿಂದ ಇನ್ನೂ ಎಚ್ಚರಗೊಂಡಂತೆ ಕಾಣುತ್ತಿಲ್ಲ. ಇವರನ್ನು ಎಚ್ಚರಗೊಳಿಸಬೇಕಿದ್ದ ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಕೆಸಲ ಮಾಡದೆ, ದಿವ್ಯ ಮೌನವಹಿಸಿರುವುದು ನೋಡಿದರೆ ಯಾರಿಗೂ ಜನರ ಹಿತಾಸಕ್ತಿ ಬೇಡವಾಗಿದೆ ಎಂಬುದು ಅರ್ಥವಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ಇದನ್ನು ಓದಿ: ಷೇರುಪೇಟೆ ಭಾರೀ ತಲ್ಲಣ; 2,300ಕ್ಕೂ ಹೆಚ್ಚು ಅಂಕ ನಷ್ಟಮಾಡಿಕೊಂಡ ಸೆನ್ಸೆಕ್ಸ್

ಭಾರತದಿಂದ ರಫ್ತು ಆಗುವ ನಮ್ಮ ದೇಶದ ಪೆಟ್ರೋಲ್ ನೇಪಾಳದಲ್ಲಿ 65 ರೂ.ಗೆ ಸಿಗುತ್ತದೆ ಎನ್ನುವುದು ಕುಚೋದ್ಯವೇ ಸರಿ. ಪ್ರಪಂಚದ 4ನೇ ಅತೀದೊಡ್ಡ ಗುಜರಾತಿನ ತೈಲ ಘಟಕವನ್ನು ಸಂಪೂರ್ಣವಾಗಿ ರಿಲಾಯನ್ಸ್ ಕಂಪೆನಿಗೆ ಸಬ್ಸಿಡಿ ಆಧಾರದಲ್ಲಿ ನಡೆಸಲು ಅನುಮತಿ ನೀಡಿರುವ ಮೋದಿ ಸರ್ಕಾರ, ದೇಶದ ಬಡ ಜನರ ಬೆನ್ನಿನ ಮೇಲೆ ಬಾರ ಹಾಕಿ ಗೂನಾಗುವಂತೆ ಮಾಡಿದೆ. ತೆರಿಗೆ ಹೆಚ್ಚಳದ ಮೂಲಕ ತೈಲ ಕಂಪನಿಗಳ ಒಡೆಯರ ಜೇಬು ತುಂಬಿಸುತ್ತಿರುವ ಈ ಕ್ರಮವನ್ನು ರಾಜ್ಯ ಸರ್ಕಾರ ಈ ಕೂಡಲೇ ಹಿಂಪಡೆಯಬೇಕು. ಬಡ ಮತ್ತು ಮಧ್ಯಮ ವರ್ಗದ ಜನರ ಬಗ್ಗೆ ನೈಜ ಕಾಳಜಿ ಇದ್ದರೆ ವಿಧಾನಸಭೆಯಲ್ಲಿ ವಿರೋಧ ಪಕ್ಷಗಳು ಈ ಬಜೆಟ್‌ಗೆ ಅನುಮೋದನೆ ನೀಡಬಾರದು ಎಂದು ಆಮ್ ಆದ್ಮಿ ಪಕ್ಷ ಬೆಂಗಳೂರು ಘಟಕದ ಅಧ್ಯಕ್ಷರಾದ ಮೋಹನ್ ದಾಸರಿ ಆಗ್ರಹಿಸಿದರು.
First published:March 9, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading