ಶಿವಮೊಗ್ಗ(ಮಾ.19) : ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮಂಗನ ಕಾಯಿಲೆಗೆ (ಕೆಎಫ್ಡಿ) ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬಳು ಹೇಳದೆ- ಕೇಳದೆ ಓಡಿ ಹೋದ ಘಟನೆ ನಡೆದಿದೆ. ಸಾಗರ ತಾಲೂಕು ಅರಳಗೋಡಿನ ಸುಮಿತ್ರಮ್ಮ ಹೀಗೆ ಓಡಿ ಹೋಗಿ ಆರೋಗ್ಯ ಇಲಾಖೆಯನ್ನು ಪೇಚಿಗೆ ಸಿಲುಕಿಸಿದ್ದಾಳೆ.
ಕೆಎಫ್ಡಿ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ವರದಿ ಬಂದ ಹಿನ್ನೆಲೆಯಲ್ಲಿ ಸುಮಿತ್ರಾ ಅವರನ್ನು ಶಿವಮೊಗ್ಗದ ಮೆಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪರಿಣಾಮ ಎರಡು ದಿನಗಳಲ್ಲೇ ಸುಮಿತ್ರಮ್ಮ ಚೇತರಿಸಿಕೊಂಡಿದ್ದರು. ಚೇತರಿಸಿಕೊಂಡ ತಕ್ಷಣ ಸುಮಿತ್ರಮ್ಮ ಹೇಳದೆ ಕೇಳದೆ ಆಸ್ಪತ್ರೆಯಿಂದ ನಾಪತ್ತೆ ಆಗಿದ್ದರು.
ಇದರಿಂದ ಕಂಗಾಲಾದ ಆಸ್ಪತ್ರೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಅವರಿಗಾಗಿ ಎಲ್ಲೆಡೆ ಹುಡುಕಾಟ ನಡೆಸಿದ್ದರು. ಅಂತಿಮವಾಗಿ ಸುಮಿತ್ರಮ್ಮ ಅರಳಗೋಡಿನ ತಮ್ಮ ಮನೆಯಲ್ಲಿ ಇರುವುದು ಪತ್ತೆ ಆಯಿತು. ಅವರನ್ನು ಮತ್ತೆ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಮುಂದುವರೆಸಲು ಆರೋಗ್ಯ ಇಲಾಖೆ ಸಿಬ್ಬಂದಿ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ.
ಸುಮಿತ್ರಮ್ಮಅವರ ಮನೆ ಮುಂದೆಯೇ ಆ್ಯಂಬುಲೆನ್ಸ್ ನಿಲ್ಲಿಸಿಕೊಂಡು, ಮೆಗ್ಗಾನ್ಗೆ ಬೇಡವೆಂದರೆ ಮಣಿಪಾಲ್ ಆಸ್ಪತ್ರೆಗೇ ಸೇರಿಸುತ್ತೇವೆ ಬನ್ನಿ ಎಂದು ಪರಿಪರಿಯಾಗಿ ಬೇಡುತ್ತಿದ್ದಾರೆ. ಚಿಕಿತ್ಸೆ ಬಗ್ಗೆ ಭಯಗೊಂಡು ಅವರು ಬರುತ್ತಿಲ್ಲ ಎನ್ನಲಾಗಿದೆ.
ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಕೆಎಫ್ ಡಿ ಜನಜಾಗೃತಿ ಒಕ್ಕೂಟ
ಮಲೆನಾಡಿಲ್ಲಿ ಕೆಎಫ್ಡಿ ಸೋಂಕು ಹೆಚ್ಚಾಗಿ ಪರಿಣಮಿಸುತ್ತಿದ್ದು ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸದೆ ಇರುವುದರ ಹಿನ್ನಲೆಯಲ್ಲಿ ಕಾಯಿಲೆ ಇಂದು ಉಲ್ಬಣಗೊಂಡಿದೆ ಎಂದು ಆರೋಪಿಸಿ ಕೆಎಫ್ಡಿ ಜನಜಾಗೃತಿ ಒಕ್ಕೂಟವು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದೆ.
ಕೊರೋನ ವೈರಸ್ಗಿಂತಲೂ ಕೆಎಫ್ಡಿ ಭೀಕರವಾಗಿದ್ದರೂ ಸಹ ಸರ್ಕಾರ ಎಚ್ಚೆತ್ತುಕೊಳ್ಳದೆ ಇರುವುದು ಸಾವು ನೋವಿಗೆ ಕಾರಣವಾಗಿದೆ. ತಾಲೂಕು ಆಸ್ಪತ್ರೆಗಳಲ್ಲೂ ಅಗತ್ಯ ಚಿಕಿತ್ಸೆಗೆ ಚುಚ್ಚುಮದ್ದು ಸೇರಿದಂತೆ ಸೂಕ್ತ ವೈದ್ಯಕೀಯ ಸೌಲಭ್ಯ ಮತ್ತು ಸಿಬ್ಬಂದಿ ವ್ಯವಸ್ಥೆ ಮಾಡಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.
ಇದನ್ನೂ ಓದಿ :
ಕೊರೋನಾ ಭೀತಿ ; ಶಿವಮೊಗ್ಗದಲ್ಲಿ ನಾಳೆಯಿಂದ ಐದು ದಿನ ನಿಷೇಧಾಜ್ಞೆ ಜಾರಿ
ರೋಗದಿಂದ ಮೃತಪಟ್ಟವರಿಗೆ ತಲಾ ಹತ್ತು ಲಕ್ಷ ರೂ ಪರಿಹಾರ ನೀಡಬೇಕು. ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರ ಬಾಕಿ ವೆಚ್ಚವನ್ನ ಕೂಡಲೇ ಬಿಡುಗಡೆ ಮಾಡಬೇಕು. ಮುಂದೆ ಚಿಕಿತ್ಸೆ ವೆಚ್ಚವನ್ನ ವಿಳಂಬವಾಗದಂತೆ ಪ್ರತ್ಯೇಕ ನಿಧಿ ತೆಗೆದಿಡಬೇಕು ಎಂದು ಆಗ್ರಹಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ