ನವದೆಹಲಿ: ಆಮ್ ಆದ್ಮಿ ಪಕ್ಷ ಸೇರ್ಪಡೆಯಾದ ನಿವೃತ್ತ ಕರ್ನಲ್ ಅಜಯ್ ಕೊಥಿಯಾಲ್ ಅವರು ಉತ್ತರಖಂಡದ ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ತಿರಂತ್ ಸಿಂಗ್ ರಾವತ್ ಎದುರು ಸ್ಪರ್ಧೆ ಮಾಡಲಿದ್ದಾರೆ.
ಉತ್ತರಕಾಶಿ ಮೂಲದ ನೆಹರು ಇನ್‌ಸ್ಟಿಟ್ಯೂಟ್ ಆಫ್ ಮೌಂಟೈನಿರಿಂಗ್ (ಎನ್ಐಎಂ) ನ ಮಾಜಿ ಪ್ರಾಂಶುಪಾಲ ಕರ್ನಲ್ ಕೊಥಿಯಾಲ್ ಅವರು ಈ ವರ್ಷದ ಏಪ್ರಿಲ್ 20 ರಂದು ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಸೇರಿದ್ದರು.
2013 ರ ಕೇದಾರನಾಥ ದುರಂತದಲ್ಲಿ ಪುನರ್ವಸತಿ ಮತ್ತು ಪುನರ್ನಿರ್ಮಾಣದಲ್ಲಿ ಕರ್ನಲ್ ಕೋಥಿಯಾಲ್ ಅವರ ತೋರಿದ ಸಾಹಸ ಮತ್ತು ಕೆಲಸಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಸೇನೆಯಿಂದ ನಿವೃತ್ತಿಯಾದ ಬಳಿಕ ಕೋಥಿಯಾಲ್ ಅವರು ಈಗ ರಕ್ಷಣಾ ಪಡೆಗಳಲ್ಲಿ ಸೇರುವ ಯುವಕರಿಗೆ ಬೆಟ್ಟ ಹತ್ತುವ ತರಬೇತಿ ನೀಡುವ ಸಂಘಟನೆಯನ್ನು ನಡೆಸುತ್ತಿದ್ದಾರೆ.
ಸೇವೆ ಮತ್ತು ನಿವೃತ್ತ ರಕ್ಷಣಾ ಸಿಬ್ಬಂದಿಗಳ ಬಲವಾದ ಉಪಸ್ಥಿತಿಯನ್ನು ಹೊಂದಿರುವ ಉತ್ತರಾಖಂಡದಲ್ಲಿ ನಿವೃತ್ತ ಕರ್ನಲ್ ಕೊಥಿಯಾಲ್ ಅವರನ್ನು ಚುನಾವಣಾ ಸ್ಪರ್ಧೆಗೆ ಇಳಿಸುವ ಮೂಲಕ ಎಎಪಿ ಉತ್ತರಾಖಂಡದಲ್ಲಿ ರಾಜಕೀಯ ಭದ್ರನೆಲೆ ಎದುರು ನೋಡುತ್ತಿದೆ. ಮುಂದಿನ ವರ್ಷದ ಆರಂಭದಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಆಮ್ ಆದ್ಮಿ ಪಕ್ಷವು ಉತ್ತರಾಖಂಡ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಿಸಿದೆ.
ಏತನ್ಮಧ್ಯೆ, ಸಿಎಂ ರಾವತ್ ಅವರೊಂದಿಗೆ ಮಾತನಾಡಲು ಬಿಜೆಪಿ ಹೈಕಮಾಂಡ್ ಬುಧವಾರ ಅವರನ್ನುತುರ್ತಾಗಿ ದೆಹಲಿಗೆ ಕರೆಸಿಕೊಂಡಿತ್ತು. ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾವಣೆಗೆ ಬಿಜೆಪಿ ಈಗಿನಿಂದಲೇ ತಯಾರಿ ಆರಂಭಿಸಿದೆ ಎಂಬುದರ ಉಹಾಪೋಹಗಳಿಗೆ ಈ ಘಟನೆ ಮತ್ತಷ್ಟು ಇಂಬು ನೀಡಿದೆ.
ಇದನ್ನು ಓದಿ: ಕಾಂಗ್ರೆಸ್ ಪ್ರಚಾರ ವಾಹನದ ಮೇಲೆ ಅಹಿಂದ ನಾಯಕ ಸಿದ್ದರಾಮಯ್ಯ ಫೋಟೋ ಹಾಕದೆ ಅವಮಾನ ಮಾಡಿದ್ದಾರೆ; ಸಚಿವ ಶ್ರೀರಾಮುಲು!
ನಿಯಮದಂತೆ, ರಾವತ್ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲು ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಬೇಕು. ಪ್ರಮಾಣವಚನ ಸ್ವೀಕರಿಸಿದ ದಿನಾಂಕದಿಂದ ಆರು ತಿಂಗಳೊಳಗೆ ಮುಖ್ಯಮಂತ್ರಿ ಅಥವಾ ಸಚಿವರು ವಿಧಾನಸಭೆ ಅಥವಾ ಪರಿಷತ್ತಿನ ಸದಸ್ಯರಾಗಬೇಕು (ಲಭ್ಯವಿರುವಲ್ಲೆಲ್ಲ). ರಾವತ್ ಅವರ ಪ್ರಕರಣದಲ್ಲಿ, ಗಡುವು ಸೆಪ್ಟೆಂಬರ್ 10 ಆಗಿದೆ. ಉತ್ತರಾಖಂಡವು ಏಕಸಭೆಯ ಶಾಸಕಾಂಗವನ್ನು ಹೊಂದಿದೆ ಮತ್ತು ವಿಧಾನಸಭೆಯಲ್ಲಿ 70 ಸದಸ್ಯ ಬಲವಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ