ಡಿಸಿಎಂ ಗೋವಿಂದ ಕಾರಜೋಳ ಕ್ಷೇತ್ರದಲ್ಲಿ ಗೋಮಾಳ ಜಮೀನು ಒತ್ತುವರಿ ತೆರವಿಗಾಗಿ ಹೈಕೋರ್ಟ್ ಮೊರೆ ಹೋದ ಯುವಕ

ಗೋಮಾಳ ಜಮೀನು ಒತ್ತುವರಿ ವಿಚಾರವಾಗಿ ಗ್ರಾಮದಲ್ಲಿ ಅನೇಕರು ವಿರೋಧ ವ್ಯಕ್ತಪಡಿಸುತ್ತಾರೆ. ಗೋಮಾಳ ಒತ್ತುವರಿ ಅಲ್ಲ, ಬಡವರು ಅಕ್ರಮ ಸಕ್ರಮಯಡಿ  ಆಶ್ರಯ ಮನೆ ಕಾನೂನುಬದ್ದವಾಗಿ ಪಡೆದಿದ್ದಾರೆ. ಗೋಮಾಳ ಜಾಗೆಯ ವಿಚಾರವಾಗಿ ಪರ ಮತ್ತು ವಿರೋಧ ವ್ಯಕ್ತವಾಗಿದೆ.

ಕರ್ನಾಟಕ ಹೈಕೋರ್ಟ್

ಕರ್ನಾಟಕ ಹೈಕೋರ್ಟ್

  • Share this:
ಬಾಗಲಕೋಟೆ (ಫೆ.24): ಡಿಸಿಎಂ ಗೋವಿಂದ ಕಾರಜೋಳ ಕ್ಷೇತ್ರ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಅಕ್ಕಿಮರಡಿ ಗ್ರಾಮದಲ್ಲಿ ಗೋಮಾಳ ಒತ್ತುವರಿ ತೆರವಿಗಾಗಿ ಕಿರಣ್ ಜಗದಾಳ ಧಾರವಾಡ ಹೈಕೋರ್ಟ್ ಮೊರೆ ಹೋಗಿದ್ದಾನೆ. ಮುಧೋಳ ತಾಲೂಕಿನ ನಾಗರಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಕ್ಕಿಮರಡಿ, ಒಂಟಗೋಡಿ, ಮಿರ್ಜಿ, ನಾಗರಾಳ, ಮಲ್ಲಾಪುರ ಸೇರಿ ಐದು ಗ್ರಾಮಗಳ ಜಾನುವಾರುಗಳಿಗೆ ಅನುಕೂಲಕ್ಕಾಗಿ ಸರ್ವೇ ನಂಬರ್ 166,ರಲ್ಲಿ  53 ಎಕರೆ ಗೋಮಾಳ ಜಮೀನಿದೆ. ಇದರಲ್ಲಿ ಐದು ಎಕರೆ ಸರ್ಕಾರಿ ಹೈಸ್ಕೂಲ್ ಗೆ ಹಾಗೂ ಒಂದು ಎಕರೆಗೆ ಕ್ಷೇತ್ರಾಭಿವೃದ್ಧಿ ಅಧಿಕಾರಿಗೆ ಕೊಡಲಾಗಿದೆ. ಉಳಿದಂತೆ 47 ಎಕರೆ ಗೋಮಾಳ ಜಾಗವನ್ನು ಕಾಯ್ದಿಸಲಾಗಿತ್ತು. ಆದರೆ, ಇದೀಗ ಅಕ್ಕಿಮರಡಿ ಗ್ರಾಮದ ಸುತ್ತಲೂ ಇರುವ ಗೋಮಾಳ ಜಾಗೆ ಒತ್ತುವರಿ ಆಗಿದೆ ಎಂದು ಆರೋಪಿಸಿ ಗ್ರಾಮದ ಯುವಕ ಕಿರಣ್ ಜಗದಾಳ 2012-13ರಿಂದ ಹೋರಾಟ ಮಾಡುತ್ತಾ ಬಂದಿದ್ದಾನೆ.

ಗೋಮಾಳ ಜಾಗವನ್ನು ಸರ್ಕಾರಿ ಕೆಲಸಗಳಿಗೆ ಬಳಸಿಕೊಳ್ಳಬಾರದು ಎಂದು ಸುಪ್ರೀಂಕೋರ್ಟ್ ಆದೇಶವಿದೆ. ಆದರೆ  ಗೋಮಾಳ ಜಮೀನಿನಲ್ಲಿ ಸರ್ಕಾರಿ ಕಟ್ಟಡಗಳು, ವಿವಿಧ ಸಂಘ ಸಂಸ್ಥೆಗಳ ಕಟ್ಟಡಗಳು ಜೊತೆಗೆ ಖಾಸಗಿಯಾಗಿ ಸಾರ್ವಜನಿಕರು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಗ್ರಾಪಂ ಅಧಿಕಾರಿಗಳು ಇದನ್ನು ಗಾಂವಠಾನ್ ಜಾಗೆ ಎಂದು ನಕಲಿ ದಾಖಲೆ ಸೃಷ್ಟಿಸಿ ಸರ್ಕಾರ ಮತ್ತು ಜನರಿಗೆ ಮೋಸ ಮಾಡುತ್ತಿದ್ದಾರೆ. ಅನೇಕರು ಇಲ್ಲಿ ಜಾಗ ಪಡೆದು ಲಕ್ಷಾಂತರ ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಗೋಮಾಳ ಜಮೀನು ವಿಚಾರದಲ್ಲಿ ಗ್ರಾಮ ಪಂಚಾಯಿತಿಯವರು ಜನರ ದಾರಿತಪ್ಪಿಸುತ್ತಿದ್ದಾರೆ. ಗೋಮಾಳ ಜಾಗೆ ಜಾನುವಾರುಗಳ ಬಳಕೆಗಾಗಿ ಇರಬೇಕು, ಒತ್ತುವರಿಯಾಗಿರುವ ಗೋಮಾಳ‌ ತೆರುವುಗೊಳಿಸಬೇಕೆಂದು ಕಾನೂನು ಹೋರಾಟಕ್ಕೆ ಮುಂದಾಗಿದ್ದು, ಈ ಬಗ್ಗೆ ಧಾರವಾಡ ಹೈಕೋರ್ಟ್ ಮೆಟ್ಟಿಲೇರುತ್ತಿದ್ದೇನೆ ಎನ್ನುತ್ತಾರೆ ಕಿರಣ್ ಜಗದಾಳ.

ಆದರೆ ಗೋಮಾಳ ಜಮೀನು ಒತ್ತುವರಿ ವಿಚಾರವಾಗಿ ಗ್ರಾಮದಲ್ಲಿ ಅನೇಕರು ವಿರೋಧ ವ್ಯಕ್ತಪಡಿಸುತ್ತಾರೆ. ಗೋಮಾಳ ಒತ್ತುವರಿ ಅಲ್ಲ, ಬಡವರು ಅಕ್ರಮ ಸಕ್ರಮಯಡಿ  ಆಶ್ರಯ ಮನೆ ಕಾನೂನುಬದ್ದವಾಗಿ ಪಡೆದಿದ್ದಾರೆ. ಗೋಮಾಳ ಜಾಗೆಯ ವಿಚಾರವಾಗಿ ಪರ ಮತ್ತು ವಿರೋಧ ವ್ಯಕ್ತವಾಗಿದೆ. ಬಡವರಿಗಾಗಿ ನಿರ್ಮಿಸಿದ ಆಶ್ರಯ ಮನೆಗಳು ಬಿಟ್ಟು,ಗೋಮಾಳ ಒತ್ತುವರಿ ಆಗಿದ್ದರೆ ತೆರವುಗೊಳಿಸಲಿ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಯಶವಂತ ಚವ್ಹಾಣ.

ಸಿಂದಗಿ ಉಪಚುನಾವಣೆಗೆ ಬಿಜೆಪಿ ತಾಲೀಮು; ಕಳೆದ ಮೂರ್ನಾಲ್ಕು ದಿನಗಳಿಂದ ಗರಿಗೆದರಿರುವ ಚಟುವಟಿಕೆಗಳು

ಅಕ್ಕಿಮರಡಿ ಗ್ರಾಮದಲ್ಲಿ ಗೋಮಾಳ ಜಾಗೆ ಮಾಯ ಆಗುತ್ತಿರುವ ಬಗ್ಗೆ ಗ್ರಾಮಸ್ಥರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಕಿರಣ ಜಗದಾಳ ಮಾತ್ರ ಈ ಬಗ್ಗೆ ಕಚೇರಿಯಿಂದ ಕಚೇರಿಗೆ ಕಾಗದ ಪತ್ರಗಳ ವ್ಯವಹಾರ, ಕಬಳಿಕೆ ಆಗಿರುವ ಗೋಮಾಳ ಜಾಗೆ ತೆರವುಗೊಳಿಸುವ ಹಾಗೂ ಸರ್ಕಾರಕ್ಕೂ ತಪ್ಪು ಮಾಹಿತಿ ನೀಡಿ, ವಿವಿಧ ಯೋಜನೆ ಅಡಿಯಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಿರುವ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಇನ್ನು ಈ ಬಗ್ಗೆ  ಜಿಲ್ಲಾಡಳಿತ, ಮುಧೋಳ ತಾಲೂಕು ಆಡಳಿತಕ್ಕೂ ಮನವಿಯನ್ನು ಸಲ್ಲಿಸಿದ್ದಾರೆ. 47 ಎಕರೆ ಗೋಮಾಳ ಪ್ರದೇಶವನ್ನು ಗುರುತಿಸಿ ಅದಕ್ಕೆ ಸರಹದ್ದು ಹಾಕಬೇಕು. ಮೂಲ ನಕ್ಷೆಯಂತೆ ಗೋಮಾಳ ಜಾಗೆ ಉಳಿಸುವ ಮೂಲಕ ಭವಿಷ್ಯದಲ್ಲಿ ಈ ಭಾಗದ ಜಾನುವಾರುಗಳ ರಕ್ಷಣೆ ಆಗಬೇಕು ಎನ್ನುವುದು ಹೋರಾಟಗಾರನ ಹಕ್ಕೊತ್ತಾಯವಾಗಿದೆ. ಈ ಬಗ್ಗೆ ಮುಧೋಳ ತಾಲೂಕು ತಹಶೀಲ್ದಾರ್ ಸಂಗಮೇಶ ಬಾಡಗಿ ಅವರು, ಗೋಮಾಳ ಜಾಗೆ ಬಗ್ಗೆ ಸಾರ್ವಜನಿಕ ದೂರು ಬಂದಿದೆ. ಈ ಬಗ್ಗೆ ದಾಖಲೆ ಸಂಗ್ರಹಿಸಿ,ಗೋಮಾಳ ಶರಹದ್ದು ಗುರುತಿಸಲಾಗುವುದು ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ಗೋಮಾಳ ಜಮೀನು ಒತ್ತುವರಿಯಾಗಿರುವುದನ್ನು ತೆರವಿಗಾಗಿ ಕಿರಣ್ ಜಗದಾಳ ಏಕಾಂಗಿ ಹೋರಾಟ ಮಾಡುತ್ತಿದ್ದು, ಕಾನೂನು ಹೋರಾಟಕ್ಕೆ ಮುಂದಾಗಿದ್ದು,ಗೋಮಾಳ ತೆರವುಗೊಳಿಸುತ್ತಾರಾ ಕಾದು ನೋಡಬೇಕಿದೆ.
Published by:Latha CG
First published: