ಕಳೆದ ತಿಂಗಳಷ್ಟೇ ಬಿಜೆಪಿಯ ಭದ್ರ ಕೋಟೆಯಂತಿದ್ದ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (MCD) ಅನ್ನು ಬಹುಮತದಿಂದ ಗೆದ್ದ ಆಮ್ ಆದ್ಮಿ ಪಕ್ಷ (Aam Aadmi Party) ಈಗ ಮುಂಬರುವ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ಸಜ್ಜಾಗಿದ್ದು ನಮಗೆಲ್ಲಾ ಗೊತ್ತೇ ಇದೆ. ಇಷ್ಟೇ ಅಲ್ಲದೆ ದೆಹಲಿ ಕಾರ್ಪೊರೇಷನ್ ಗೆಲುವು ಆಮ್ ಆದ್ಮಿ ಪಕ್ಷದವರಲ್ಲಿ ತುಂಬಾನೇ ಆತ್ಮವಿಶ್ವಾಸವನ್ನು ತುಂಬಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.ಆ 250 ಸದಸ್ಯರ ಬಲದ ಎಂಸಿಡಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 134 ಸೀಟುಗಳನ್ನು ಗೆಲ್ಲುವುದರ ಮೂಲಕ 104 ಸೀಟು ಗೆದ್ದ ಬಿಜೆಪಿ, ಕೇವಲ 9 ಸೀಟು ಗೆದ್ದ ಕಾಂಗ್ರೆಸ್ (Congress) ಗೆ ಮುಂಬರುವ 2023 ರ ವಿಧಾನಸಭಾ ಚುನಾವಣೆಯಲ್ಲಿ ಕಠಿಣವಾದ ಸವಾಲು ನೀಡಬಹುದೆಂಬ ಸಂದೇಶವನ್ನು ರವಾನಿಸಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಮುಂಬರುವ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಮುಂಬೈನಲ್ಲಿ ಸ್ಪರ್ಧಿಸುವುದಾಗಿ ಆಮ್ ಆದ್ಮಿ ಪಕ್ಷ ಈಗಾಗಲೇ ಸೋಮವಾರದಂದು ಘೋಷಿಸಿದ್ದು, ಈ ಘೋಷಣೆಯೊಂದಿಗೆ, ಪಕ್ಷವು ಮಹಾರಾಷ್ಟ್ರದ ಚುನಾವಣಾ ರಾಜಕೀಯವನ್ನು ಪ್ರವೇಶಿಸಲು ಸಜ್ಜಾಗುತ್ತಿದೆ ಅಂತ ಹೇಳಬಹುದು.
ವಿಧಾನಸಭಾ ಚುನಾವಣೆಗೆ ಕರ್ನಾಟಕದಲ್ಲಿ ಹೊಸ ಟೀಂ ರೆಡಿ ಮಾಡಲಿದೆಯಂತೆ ಆಮ್ ಆದ್ಮಿ ಪಾರ್ಟಿ
ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ 2023 ರ ವಿಧಾನಸಭಾ ಚುನಾವಣೆಗೆ ಕರ್ನಾಟಕದಲ್ಲಿ ಹೊಸದೊಂದು ಸಕ್ರಿಯ ತಂಡವನ್ನು ರಚಿಸಲು ತನ್ನ ರಾಜ್ಯ ಮತ್ತು ಜಿಲ್ಲಾ ಮಟ್ಟದ ಘಟಕಗಳನ್ನು ವಿಸರ್ಜಿಸಿದೆ.
ಇದನ್ನೂ ಓದಿ: ಬಿಜೆಪಿಯಲ್ಲಿ ಯತ್ನಾಳ್ Vs ನಿರಾಣಿ; 'ಪಿಂಪ್ ಸಚಿವ' ಎಂಬ ಯತ್ನಾಳ್ ಹೇಳಿಕೆಗೆ ಸಚಿವ ನಿರಾಣಿ ಕಣ್ಣೀರು
"ಇದು ವಿಧಾನಸಭಾ ಚುನಾವಣೆಯನ್ನು ಎದುರಿಸಲು ನಮ್ಮ ಸಿದ್ಧತೆಗಳ ಭಾಗವಾಗಿದೆ. ನಾವು ಹೊಸ ತಂಡದೊಂದಿಗೆ ಚುನಾವಣೆಯನ್ನು ಎದುರಿಸಲಿದ್ದೇವೆ" ಎಂದು ಕರ್ನಾಟಕದ ಆಪ್ ಪಾರ್ಟಿ ವ್ಯವಹಾರಗಳ ಮೇಲ್ವಿಚಾರಣೆ ನಡೆಸುತ್ತಿರುವ ದೆಹಲಿ ಶಾಸಕ ಮತ್ತು ದೆಹಲಿ ವಿಧಾನಸಭಾ ಮುಖ್ಯ ಸಚೇತಕ ದಿಲೀಪ್ ಪಾಂಡೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಒಂದು ವಾರದಲ್ಲಿ ಹೊಸ ಸಂಘಟನೆ ರಚನೆಯನ್ನು ಘೋಷಿಸಲಾಗುವುದು ಎಂದು ಅವರು ಹೇಳಿದರು.
ಕಳೆದ ಐದು ತಿಂಗಳುಗಳಿಂದ ಗ್ರಾಮ್ ಸಂಪರ್ಕ್ ಅಭಿಯಾನ ಶುರು ಮಾಡಿದ ಆಮ್ ಆದ್ಮಿ ಪಾರ್ಟಿ
"ಆಮ್ ಆದ್ಮಿ ಪಾರ್ಟಿಯ ಕರ್ನಾಟಕ ಘಟಕವು ಕಳೆದ ಐದು ತಿಂಗಳುಗಳಿಂದ ಗ್ರಾಮ್ ಸಂಪರ್ಕ್ ಅಭಿಯಾನ ಎಂಬ ರಾಜ್ಯ ವ್ಯಾಪಿ ಅಭಿಯಾನದ ಅಡಿಯಲ್ಲಿ ಸಂಘಟನೆಯನ್ನು ಕಟ್ಟುವ ಮತ್ತು ಬಲಪಡಿಸುವ ಪ್ರಕ್ರಿಯೆಗೆ ಚಾಲನೆ ನೀಡಾಗಿದೆ. ಈ ಅಭಿಯಾನದ ಸಮಯದಲ್ಲಿ, ಕರ್ನಾಟಕದ ಆಪ್ ಪಾರ್ಟಿ ರಾಜ್ಯದಾದ್ಯಂತ ಸಾವಿರಾರು ಹೊಸ ಸ್ವಯಂ ಸೇವಕರು ಮತ್ತು ಬೆಂಬಲಿಗರೊಂದಿಗೆ ಸಂಪರ್ಕ ಸಾಧಿಸಿತು.
ಈಗ, ಕರ್ನಾಟಕದಲ್ಲಿ ಬಹುನಿರೀಕ್ಷಿತ ಬದಲಾವಣೆಯನ್ನು ತರಲು ಬಯಸುವ ಎಲ್ಲರನ್ನೂ ಒಳಗೊಂಡಂತೆ ಹೊಸ ತಂಡವನ್ನು ರಚಿಸಲಾಗುವುದು" ಎಂದು ಪಾಂಡೆ ಹೇಳಿದರು. "ರಾಜ್ಯದ ಸಾಮಾನ್ಯ ಪುರುಷರು ಮತ್ತು ಮಹಿಳೆಯರೊಂದಿಗೆ ಕೈ ಜೋಡಿಸುವ ಮೂಲಕ, ಪಕ್ಷವು ವಿಧಾನಸಭಾ ಚುನಾವಣೆಯನ್ನು ಪರಿಣಾಮಕಾರಿಯಾಗಿ ಎದುರಿಸುತ್ತದೆ ಎಂದು ನಾವು ಬಲವಾಗಿ ನಂಬುತ್ತೇವೆ.
ನಾವು ಬಿಜೆಪಿಯ ಭ್ರಷ್ಟ ಮತ್ತು ಪರಿಣಾಮಕಾರಿಯಲ್ಲದ ಸರ್ಕಾರವನ್ನು ಸೋಲಿಸುತ್ತೇವೆ ಎಂಬ ವಿಶ್ವಾಸ ನಮಗಿದೆ" ಎಂದು ಅವರು ಹೇಳಿದರು. ಎಲ್ಲಾ 224 ಕ್ಷೇತ್ರಗಳಲ್ಲಿ ಆಪ್ ಸ್ಪರ್ಧಿಸುತ್ತಿರುವ ಬಗ್ಗೆ ರಾಜ್ಯದ ಇತರ ರಾಜಕೀಯ ಪಕ್ಷಗಳು ಉದ್ವಿಗ್ನಗೊಂಡಿವೆ ಎಂದು ಪಾಂಡೆ ಹೇಳಿದರು.
ಆಮ್ ಆದ್ಮಿ ಪಾರ್ಟಿ ಪಕ್ಷದ ಬೆಳವಣಿಗೆಯಿಂದ ಭಯಭೀತರಾಗಿವೆಯಂತೆ ಬೇರೆ ಪಕ್ಷಗಳು
"ಇತರ ಪಕ್ಷಗಳ ನಾಯಕರು ಪಕ್ಷದ ಬೆಳವಣಿಗೆಯ ಬಗ್ಗೆ ಭಯಭೀತರಾಗಿದ್ದಾರೆ. ಅವರು ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರ ಆತ್ಮಸ್ಥೈರ್ಯ ಕುಗ್ಗಿಸಲು ಪ್ರಯತ್ನಿಸುತ್ತಿದ್ದಾರೆ. ಆಮ್ ಆದ್ಮಿ ಪಾರ್ಟಿಯ ಪೋಸ್ಟರ್ ಗಳನ್ನು ತೆಗೆದು ಹಾಕಿ, ನಮ್ಮ ಕಾರ್ಯಕರ್ತರು ಮತ್ತು ನಮಗೆ ಸ್ಥಳವನ್ನು ಬಾಡಿಗೆಗೆ ನೀಡಿದ ಕಟ್ಟಡಗಳ ಮಾಲೀಕರಿಗೆ ಬೆದರಿಕೆ ಹಾಕಿದ ಘಟನೆಗಳು ನಡೆದಿವೆ" ಎಂದು ಪಾಂಡೆ ಹೇಳಿದರು.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕರ್ನಾಟಕ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ ಎಂದು ಪಾಂಡೆ ಹೇಳಿದರು. "ರಾಷ್ಟ್ರೀಯ ಪಕ್ಷವಾದ ನಂತರ, ಅಭಿವೃದ್ಧಿಯ ದೃಷ್ಟಿಯಿಂದ ಕರ್ನಾಟಕವನ್ನು ಭಾರತದ ನಂಬರ್ ಒನ್ ರಾಜ್ಯವನ್ನಾಗಿ ಮಾಡುವ ಹೆಚ್ಚಿನ ಭರವಸೆಯೊಂದಿಗೆ ಜನರು ನಿಜವಾಗಿಯೂ ಆಪ್ ಅನ್ನು ಎದುರು ನೋಡುತ್ತಿದ್ದಾರೆ" ಎಂದು ಅವರು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ