ಚಿಕ್ಕ ಸಿಗರೇಟ್ ಮೇಲೆ 7186 ಅಕ್ಷರ ಬರೆದು ದಾಖಲೆ; ಧೂಮಪಾನದ ವಿರುದ್ಧದ ಅರಿವಿಗೆ ಯುವಕನ ವಿಭಿನ್ನ ಪ್ರಯತ್ನ

ಸಿಗರೇಟ್ ಜೊತೆಗೆ ಬಿಳಿ ಎಳ್ಳಿನ ಮೇಲೆ ಕನ್ನಡದ ವರ್ಣಮಾಲೆ ಅಕ್ಷರಗಳನ್ನ ಬರೆದಿದ್ದಾನೆ. ಹಾಗೇ ಅಕ್ಕಿ ಕಾಳಿನ ಮೇಲೂ ಸಹ ಆಹಾರವನ್ನ ವ್ಯರ್ಥ ಮಾಡಬೇಡಿ ಎಂದು ಬರೆದು ಅದರಲ್ಲಿಯೂ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾನೆ

ಸಿಗರೇಟ್ ಮೇಲೆ ಅಕ್ಷರ ಬರೆಯುತ್ತಿರುವ ದರ್ಶನ್

ಸಿಗರೇಟ್ ಮೇಲೆ ಅಕ್ಷರ ಬರೆಯುತ್ತಿರುವ ದರ್ಶನ್

 • Share this:
  ರಾಮನಗರ(ಮಾ.11) : ದೇಶದಲ್ಲಿ ಬಹುತೇಕರು ಧೂಮಪಾನ ಮಾಡಿಯೇ ತಮ್ಮ ಆರೋಗ್ಯ ಕೆಡಿಸಿಕೊಂಡು ಕೊನೆಗೆ ಅದರಿಂದಲೇ ಜೀವ ಕಳೆದುಕೊಂಡ ಹಲವು ಉದಾಹರಣೆಗಳು ನಮ್ಮ ಮುಂದಿವೆ. ಈ ಧೂಮಪಾನ ವಿರುದ್ಧ ಇಲ್ಲೊಬ್ಬ ವಿದ್ಯಾರ್ಥಿ ವಿಶೇಷ ಅಭಿಯಾನ ಆರಂಭಿಸಿದ್ದಾನೆ. ಒಂದು ಚಿಕ್ಕ ಸಿಗರೇಟ್ ಮೇಲೆ ಸ್ಮೋಕಿಂಗ್ ಇಸ್ ಇಂಜೂರಿಯಸ್ ಟು ಹೆಲ್ತ್ (ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ) ಅಂತಾ ನೂರಾರು ಬಾರಿ ಬರೆದು ಜನರಿಗೆ ಅರಿವು ಮೂಡಿಸುವುದಕ್ಕೆ ಸಜ್ಜಾಗಿದ್ದಾನೆ.  

  ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಮತ್ತೀಕೆರೆ ಗ್ರಾಮದ ದರ್ಶನ್‌ಗೌಡ ಎಂಬ ವಿದ್ಯಾರ್ಥಿ ಈ ಸಾಧನೆಯ ಜೊತೆಗೆ ದೇಶದ ಜನರಿಗೆ ಸಿಗರೇಟ್ ಬಗ್ಗೆ ಅರಿವು ಮೂಡಿಸಲು ಮುಂದಾಗಿದ್ದಾನೆ. ಮೂಲತ ಚನ್ನಪಟ್ಟಣ ತಾಲೂಕಿನವನಾದ ದರ್ಶನ್‌ಗೌಡ ಒಬ್ಬ ಉತ್ತಮ ಯೋಗಾಪಟು ಕೂಡ. ಮೈಸೂರಿನ ಸೆಂಟ್ ಫಿಲೋಮಿನಾ ಕಾಲೇಜಿನಲ್ಲಿ ಹೋಟೆಲ್ ಅಂಡ್ ಮ್ಯಾನೇಜ್‌ಮೆಂಟ್ ವಿಭಾಗದ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಾನೆ.

  ಈತನಿಗೆ ಈ ಆಲೋಚನೆ ಬರುವುದಕ್ಕೂ ಒಂದು ಪ್ರಮುಖ ಕಾರಣವಿದೆ. ಈತನ ಜೊತೆಗೆ ಓದುತ್ತಿರುವ ಬಹುತೇಕ ಸ್ನೇಹಿತರು ಸಿಗರೇಟ್ ಸೇದುತ್ತಿದ್ದರು. ದರ್ಶನ್ ಎಷ್ಟು ಹೇಳಿದರು ಕೂಡ ಅವರೆಲ್ಲಾ ಧೂಮಪಾನ ಮಾಡುವುದನ್ನ ಬಿಟ್ಟಿಲ್ಲ. ಅದಕ್ಕಾಗಿ ದರ್ಶನ್ 6.9 ಸೆ.ಮೀ  ಸ್ಮಾಲ್ ಬ್ರ್ಯಾಂಡ್ ಸಿಗರೇಟ್ ಮೇಲೆ 260 ಬಾರಿ ಸ್ಮೋಕಿಂಗ್ ಇಸ್ ಇಂಜೂರಿಯಸ್ ಟು ಹೆಲ್ತ್ ಹಾಗೂ ಇಂಡಿಯಾ ಅಂತಾ 80 ಬಾರಿ ಬರೆದು ಒಟ್ಟು 7186 ಅಕ್ಷರಗಳನ್ನ ಬರೆದು ಸಿಗರೇಟ್ ಬಗ್ಗೆ ದೇಶದ ಜನರಿಗೆ ಅರಿವು ಮೂಡಿಸಲು ಮುಂದಾಗಿದ್ದಾನೆ.

  ಸಿಗರೇಟ್ ಜೊತೆಗೆ ಬಿಳಿ ಎಳ್ಳಿನ ಮೇಲೆ ಕನ್ನಡದ ವರ್ಣಮಾಲೆ ಅಕ್ಷರಗಳನ್ನ ಬರೆದಿದ್ದಾನೆ. ಹಾಗೇ ಅಕ್ಕಿ ಕಾಳಿನ ಮೇಲೂ ಸಹ ಆಹಾರವನ್ನ ವ್ಯರ್ಥ ಮಾಡಬೇಡಿ ಎಂದು ಬರೆದು ಅದರಲ್ಲಿಯೂ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾನೆ. ಈತನ ಸಾಧನೆ ನೋಡಿ ಪೋಷಕರು ಹಾಗೂ ಗುರುಗಳು ದರ್ಶನ್ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ನನ್ನ ಮಗ ಈ ರೀತಿಯ ಸಾಧನೆ ಮಾಡಿರೋದು ನನಗೆ ಬಹಳ ಸಂತೋಷವಾಗುತ್ತಿದೆ. ಅವನು ಓದಿನಲ್ಲಿ ಸ್ವಲ್ಪ ಹಿಂದಿದ್ದ, ಆದರೆ ಇಂದು ಸಾರ್ವಜನಿಕವಾಗಿ ಅರಿವು ಮೂಡಿಸುವ ಮೂಲಕ ಸಾಧನೆ ಮಾಡಿದ್ದಾನೆಂದು ಎಂದು ತಾಯಿ ಶೋಭಾ ಹರ್ಷವ್ಯಕ್ತಪಡಿಸಿದ್ದಾರೆ.

  ಇದನ್ನೂ ಓದಿ :  ಬಾಲಗಂಗಾಧರನಾಥ ಸ್ವಾಮೀಜಿಯವರ ಹುಟ್ಟೂರನ್ನು ಮರುವಿನ್ಯಾಸಗೊಳಿಸಲು ಡಿಸಿಎಂ ಸೂಚನೆ

  ನಿಜಕ್ಕೂ ನನ್ನ ವಿದ್ಯಾರ್ಥಿ ಸಿಗರೇಟ್ ಮೂಲಕ ಜನರಿಗೆ ಹೊಸಸಂದೇಶ ಸಾರಿದ್ದಾನೆ, ಬಹಳ ಖುಷಿ ಇದೇ ಎಂದು ದರ್ಶನ್ ಗುರು ವಿಜಯ್ ರಾಂಪುರ ಸಂತಸ ವ್ಯಕ್ತಪಡಿಸಿದ್ದಾರೆ.

  ಇನ್ನು ಈಗಾಗಲೇ ದರ್ಶನ್ ಸಾಧನೆ ಬಗ್ಗೆ ಗಿನ್ನಿಸ್ ದಾಖಲೆ ಪುಸ್ತಕ ಸೇರುವ ನಿರೀಕ್ಷೆ ಇದ್ದು ಸಂಬಂಧಪಟ್ಟವರು ಬೆಂಗಳೂರಿನ ಕಚೇರಿಗೆ ಬರಲು ಆಹ್ವಾನ ಕೂಡ ಕೊಟ್ಟಿದ್ದಾರೆಂದು ಸ್ವತ: ದರ್ಶನ್ ಅಭಿಪ್ರಾಯಪಟ್ಟಿದ್ದಾನೆ.

  ಅಮಲಿಗಾಗಿ ಸೇದಿ ಬಿಸಾಡುವ ಸಿಗರೇಟ್‌ನ ಒಂದೊಳ್ಳೆ ಉದ್ದೇಶಕ್ಕೆ ಬಳಸಿಕೊಂಡಿರುವ ದರ್ಶನ್ ಸಾಧನೆ ನಿಜಕ್ಕೂ ಮೆಚ್ಚುವಂತದಾಗಿದೆ.

   (ವರದಿ : ಎ.ಟಿ ವೆಂಕಟೇಶ್)
  First published: