Aadhar Update - ಹಳ್ಳಿಗಳಲ್ಲೇ ಇನ್ಮುಂದೆ ಆಧಾರ್ ಕಾರ್ಡ್ ನೊಂದಣಿ, ಅಪ್​ಡೇಟ್ ಕಾರ್ಯ

ಆಧಾರ್ ಕಾರ್ಡ್ ತಿದ್ದುಪಡಿಗೆ ನಗರಗಳಿಗೆ ಭೇಟಿ ನೀಡುವುದನ್ನು ತಪ್ಪಿಸಲು ಹಳ್ಳಿಗಳಲ್ಲೇ ಅದಕ್ಕೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಮೂರು ಜಿಲ್ಲೆಗಳಲ್ಲಿ ಪೈಲಟ್ ಯೋಜನೆ ಪ್ರಾರಂಭಿಸಲಾಗಿದೆ. 15 ದಿನಗಳಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಇದು ಜಾರಿಯಾಗಲಿದೆ.

ಆಧಾರ್ ಕಾರ್ಡ್

ಆಧಾರ್ ಕಾರ್ಡ್

 • Share this:
  ಮಂಡ್ಯ: ಹಳ್ಳಿಯ ಜನರಿಗೆ ಬಹುದೊಡ್ಡ ಸಮಸ್ಯೆಯಾಗಿದ್ದ ಆಧಾರ್ ಕಾರ್ಡ್ ತಿದ್ದುಪಡಿ ಹಾಗೂ ಮಕ್ಕಳ ಹೆಸರು ನೋಂದಣಿ ಸಮಸ್ಯೆಗೆ ಶೀಘ್ರವೇ ಪರಿಹಾರ ಸಿಗಲಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೂಚನೆಯಂತೆ ರಾಜ್ಯದ 630 ಗ್ರಾಮ ಪಂಚಾಯಿತಿ ಪೈಲಟ್ ಯೋಜನೆಯಂತೆ ಅನುಷ್ಠಾನಗೊಳ್ಳುತ್ತಿದೆ. ಅಂತೆಯೇ ಈಗಾಗಲೇ ಮಂಡ್ಯ ಜಿಲ್ಲೆಯ ಎರಡು ತಾಲೂಕಿನಲ್ಲಿ ಜು.26ರಿಂದ 22 ಗ್ರಾಮ ಪಂಚಾಯಿತಿಗಳಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಹಾಗೂ ಮಕ್ಕಳ ಹೆಸರು ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಹಾವೇರಿ, ವಿಜಯಪುರ ನಂತರ ಮಂಡ್ಯ ಜಿಲ್ಲೆಯಲ್ಲಿ ಇದು ಅನುಷ್ಠಾನಗೊಳ್ಳುತ್ತಿದೆ. ಹದಿನೈದು ದಿನದೊಳಗೆ ಎಲ್ಲ ಜಿಲ್ಲೆಗಳಲ್ಲಿಯೂ ಈ ಪ್ರಕ್ರಿಯೆ ಕಡ್ಡಾಯವಾಗಿ ಪ್ರಾರಂಭವಾಗಲಿದೆ.

  ಏನಿದು ಯೋಜನೆ: ರಾಜ್ಯದಲ್ಲಿ ಸಾರ್ವಜನಿಕರು ಕೋವಿಡ್ ಲಸಿಕೆಯನ್ನು ಆಧಾರ್ ಸಂಖ್ಯೆಯ ದೃಢೀಕರಣದೊಂದಿಗೆ ಪಡೆಯುವುದು ಕಡ್ಡಾಯ. ಆದರೆ ಗ್ರಾಮೀಣ ಪ್ರದೇಶದ ವಾಸಿಗಳು ಮೊಬೈಲ್ ಸಂಖ್ಯೆಯನ್ನು ಆಧಾರ್ ಸಂಖ್ಯೆಗೆ ಅಪ್‌ಡೇಟ್ ಮಾಡಲು ಹೆಚ್ಚು ಕಾಲಾವಕಾಶ ನೀಡುವಂತೆ ಹೆಚ್ಚಿನ ಬೇಡಿಕೆ ಇತ್ತು. ಕಾರಣ ಆಧಾರ್ ಸಂಖ್ಯೆಯ ತಿದ್ದುಪಡಿ ಹಾಗೂ ಮಕ್ಕಳ ಹೆಸರು ನೋಂದಣಿ ಮಾಡಿಸಲು ನಗರಕ್ಕೆ ಬರಬೇಕಾದ ಅನಿವಾರ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಹಳ್ಳಿಯಲ್ಲಿಯೇ ತಿದ್ದುಪಡಿ ಹಾಗೂ ನೋಂದಣಿ ಮಾಡಲು ಗ್ರಾಪಂನಲ್ಲಿ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿತ್ತು. ಅದರಂತೆ ಇದೀಗ ಗ್ರಾಪಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಂಪ್ಯೂಟರ್ ಆಪರೇಟರ್‌ಗಳಿಗೆ ತರಬೇತಿ ನೀಡಿ ಪ್ರಕ್ರಿಯೆ ನಡೆಸಲಾಗುತ್ತಿದೆ.

  ಮಂಡ್ಯ ಜಿಲ್ಲೆಯಲ್ಲಿ ಜನಸಂಖ್ಯೆಯ ಬೇಡಿಕೆ ಆಧಾರದ ಮೇಲೆ ಪೈಲಟ್ ಯೋಜನೆಯಂತೆ ಪರಿಗಣಿಸಿ ಮದ್ದೂರು ಮತ್ತು ಕೆ.ಆರ್. ಪೇಟೆ ತಾಲೂಕಿನಲ್ಲಿ ಈ ಪ್ರಕ್ರಿಯೆ ಪ್ರಾರಂಭವಾಗಲಿದೆ. ಇದಕ್ಕಾಗಿ ಎರಡು ತಾಲೂಕಿನಿಂದ 22 ಗ್ರಾಪಂಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಕೆಲ ದಿನಗಳು ಈ ಪ್ರಕ್ರಿಯೆಯನ್ನು ಗಮನಿಸಿ ಉಳಿದ ತಾಲೂಕಿನಲ್ಲಿಯೂ ಅನುಷ್ಠಾನಗೊಳಿಸಲು ಯೋಜನೆ ರೂಪಿಸಲಾಗಿದೆ.

  ಇದನ್ನೂ ಓದಿ: Karnataka Dams Water Level: ಕದ್ರಾಂ ಡ್ಯಾಂನಿಂದ ಕಾಳಿ ನದಿಗೆ 40 ಸಾವಿರ ಕ್ಯೂಸೆಕ್ಸ್​ ನೀರು; ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ

  ಯಾವ್ಯಾವ ಸೌಲಭ್ಯಗಳು...?

  ಜು.26ರಿಂದ ಆಯ್ಕೆ ಮಾಡಿಕೊಂಡಿರುವ ಗ್ರಾಪಂಗಳಲ್ಲಿ 5 ವರ್ಷದೊಳಗಿನ ಮಕ್ಕಳ ಹೆಸರು ನೋಂದಣಿ, ಎಲ್ಲ ವರ್ಗದವರ ಮೊಬೈಲ್ ಸಂಖ್ಯೆ ಹಾಗೂ ವಿಳಾಸ ಬದಲಾವಣೆ ಮಾಡಲಾಗುತ್ತದೆ. ಪ್ರಮುಖವಾಗಿ ಮಕ್ಕಳ ಹೆಸರು ನೋಂದಣಿಗೆ ಯಾವುದೇ ಶುಲ್ಕವಿರುವುದಿಲ್ಲ. ಉಳಿದೆರೆಡು ಸೌಲಭ್ಯಕ್ಕೆ ತಲಾ 50 ರೂ ನಿಗದಿಪಡಿಸಲಾಗಿದೆ.

  ಇನ್ನು ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮಕ್ಕಳ ಹೆಸರು ನೋಂದಣಿ ಉಚಿತವೆಂದು ಹಾಗೂ ಉಳಿದ ಸೌಲಭ್ಯಕ್ಕೆ 50 ರೂ ಶುಲ್ಕವೆಂದು ಜನರ ಮೊಬೈಲ್‌ಗೆ ಸಂದೇಶ ಬರಲಿದೆ. ಈ ಹಿನ್ನೆಲೆಯಲ್ಲಿ ಜನರು ಹೆಚ್ಚುವರಿಗೆ ಹಣ ಪಾವತಿ ಮಾಡುವಂತಿಲ್ಲ. ಒಮ್ಮೆ ಕೇಳಿದರೆ ಸಂಬಂಧಪಟ್ಟ ಗ್ರಾಪಂ ಪಿಡಿಒಗೆ ದೂರು ನೀಡಬಹುದು. ಜನರಿಂದ ಹೆಚ್ಚುವರಿ ಹಣ ಪಡೆಯದಂತೆ ತರಬೇತಿ ಅವಧಿಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ತರಬೇತಿ ಪಡೆದವರಿಗೆ ಟ್ಯಾಬ್ ನೀಡಲಿದ್ದು, ಗ್ರಾಪಂನಲ್ಲಿಯೇ ಕರ್ತವ್ಯ ನಿರ್ವಹಿಸಬೇಕು. ಈ ಎಲ್ಲದರ ಉಸ್ತುವಾರಿಯನ್ನು ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರು ನೋಡಿಕೊಳ್ಳುತ್ತಾರೆ.

  12,611 ಫೋಸ್ಟ್‌ಮ್ಯಾನ್‌ಗಳಿಗೂ ತರಬೇತಿ:

  ಗ್ರಾಪಂನಲ್ಲಿ ಸೌಲಭ್ಯ ಸಿಕ್ಕುತ್ತಿರುವುದು ಒಂದೆಡೆಯಾದರೆ, ರಾಜ್ಯದ ಎಲ್ಲ ಅಂಚೆ ಕಚೇರಿಯಲ್ಲಿಯೂ ಜನರಿಗೆ ಈ ಸೌಲಭ್ಯ ಕಲ್ಪಿಸಲು ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ 12,611 ಫೋಸ್ಟ್‌ಮ್ಯಾನ್ ಮತ್ತು ಫೋಸ್ಟ್‌ವುಮೆನ್ ಕೂಡ ಆಧಾರ್ ಕಾರ್ಡ್ ತಿದ್ದುಪಡಿ ಹಾಗೂ ಮಕ್ಕಳ ಹೆಸರು ನೋಂದಣಿ ಮಾಡಲಿದ್ದಾರೆ. ಇವರಿಗೂ ತರಬೇತಿ ನೀಡಲಾಗಿದ್ದು, ಸ್ಮಾರ್ಟ್ ಫೋನ್‌ನಲ್ಲಿ ಆ್ಯಪ್ ಕೊಡಲಾಗಿದೆ. ಅದರ ಮೂಲಕವೇ ಪ್ರಕ್ರಿಯೆ ಮಾಡಲು ಅವಕಾಶವಿದೆ.

  ಇದನ್ನೂ ಓದಿ: Karnataka Politics - ಯಡಿಯೂರಪ್ಪ ಬದಲಾವಣೆ ಚರ್ಚೆ ಬಗ್ಗೆ ಮೌನ ತಾಳಿದ ಬಳ್ಳಾರಿ ರೆಡ್ಡಿ

  ಒಂದೇ ಗಂಟೆಯಲ್ಲಿ ಅಪ್‌ಡೇಟ್:

  ಸಾಮಾನ್ಯವಾಗಿ ಆಧಾರ್ ಕಾರ್ಡ್ ತಿದ್ದುಪಡಿಯಲ್ಲಿ ಕಂಡುಬರುವುದು ಅಪ್‌ಡೇಟ್ ಆಗುವುದಿಲ್ಲ ಎನ್ನುವುದೇ ಬಹುದೊಡ್ಡ ಸಮಸ್ಯೆಯಾಗಿದೆ. ಜತೆಗೆ ಅಪ್‌ಡೇಟ್ ಮಾಡಿಸಿಕೊಂಡ ಕಾರ್ಡ್ ಕೂಡ ಬೇಗ ಸಿಗುವುದಿಲ್ಲ ಎನ್ನುವ ಆಕ್ರೋಶವೂ ಇದೆ. ಆದರೆ ಗ್ರಾಪಂನಲ್ಲಿ ನಡೆಯುವ ಪ್ರಕ್ರಿಯೆಯಲ್ಲಿ ಮಾಹಿತಿ ತಿದ್ದುಪಡಿ ಮಾಡಿದ ಸುಮಾರು ಒಂದು ಗಂಟೆ ಅವಧಿಯಲ್ಲಿಯೇ ಕಾರ್ಡ್‌ನಲ್ಲಿ ಅಪ್‌ಡೇಟ್ ಆಗಿರುತ್ತದೆ. ಅದನ್ನು ಬೇರೆಡೆ ಪ್ರಿಂಟ್ ತೆಗೆದುಕೊಳ್ಳಬಹುದು.

  ಮಂಡ್ಯದಲ್ಲಿ ಎಲ್ಲೆಲ್ಲಿ ಪ್ರಾರಂಭ?

  ಮದ್ದೂರು ತಾಲೂಕಿನಲ್ಲಿ ಕೌಡ್ಲೆ, ಬೆಕ್ಕಳಲೆ, ಬೆಸಗರಹಳ್ಳಿ, ಹೊಸಕೆರೆ, ಕೆ.ಬೆಳ್ಳೂರು, ಕೆ.ಶೆಟ್ಟಹಳ್ಳಿ, ಕೂಳಗೆರೆ, ನಿಡಘಟ್ಟ, ಸಾದೊಳಲು ಗ್ರಾಮ ಪಂಚಾಯಿತಿಯಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಹಾಗೂ ಮಕ್ಕಳ ಹೆಸರು ನೋಂದಣಿ ಪ್ರಕ್ರಿಯೆ ನಡೆಯಲಿದೆ. ಕೆ.ಆರ್.ಪೇಟೆ ತಾಲೂಕಿನಲ್ಲಿ ಅಘಲಯ, ಅಗ್ರಹಾರ ಬಾಚಹಳ್ಳಿ, ಆಲಂಬಾಡಿ ಕಾವಲು, ಆನೆಗೊಳ, ಬಳ್ಳೇನಹಳ್ಳಿ, ಗಂಜಿಗೆರೆ, ಹರಳಹಳ್ಳಿ, ಹಿರಿಕಳಲೆ, ಮಾದಾಪುರ, ಮಾಕವಳ್ಳಿ, ಸಾರಂಗಿ, ಸಿಂಧಘಟ್ಟ, ಸೋಮನಹಳ್ಳಿ ಗ್ರಾಪಂನಲ್ಲಿ ಪ್ರಕ್ರಿಯೆ ನಡೆಯಲಿದೆ.

  ಜಿಲ್ಲೆಗೆ 22 ಕಿಟ್ ನೀಡಲಾಗಿದೆ. ಅಂತೆಯೇ ಮದ್ದೂರು, ಕೆ.ಆರ್.ಪೇಟೆ ತಾಲೂಕಿನ 22 ಗ್ರಾಮ ಪಂಚಾಯಿತಿ ಹಾಗೂ 350 ಅಂಚೆ ಕಚೇರಿಯಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಹಾಗೂ ಮಕ್ಕಳ ಹೆಸರು ನೋಂದಣಿ ಪ್ರಕ್ರಿಯೆ ನಡೆಯಲಿದೆ. ಈ ಸಂಬಂಧ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ತಾಲೂಕಿಗೂ ವಿಸ್ತರಣೆ ಮಾಡಲಾಗುವುದು ಎಂದು ಮಂಡ್ಯ ಆಡಳಿತ ಮಾಹಿತಿ ನೀಡಿದೆ.

  ವರದಿ - ಸುನೀಲ್ ಗೌಡ
  Published by:Vijayasarthy SN
  First published: