ಬೆಂಗಳೂರು: ಯುವತಿಗೆ ಮೆಸೇಜ್ ಮಾಡಿದ್ದಕ್ಕಾಗಿ ಆಕೆಯ ಮನೆಯವರು ಬೆಂಗಳೂರಿನ (Bengaluru) ಯುವಕನೊಬ್ಬನನ್ನು ಅಪಹರಿಸಿ ಕೊಲೆ (Crime news) ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಯುವಕನ ಸಂಬಂಧಿ ಗಂಭೀರ ಹೇಳಿಕೆ ಕೊಟ್ಟಿದ್ದಾರೆ. ಯುವಕ ಯುವತಿಯ ಪ್ರೀತಿಗೆ (Love) ಆಕೆಯ ಸೋದರ ಮಾವನೇ ಮುಳ್ಳಾಗಿದ್ದರಿಂದ ಯುವಕನನ್ನು ಮಾತನಾಡುವ ನೆಪದಲ್ಲಿ ಕರೆಸಿ ಕೊಲೆ ಮಾಡಲಾಗಿದೆ ಎಂದು ಕೊಲೆಯಾದವನ ಸಂಬಂಧಿ ಪ್ರಕಾಶ್ ಆರೋಪ ಮಾಡಿದ್ದಾರೆ.
ಈ ಬಗ್ಗೆ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ಉಲ್ಲೇಖಿಸಿರುವ ಮೃತ ಯುವಕ ಗೋವಿಂದರಾಜುನ ಸಂಬಂಧಿ ಪ್ರಕಾಶ್, ಆ ಹುಡುಗಿ ಮತ್ತು ಗೋವಿಂದರಾಜು ನಡುವೆ ಪ್ರೀತಿ ಇತ್ತು. ಅದು ನಮಗೆ ಗೊತ್ತಿರಲಿಲ್ಲ. ಹುಡುಗಿ ಕಾಲೇಜಿಗೆ ಹೋದಾಗ ಆಕೆಯ ಮೊಬೈಲ್‌ಗೆ ಗೊವಿಂದರಾಜು ಕರೆ ಮಾಡಿದ್ದ. ಆದರೆ ಆಕೆ ಮೊಬೈಲ್‌ನ್ನು ಮನೆಯಲ್ಲಿ ಬಿಟ್ಟು ಹೋಗಿದ್ದರಿಂದ ಫೋನ್ ಬಂದಾಗ ಆಕೆಯ ಮೊಬೈಲ್‌ನ್ನು ಸೋದರ ಮಾವ ಅನಿಲ್ ನೋಡಿದ್ದ ಎಂದಿದ್ದಾರೆ.
ಅಲ್ಲದೇ, ಅನಿಲ್ ಆ ಹುಡುಗಿಯನ್ನು ತಾನು ಮದುವೆಯಾಗಬೇಕು ಎಂದುಕೊಂಡಿದ್ದರಿಂದ ಗೋವಿಂದರಾಜು ಹುಡುಗಿಗೆ ಕಳಿಸಿದ ಮೆಸೇಜ್ ನೋಡಿ ಕೋಪಗೊಂಡಿದ್ದಾನೆ. ಆ ಬಳಿಕ ಮಾತನಾಡಬೇಕು ಎಂದು ತೋಟಕ್ಕೆ ಬೈಕ್‌ನಲ್ಲಿ ಕರೆದುಕೊಂಡು ಹೋಗಿ ಹೊಡೆದು ಸಾಯಿಸಿದ್ದಾರೆ. ನಂತರ ಕಾರ್‌ನಲ್ಲಿ ಮೃತದೇಹವನ್ನು ಕರೆದುಕೊಂಡು ಹೋಗಿ ಚಾರ್ಮಾಡಿ ಘಾಟ್‌ನಲ್ಲಿ ಎಸೆದಿದ್ದಾರೆ. ಈ ಕೊಲೆಯ ಹಿಂದೆ ಯುವತಿಯ ತಾಯಿಯ ಸಹೋದರನ ಕೈವಾಡ ಇದೆ ಎಂದು ಆರೋಪಿಸಿದ್ದಾರೆ.
ಏನಿದು ಪ್ರಕರಣ?
ಬೆಂಗಳೂರು: ಯುವತಿಗೆ ಮೆಸೇಜ್ ಮಾಡಿದ್ದಕ್ಕಾಗಿ ಆಕೆಯ ಮನೆಯವರು ಆಂಧ್ರಹಳ್ಳಿ ನಿವಾಸಿ 20 ವರ್ಷದ ಗೋವಿಂದ ರಾಜ್ ಎಂಬಾತನನ್ನು ಅಪಹರಿಸಿ ಕೊಲೆ ಮಾಡಿದ್ದರು. ಯುವಕ ನಾಪತ್ತೆಯಾದ ಕಾರಣ ಆತನ ಪೋಷಕರು ಆತಂಕದಲ್ಲಿ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಕಿಡ್ನಾಪ್ ಮಾಡಿದ್ದಾರೆಂಬ ಆರೋಪ
ಮಾತಾಡಬೇಕೆಂದು ಗೋವಿಂದರಾಜ್ನನ್ನ ಕರೆಸಿಕೊಂಡ ಅನಿಲ್ ಮನಬಂದಂತೆ ಥಳಿಸಿದ್ದಾನೆ ಎಂಬ ಶಂಕೆ ವ್ಯಕ್ತವಾಗಿತ್ತು. ನಂತರ ಅನಿಲ್ ತಾಯಿ ಗೋವಿಂದರಾಜು ಮನೆಗೆ ಕರೆ ಮಾಡಿ ನಿಮ್ಮ ಮಗನನ್ನು ಕರೆದುಕೊಂಡು ಬಂದು ಹೊಡೆದಿದ್ದಾರೆ. ಬೇಗ ಬಂದು ಕರೆದುಕೊಂಡು ಹೋಗಿ ಎಂದು ಹೇಳಿದ್ದರು. ಮತ್ತೆ ಗೋವಿಂದರಾಜು ಪೋಷಕರು ಕರೆ ಮಾಡಿದಾಗ ಅನಿಲ್‌ನ ತಾಯಿ ಮೊದಲು ನಿಮ್ಮ ಮಗನನ್ನ ಬಿಟ್ಟು ಕಳುಹಿಸಲಾಗಿದೆ ಎಂದು ಹೇಳಿದ್ದರು.
ಇದನ್ನೂ ಓದಿ: Babita Phogat: ಕುಸ್ತಿಪಟುಗಳಿಗೆ ಲೈಂಗಿಕ ದೌರ್ಜನ್ಯ ಪ್ರಕರಣ: ವಿಚಾರಣಾ ಸಮಿತಿಗೆ ಬಬಿತಾ ಫೋಗಟ್ ಸೇರ್ಪಡೆ
ಸ್ವಲ್ಪ ಸಮಯದ ನಂತರ ಕರೆ ಮಾಡಿ, ನಿಮ್ಮ ಮಗ ಒಂದೆರಡು ಏಟು ಹೊಡೆದಿದ್ದಕ್ಕೆ ಸತ್ತೇ ಹೋದ ಅಂತಾ ಹೇಳಿದ್ದರು. ಮಗ ಎಲ್ಲಿದ್ದಾನೆ ಎಂದು ಎಷ್ಟು ಕೇಳಿದರೂ ಅನಿಲ್ ಕಡೆಯವರು ಏನೂ ಮಾಹಿತಿ ನೀಡುತ್ತಿಲ್ಲ ಎಂದು ಗೋವಿಂದರಾಜು ಪೋಷಕರು ಕಂಗಾಲಾಗಿದ್ದರು. ಇದೀಗ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಗೋವಿಂದರಾಜುನನ್ನು ಯುವತಿಯ ಮನೆಯ ಕಡೆಯವರು ಕೊಲೆ ಮಾಡಿರೋದು ಖಚಿತವಾಗಿದೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಯಶವಂತಪುರ ಠಾಣೆ ಪೊಲೀಸರು, ತನಿಖೆ ಕೈಗೆತ್ತಿಕೊಂಡು ಪ್ರಕರಣದ ಸತ್ಯಾಸತ್ಯತೆಯ ಕುರಿತು ಶೋಧ ನಡೆಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ