KS Eshwarappa ಬಂಧನಕ್ಕೆ ಆಗ್ರಹಿಸಿ ಸಿಎಂ ಕಚೇರಿಗೆ ಮುತ್ತಿಗೆ; AAP ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು

ಮುಖ್ಯಮಂತ್ರಿಗಳು ಸೂಚಿಸಿದರೆ ರಾಜಿನಾಮೆ ನೀಡುತ್ತೇನೆ. ರಾಜೀನಾಮೆ ಕೊಟ್ಟರೂ, ಇಲ್ಲದಿದ್ದರೂ ತನಿಖೆ ಆಗಿ, ಸಂತ್ಯಾಂಶ ಹೊರ ಬರಬೇಕು : ಸಚಿವ ಕೆ ಎಸ್​ ಈಶ್ವರಪ್ಪ.

ಎಎಪಿ ಕಾರ್ಯಕರ್ತರ ಪ್ರತಿಭಟನೆ

ಎಎಪಿ ಕಾರ್ಯಕರ್ತರ ಪ್ರತಿಭಟನೆ

  • Share this:
    ಬೆಂಗಳೂರು (ಎ. 13):  ಗುತ್ತಿಗೆದಾರ ಸಂತೋಷ್​ ಪಾಟೀಲ್ (Santosh Patil)​ ಆತ್ಮಹತ್ಯೆ ಪ್ರಕರಣ ಸಂಬಂಧ ಪಂಚಾಯತ್​ ರಾಜ್​ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್​ ಈಶ್ವರಪ್ಪ (KS Eshwarappa)  ಅವರಿಂದ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿ ಇಂದು ಆಮ್​ ಆದ್ಮಿ ಪಕ್ಷದ (AAP) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸಿಎಂ (CM Basavaraja Bommai) ಕಚೇರಿಗೆ ಮುತ್ತಿಗೆ ಹಾಕಲು ಇದೇ ವೇಳೆ ಅವರು ಮುಂದಾದರು. ಈ ವೇಳೆ ಪರಿಸ್ಥಿತಿ ನಿಯಂತ್ರಣಕ್ಕೆ ಮುಂದಾದ ಪೊಲೀಸರು ಧರಣಿ ನಡೆಸುತ್ತಿದ್ದ ಎಎಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದರು.

    ಸಂತೋಷ್​ ಪಾಟೀಲ್​ ಆತ್ಮಹತ್ಯೆ ಸಂಬಂಧ ಈಗಾಗಲೇ ಕಾಂಗ್ರೆಸ್​ ಸೇರಿದಂತೆ ಇನ್ನಿತರ ಪಕ್ಷಗಳು ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿದೆ. ಇಂದು ಬೆಳಗ್ಗೆ ಸಚಿವ ಈಶ್ವರಪ್ಪ ಅವರಿಂದ ರಾಜೀನಾಮೆ ಪಡೆದು ಸಂಪುಟದಿಂದ ವಜಾ ಮಾಡಬೇಕು ಎಂದು ಕಾಂಗ್ರೆಸ್​ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

    ಆಪ್​ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು

    ಈ ನಡುವೆ ಆಪ್​ ಕಾರ್ಯಕರ್ತರು ಸಿಎಂ ಗೃಹ ಕಚೇರಿ ಕೃಷ್ಣಾಗೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದರು. ಈ ವೇಳೆ ಪೊಲೀಸರು ಎಎಪಿ ಕಾರ್ಯಕರ್ತರನ್ನು ಕುಮಾರಕೃಪಾ ರಸ್ತೆಯ ಅತಿಥಿಗೃಹ ದ್ವಾರದ ಬಳಿಯೇ ತಡೆದರು. ಅಲ್ಲಿಗೆ ಪ್ರತಿಭಟನೆ ನಡೆಸಲು ಮುಂದಾದ ಎಎಪಿ ಕಾರ್ಯಕರ್ತರನ್ನು ಈ ವೇಳೆ ಪೊಲೀಸರು ವಶಕ್ಕೆ ಪಡೆದರು.

    ಬೆಳಗಾವಿಯಲ್ಲಿ ಸಂತೋಷ್​ ಕುಟುಂಬಕ್ಕೆ ಆಪ್​ ಕಾರ್ಯಕರ್ತರ ಸಾಂತ್ವನ
    ಸಚಿವರ ಮೇಲೆ ಕಮಿಷನ್​ ಆರೋಪ ಮಾಡಿ ನಿನ್ನೆ ಉಡುಪಿಯ ಲಾಡ್ಜ್​ನಲ್ಲಿ ಸಾವಿಗೆ ಶರಣಾಗಿದ್ದ ಸಂತೋಷ್​ ಪಾಟೀಲ್​ ತಮ್ಮ ಸಾವಿಗೆ ಸಚಿವ ಈಶ್ವರಪ್ಪ ಅವರೇ ಕಾರಣ ಎಂದು ಡೆತ್​ ನೋಟ್​ನಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಸಾವನ್ನಪ್ಪಿದ್ದ ಸಂತೋಷ್​ ಪಾಟೀಲ್​ ಅವರಬೆಳಗಾವಿ ಮನೆಗೆ ಇಂದು ಆಪ್ ಕಾರ್ಯಕರ್ತರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದಾರೆ. ಬೆಳಗಾವಿ ಸಮರ್ಥ ನಗರದಲ್ಲಿರುವ ಸಂತೋಷ ಮನೆಗೆ ಆಮ್ ಆದ್ಮಿ ಪಕ್ಷದ ಮುಖಂಡ ರಾಜಕುಮಾರ ಟೋಪನವರ್, ಸಜೀತ್ ಮುಳಗುಂದ ಭೇಟಿ ಮಾಡಿದರು. ಈ ವೇಳೆ ಸಂತೋಷ ಪತ್ನಿ ಜಯಶ್ರೀ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

    ಇದನ್ನು ಓದಿ: KS Eshwarappa ಅವರನ್ನ ಸಚಿವ ಸ್ಥಾನದಿಂದ ವಜಾಗೊಳಿಸಿ: ರಾಜ್ಯಪಾಲರಿಗೆ ಕಾಂಗ್ರೆಸ್ ನಿಯೋಗ ಮನವಿ

    ಪ್ರಕರಣದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ; ಸಿಎಂ
    ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕಾನೂನಿನ ಪ್ರಕಾರ ತನಿಖೆ ನಡೆಯಲಿದೆ. ಎಲ್ಲಿಯೂ ನಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಉಡುಪಿ ಪ್ರವಾಸದ ವೇಳೆ ಮಾತನಾಡಿರುವ ಅವರು, ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಎಫ್.ಐ.ಆರ್ ಆಗಿದೆ. ವಿವರಗಳನ್ನು ಪಡೆಯಲಾಗಿದೆ. ಸಚಿವ ಕೆ.ಎಸ್. ಈಶ್ವರಪ್ಪ ಅವರೊಂದಿಗೆ ಈ ಬಗ್ಗೆ ದೂರವಾಣಿ ಮೂಲಕ ಹಾಗೂ ನೇರವಾಗಿ ಮಾತನಾಡುವುದಾಗಿ ತಿಳಿಸಿದರು.

    ಇದನ್ನು ಓದಿ: ಮೇ 25ರಿಂದ ರಾಜ್ಯಾದ್ಯಂತ ಗುತ್ತಿಗೆದಾರರ ಕೆಲಸ ಬಂದ್: ಸಂತೋಷ್ ಪಾಟೀಲ್ ಆತ್ಮಹತ್ಯೆ ಸಿಬಿಐ ತನಿಖೆಗೆ ಆಗ್ರಹ

    ವಿರೋಧ ಪಕ್ಷದವರು ಈ ವಿಚಾರದಲ್ಲಿ ತಪ್ಪುಗಳನ್ನು ಕಂಡುಹಿಡಿಯಲು ಪ್ರಯತ್ನ ಮಾಡುತ್ತಿದ್ದಾರೆ. ತನಿಖೆಯಲ್ಲಿ ಹೊರಬೀಳಲಿದೆ. ಯಾರು ಏನು ಪಾತ್ರ ವಹಿಸಿದ್ದಾರೆ. ಇದರ ಹಿನ್ನೆಲೆ ಏನು ಎನ್ನುವ ಸತ್ಯಾಂಶ ತನಿಖೆಯಿಂದ ತಿಳಿಯಲಿದೆ ಎಂದರು.

    ರಾಜೀನಾಮೆಗೆ ಸಿದ್ಧ ಎಂದ ಈಶ್ವರಪ್ಪ
    ಇನ್ನು ಪ್ರಕರಣ ಸಂಬಂಧ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ವಿಪಕ್ಷಗಳ ಆಗ್ರಹಕ್ಕೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಸಚಿವ ಕೆ ಎಸ್​ ಈಶ್ವರಪ್ಪ, ಮುಖ್ಯಮಂತ್ರಿಗಳು ಸೂಚಿಸಿದರೆ ರಾಜಿನಾಮೆ ನೀಡುತ್ತೇನೆ. ರಾಜೀನಾಮೆ ಕೊಟ್ಟರೂ, ಇಲ್ಲದಿದ್ದರೂ ತನಿಖೆ ಆಗಿ, ಸಂತ್ಯಾಂಶ ಹೊರ ಬರಬೇಕು ಎಂದರು.

    ಮುಖ್ಯಮಂತ್ರಿಯಾಗಲಿ, ಗೃಹ ಮಂತ್ರಿಯಾಗಲಿ ರಾಜೀನಾಮೆ ನೀಡುವಂತೆ ಇದುವರೆಗೂ ನನ್ನನ್ನು ಕೇಳಿಲ್ಲ. ಪ್ರಕರಣ ದಾಖಲಾಗಿ ತನಿಖೆ ನಡೆಯಲಿ  ಎಂದು ತಿಳಿಸಿದರು.
    Published by:Seema R
    First published: