ನ್ಯೂಸ್ 18 ಇಂಫ್ಯಾಕ್ಟ್; ಬದುಕಿದ್ದಾಗಲೇ ಡೆತ್​ ಸರ್ಟಿಫಿಕೇಟ್​ ನೀಡಿದ್ದ ಅಧಿಕಾರಿ ಅಮಾನತು

news18
Updated:August 29, 2018, 10:52 AM IST
ನ್ಯೂಸ್ 18 ಇಂಫ್ಯಾಕ್ಟ್; ಬದುಕಿದ್ದಾಗಲೇ ಡೆತ್​ ಸರ್ಟಿಫಿಕೇಟ್​ ನೀಡಿದ್ದ ಅಧಿಕಾರಿ ಅಮಾನತು
ರೈತ ರಾಮೇಗೌಡ
news18
Updated: August 29, 2018, 10:52 AM IST
-ರಾಘವೇಂದ್ರ ಗಂಜಾಂ, ನ್ಯೂಸ್​ 18 ಕನ್ನಡ

ಮಂಡ್ಯ,(ಆ.29): ಬದುಕಿದ್ದಾಗಲೇ ವ್ಯಕ್ತಿಗೆ ಮರಣ ಪತ್ರ ನೀಡಿ ಕರ್ತವ್ಯ ಲೋಪ ಎಸಗಿದ್ದ ಗ್ರಾಮಲೆಕ್ಕಾಧಿಕಾರಿಯನ್ನು ಅಮಾನತು ಮಾಡಿ ಮಂಡ್ಯ ಡಿಸಿ ಆದೇಶ ಹೊರಡಿಸಿದ್ದಾರೆ.

ಶ್ರೀರಂಗಪಟ್ಟಣ ತಾಲೂಕು ಪೀಹಳ್ಳಿ ವೃತ್ತದ ಲಿಂಗಪ್ಪಾಜಿ ಅಮಾನತ್ತಾದ ಗ್ರಾಮ ಲೆಕ್ಕಾಧಿಕಾರಿ. ಇವರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಚಿಕ್ಕಹಾರೋಹಳ್ಳಿ ಗ್ರಾಮದ ರಾಮೇಗೌಡ ಎಂಬ ರೈತನಿಗೆ ಬದುಕಿದ್ದಾಗಲೇ ಮರಣ ಪತ್ರ ನೀಡಿ ಕರ್ತವ್ಯ ಲೋಪ ಎಸಗಿದ್ದರು. ಈ ಕುರಿತಾಗಿ ನ್ಯೂಸ್​ 18 ಕನ್ನಡ ವರದಿ ಪ್ರಸಾರ ಮಾಡಿತ್ತು. ನ್ಯೂಸ್​ 18 ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಮಂಜುಶ್ರೀ ಅಮಾನತು ಆದೇಶ ಹೊರಡಿಸಿದ್ದಾರೆ.

ರೈತ ರಾಮೇಗೌಡ ತಮ್ಮ ತಂದೆ ತಿಮ್ಮೇಗೌಡ ಮೃತಪಟ್ಟಿದ್ದಾರೆಂದು ಮರಣ ಪ್ರಮಾಣ ಪತ್ರ ನೀಡುವಂತೆ ಅರಕೆರೆ ನಾಡ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅಧಿಕಾರಿಗಳು ಆತನ ತಂದೆಯ ಮರಣ ಪತ್ರದ ಜೊತೆಗೆ ಆತನ‌ ಮರಣ ಪತ್ರ ಕೂಡ ನೀಡಿ ಎಡವಟ್ಟು‌ ಮಾಡಿದ್ದರು. ರಾಮೇಗೌಡನಿಗೆ ಮರಣ ಪ್ರಮಾಣ ಪತ್ರ ನೀಡಿದ್ದರಿಂದ ಅವನು ಮತ ಚಲಾವಣೆ ಹಕ್ಕು ಸೇರಿದಂತೆ ಸರ್ಕಾರದ ಸೌಲಭ್ಯ ಪಡೆಯುವ ಅವಕಾಶ ಕಳೆದುಕೊಂಡಿದ್ದರು.

ಈ ಅಧಿಕಾರಿಯ ತಪ್ಪನ್ನು ಗಂಭೀರವಾಗಿ ಪರಿಗಣಿಸಿದ್ದ ರಾಮೇಗೌಡ ಸೇರಿದಂತೆ ಈ ಊರಿನ ಗ್ರಾಮಸ್ಥರು ಅಧಿಕಾರಿಗೆ ಮರಣ ಪ್ರಮಾಣ ಪತ್ರದ ತಪ್ಪನ್ನು ಸರಿಪಡಿಸುವಂತೆ ಅಧಿಕಾರಿಯ ಗಮನಕ್ಕೆ ತಂದಿದ್ದರು. ಆದರೆ ತಪ್ಪು ಎಸಗಿರುವ ಅಧಿಕಾರಿ ಉಡಾಫೆ ಉತ್ತರ ನೀಡುವುದರ ಜೊತೆಗೆ ಪ್ರಶ್ನೆ ಮಾಡಿದ ಜನರಿಗೆ ಜಾತಿ ನಿಂದನೆ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿ ದೌರ್ಜನ್ಯ ನಡೆಸಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಗ್ರಾಮಸ್ಥರು ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಜಿಲ್ಲಾಧಿಕಾರಿ ಮಂಜುಶ್ರೀರವರಿಗೆ ದೂರು ಸಲ್ಲಿಸಿ ತಪ್ಪನ್ನು ಸರಿಪಡಿಸುವ ಮನವಿ ಮಾಡಿದ್ದರು.

ಇದೀಗ ಜಿಲ್ಲಾಧಿಕಾರಿಯವರು ಕರ್ತವ್ಯ ಲೋಪ ಎಸಗಿದ್ದ ಗ್ರಾಮ ಲೆಕ್ಕಾಧಿಕಾರಿಯನ್ನು ಅಮಾನತುಗೊಳಿ ಆದೇಶ ಹೊರಡಿಸಿದ್ದು, ರಾಮೇಗೌಡರಿಗೆ ನ್ಯಾಯ ಒದಗಿಸಿದ್ದಾರೆ.
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...